ಅಕ್ರಮ ಮರಳು ದಂಧೆಗೆ ಕಡಿವಾಣ ಎಂದು?
ಕ.ಪ್ರ. ವಾರ್ತೆ ಟಿ ಸಕಲೇಶಪುರ ಟಿ ಏ. 28 : ತಾಲೂಕಿನಾದ್ಯಂತ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು, ಅಧಿಕೃತ ಜಾಗಗಳಿಗಿಂತ, ಅನಧಿಕೃತ ಗಣಿ ಪ್ರದೇಶದಲ್ಲಿ ಮರಳು ಸಾಗಾಣಿಕೆ ಹೆಚ್ಚಾಗಿ ನಡೆಯುತ್ತಿದೆ. ಜಿಲ್ಲಾಡಳಿತ ತಾಲ್ಲೂಕಿನಲ್ಲಿ ಮರಳುಗಾರಿಕೆಗಾಗಿ 7 ಗಣಿ ಪ್ರದೇಶಗಳನ್ನು ಗುರುತು ಮಾಡಿದೆ. ಆದರೆ ಅಕ್ರಮ ಮರಳು ದಂಧೆಕೋರರು ಸುಮಾರು 25 ಪ್ರದೇಶಗಳಲ್ಲಿ ಮರಳು ತುಂಬುತ್ತಿದ್ದಾರೆ. ಅಧಿಕೃತ ಮೂಲ ಪರವಾನಗಿಯನ್ನು ನಾರಾಯಣ ರೆಡ್ಡಿ ಎಂಬುವರು ಪಡೆದಿದ್ದು, ಇವರಿಂದ ರಮೇಶ್ ಆಚಾರ್ ಎಂಬುವರು ಸಬ್ ಲೀಸ್ ಪಡೆದಿದ್ದಾರೆ. ಜಿಲ್ಲಾಡಳಿತ ಟೆಂಡರ್ ಮೂಲಕ ಹಾಲೆ ಬೇಲೂರು, ಕಣಗಾಲು ಮನೆ, ವಡೂರು ಗ್ರಾಮದಲ್ಲಿ ತಲಾ 2 ಪ್ರದೇಶದಲ್ಲಿ ಹಾಗೂ ಮಾಗಲ ಸೇರಿದಂತೆ ಒಟ್ಟು 7 ಸ್ಥಳದಲ್ಲಿ ಮರಳು ಸಾಗಾಣಿಕೆ ಮಾಡಲು ಅನುಮತಿ ನೀಡಿದೆ.
ಕಾಳದಂಧೆಯಲ್ಲಿ ಹಣ
ಅಧಿಕೃತ ಗಣಿಪ್ರದೇಶಗಳಲ್ಲಿ ಮರಳು ತುಂಬುವ ಲಾರಿಗಳಿಗೆ ಜಿ.ಪಿ.ಆರ್.ಎಸ್.ಅಳವಡಿಸಲಾಗಿದೆ. ಈ ಲಾರಿಗಳಿಗೆ 4 ಕ್ಯೂಬಿಕ್ನಷ್ಟು ಮರಳು ತುಂಬಲಾಗುತ್ತದೆ. ಇಷ್ಟು ಪ್ರಮಾಣದ ಮರಳಿಗೆ ಸರ್ಕಾರ ರು. 4200 ನಿಗದಿ ಮಾಡಿದೆ. ಅನಧಿಕೃತ ಪ್ರದೇಶದ ಲಾರಿಗಳಿಗೆ ಸುಮಾರು 10 ಕ್ಯೂಬಿಕ್ನಷ್ಟು ಮರಳು ತುಂಬಲಾಗುತ್ತದೆ. ಲಾರಿ ಲೋಡ್ ಬೆಲೆ ರು. 8ರಿಂದ 10 ಸಾವಿರಆಗಿದೆ.
