ಹಾಸನ

ಗೋದಾಮಾಗಿ ಬದಲಾದ ದೇವಾಲಯ!

Published On :

ಹೊಳೆನರಸೀಪುರ: ತಾಲೂಕಿನ ಕಸಬಾ ಹೋಬಳಿಯಲ್ಲಿನ ಸಂಕನಹಳ್ಳಿ ಗ್ರಾಮದಲ್ಲಿ ದೇವರಿಗೊಂದು ವಿಶಾಲವಾದ ಸುಸಜ್ಜಿತವಾದ ದೇವಾಲಯವನ್ನು ಕಟ್ಟಿ, ಹದಿನೈದು ವರುಷಗಳೇ ಕಳೆಯುತ್ತಾ ಬಂದರೂ ಕೆಲವರ ಪ್ರತಿಷ್ಠೆ ಹಾಗೂ ಹಕ್ಕು ಸ್ಥಾಪನೆಯ ಗೊಂದಲದಿಂದಾಗಿ ಇಂದಿಗೂ ಈ ದೇವಾಲಯ ದೇವರಿಲ್ಲದೇ ಅನಾಥವಾಗಿದೆ.
ದೇವಾಲಯ ನಿರ್ಮಾಣಕ್ಕೆ ತೀರ್ಮಾನ: ಸುಮಾರು ಹದಿನೈದು ವರ್ಷಗಳ ಹಿಂದೆಯೇ ಸಂಕನಹಳ್ಳಿ ಗ್ರಾಮದ ಕೂಗಳತೆಯ ದೂರದಲ್ಲಿರುವ ಶಿವಪುರ ಎಂಬ ಪುನರ್ವಸತಿ ಗ್ರಾಮಕ್ಕೆ ನೀರಾವರಿ ಇಲಾಖೆಯ ವತಿಯಿಂದ ದೇವಾಲಯ ಮಂಜೂರಾಗಿತ್ತು. ಆದರೆ, ಆ ಸಮಯದಲ್ಲಿ ಕೆಲ ಪ್ರಮುಖರು ಸೇರಿ ಕೇವಲ 10-12 ಮನೆಗಳಿರುವ ಶಿವಪುರದಲ್ಲಿ ದೇವಾಲಯ ನಿರ್ಮಿಸುವುದರ ಬದಲಿಗೆ ಕೆಲವೇ ಹೆಜ್ಜೆಗಳ ಅಂತರದಲ್ಲಿನ ಸಂಕನಹಳ್ಳಿ ಗ್ರಾಮದ ಹೊರವಲಯದಲ್ಲಿನ ಶಿವಪುರ ಹಾಗೂ ಸಂಕನಹಳ್ಳಿ ಕೂಡು ರಸ್ತೆಯ ಬಳಿಯಲ್ಲಿ ಎಲ್ಲರಿಂದಲೂ ಪೂಜಿಸಲ್ಪಡುತ್ತಿರುವ ಶ್ರೀ ವೆಂಕಟರಮಣಸ್ವಾಮಿ ದೇವಾಲಯವನ್ನು ನಿರ್ಮಿಸಿದಲ್ಲಿ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತೀರ್ಮಾನಿಸಲಾಯಿತು.
ಗ್ರಹಣ: ಅದರಂತೆ, ನೀರಾವರಿ ಇಲಾಖೆ ವತಿಯಿಂದ ಎಲ್ಲರ ಸಮ್ಮತಿಯ ಮೇರೆಗೆ ನಿಗದಿಯಾದ ಸ್ಥಳದಲ್ಲಿ ಸುಂದರ ದೇವಾಲಯ ಕೂಡ ನಿರ್ಮಾಣವಾಯಿತು. ಆದರೆ ದೇವಾಲಯವು ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧತೆ ನಡೆಯುವ ವೇಳೆಗೆ ಕೆಲ ರಾಜಕೀಯ ಸ್ಥಿತ್ಯಂತರ ಉಂಟಾದವು. ಆ ಸನ್ನಿವೇಶದಲ್ಲಿ ದೇಗುಲ ನಿರ್ಮಾಣದ ಹಿಂದೆ ಜೊತೆಗಿದ್ದ ಕೆಲ ಪ್ರಮುಖರುಗಳು ದೂರಾದರು. ಆಗ ಶುರುವಾದ ಅಸಮಾಧಾನ, ವೈಮನಸ್ಯ ಹಾಗೂ ಸ್ವಪ್ರತಿಷ್ಠೆಗಳು ತಾರಕಕ್ಕೇರಿ ದೇವಾಲಯದ ಆರಂಭಕ್ಕೆ ಗ್ರಹಣ ಹಿಡಿಯತೊಡಗಿತು.
