ಹದಗೆಟ್ಟ ರಸ್ತೆಗೆ ಬೇಕಾಬಿಟ್ಟಿ ತೇಪೆ!
ಅರಸೀಕೆರೆ ತಾಲೂಕಿನ ಬೆಂಡೆಕೆರೆ ಹೃದಯಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಿಂದ ಹುಳಿಯಾರು ಬೇಲೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ತೇಪೆ ಕಾರ್ಯ ಕೆಲ ಭಾಗದಲ್ಲಿ ನಡೆದು ಕೆಲಭಾಗದಲ್ಲಿ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಈ ರಸ್ತೆಯ ಮರಟಗೆರೆ, ಬ್ಯಾಡರಹಳ್ಳಿ ಸಮೀಪ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿತನದಿಂದ ಬೇಕಾಬಿಟ್ಟಿ ಕಾರ್ಯ ನಿರ್ವಹಿಸುತ್ತಿದ್ದು ಯಾವುದೇ ನಿಯಮಗಳನ್ನು ಪಾಲಿಸದೆ ಕಾಮಗಾರಿ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮರು ಡಾಂಬರೀಕರಣದಲ್ಲಿ ನಿಯಮಾನುಸಾರ ಡಾಂಬರ್, ಜೆಲ್ಲಿ-ಕಲ್ಲು ಮಿಶ್ರಣ ಮಾಡದೆ ತರಾತುರಿಯಲ್ಲಿ ಮುಗಿಸುವ ಯತ್ನ ನಡೆಸಲಾಗಿದೆ. ಸರ್ಕಾರ ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕೆಂದು ಲಕ್ಷಾಂತರ ರುಪಾಯಿ ವ್ಯಯಿಸಿ ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಾಗುತ್ತಿದೆ. ಆದರೆ ಇರುವ ರಸ್ತೆಯ ಗುಂಡಿ ಮುಚ್ಚಲು ಈ ರೀತಿ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಬೇಕು. ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಇಲ್ಲದಿದ್ದಲ್ಲಿ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ
ಟಿ ನಾಗಸಮುದ್ರ ಶಶಿಧರ್
ಟ್ಯಾಂಕ್ಗೆ ನೀರು ಒದಗಿಸಿ ಉದ್ಧರಿಸಿ!
ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿರುವ ಶ್ರವಣೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವರಮುದ್ದನಹಳ್ಳಿ ಗ್ರಾಮದ ದಲಿತರ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಕಿರು ನೀರು ಸರಬರಾಜು ಕಾಮಗಾರಿಯು ಪೂರ್ಣಗೊಂಡು ವರ್ಷ ಕಳೆದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರಿನ ಸಂಪರ್ಕವೇ ಇಲ್ಲದೆ, ಕಾಲೋನಿಯಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ದಲಿತರ ಕೇರಿಗೆ ಸುಮಾರು ರು.5ಲಕ್ಷ ವೆಚ್ಚದಲ್ಲಿ 2012-13ನೇ ಸಾಲಿನಲ್ಲಿ ಕಿರು ನೀರು ಸರಬರಾಜು ಟ್ಯಾಂಕನ್ನು ನಿರ್ಮಿಸಿರುವುದನ್ನು ಬಿಟ್ಟರೆ, ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಇದುವರೆವಿಗೂ ಈ ಟ್ಯಾಂಕಿನಿಂದ ನೀರಿನ ಸಂಪರ್ಕ ನೀಡದೇ ಇರುವ ಕಾರಣದಿಂದಾಗಿ, ಬೇಸಿಗೆಯ ದಿನಗಳಾದ್ದರಿಂದ ನೀರಿಗೆ ತೊಂದರೆಯಾಗಿದೆ. ಇದನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಕೂಡಲೇ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ.
ಟಿ ಗ್ರಾಮಸ್ಥರು ಹಾಗೂ ಅರಕಲಗೂಡು ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಶಿವಣ್ಣ
ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿ-ರಸ್ತೆ ಅಭಿವೃದ್ಧಿ ಪಡಿಸಿ...