ಅಕ್ರಮ ನಡೆಯುವುದು ಹೀಗೆ
ಅನಧಿಕೃತ ಪ್ರದೇಶದಲ್ಲಿ ಮರಳನ್ನು ಲಾರಿಯಲ್ಲಿ ತುಂಬಿ ಸಾಧ್ಯ ವಾದರೆ ಮಂಗಳೂರಿನ ಪರವಾನಗಿ ಬಳಸಲಾಗುತ್ತದೆ. ಸಕ್ರಮ ಪ್ರದೇಶದಲ್ಲೂ ಅಕ್ರಮ ಜಿ.ಪಿ.ಆರ್.ಎಸ್ ಅಳವಡಿಸಿರುವ ಲಾರಿಗಳ ಬಾಡಿಯನ್ನು ಕತ್ತರಿಸಲಾಗಿರುತ್ತದೆ. ಕಾನೂನುಬದ್ಧವಾಗಿ 4 ಕ್ಯುಬಿಕ್ ಮರಳು ತುಂಬಿಸಬೇಕು. ಆದರೆ, ರು. 1,000 ಹೆಚ್ಚು ಪಡೆದು 2 ಕ್ಯುಬಿಕ್ ಮರಳನ್ನು ಹೆಚ್ಚು ಹಾಕಲಾಗುತ್ತದೆ. ಮರಳು ಗಣಿ ಪ್ರದೇಶದಲ್ಲಿ ಯಾವುದೇ ಅಧಿಕಾರಿಗಳು ಇಲ್ಲ. ಸ್ಥಳದಲ್ಲಿ ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಇರುತ್ತಾರೆ.
ಹೊರ ಜಿಲ್ಲೆಗಳಿಗೆ ರಫ್ತು
ಅನಧಿಕೃತ ಮರಳು ದಂಧೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ತಾಲ್ಲೂಕಿನ ಪ್ರಮುಖ ಸಂಘಟನೆಗಳ ಪ್ರಮುಖರು ಹಾಗೂ ಉನ್ನತ ಅಧಿಕಾರಿಗಳು ಶಾಮಿಲಾಗಿದ್ದಾರೆ. ನದಿಯಿಂದ ಮರಳು ಬಗೆದು ಜೆಸಿಪಿಗಳ ಮೂಲಕ ಲಾರಿಗಳಿಗೆ ಮರಳು ತುಂಬಿ ಹಾಸನ, ಬೆಂಗಳೂರು, ಮಡಿಕೇರಿ ಮತ್ತು ಮೈಸೂರಿನ ಭಾಗಗಳಿಗೆ ಕಳುಹಿಸಲಾಗುತ್ತಿದೆ.
ಅಧಿಕಾರಿಗಳ ಸಹಕಾರ
ಅಕ್ರಮ ಮರಳು ದಂಧೆಯಲ್ಲಿ ಮುಖ್ಯವಾಗಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಆರ್.ಟಿ.ಒ. ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಪ್ರಮುಖ ಪಾತ್ರ ವಹಿಸುತ್ತದೆ. ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ಹೆಸರು ವೈಯಕ್ತಿಕವಾಗಿ ಕೇಳಿಬರುತ್ತದೆ.
ಟ್ರ್ಯಾಕ್ಟರ್ ಹಾವಳಿ
ತಾಲ್ಲೂಕಿನಾದ್ಯಂತ ಟ್ರ್ಯಾಕ್ಟರ್ಗಳಲ್ಲಿ ಮರಳು ಸಾಗಾಣಿಕೆ ಹಾಡು- ಹಗಲೇ ನಡೆಯುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಮನೆ ಕಟ್ಟಡಗಳ ನಿರ್ಮಾಣಕ್ಕೆ ಅತ್ಯವಶ್ಯಕ. ಹೀಗಾಗಿ, ರು. 1200ಗಳಿಂದ ರು. 1500ಗೆ ಟ್ರ್ಯಾಕ್ಟರ್ ಮೂಲಕ ಮರಳನ್ನು ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

