ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಕ.ಪ್ರ. ವಾರ್ತೆ ಟಿ ಸಕಲೇಶಪುರ ಟಿ ಏ. 30 ಹೊಟೇಲ್ ಉದ್ಯಮಿ ಮೇಲೆ ನಡೆದ ಹಲ್ಲೆ ಖಂಡಿಸಿ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪಟ್ಟಣದ ನಾನಾ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನರು ಮಂಗಳವಾರ ಉಪವಿಭಾಗಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ನಿಯಮ ಬಾಹಿರವಾಗಿ ಲಕ್ಷ್ಮಿಪುರಂ ಬಡಾವಣೆಯ ಭತ್ತದ ಗದ್ದೆಗಳಿಗೆ ಮಣ್ಣುಸಾಗಿಸುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಯನ್ನು ಪ್ರಶ್ನಿಸಿದ ಸಂಜೀತ್ ಶೆಟ್ಟಿಯ ಮನೆಗೆ ನುಗ್ಗಿ ಶನಿವಾರ ರಾತ್ರಿ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿ ಚಿನ್ನಾಭರಣದೋಚಿರುವುದು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನಿಸುವಂತೆ ಮಾಡಿದೆ.
ಮನವಿ: ಕೆಲ ಕಿಡಿಕೇಡಿಗಳು ಮೇಲ್ಮಟ್ಟದಲ್ಲಿ ತಮ್ಮ ಮಾತುಗಳು ನಡೆಯುತ್ತವೆ ಎಂದು ಪಟ್ಟಣದಲ್ಲಿ ಅಮಾಯಕರ ಮೇಲೆ ನಿರಂತರ ಹಲ್ಲೆ ನಡೆಸುತ್ತಿದ್ದು, ಇವರ ಉಪಟಳ ಮೀತಿ ಮೀರಿದೆ.
ಹಲ್ಲೆಯಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳು ಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದು, ಕಾಮಗಾರಿ ಪ್ರಶ್ನಿಸಲು ಬರುವ ಸಾರ್ವಜನಿಕರನ್ನು ಬೆದರಿಸುವ ನಿಟ್ಟಿನಲ್ಲಿ ಉದ್ಯಮಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ದರಿಂದ ಇವರು ನಿರ್ವಹಿಸಿರುವ ಎಲ್ಲಾ ಕಾಮಗಾರಿಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು.
ಅಲ್ಲದೇ, ಹಲ್ಲೆಯಲ್ಲಿ ಪಾಲ್ಗೊಂಡಿರುವ ಎಲ್ಲರನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಪಟ್ಟಣದ ಹೇಮಾವತಿ ಸೇತುವೆಯಿಂದ ಉಪವಿಭಾಗಧಿಕಾರಿಯವರೆಗೆ ಮೌನ ಪ್ರತಿಭಟನ ರ್ಯಾಲಿ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ನಾಗರಿಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್, ರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್, ದಸಂಸ ಮುಖಂಡ ಹಡ್ಲಳ್ಳಿ ಜಗದೀಶ್, ತುಂಗೇಶ್, ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಎಚ್ ಎ ಬಾಸ್ಕರ್, ಪುರಸಭೆಯ ಸದಸ್ಯ ಗಿರೀಶ್, ಜಯಕರ್ನಾಟಕ ಸಂಘದ ಸುರೇಶ್ ಆಳ್ವ, ಶ್ರೀ ರಾಮಸೇನೆಯ ಜಿಲ್ಲಾದ್ಯಕ್ಷ ಹೇಮಂತ್ ಕುಮಾರ್, ತಾಲ್ಲೂಕು ಅಧ್ಯಕ್ಷ ಉಮೇಶ್, ಜೈ ಭುವನೇಶ್ವರಿ ಯುವಕ ಸಂಘದ ಪ್ರಜ್ವಲ್, ಕೇರಳ ಸಮಾಜದ ಸಿ ಪಿ ಪ್ರಸನ್ ಕುಮಾರ್, ವೀರ ಕನ್ನಡಿಗ ಟಿಪ್ಪು ಸೇನೆಯ ಕಾರ್ಯದರ್ಶಿ ನಯಾಝ್ ಪಾಶ, ವರ್ತಕರ ಸಂಘದ ಸತ್ಯನಾರಾಯಣ ಗುಪ್ತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

