ಭಗೀರಥ ಜಯಂತಿಗೆ ಸರ್ಕಾರ ರಜಾ ಘೋಷಿಸಲಿ
ಕ.ಪ್ರ. ವಾರ್ತೆ.ಅರಕಲಗೂಡು.ಆ.2
ದೇವಗಂಗೆಯನ್ನು ಧರೆಗಿಳಿಸಿದ ಕಠಿಣ ತಪಸ್ವಿ ಭಗೀರಥ ಜಯಂತಿ ಆಚರಣೆಗೆ ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಬೇಕು ಎಂದು ಹೊಸದುರ್ಗ ಚಿನ್ಮೂಲಾದ್ರಿ ಶಿಲಾಪುರ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.
ತಾಲೂಕಿನ ಕೇರಳಾಪುರದಲ್ಲಿ ಶುಕ್ರವಾರ ನಡೆದ ನೂತನ ಭಗೀರಥ ಉಪ್ಪಾರ ಸಮುದಾಯ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜಕ್ಕೆ ದಾರಿ ದೀಪವಾಗಿದ್ದ ದಾರ್ಶನಿಕ ಕವಿ ಕನಕದಾಸ, ಬಸವ, ವಾಲ್ಮೀಕಿ ಜಯಂತಿ ಆಚರಣೆಗೆ ರಜೆ ಘೋಷಿಸಿದಂತೆ ಭಗೀರಥ ಜಯಂತಿಗೆ ರಜೆ ಘೋಷಿಸಲು ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ತಾ. ಆಡಳಿತಕ್ಕೆ ತರಾಟೆ: ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಶಾಸಕರಾಗಿದ್ದ ವೇಳೆ ಆರಂಭವಾದ ಈ ಸಮುದಾಯ ಭವನ ಸ್ಥಾಪನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 30 ಲಕ್ಷಕ್ಕೂ ಅಧಿಕ ಹಣ ಒದಗಿಸಿದ್ದಾರೆ.
ಸಮಾಜದ ಜನತೆ ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಹೂವು ಮಾರಾಟ ಮಾಡಿ ಗಳಿಸಿದ ಶ್ರಮದ ಹಣದಲ್ಲಿ ಭವನ ನಿರ್ಮಾಣ ಪೂರ್ಣಗೊಳಿಸಿ ಉದ್ಘಾಟನೆ ಮಾಡುತ್ತಿರುವ ಈ ಕಾರ್ಯಕ್ರಮ ಯಾವುದೇ ಇಲಾಖೆ ಇಲ್ಲವೇ ಸರ್ಕಾರ ಆಯೋಜಿಸಿಲ್ಲವೆಂದು ಹೇಳುವ ಮೂಲಕ, ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕಾರ್ಯಕ್ರಮ ವ್ಯವಸ್ಥಾಪಕರ ಮೇಲೆ ನೋಟಿಸ್ ಜಾರಿ ಮಾಡಿದ ತಾಲೂಕು ಆಡಳಿತದ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಎಸ್.ಜೆ. ನೀಲಪ್ಪ, ಜಿ.ಪಂ. ಅಧ್ಯಕ್ಷೆ ಭಾಗ್ಯಮ್ಮ ಗೋವಿಂದೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಸಂತೋಷ್ ಗೌಡ, ಪ್ರಸನ್ನ ಮಾತನಾಡಿದರು. ತಾ.ಪಂ. ಅಧ್ಯಕ್ಷ ನರಸೇಗೌಡ, ಜಿ.ಪಂ. ಸದಸ್ಯರಾದ ಸರೋಜಮ್ಮ, ವಿ.ಎ. ನಂಜುಂಡಸ್ವಾಮಿ, ಮಾಜಿ ಸದಸ್ಯರಾದ ಎಚ್.ಎಸ್. ಶಂಕರ್, ಹರದನಹಳ್ಳಿ ವಿಜಯ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೊನ್ನವಳ್ಳಿ ಸತೀಶ್, ನಿವೃತ್ತ ಅಧಿಕಾರಿ ಕೆ.ಎನ್. ಜುಂಜಪ್ಪ, ಸೆಸ್ಕ್ ಇಂಜಿನಿಯರ್ ಕೆ.ಪಿ. ಜಯಪ್ಪ, ಉದ್ಯಮಿ ಕೆ.ಎಸ್. ಲಿಂಗಪ್ಪ, ಕೆ.ಟಿ. ಯೋಗಣ್ಣ, ಸಂಘದ ಕಾರ್ಯದರ್ಶಿ ಕೆ.ಎಂ. ಗೋವಿಂದ, ಪಿಎಸಿಸಿ ಮಾಜಿ ಅಧ್ಯಕ್ಷ ಕೆ.ವೈ. ರವಿ, ನಾಗೇಶ್, ಪಟ್ಟಸಾಲಿ ನೇಕಾರ ಸಂಘದ ಅಧ್ಯಕ್ಷ ಶಿವಪ್ಪಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಅದ್ದೂರಿ ಸ್ವಾಗತ: ಇದಕ್ಕೂ ಮುನ್ನ ಪುರ ಪ್ರವೇಶಿಸಿದ ಹೊಸದುರ್ಗ ಚಿನ್ಮೂಲಾದ್ರಿ ಶಿಲಾಪುರ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರನ್ನು ಪೂರ್ಣ ಕುಂಭ ಕಳಸ ಹೊತ್ತ ಮಹಿಳೆಯರು ಮತ್ತು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಕೀಲು ಕುದುರೆ, ಸ್ತ್ರೀ ವೇಷಧಾರಿಗಳು ಸೇರಿದಂತೆ ವಿವಿಧ ಕಲಾವಿದರು ನೃತ್ಯ ಪ್ರದರ್ಶಿಸಿ ಮೆರವಣಿಗೆಗೆ ಮೆರಗು ನೀಡಿರಂಜಿಸಿದರು.
ಸಮಾಜಕ್ಕೆ ದಾರಿ ದೀಪವಾಗಿದ್ದ ದಾರ್ಶನಿಕ ಕವಿ ಕನಕದಾಸ, ಬಸವ, ವಾಲ್ಮೀಕಿ ಜಯಂತಿ ಆಚರಣೆಗೆ ರಜೆ ಘೋಷಿಸಿದಂತೆ ಭಗೀರಥ ಜಯಂತಿಗೆ ರಜೆ ಘೋಷಿಸಲು ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ
-ಪುರುಷೋತ್ತಮಾನಂದ ಪುರಿ ಸ್ವಾಮೀಜಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

