ಹಾಸನ

ರಾಗಿ ಕೇಂದ್ರದ ಸದುಪಯೋಗ ಪಡೆಯಲು ಸಲಹೆ

Published On :

ಹಾಸನ: ಮುಕ್ತ ಮಾರುಕಟ್ಟೆಯಲ್ಲಿ ರಾಗಿಯ ಬೆಲೆ ಕುಸಿದಿರುವುದರಿಂದ ಸರ್ಕಾರದ ಆದೇಶದಂತೆ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ರು. 1800 ದರದಲ್ಲಿ ಖರೀದಿಸಲು
 ರಾಗಿ ಖರೀದಿ ಕೇಂದ್ರಗಳನ್ನು  ತೆರೆಯಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ತಹೀಸ್ಲಾದರ್ ಹಾಗೂ ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಖರೀದಿ ಕೇಂದ್ರಗಳನ್ನು ಹಾಸನ ಎಪಿಎಂಸಿ ಯಾರ್ಡ್, ಹೊಳೆನರಸೀಪುರ ಎಪಿಎಂಸಿ ಯಾರ್ಡ್, ಚನ್ನರಾಯಪಟ್ಟಣ ಎಪಿಎಂಸಿ ಯಾರ್‌ಡ್, ಅರಸೀಕೆರೆ ತಾಲೂಕಿನಲ್ಲಿ ಗಂಡಸಿ ಎಪಿಎಂಸಿ ಯಾರ್ಡ್ ಮತ್ತು ಜಾವಗಲ್ ಎಪಿಎಂಸಿ ಯಾರ್ಡ್‌ನಲ್ಲಿ ತೆರೆಯಲಾಗಿದೆ.
ಖರೀದಿ ಕೇಂದ್ರಗಳಲ್ಲಿ ರೈತರಿಂದ ಮಾತ್ರ ರಾಗಿ ಖರೀದಿಸಲು ಕ್ರಮ ಕೈಗೊಳ್ಳಲಾಗಿರುವುದರಿಂದ ರೈತರು ಮೇಲಿನ ಖರೀದಿ ಕೇಂದ್ರಗಳಿಗೆ ರಾಗಿ ಮಾರಾಟ ಮಾಡಲು ತಾವು ರೈತರು ಎಂಬುದಕ್ಕೆ ಸಂಬಂಧಿಸಿದ ತಹಸೀಲ್ದಾರರಿಂದ ದೃಢೀಕೃತ ಪಹಣಿಯನ್ನು ಹಾಜರುಪಡಿಸಲು ತಿಳಿಸಿದೆ.
ಈ ಬಗ್ಗೆ ಯಾವುದೇ ವಿಚಾರಣೆಗಳಿದ್ದಲ್ಲಿ ಸಂಬಂಧಿಸಿದ ತಾಲೂಕಿನ ತಹಸೀಲ್ದಾರರು ಹಾಗೂ  ಕೆಎಫ್‌ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಲು ಕೋರಿದೆ.
ಇಂದು ವಾಸ್ತುಶಿಲ್ಪ ಪ್ರದರ್ಶನ
ಹಾಸನ: ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಸನ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಫೆ. 5ರಂದು ಬೆಳಗ್ಗೆ 11ಕ್ಕೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶಿಲಾಯುಗದಿಂದ ವಿಧಾನ ಸೌಧದವರೆಗೆ ವಾಸ್ತುಶಿಲ್ಪದ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವನ್ನು ಸಾಹಿತಿ ಡಾ. ಶ್ರೀವತ್ಸ ಎಸ್. ವಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಎಂ. ಕಾವ್ಯಶ್ರೀ ಭಾಗವಹಿಸುವರು. ಕಾಲೇಜಿನ ಪ್ರಾಂಶುಪಾಲ ಪ್ರೊ. ರೂಪರಾಜ್ ಚಂದನ್ ಎಚ್. ಎನ್. ಅಧ್ಯಕ್ಷತೆ ವಹಿಸುವರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಸಿ. ಎನ್. ಲೋಕಪ್ಪಗೌಡ ಭಾಗವಹಿಸುವರು.
