'ಹೊಸ ಪರಿಕಲ್ಪನೆ ಹುಟ್ಟು ಹಾಕಿದ ಅಂಬೇಡ್ಕರ್'
ಹಾಸನ: ಮಾನವೀಯ ಅಂತಃಕರಣ ಮೈಗೂಡಿಸಿಕೊಂಡು ಸಾಮಾಜಿಕ ನ್ಯಾಯದ ಬಗೆಗೆ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕೇವಲ ಒಂದು ವರ್ಗದ ನಾಯಕನನ್ನಾಗಿ ಬಿಂಬಿಸುವ ತಪ್ಪು ಮಾಡುತ್ತಲೇ ಬಂದಿರುವ ನಾವು ಇನ್ನೂ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪ್ರಾಂಶುಪಾಲ ಡಾ.ಡಿ. ಶ್ರೀನಿವಾಸ ಅಭಿಪ್ರಾಯಪಟ್ಟರು.
ತಾಲೂಕಿನ ಮೊಸಳೆ ಹೊಸಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್ ಬದುಕು ಮತ್ತು ಚಿಂತನೆಗಳು ಎಂಬ ವಿಷಯದ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಮಹಾನ್ ಪುರುಷ: ಗ್ರಂಥಪಾಲಕ ಎನ್. ಮಂಜುನಾಥ್ ಮಾತನಾಡಿ, ಭಾರತೀಯ ಸಮಾಜಕ್ಕಂಟಿದ ಅಸ್ಪೃಷ್ಯತೆಯ ಕ್ರೂರತೆಯಲ್ಲಿ ಸ್ವತಃ ನಲುಗಿದ ಅಂಬೇಡ್ಕರ್ ಅವರು ಕೇವಲ ತಾವು ಮಾತ್ರ ಅದರಿಂದ ಹೊರಬರುವ ಪ್ರಯತ್ನ ಮಾಡದೇ, ಇಡೀ ಸಮುದಾಯದ ಉದ್ಧಾರದ ಕನಸನ್ನು ಕಂಡು ಸಫಲರಾದವರು. ಅದಕ್ಕಾಗಿ ಅವರು ಸವೆಸಿದ ಹಾದಿ ಮುಳ್ಳಿನದಾದರೂ ಕೋಟ್ಯಂತರ ಜನರ ಜೀವನದ ಹಾದಿಯನ್ನು ಹೂವಾಗಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ನುಡಿದರು.
ಪ್ರಾದೇಶಿಕ ದೃಷ್ಟಿ ಬೇಡ: ಅಧ್ಯಕ್ಷತೆ ವಹಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಪಿ. ಗೋಪಾಲ್ ಮಾತನಾಡಿ, ಕೆಲವು ಮಾಹಾನ್ ಪುರುಷರು ತಾವು ಮಾಡಿದ ಸಾಮಾಜಿಕ ಸತ್ಕಾರ್ಯಗಳಿಂದ ಶತಶತಮಾನಗಳವರೆಗೆ ಬೆಳಕು ಚೆಲ್ಲಿ ಜನಮಾನಸದ ದೃಷ್ಟಿಯಲ್ಲಿ ದೈವೀ ಪುರುಷರಾಗುತ್ತಾರೆ. ಅಂತಹ ಮಹಾನ್ ಚೇತನ ಬಿ.ಆರ್. ಅಂಬೇಡ್ಕರ್. ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕೇವಲ ಒಂದು ವರ್ಗದ ಅಥವಾ ಪ್ರದೇಶದ ದೃಷ್ಟಿಯಿಂದ ನೋಡದೇ ಇಡೀ ಮನುಕುಲದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿವೇಚಿಸಬೇಕು. ಆಗ ಮಾತ್ರ ಅಂಬೇಡ್ಕರ್ ಅವರ ಚಿಂತನೆಗಳು ನಮ್ಮ ಕೈಗೆಟುಕಲು ಸಾಧ್ಯ ಎಂದರು. ಕಚೇರಿ ಅಧೀಕ್ಷಕ ಜಯರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಸ್ವಾಗತಿಸಿದರು. ಜಯರಾಂ ವಂದಿಸಿದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಅಧ್ಯಾಪಕ ಹಾಗೂ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