ಹಾಸನ ನಗರದ ಕೇಂದ್ರ ಭಾಗಕ್ಕಿಂತ ತುಸುದೂರ ಇರುವ ಶಾಂತಿನಗರದ ಎಲ್ಲಾ ರಸ್ತೆಗಳು ತೀರಾ ಹದಗೆಟ್ಟಿವೆ. ಓಡಾಡಲು ತುಂಬಾ ಕಷ್ಟವಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರುನಿಂತು ದ್ವಿಚಕ್ರವಾಹನವು ಓಡಾಡಲು ಸಾಧ್ಯವಾಗದೆ ಆಯತಪ್ಪಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿರುವ ಉದಾಹರಣೆಗಳು ಸಾಕಷ್ಟಿವೆ, ಈಗಂತೂ ಸಂಪೂರ್ಣ ಧೂಳಿನಿಂದಾಗಿ ವಾಹನ ಸವಾರರಿಗೆ ಮಾತ್ರವಲ್ಲ ಪಾದಚಾರಿಗಳು ಆನಾರೋಗ್ಯಕ್ಕೆ ಈಡಾಗಿದ್ದಾರೆ. ಶಾಂತಿನಗರದಿಂದ ಶಾಲಾ-ಕಾಲೇಜು,ಕೆಲಸ-ಕಾರ್ಯಗಳಿಗಾಗಿ ದಿನಪ್ರತಿ ಸಾವಿರಾರು ನಿವಾಸಿಗಳು ನಗರದ ಕೇಂದ್ರಕ್ಕೆ ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ಆಟೋಗಳಿಗೆ ದುಬಾರಿ ಹಣ ತೆತ್ತು ಪ್ರಯಾಣಿಸಬೇಕಾಗಿದೆ. ಈಗಾಗಲೇ ಬಸ್ಸಿನ ವ್ಯವಸ್ಥೆಗಾಗಿ ವತ್ತು ಇಲ್ಲಿನ ರಸ್ತೆ ಅಭಿವೃದ್ಧಿಗಾಗಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಸರಿಯಾದ ಭರವಸೆ ನೀಡಿಲ್ಲ. ಇಲ್ಲಿನ ಜನರು ಈ ಎರಡು ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಓಡಾಡುತ್ತಿರುವ ಸಾರಿಗೆ ಬಸ್ ಇಲ್ಲಿನ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಎನ್ನುವ ಬಗ್ಗೆ ಕೂಡಲೇ ಸರ್ವೆ ಮಾಡಿಸಬೇಕು, ಸಾಧ್ಯವಾಗದೇ ಇದ್ದಲ್ಲಿ ಮಿನಿ ಬಸ್ಸನ್ನಾದರೂ ಈ ಬಡಾವಣೆಗೆ ಸಂಚರಿಸಲು ವ್ಯವಸ್ಥೆ ಮಾಡಿಸಬೇಕು, ಇಲ್ಲವಾದಲ್ಲಿ ಬಡಾವಣೆ ಜನತೆಯೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವುದು.
ಟಿ ಸುನಿಲ್ಕುಮಾರ್, ಎಚ್.ಎಂ. ದೀಪಕ್, ಬಿಜಿವಿಎಸ್ ಘಟಕ, ಶಾಂತಿನಗರ, ಹಾಸನ
ವಿದ್ಯುತ್ ತಂತಿ ತುಂಡು, ಅಧಿಕಾರಿಗಳೂ ಮೊಂಡು!
ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಮಲಸಾವರ ಗ್ರಾಮದಲ್ಲಿ ವಿದ್ಯುತ್
ತಂತಿ ತುಂಡಾಗಿ ಕೆಳಗೆ ಬಿದ್ದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ವಿದ್ಯುತ್ ತಂತಿ ತುಂಡಾಗಿರುವುದರಿಂದ ಹೋಬಳಿಗೆ ವಿದ್ಯುತ್ ಸ್ಥಗಿತವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲದಂತಾಗಿದೆ. ವಿದ್ಯುತ್ ಸರಬರಾಜು ಮಾಡುವಂತೆ ಮಾಡಿದ ಮನವಿಗೆ ಉಡಾಫೆಯಿಂದ ಉತ್ತರಿಸುತ್ತಾರೆ. ಬಿಕ್ಕೋಡು ಹೋಬಳಿಯಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಹೋದರೆ ಅದನ್ನು ದುರಸ್ತಿ ಮಾಡಲು 5ರಿಂದ 10 ಸಾವಿರ ಗಳವರೆಗೂ ಲಂಚ ಪಡೆಯುತ್ತಾರೆ ಇವರನ್ನು ವರ್ಗ ಮಾಡಿ.
ಟಿ ಕೆ.ಎಸ್. ತೀರ್ಥಪ್ಪ, ಸಾಮಾಜಿಕ ಕಾರ್ಯಕರ್ತೆ, ಬೇಲೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