ಮಿಳ್ಳೆ ಕೃತಿ ಬಿಡುಗಡೆ
ಹಾಸನ: ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆ ಮತ್ತು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಚಲನಚಿತ್ರ ಸಾಹಿತಿ ಮತ್ತು ಕಾದಂಬರಿಕಾರ ದೇವಪ್ಪ  ಹಾಸನ್ (ಎಂ.ಪಿ. ದ್ಯಾವಪ್ಪ ಮಲ್ಲೆದೇವರಪುರ) ಅವರ ಮಿಳ್ಳೆ ಕೃತಿ ಬಿಡುಗಡೆ ಕಾರ್ಯಕ್ರಮ ಫೆ. 8 ಕ್ಕೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪುಸ್ತಕ ಬಿಡುಗಡೆಯನ್ನು ಖ್ಯಾತ ಕತೆಗಾರ ಹಾಗೂ ಅಂಕಣಗಾರ ಅಬ್ದುಲ್ ರಶೀದ್ ನೆರವೇರಿಸುವರು. ಕವಿ ಸುಬ್ಬು ಹೊಲೆಯಾರ್ ಪ್ರಾಸ್ತಾವಿಕ ನುಡಿ ಆಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ವಹಿಸಲಿದ್ದಾರೆ ಎಂದು ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್ ತಿಳಿಸಿದ್ದಾರೆ.
ಇಂದು ಸಕಲೇಶಪುರದಲ್ಲಿ ಕಾಫಿ ಸಮ್ಮೇಳನ
ಸಕಲೇಶಪುರ: ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕಸಬಾ ಬೆಳೆಗಾರರ ಸಂಘದ ನೇತೃತ್ವದಲ್ಲಿ ಫೆ. 6 ರಂದು  ಪಟ್ಟಣದಲ್ಲಿ  ಕಾಫಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಬಾ ಬೆಳೆಗಾರರ ಸಂಘದ ಅಧ್ಯಕ್ಷ ಹೆಬ್ಬಸಾಲೆ ಪ್ರಕಾಶ್ ಹೇಳಿದ್ದಾರೆ. ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ , ಶಾಸಕ  ಎಚ್.ಕೆ ಕುಮಾರಸ್ವಾಮಿ, ಬಿ.ಬಿ. ಶಿವಪ್ಪ ಹಾಗೂ ವೈ.ಎನ್. ರುದ್ರೇಶಗೌಡ ಆಗಮಿಸಲಿದ್ದಾರೆ. ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಕಾಫಿ ಬೆಳೆಗಾರರು ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆಗಳಾದ ಕಾಡಾನೆ ಸಮಸ್ಯೆ, ಒತ್ತುವರಿ ತೆರವು, ಏಲಕ್ಕಿ ಬೆಳೆಗಾರರ ಸಾಲಮನ್ನಾ, ಅತಿವೃಷ್ಟಿಯಿಂದ ಕಾಫಿ ಬೆಳೆನಷ್ಟಕ್ಕೆ ಕೇಂದ್ರ ಸರ್ಕಾರದಿಂದ ಸಾಲ ಮನ್ನಾ ವಿಚಾರ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ವಿಸ್ತೃತ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ  ಹಾಸನ ಬೆಳೆಗಾರರ ಸಂಘದ ಉಪಾಧ್ಯಕ್ಷ ಕೆ.ಬಿ. ಕೃಷ್ಣಪ್ಪ ಇತರರು ಇದ್ದರು.
