ಕೋಳಿ ಸಾಕಾಣಿಕೆ ತರಬೇತಿ
ಹಾಸನ: ಪಶು ಪಾಲನಾ ಇಲಾಖೆ ವತಿಯಿಂದ ಫೆ. 10 ಮತ್ತು 11ರಂದು ಎರಡು ದಿನಗಳ ಕೋಳಿ ಸಾಕಾಣಿಕೆ ತರಬೇತಿಯನ್ನು ಏರ್ಪಡಿಸಲಾಗಿದೆ. ಆಸಕ್ತಿಯುಳ್ಳವರು ತರಬೇತಿ ಪ್ರಾರಂಭವಾಗುವ ದಿನದಂದು ಬೆಳಗ್ಗೆ 10.30ಕ್ಕೆ ಸಹಾಯಕ ನಿರ್ದೇಶಕರ ಕಚೇರಿ, ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣ, ಸಂತೇಪೇಟೆ, ಹಾಸನದಲ್ಲಿ ಹಾಜರಾಗಬೇಕೆಂದು ಸೂಚಿಸಿದೆ. ಸಂಪರ್ಕ ದೂ.ಸಂ: 08172-235226.
ತೋಟಗಾರಿಕೆ ಸಹಾಯಧನ
ಹಾಸನ: ಜಿಲ್ಲೆಯಲ್ಲಿ ತೆಂಗು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯಕೊರತೆಯಿಂದ ಮತ್ತು ಕೀಟ ರೋಗ ಬಾದೆಯಿಂದ ಇಳುವರಿ ಕುಂಠಿತವಾಗಿರುವ, ಬಾಗಶಃ ಹಾನಿಯಾದ ತೊಟಗಳನ್ನು ಪುನಶ್ಚೇತನಗೊಳಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಇಲಾಖೆ ವತಿಯಿಂದ ಸಮಗ್ರ ಬೇಸಾಯ ಪದ್ಧತಿ ಅಳವಡಿಸಿ ನೀರಿನಸಂರಕ್ಷಣೆ ಮತ್ತು ಮಧ್ಯಂತರ ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ರು. 12,000 ನಂತೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ಹಾನಿಗೊಳಗಾದ ತೋಟಗಳ ತೆಂಗು ಬೆಳೆಗಾರರು ಕೂಡಲೇ ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯ್ತಿ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಈ ಯೋಜನೆಯಡಿ ಅನುದಾನ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಯಪಡಿಸಿದೆ. ಸಹಾಯಧನದ ಅರ್ಜಿಗಳನ್ನು ಸಲ್ಲಿಸಲು ಫೆ. 18 ಕಡೇ ದಿನವಾಗಿದೆ.
ಮುಸುಕಿನಜೋಳ ಬೆಳೆ ಕ್ಷೇತ್ರೋತ್ಸವ
ಹಾಸನ: ತಾಲೂಕಿನ ದುದ್ದ ಹೋಬಳಿ, ಮಾಯಸಮುದ್ರ ಗ್ರಾಮದಲ್ಲಿ ಇತ್ತೀಚೆಗೆ ಕೃಷಿ ಇಲಾಖೆ ವತಿಯಿಂದ ಭೂಚೇತನ ಯೋಜನೆಯಡಿ ಹೋಬಳಿ ಮಟ್ಟದ ಮುಸುಕಿನಜೋಳ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಣಗೌಡ, ಕಾರ್ಯಕ್ರಮ ಉದ್ಘಾಟಿಸಿದರು. ದುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಚನ್ನಕೇಶವ ಉಪನ್ಯಾಸ ನೀಡಿ, ರೈತರಿಗೆ ಮಣ್ಣು ಪರೀಕ್ಷೆ ಹಾಗೂ ಲಘು ಪೋಷಕಾಂಶಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಹಾಸನ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎ.ಎಸ್. ಕೋಕಿಲ ಅವರು ರೈತರಿಗೆ ಕ್ಷೇತ್ರೋತ್ಸವದ ಉದ್ದೇಶದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಇಲಾಖೆ ವತಿಯಿಂದ ರಿಯಾಯ್ತಿ ದರದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಅವರು ವಿವರಿಸಿದರು. ಕೃಷಿ ಅಧಿಕಾರಿ ಡಿ.ಕೆ. ಯೋಗಾನಂದ ಸ್ವಾಗತಿಸಿ, ವಂದಿಸಿದರು.