ತಕರಾರು: ದೇವಾಲಯವನ್ನು ನಿರ್ಮಿಸಿರುವ ಜಾಗ ತನ್ನದು ಎಂದು ಆ ವೇಳೆಗಾಗಲೇ ಈ ಸ್ಥಳವನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದ ಪ್ರಮುಖರೊಬ್ಬರು ತಕರಾರು ತೆಗೆದು ಕೂತರೆ, ಎಲ್ಲರಿಗೂ ಒಳಿತಾಗಲಿ ಎಂದು ನಿರ್ಮಿಸಿದ ದೇವಾಲಯದ ಆರಂಭಕ್ಕೆ ತಕರಾರು ಮಾಡದಂತೆ ಹಲವರು, ಪ್ರಮುಖರನ್ನು ಓಲೈಸಲು ನಡೆಸಿದ ಯತ್ನ ಕಡೆಗೂ ಫಲ ನೀಡದೇ ರಾಜಕೀಯ ತಿರುವು ಪಡೆದುಕೊಂಡಿತು.
ಇದು, ಎರಡೂ ಗ್ರಾಮಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿ, ಗ್ರಾಮಸ್ಥರಲ್ಲೇ ಹಲವು ಗುಂಪುಗಳಾಗಿ ಬದ್ಧ ವೈರತ್ವ ಮನೆಮಾಡತೊಡಗಿತು ಎಂಬುದು ಹೆಸರು ಹೇಳಲಿಚ್ಛಿಸದ ಕೆಲ ಗ್ರಾಮಸ್ಥರ ನೋವಿನ ನುಡಿ.
ಗೋಡೌನ್ ಆಗಿರುವ ದೇವಾಲಯ: ಆದರೆ, ಈ ವೈಮನಸ್ಸು ಹದಿನೈದು ವರ್ಷಗಳೇ ಕಳೆದರೂ ಮುಗಿಯದೇ, ದೇವಾಲಯಕ್ಕೂ ಮುಕ್ತಿ ಸಿಗದೆ, ದೇವಾಲಯ ಪಾಳು ಕೊಂಪೆಯಾಗಿದೆ. ದೇವಾಲಯ ಇಂದು ಕೆಲವರು ಬೆಳೆದ ಬೆಳೆಗಳನ್ನು ಕೂಡಿಡುವ ಗೋಡೌನ್ ಆಗಿದೆ. ದೇವಾಲಯದ ಗೋಡೆ ಹಾಗೂ ಗೇಟು ಮುರಿದು ಬೀಳತೊಡಗಿದೆ. ದೇವಾಲಯದ ಸುತ್ತಲೂ ಗಡಿಗಂಟಿಗಳು ಬೆಳೆದು ನೈರ್ಮಲ್ಯ ಮಾಯವಾಗಿದೆ. ಇಷ್ಟೆಲ್ಲಾ ಇದ್ದರೂ ದೇವರೇ ಇಲ್ಲದ ದೇವಾಲಯದ ಬಗ್ಗೆ ಸಂಕನಹಳ್ಳಿ ಹಾಗೂ ಶಿವಪುರದ ಗ್ರಾಮಸ್ಥರು ಯಾರೊಬ್ಬರೂ ಚಕಾರ ಎತ್ತುವ ಉತ್ಸುಕತೆಯನ್ನೇ ಕಳೆದುಕೊಂಡಿದ್ದಾರೆ. ಯಾರೋ ಕೆಲವರ ಸ್ವಪ್ರತಿಷ್ಠೆ ಹಾಗೂ ಕ್ಷುಲ್ಲಕ ಕಾರಣಗಳಿಂದಾಗಿ ದೇವರಿಲ್ಲದ ದೇವಾಲಯದ ನಿರ್ಮಾಣಕ್ಕಾಗಿ ಖರ್ಚಾದ ನೀರಾವರಿ ಇಲಾಖೆಯ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ.


-ಎಚ್.ಡಿ. ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.