ಶಿಕ್ಷಕರ ಕಾರ್ಯತತ್ಪರತೆ ಅಗತ್ಯ
ಹೊಳೆನರಸೀಪುರ: ದೇಶದ ಭವಿಷ್ಯ ತರಗತಿಯ ಕೊಠಡಿಗಳಲ್ಲಿ ನಿರ್ಮಾಣವಾಗುತ್ತಿರುವುದರಿಂದ ಶಿಕ್ಷಕರ ಕಾರ್ಯತತ್ಪರತೆಯೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿಯಾಗಿದೆ ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ. ಇರ್ಷಾದ್ ನುಡಿದರು. ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಾನಾ ಉಪನ್ಯಾಸಕರಿಗೆ ಇತ್ತೀಚೆಗೆ ನಡೆದ ಎರಡು ವಾರಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರ ಕಾರ್ಯದಕ್ಷತೆ ಮತ್ತು ಜವಾಬ್ದಾರಿಯ ಮೇಲೆ ರಾಷ್ಟ್ರದ ಅಭಿವೃದ್ಧಿಯು ನಿಂತಿದ್ದು, ಶಿಕ್ಷಕರು ತಮ್ಮ ತಮ್ಮ ಜವಾಬ್ದಾರಿಯರಿತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಪಣತೊಡುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಪಾಂಡುರಂಗ ವಿಠಲ ಮಾತನಾಡಿ, ಶಿಕ್ಷಕರು ಭವಿಷ್ಯದಲ್ಲಿ ಭಾರತದೇಶ ಬಲಿಷ್ಠವಾಗಿರುವಂತೆ ವಿದ್ಯಾರ್ಥಿಗಳಿಗೆ ಉತ್ತಮ ಬೋದನೆ ನೀಡಿ ದೇಶಕ್ಕೆ ಬಳುವಳಿ ನೀಡಬೇಕೆಂದು ಸಲಹೆ ನೀಡಿದ ಅವರು, ಶಿಕ್ಷಕರು ತಮ್ಮ ಹೊಣೆ ಅರಿತು ತಮ್ಮ ಕರ್ತವ್ಯವನ್ನು ನಿರ್ವಹಿಸಿದಲ್ಲಿ ಭಾರತದೇಶದ ಭವಿಷ್ಯಕ್ಕೆ ಬಳುವಳಿ ನೀಡಿದಂತೆ ಆಗಲಿದೆ ಎಂದರು. ಸಮಾರಂಭದಲ್ಲಿ ಉಪನ್ಯಾಸಕರಾದ ಎನ್.ಆರ್. ಶಿವರಾಂ, ಚಂದ್ರಕಾಂತ್, ವ್ಯವಸ್ಥಾಪಕ ಆರ್.ಬಿ. ಮಂಜು, ತರಬೇತಿಯ ಸಂಯೋಜನಾಧಿಕಾರಿ ನಂದೀಶ್ ಇತರರು ಇದ್ದರು.
ವಿದ್ಯಾರ್ಜನೆಯಿಂದ ಗುರಿ ಸಾಧನೆ
ಅರಸೀಕೆರೆ: ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಒಂದು ಪ್ರಮುಖ ಘಟ್ಟವಾಗಿದ್ದು, ಈಗ ನೀವು ಶ್ರಮವಹಿಸಿ ವಿದ್ಯಾರ್ಜನೆಯತ್ತ ಗಮನ ಹರಿಸಿದರೆ ತಮ್ಮ ಜೀವನದ ಮುಂದಿನ ಗುರಿ ಕಂಡುಕೊಳ್ಳಲು ಸಾಧ್ಯ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಬಾಲಕೀಯರ ಸಕಾ ರ್ರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಕ್ಕೂ ಹೆಚ್ಚು ಒತ್ತು ನೀಡುವುದು ಅತಿ ಅವಶ್ಯಕ ಎಂದರು.
ಪ್ರಾಂಶುಪಾಲ ಎಚ್.ಆರ್. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷೆ ಸಿದ್ದಮ್ಮ, ತಾಪಂ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ ಇದ್ದರು. ಉಪನ್ಯಾಸಕ ಕವಲೀರಪ್ಪ ಸ್ವಾಗತಿಸಿದರು, ಮಂಜುನಾಥ್ ವಂದಿಸಿದರು. ಗೋವಿಂದರಾಜ್ ನಿರೂಪಿಸಿದರು.
