ಬ್ಯಾಂಕ್ ವ್ಯವಸ್ಥಾಪಕರ ವರ್ಗಾವಣೆಗೆ ದಸಂಸ ಆಗ್ರಹ
ರಾಮನಾಥಪುರ: ಸಮೀಪದ ಬಸವಾಪಟ್ಟಣದ ವಿಜಯಾಬ್ಯಾಂಕಿನ ವ್ಯವಸ್ಥಾಪಕ ಸರಿಯಾಗಿ ಸಾರ್ವಜನಿಕರೊಂದಿಗೆ ಸ್ಪಂದಿಸುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಬೆಳವಾಡಿ ಸುರೇಶ್ ಆರೋಪಿಸಿದರು.
ಗ್ರಾಹಕರಿಗೆ ಪರದಾಟ: ಇಲ್ಲಿನ ವಿಜಯಾ ಬ್ಯಾಂಕ್ಗೆ ಸುತ್ತಮುತ್ತಲಿನ ಸಾಕಷ್ಟು ಗ್ರಾಮಗಳಿಂದ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ನೌಕರರು ತಮ್ಮ ಉಳಿತಾಯ ಖಾತೆಯನ್ನು ತೆರೆದಿದೆ. ಆದರೆ ಇತ್ತೀಚೆಗೆ ಈ ಬ್ಯಾಂಕಿಗೆ, ವ್ಯವಸ್ಥಾಪಕರಾಗಿ ಬಂದಿರುವ ಆನಂದ್ ಮಿಶ್ರಾ ಎಂಬ ಬಿಹಾರಿ ಮೂಲದವರು ದಿನನಿತ್ಯ ಬ್ಯಾಂಕಿಗೆ ಬರುವ ನಾಗರಿಕರೊಂದಿಗೆ ಕನ್ನಡ ಭಾಷೆ ಮಾತನಾಡಲು ಬಾರದೆ ಇಂಗ್ಲಿಷ್, ಹಿಂದಿ ಭಾಷೆಯಲ್ಲೇ ಮಾತನಾಡುತ್ತಾರೆ. ಈ ಬ್ಯಾಂಕಿಗೆ ಬರುವ ನಾಗರಿಕರಲ್ಲಿ ಹೆಚ್ಚು ಪಾಲು ಗ್ರಾಮೀಣ ಭಾಗದವರಾಗಿದ್ದು, ಈ ರೀತಿಯ ಬಾರದ ಭಾಷೆಯನ್ನು ಅರ್ಥೈಸಿಕೊಳ್ಳಲಾಗದೆ ಪರದಾಡುವಂತಾಗಿದೆ.
ಬ್ಯಾಂಕಿನ ಸಾಲ, ಸೌಲಭ್ಯ ಇನ್ನಿತರೆ ವಿಚಾರಗಳಲ್ಲಿ ಬ್ಯಾಂಕ್ನ ಮಧ್ಯವರ್ತಿಗಳನ್ನು ಹೆಚ್ಚು ಸಂಪರ್ಕಕ್ಕೆ ತೆಗೆದುಕೊಂಡು ಅವರು ಹೇಳಿದವರಿಗೆ ಮಾತ್ರ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ವಿಚಾರವಾಗಿ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ ಉಡಾಫೆಯಿಂದ ಉತ್ತರಿಸುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.
ಕಾರ್ಯರೂಪಕ್ಕೆ ತಂದಿಲ್ಲ: ಈ ವ್ಯವಸ್ಥಾಪಕರು ಇಲ್ಲಿಗೆ ಬಂದ ಮೇಲಂತೂ ಬ್ರೋಕರ್ಗಳು ಬಡ್ಡಿ, ಲೇವಾದೇವಿ ಮಾಡುವವರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಜೊತೆಗೆ ಬ್ಯಾಂಕಿನೊಳಗೆ ತಮ್ಮ ವ್ಯವಹಾರ ನಿರ್ಭಯವಾಗಿ ನಡೆಸುತ್ತಿದ್ದು, ಹೆಚ್ಚಿಗೆ ಬಡ್ಡಿ ವಸೂಲಿ ಕೂಡ ಮಾಡುತ್ತಿದ್ದಾರೆ. ಇದನ್ನು ತಡೆಯುವಂತೆ ಎಷ್ಟೋ ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ ಹಾಗೂ ಅಂಬೇಡ್ಕರ್ ನಿಗಮ ವತಿಯಿಂದ ಸಾಲ ಪಡೆದಿರುವ ದಲಿತರಿಗೆ ಸರ್ಕಾರ ಸಾಲ ಮನ್ನಾ ಮಾಡಿರುವ ಬಗ್ಗೆ ಘೋಷಿಸಿದ್ದರೂ ಬ್ಯಾಂಕುಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತಂದಿಲ್ಲ.
ಒಳ್ಳೆಯ ಅಭಿಪ್ರಾಯ: ಇಂತಹ ಕೆಲವು ವಿಚಾರಗಳನ್ನು ಭಾಷೆ ಬಾರದ ವ್ಯವಸ್ಥಾಪಕನ ಬಳಿ ಚರ್ಚಿಸುವುದು ಕೋಣದ ಮುಂದೆ ಕಿಂದರಿ ಬಾರಿಸಿದಂತಾಗಿದೆ. ಈ ಹಿಂದೆ ಬಸವಾಪಟ್ಟಣದ ವಿಜಯಾ ಬ್ಯಾಂಕ್ನಲ್ಲಿ ಅನೇಕ ವ್ಯವಸ್ಥಾಪಕರು ಬಂದು ಹೋದರು. ಆದರೆ, ಅವರು ಯಾರೂ ಈಗಿನ ವ್ಯವಸ್ಥಾಪಕನಂತೆ ಎಂದೂ ಉದ್ಧಟತನವಾಗಿ ನಡೆದುಕೊಂಡಿಲ್ಲ. ವರ್ಷಗಳ ಹಿಂದಿನ ವ್ಯವಸ್ಥಾಪಕ ಹರಿಶ್ಚಂದ್ರ ಪ್ರಸಾದ್ ನಿವೃತ್ತಿ ಹೊಂದಿದರೂ ಅವರ ಬಗ್ಗೆ ಇಂದಿಗೂ ಗ್ರಾಹಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ.
ಬ್ಯಾಂಕಿನ ಹಿರಿಯ ಅಧಿಕಾರಿಗಳು ಕೂಡಲೇ ವ್ಯವಸ್ಥಾಪಕ ಆನಂದ ಮಿಶ್ರನನ್ನು ವರ್ಗಾವಣೆ ಮಾಡಿ, ಗ್ರಾಹಕರಿಗೆ ಸ್ಪಂದಿಸುವಂತಹ ಮತ್ತು ಕನ್ನಡ ಭಾಷೆ ಬರುವಂತಹ ಉತ್ತಮ ವ್ಯವಸ್ಥಾಪಕನನ್ನು ನೇಮಿಸಬೇಕೆಂದು, ಈ ವಿಚಾರವನ್ನು ಹಗುರವಾಗಿ ತೆಗೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕ್ ಮುಂದೆ ದ.ಸಂ.ಸ. ಪ್ರತಿಭಟನೆ ಕೈಗೊಳ್ಳುವುದಾಗಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಹೆಚ್.ಇ. ಜಗದೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

