ಹಾಸನ

ತಹಸೀಲ್ದಾರ್ ಹತ್ಯೆಗೆ ಯತ್ನಿಸಿದವರನ್ನು ಬಂಧಿಸಿ

Published On :

ಚನ್ನರಾಯಪಟ್ಟಣ: ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸತ್ತಿರುವ ತಾಲೂಕು ತಹಸೀಲ್ದಾರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾಗಿರುವವರನ್ನು ಬಂಧಿಸಬೇಕು ಎಂದು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಒತ್ತಾಯಿಸಿದರು.
ಈ ಸಂಬಂಧ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಅವಕಾಶ ನೀಡದೆ ಅವರಿಗೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಲು ಮುಂದಾಗಿರುವುದನ್ನು ಗಮನಿಸಿದರೆ ಇದರಲ್ಲಿ ಕಾಣದ ಕೈಗಳ ಕುಮ್ಮಕ್ಕಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಆಗ್ರಹ: ಈ ಹಿಂದೆ ಅಕ್ರಮ ಮರಳು, ಜಲ್ಲಿ ಸಾಗಿಸುತ್ತಿದ್ದವರು, ತಮಗೆ ಸರ್ಕಾರಿ ಅಧಿಕಾರಿಗಳು ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆಗ ಅವರ ಬೆಂಬಲಕ್ಕೆ ನಿಂತಿದ್ದ ಜನಪ್ರತಿನಿಧಿಯೊಬ್ಬರು, ತೊಂದರೆ ಕೊಡುವ ಅಧಿಕಾರಿಗಳ ಮೇಲೆ ಜೀಪು ಹತ್ತಿಸಿ ಎಂದಿದ್ದರು. ಇದರಿಂದ ಪ್ರೇರಿತರಾಗಿರುವ ಅಕ್ರಮ ಜಲ್ಲಿ ಸಾಗಾಣಿಕೆದಾರರು ತಮ್ಮನ್ನು ಹಿಡಿಯಲು ಬಂದ ತಹಸೀಲ್ದಾರ್ ಅವರ ಮೇಲೆ ಲಾರಿ ಹತ್ತಿಸಲು ಮುಂದಾಗಿದ್ದಾರೆ. ಈ ರೀತಿ, ಅಕ್ರಮ ಸಾಗಾಣಿಕೆದಾರರನ್ನು ಅಪರಾಧವೆಸಗಲು ಪ್ರೇರೇಸುವಂತೆ ಮಾತನಾಡಿದ ಜನಪ್ರತಿನಿಧಿಯನ್ನು ಕೂಡಲೇ ಬಂಧಿಸಬೇಕು.
ಅಲ್ಲದೇ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ನಾಗರಾಜ್ ಮೇಲೆ ಲಾರಿ ಹತ್ತಿಸಲು ಮುಂದಾದ ಚಾಲಕನನ್ನು, ಆ ಲಾರಿಯ ಮಾಲೀಕನನ್ನು ಬಂಧಿಸಬೇಕು ಎಂದು ಪುಟ್ಟೇಗೌಡ ಆಗ್ರಹಿಸಿದರು. ಸಿಎಂಗೆ ಒತ್ತಾಯ: ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ದಕ್ಷತೆಯಲ್ಲಿ ಕಾರ್ಯನಿರ್ವಹಿಸುವವರ ವಿರುದ್ಧ ಕೆಲವರು ಹತ್ತಿಕ್ಕುವ ಸಂಚು ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಜತೆ ಮಾತನಾಡಿ ಜಿಲ್ಲೆಯಲ್ಲಿ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುವಲ್ಲಿ ಮುಖ್ಯಮಂತ್ರಿಗಳು ಧೈರ್ಯ ತುಂಬುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು. ಆರೋಪ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದ್ದು, ಅದನ್ನು ನೀಗಿಸಲು ಕೇಂದ್ರ ಸರ್ಕಾರ ಐಎಮ್ಎಸ್ ಯೋಜನೆಯಡಿಯಲ್ಲಿ 82 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ಬೇಸಿಗೆ ಪ್ರಾರಂಭವಾಗಿದ್ದರೂ ಯೋಜನೆಯನ್ನು ಅನುಷ್ಠಾನಕ್ಕೆ ತಾರದೆ ಜನತೆಗೆ ವಂಚಿಸುತ್ತಿದ್ದಾರೆ ಎಂದು ಪುಟ್ಟೇಗೌಡ ಆರೋಪಿಸಿದರು.
ಅವ್ಯವಹಾರ ನಡೆಯುವ ಸಾಧ್ಯತೆಯಿದೆ: ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಕುಡಿಯುವ ನೀರು ಪೂರೈಸಲು ಶಾಶ್ವತ ಹಾಗೂ ತಾತ್ಕಾಲಿಕ ಕಾಮಗಾರಿಗಾಗಿ ಕೇಂದ್ರ ಹಣ ನೀಡಿದ್ದರೂ ಜಿಲ್ಲಾ ಪಂಚಾಯಿತಿ ಆಡಳಿತ ನಿದ್ರಾವಸ್ಥೆಯಲ್ಲಿದ್ದು, ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ವ್ಯಯ ಮಾಡಬೇಕಿದ್ದು, ಮಾರ್ಚ್ ಅಂತ್ಯದಲ್ಲಿ ಬಾರಿ ಅವ್ಯವಹಾರ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು. ಉದ್ಯೋಗ ಖಾತ್ರಿ ಕಾಮಗಾರಿಯನ್ನು ತಾಲೂಕಿನಲ್ಲಿ ಗುತ್ತಿಗೆ ರೂಪದಲ್ಲಿ ನೀಡುತ್ತಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ಗಮನಿಸಿದರೆ ಅವರಿಗೂ ಇದರಲ್ಲಿ ಪಾಲಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸಮಗ್ರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದು, ತಕ್ಷಣದಲ್ಲಿಯೇ ಪರಿಶೀಲನಾ ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.