ರಕ್ತದಾನದಿಂದ ಸಾರ್ಥಕತೆ
ಹೊಳೆನರಸೀಪುರ: ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತ ದಾನವಾಗಿದ್ದು, ಆಪತ್ಕಾಲದಲ್ಲಿ ಅವಶ್ಯಕತೆ ಇರುವವರಿಗೆ ನೀಡುವ ರಕ್ತದಾನವು ನಿಜಕ್ಕೂ ಒಂದು ಜೀವವನ್ನು ಉಳಿಸಿದ ಸಾರ್ಥಕತೆಯನ್ನು ಮೂಡಿಸುತ್ತದೆ ಎಂದು ಇಲ್ಲಿನ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎಚ್.ಆರ್. ಮುಕುಂದೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಪಡುವಲಹಿಪ್ಪೆಯ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಮಾರಗೌಡನಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿರುವ ರಾಷ್ಟ್ರೀಯ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಲಯನ್ಸ್‌ಕ್ಲಬ್‌ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತ ಗುಂಪು ಪರೀಕ್ಷೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಭಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಡಿಮೆ ದರದಲ್ಲಿ ರಕ್ತ ಪೂರೈಕೆ: ಜಿಲ್ಲಾಸ್ಪತ್ರೆಯಲ್ಲಿನ ರಕ್ತನಿಧಿ ಅಧಿಕಾರಿ ಡಾ. ಪುರುಷೋತ್ತಮ್ ಮಾತನಾಡಿ, ಸರ್ಕಾರ ಬಡ ಹಾಗೂ ಮದ್ಯಮ ವರ್ಗ, ಸಂಕಷ್ಟದಲ್ಲಿರುವವರಿಗೆ ಸಹಕರಿಸಲು ಬಿಪಿಎಲ್ ಚೀಟಿಯನ್ನು ಹೊಂದಿರುವವರಿಗೆ ಅತ್ಯಂತ ಕಡಿಮೆ ದರದಲ್ಲಿ ರಕ್ತವನ್ನು ಪೂರೈಸುವ ವ್ಯವಸ್ಥೆ ಮಾಡಿದೆ ಎಂದರು.
ಪ್ರತಿಕೂಲ ಪರಿಣಾಮವಿಲ್ಲ: ಹೊಳೆಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಖಜಾಂಚಿ ಎಂ.ಎನ್. ಜೈಪ್ರಕಾಶ್, ವಕೀಲರುಗಳಾದ ಲ.ಆರ್.ಡಿ. ರವೀಶ್, ಬಿ.ಆರ್. ಪುರುಷೋತ್ತಮ್, ಶಿವಣ್ಣ, ಲ.ಎಚ್.ಎಸ್. ಕೃಷ್ಣಕಾಂತ್, ಪ್ರವೀಣ್, ಸಂದೀಪ್ ಜೈನ್ ಹಾಗೂ ಎನ್.ಎಸ್.ಎಸ್ ಶಿಬಿರಾಧಿಕಾರಿ ಪಾರ್ಥೇಶ್ ಮೊದಲಾದವರು ಇದ್ದರು.
ನಾಗರಾಜ ಪಟೇಲ್ ಬಿಜೆಪಿ ಅಧ್ಯಕ್ಷ
ಹೊಳೆನರಸೀಪುರ: ಭಾರತೀಯ ಜನತಾಪಕ್ಷದ ತಾಲೂಕು ಘಟಕವನ್ನು ಪುನಾರಚಿಸಲಾಗಿದೆ ಎಂದು ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ರಾಜು ತಿಳಿಸಿದ್ದಾರೆ. ತಾಲೂಕಿನಲ್ಲಿ ಬಿಜೆಪಿ ಘಟಕದ ಉಪಾಧ್ಯಕ್ಷ ಹುದ್ದೆಗಳು ಬಹುದಿನಗಳಿಂದ ಖಾಲಿ ಇದ್ದು ಅದನ್ನು ಇದೀಗ ಭರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿರುವ ಅ ವರು, ಬೆಟ್ಟದಸಾತೇನಹಳ್ಳಿ ನಾಗರಾಜ ಪಟೇಲ್ ಮತ್ತು ಹಿರೇಬೆಳಗುಲಿ ತೀರ್ಥೇಶ್ ಅವರನ್ನು  ನೂತನ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.