'ಪಾರ್ಕಿಂಗ್ ಶುಲ್ಕ ವಸೂಲಿ ಇಲ್ಲ'
ಹಾಸನ: ಹಾಸನ ನಗರ ಸಭೆ ವ್ಯಾಪ್ತಿಯ ಆರ್.ಸಿ. ರಸ್ತೆಯಿಂದ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವ ಜಿಲ್ಲಾ ಖಜಾನೆ ಮುಂಭಾಗದಲ್ಲಿರುವ ರಸ್ತೆಯಲ್ಲಿ ನಿಲ್ಲಿಸಲಾಗುವ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿಲ್ಲ ಎಂದು ನಗರಸಭೆ ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ ಸ್ಪಷ್ಟಪಡಿಸಿದ್ದಾರೆ. ಈ ಜಾಗದಲ್ಲಿ ನಿಲುಗಡೆಯಾಗುವ ವಾಹನಗಳಿಗೆ ಜಿಲ್ಲಾ ವಕೀಲರ ಸಂಘದ ವತಿಯಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯುಕ್ತರು, ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಅಧಿಕಾರ ಜಿಲ್ಲಾ ವಕೀಲರ ಸಂಘಕ್ಕೆ ಇರುವುದಿಲ್ಲ. ಹಾಗಾಗಿ, ಸಾರ್ವಜನಿಕರು ಈ ಜಾಗದಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಪಾವತಿಸುವಂತಿಲ್ಲ ಎಂದು ಹೇಳಿದ್ದಾರೆ.
ದೃಷ್ಟಿದೋಷ ನಿವಾರಣೆಗೆ ವಿಟಮಿನ್ 'ಎ' ದ್ರಾವಣ
ಅರಸೀಕೆರೆ: ವಿಟಮಿನ್ ಎ ಅನ್ನಾಂಗದ ದ್ರಾವಣವನ್ನು ಒಂದುವರೆ ವರ್ಷದಿಂದ ಐದು ವರ್ಷದ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳಿಗೆ ಬರುವ ದೃಷ್ಟಿದೋಷವನ್ನು ತಡೆಗಟ್ಟಬಹುದು ಎಂದು ವೈದ್ಯಾಧಿಕಾರಿ ಡಾ.ಬಿ. ಲೋಹಿತ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಕಣಕಟ್ಟೆ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿಟಮಿನ್ ಎ ಅನ್ನಾಂಗ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ವಿಟಮಿನ್ ಎ ದ್ರಾವಣವನ್ನು ಬರಿ ಕಣ್ಣಿಗೆ ಅಲ್ಲದೆ ಶ್ವಾಸಕೋಶದ ತೊಂದರೆಗೂ ಉಪಯೋಗಿಕಾರಿಯಾಗಿದ್ದು ವಿಟಮಿನ್ ಎ ದ್ರಾವಣದ ಸದ್ಬಳಕೆಯಾಗಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಕಣಕಟ್ಟೆಯ ಪ್ರಯೋಗಾಲಯ ತಜ್ಞ ಬಿ. ಪರಮೇಶ್ ಮಾತನಾಡಿ, ನಮ್ಮ ಆಹಾರ ಪದ್ಧತಿಯಲ್ಲಿ ಸಮತೂಕದ ಆಹಾರ ಅಡಗಿದೆ ಎಂದರು. ತಾಲೂಕು ಆರೋಗ್ಯ ನಿರೀಕ್ಷಕ ಶಿವಣ್ಣ, ಮಹಿಳಾ ಮೇಲ್ವಿಚಾರಕಿ ಬಿ.ಟಿ. ಚಂದ್ರಮ್ಮ, ಆಶಾ ಮೇಲ್ವಚಾರಕಿ ಸುಧಾ ಹಾಗೂ ವಸಂತ, ಬಿ.ಹೆಚ್.ಇ. ಗುರುಸಿದ್ದಪ್ಪ, ನೇತ್ರಾಧಿಕಾರಿ ದೇವರಾಜ್, ಸರೋಜಮ್ಮ, ಇತರರು ಇದ್ದರು. ಸ್ಥಳೀಯ ಅಂಗನವಾಡಿ ಮಕ್ಕಳು ಪ್ರಾರ್ಥಿಸಿದರು, ಎಸ್.ಬಿ. ಯೋಗೀಶ್ ಸ್ವಾಗತಿಸಿದರು. ಮೋಹನ್ ಕುಮಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

