ಹಾಸನ

ನೀರಿನ ಅನುದಾನ ಬಳಕೆ: ಜಿಪಂ ವಿಫಲ

Published On :

ಕ.ಪ್ರ. ವಾರ್ತೆ , ಹಾಸನ , ಫೆ. 5
ಬಾಯಾರಿಕೆ ಅಂದ್ರೆ ಶತ್ರು ಕೂಡ ಒಂದಿಷ್ಟು ನೀರನ್ನು ಕೊಡದೆ ಇರಲಾರ. ಆದ್ರೆ ಜಿಲ್ಲಾ ಪಂಚಾಯ್ತಿಯಲ್ಲಿ ಇರುವ ಅನುದಾನವನ್ನು ಸಮರ್ಪಕವಾಗಿ ಬಳಿಸಿಕೊಂಡು ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದಿರುವುದು ವಿಪರ್ಯಾಸ.
ಬೇಸಿಗೆ ಬಿಸಿ ಆರಂಭಗೊಂಡಿರುವ ಜಿಲ್ಲೆಯ ನಾನಾ ಕಡೆ ಕುಡಿಯುವ ನೀರಿಗೆ ಪರದಾಟವಿದೆ. ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಜಾಗವಲ್ ಸೇರಿದಂತೆ ಜಿಲ್ಲಾದ್ಯಂತ ಕೆರೆಕಟ್ಟೆಗಳು ಸಂಪೂರ್ಣವಾಗಿ ಒಳಗಿ ಹೋಗಿದ್ದರೆ, ಬೋರ್‌ವೆಲ್‌ಗಳು ಬತ್ತಿ ಹೋಗಿ ತೇವಾಂಶ ನಲುಗಿ ಹೋಗಿದೆ. ಇದರಿಂದ ಜನ, ಜಾನುವಾರುಗಳಿಗೆ ಬೇಸಿಗೆ ಪ್ರಾರಂಭದಲ್ಲಿಯೇ ನೀರಿನ ಸಮಸ್ಯೆ ತೋರಿದೆ.
ಗುರಿ ತಲುಪಿಲ್ಲ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕುಡಿಯುವ ನೀರಿಗೆ ನಿಗದಿಪಡಿಸಲಾಗಿರುವ ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆಯನ್ನು ಸಮರ್ಪಕವಾಗಿ ಅಧಿಕಾರಿಗಳು ನಿರ್ವಹಿಸಿಲ್ಲ. ಕುಡಿಯುವ ನೀರು ಪೂರೈಕೆ ಯೋಜನೆಗೆ ನಿಗದಿಪಡಿಸಿರುವ 32 ಕೋಟಿ ರು.ಗಳಲ್ಲಿ ಈವರೆಗೆ ಕೇವಲ 13 ಕೋಟಿ ಮಾತ್ರ ಸದ್ಬಳಕೆಯಾಗಿದೆ. ಆರ್ಥಿಕ ವರ್ಷಪೂರ್ಣಗೊಳ್ಳಲು ಎರಡು ತಿಂಗಳು ಮಾತ್ರ ಬಾಕಿ ಉಳಿದೆ. ಬೇಸಿಗೆಯಲ್ಲಿ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ತ್ವರಿತ ಕ್ರಮವನ್ನು ಅಧಿಕಾರಿಗಳು ನಿರ್ವಹಿಸಿಲ್ಲ.
ಜೊತೆಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳು ತ್ವರಿತವಾಗಿ ನಡೆಯುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಓವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣದ ಅನುದಾನ ಬಳಕೆಯಲ್ಲಿ ಹಿನ್ನಡೆಯಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.
ಅನುದಾನ ಬಳಕೆಯಾಗಿಲ್ಲ: ಈಗಾಗಲೇ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಹಣ ಇದ್ದರೂ ಸಹ ಸಮಸ್ಯೆ ಪರಿಹರಿಸಲು ಸಾಧ್ಯವಾಗದೇ ಸಂಬಂಧಪಟ್ಟ ಇಲಾಖೆಗಳು ಕೈಕಟ್ಟಿ ಕುಳಿತಿವೆ. ಆರ್ಥಿಕ ನೆರವು ಇದ್ದರು, ಸಹ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ಅವಶ್ಯಕ ಕೊಳವೆ ಬಾವಿಗಳನ್ನು ಕೊರೆಸಿಲ್ಲ. ಜಿಲ್ಲೆಯಲ್ಲಿ 8 ತಾಲೂಕುಗಳ ಪೈಕಿ 6ನ್ನು ಬರಪೀಡಿತ ಎಂದು ರಾಜ್ಯ ಸರ್ಕಾರವೇ ಘೋಷಿಸಿದೆ. ಹಣ ಬಿಡುಗಡೆಯಾಗಿದ್ದರೂ ಸಹ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಅನುದಾನ ಬಳಕೆಯಾಗಿಲ್ಲ.