ಸಮ್ಮೇಳನಾಧ್ಯಕ್ಷರಾಗಿ ಚನ್ನೇಗೌಡ ಆಯ್ಕೆ
ಹಾಸನ: 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷರಾಗಿ ಖ್ಯಾತ ಕವಿ, ನಾಟಕಕಾರ, ವಿಮರ್ಶಕ ಎನ್.ಎಲ್. ಚನ್ನೇಗೌಡರನ್ನು ಆಯ್ಕೆ ಮಾಡಲಾಗಿದೆ. ನಗರದ ಕಸಾಪ ಭವನದಲ್ಲಿ ಇತ್ತೀಚೆಗೆ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಆರ್. ಮಮತೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಎನ್.ಎಲ್. ಚನ್ನೇಗೌಡರನ್ನು ಸರ್ವಾನುಮತದಿಂದ ತೀರ್ಮಾನ ಮಾಡಿ ಆಯ್ಕೆ ಮಾಡಿದರು. ಇದೇ ವೇಳೆ ಗೊರೂರು ವರದರಾಜು ಕಾಲೇಜ್ ಪ್ರಾಂಶುಪಾಲ ಚಂದ್ರಶೇಖರ್, ಜಿಪಂ ಸದಸ್ಯ ಎಮ್.ಕೆ. ದ್ಯಾವಪ್ಪ, ಕಸಾಪ ಗೌರವ ಕಾರ್ಯದರ್ಶಿ ಮಂಜುಳ ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಆರ್.ಬಿ. ಶಂಕರ್, ಮಧು, ಐಚನಹಳ್ಳಿ ಕೃಷ್ಣಪ್ಪ, ತ್ಯಾವೇಹಳ್ಳಿ ಪರಮೇಶ್ ಇತರರು ಇದ್ದರು.
ಕುಷ್ಠರೋಗ ಜಾಗೃತಿ ರಥಯಾತ್ರೆ ಆರಂಭ
ಹಾಸನ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾ ನಗರ ಪ್ರದೇಶದ ವ್ಯಾಪ್ತಿ ಕೊಳಚೆ ಪ್ರದೇಶ ಹಾಗೂ ಕೈಗಾರಿಕ ವಸಹತು ಕೇಂದ್ರದಲ್ಲಿ ತೀವ್ರ ಪ್ರಚಾರ ಕೈಗೊಳ್ಳುವ ಉದ್ದೇಶದಿಂದ ಆಯೋಜಿಸಲಾಗಿರುವ ರಥಯಾತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಮಂಗಳವಾರ ಜಿಲ್ಲಾ ಕುಷ್ಠರೋಗ ನಿರ್ವಣಾಧಿಕಾರಿ ಡಾ. ಹೇಮಲತಾ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕುಷ್ಠರೋಗದ ಚಿಹ್ನೆಗಳಾದ ಸ್ಪರ್ಶ ಜ್ಞಾನವಿಲ್ಲದ ತಿಳಿ- ಬಿಳಿ ಮಚ್ಚೆಗಳು ಕಂಡು ಬಂದಲ್ಲಿ ಕೂಡಲೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು, ಕೈ ಕಾಲುಗಳಲ್ಲಿ ಜುಮು ಹಿಡಿಯುವುದು, ಕತ್ತಿನ ಪಕ್ಕದಲ್ಲಿ ಮೊಣಕೈ ಹಾಗೂ ಮೊಣ ಕಾಲುಗಳ ಹಿಂಭಾಗದಲ್ಲಿ ನರಗಳ ಊತ ಹಾಗೂ ನೋವು ಕಾಣಿಸಿಕೋಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳು ಎಂದರು. ತಾಲ್ಲೋಕು ಆರೋಗ್ಯಾಧಿಕಾರಿ ಡಾ.ಎಂ.ಎಸ್. ಮಹೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಮೇಲ್ವಿಚಾರಕರು ಹಾಗೂ ಇಲಾಖಾ ನೌಕರ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ರಥ ಯಾತ್ರೆಯು ನಗರಾದ್ಯಂತ ಸಂಚರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.