ಹಾಸನ

ಅಕ್ರಮ ಚಟುವಟಿಕೆ ನಡೆಸಿದರೆ ಹುಷಾರ್

Published On :

ಕ.ಪ್ರ. ವಾರ್ತೆ    ಅರಸೀಕೆರೆ    ಫೆ 2
ಪಟ್ಟಣದ ವಿವಿಧೆಡೆ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ತಮಗೆ ಮಾಹಿತಿಯಿದೆ. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಹಲವು ಭಾಗಗಳಲ್ಲಿ ಮಟ್ಕಾ ದಂಧೆ ಈಗಲೂ ಚಾಲ್ತಿಯಲ್ಲಿದೆ ಎಂಬ ಬಗ್ಗೆ ಮಾಹಿತಿಯಿದ್ದು ಕೂಡಲೇ ಇದನ್ನು ನಿಲ್ಲಿಸದಿದ್ದರೆ
ಇದನ್ನು ನಡೆಸುವವರ ವಿರುದ್ಧ ಹಾಸನ ನಗರದಲ್ಲಿ ಕೈಗೊಂಡಂತೆ ಕಠಿಣ ಕ್ರಮ ಕೈಗೊಂಡು ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದೆಂದರು.
ಪಟ್ಟಣದ ಬಸವೇಶ್ವರ ವೃತ್ತ, ರೇಲ್ವೆ ನಿಲ್ದಾಣ, ಎಪಿಎಂಸಿ ಆವರಣ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ದೂರು ಪೆಟ್ಟಿಗೆಗಳನ್ನು ಇಡಲಾಗುತ್ತಿದ್ದು ಸಾರ್ವಜನಿಕರು ದೂರುಗಳನ್ನು ಪೆಟ್ಟಿಗೆಗಳಲ್ಲಿ ಹಾಕಬಹುದಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದಲೇ ದೂರು ಸ್ವೀಕರಿಸುವ ವಿನೂತನ ಯೋಜನೆಗೆ ಜಿಲ್ಲೆಯಾದ್ಯಂತ ಸೋಮವಾರ ಚಾಲನೆ ನೀಡಲಾಗುವುದು. ನಾಗರೀಕರು ಈ ದೂರು ಪೆಟ್ಟಿಗೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದ ಅವರು ಸಿಬ್ಬಂದಿ ಪ್ರತಿನಿತ್ಯ ಅಹವಾಲುಗಳನ್ನು, ದೂರುಗಳನ್ನು ಸಂಗ್ರಹಿಸಿ ದಾಖಲಾತಿ ವಹಿಯಲ್ಲಿ ನಮೂದಿಸಬೇಕೆಂದು ಸೂಚಿಸಿದರು.
ನಿಗಾ ವಹಿಸಲು ಯೋಜನೆ: ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಸ್ಥಳದಲ್ಲಿಯೇ ಆದೇಶಿಸಿದ ಅವರು, ಬಸ್ ನಿಲ್ದಾಣದಲ್ಲಿ ಕೂಡಲೇ ಸಭೆ ನಡೆಸಿ ಸಿಸಿ ಕ್ಯಾಮರಾ ಅಳವಡಿಸಬೇಕು. ಮೊದಲ ಹಂತದಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಬೇಕು. ಯಾವುದೇ ಕಾರಣಕ್ಕೂ ಅಶ್ಲೀಲ ವರ್ತನೆಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಅನುಕೂಲಕ್ಕಾಗಿ ವಸತಿ ಗೃಹಗಳ ನಿರ್ಮಾಣಕ್ಕೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲಿದೆ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳು, ಖಾಸಗಿ ಟ್ರಸ್ಟ್ ದೇವಾಲಯಗಳು ಹಾಗೂ ಪ್ರಾಚ್ಯವಸ್ತು ಇಲಾಖೆ ದೇವಾಲಯಗಳಲ್ಲಿ ಕಡ್ಡಾಯವಾಗಿ ಕಾವಲುಗಾರರನ್ನು ನೇಮಿಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು. ಹಾಗೆಯೇ ದೇವರ ಆಭರಣ, ಹಣ ಇನ್ನಿತರ ಸಾಮಗ್ರಿಗಳನ್ನು ಸಂಜೆ ತೆಗೆದುಕೊಂಡು ಹೋಗುವಂತೆ ಮಾಹಿತಿ ನೀಡಲಾಗಿದೆ. ಪಟ್ಟಣಕ್ಕೆ ಬಂದು ಹೋಗುವ ಅನಧಿಕೃತ ವ್ಯಕ್ತಿಗಳು, ಬಾಡಿಗೆದಾರರ ವಿವರ, ಒಂಟಿ ಮನೆಗಳು ಹಾಗೂ ವಯೋವೃದ್ಧರ, ಹಾಸ್ಟೆಲ್ಗಳ ಬಗ್ಗೆ ನಿಗಾ ವಹಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಕೆಲ ವಿಷಯಗಳಲ್ಲಿ ದೂರುದಾರರು ಇಲ್ಲದಿದ್ದ ಮೇಲೆ ಪ್ರಕರಣಗಳನ್ನು ದಾಖಲಿಸಲು ಸಾಧ್ಯವಿಲ್ಲ. ವೈಯಕ್ತಿಕ ವಿಷಯವನ್ನು ಸಮಾಜದೊಂದಿಗೆ ಸಮೀಕರಿಸುವುದು ಸರಿಯಲ್ಲ ಎಂದ ಅವರು ತಪ್ಪಿತಸ್ಥರು ಎಷ್ಟೇ ಬಲಿಷ್ಟರಾಗಿದ್ದರೂ ಕಾನೂನಿನ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದೆರಡು ಪ್ರಕರಣಗಳನ್ನೇ ಆಧಾರವಾಗಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದನ್ನು ಒಪ್ಪಲಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರ ವೃತ್ತ ನಿರೀಕ್ಷಕ ನಂದಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಗಂಗಾಧರಪ್ಪ. ಪಿಎಸ್ಐ ಲೋಕೇಶ್, ವಾಲ್ಮೀಕಿ ಸಮಾಜದ ಮುಖಂಡ ಹಾಗೂ ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಜು ಇದ್ದರು.



ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಸ್ಥಳದಲ್ಲಿಯೇ ಆದೇಶಿಸಿದ ಅವರು, ಬಸ್ ನಿಲ್ದಾಣದಲ್ಲಿ ಕೂಡಲೇ ಸಭೆ ನಡೆಸಿ ಸಿಸಿ ಕ್ಯಾಮರಾ ಅಳವಡಿಸಬೇಕು. ಮೊದಲ ಹಂತದಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಬೇಕು. ಯಾವುದೇ ಕಾರಣಕ್ಕೂ ಅಶ್ಲೀಲ ವರ್ತನೆಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಟಿ  ರವಿ ಡಿ ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.