ಪರದಾಟ: ಇನ್ನು, ಜಿಲ್ಲೆಯ ಜೀವನದಿ ಹೇಮಾವತಿ ಹಾಗೂ ಯಗಚಿ ನದಿ ನೀರೂ ದಿನದಿಂದ ದಿನಕ್ಕೆ ಇಂಗುತ್ತಿದೆ. ಜಲಾಶಯಗಳಲ್ಲಿ ಶೇಖರಣೆಯಾಗಿರುವ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಹಣ ಇದ್ದರೂ ಸಹ ನೀರಿನ ಮೂಲ ಹೆಚ್ಚಿಸಲು ಅಧಿಕಾರಿಗಳು ಮನಸ್ಸು ಮಾಡದೇ ಇರುವುದರಿಂದ ಜಿಲ್ಲೆಯ ಜನರು ನೀರಿಗಾಗಿ ಪರದಾಡುತ್ತಿದ್ದಾರೆ.
ಟ್ಯಾಂಕರ್‌ಗಳಲ್ಲಿ ನೀರು: ಜಿಲ್ಲೆಯ ನಾನಾ ಭಾಗಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ನೀಗಿಸಲು ಸ್ಥಳೀಯ ಸಂಸ್ಥೆಗಳು ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುತ್ತಿದ್ದಾರೆ. ಜಾವಗಲ್, ಹಳೇಬೀಡು, ಹಿರೀಸಾವೆ ಹಾಗೂ ಅರಸೀಕೆರೆಗಳಲ್ಲಿ ಒಂದು ಮನೆಗೆ 2 ಬಿಂದಿಗೆಯಂತೆ ನೀರನ್ನು ಒದಗಿಸಲಾಗುತ್ತಿದೆ. ಆದರೂ ಸಹ ಕುಡಿಯುವ ನೀರಿನ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯ
ಜಿಲ್ಲೆಯಲ್ಲಿರುವ 13,926 ಕೊಳವೆ ಬಾವಿ ಪೈಕಿ, 3395ಕ್ಕೂ ಹೆಚ್ಚು ಬಾವಿಗಳು ಕೆಟ್ಟಿವೆ. ಕಿರು ನೀರು ಸರಬರಾಜು ಯೋಜನೆಗಳಲ್ಲಿ 120ಕ್ಕೂ ಹೆಚ್ಚು ನಿಷ್ಕ್ರಿಯವಾಗಿವೆ. ನಳ ನೀರು ಸರಬರಾಜೂ ಕೂಡ ಸಮರ್ಪಕವಾಗಿಲ್ಲ. 16,650 ಜಲ ಮೂಲಗಳಲ್ಲಿ 3570 ಒಣಗಿ ಹೋಗಿವೆ. ಒಟ್ಟಾರೆಯಾಗಿ ಜೀವಜಲ ಸಮರ್ಪಕವಾಗಿಸಲು ಒಟ್ಟು 32 ಕೋಟಿ ರು.ಗಳನ್ನು ಸರ್ಕಾರ ನೀಡಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಇನ್ನು ಜಿಲ್ಲೆಯಲ್ಲಿ ಸುಮಾರು 3600 ಕೆರೆಗಳಿದ್ದು, ಗ್ರಾಮೀಣ ಭಾಗಗಳ ಜನಜಾನುರಾಗಳಿಗೆ ಇವೇ ಜಲ ಮೂಲ. ಆದರೆ ಬಹುತೇಕ ಕೆರೆಗಳ ಒಡಲು ಸಂಪೂರ್ಣ ಬತ್ತಿಹೋಗಿದೆ. ಹೀಗಾಗಿ ಜನ, ಜಾನುವಾರುಗಳು ನೀರಿಗಾಗಿ ಪರದಾಡುವಂತಾಗಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ಬೆಳೆಗಳು ನೀರಿಲ್ಲದೆ ಒಣಗಿವೆ.
ಏತ ನೀರಾವರಿಗೆ ಒತ್ತಾಯ
ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದರಿಂದ ನೆನೆಗುದಿಗೆ ಬಿದ್ದಿರುವಂತಹ ಜಿಲ್ಲೆಯ ಪ್ರಮುಖ ಏತ ನೀರಾವರಿಗಳಾದ ಕಾಚೇನಹಳ್ಳಿ ಏತ ನೀರಾವರಿ, ಹಳೇಬೀಡು- ಮಾದಿಹಳ್ಳಿ ಸೇರಿದಂತೆ ಇತರೆ ಏತ ನೀರಾವರಿಗಳಿಗೆ ಕೂಡಲೇ ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲೆಯ ಜನತೆ ಒತ್ತಾಯಿಸಿದ್ದಾರೆ.


-ಪಿ. ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.