ಅಂಗನವಾಡಿ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಫೆ. 6
ಅಂಗನವಾಡಿ ಕೇಂದ್ರಗಳ ಖಾಸಗೀಕರಣ ವಿರೋಧಿಸಿ, 10 ಸಾವಿರ ಕನಿಷ್ಠ ಕೂಲಿ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ. ರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿಗೆ ಕೆಲ ಸಮಯ ಧರಣಿ ನಡೆಸಿ ಮನವಿ ನೀಡಿದರು.
ದೇಶದ ಮಾನವ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿ ಅಂಗನವಾಡಿ ನೌಕರರು 38 ವರ್ಷಗಳಿಂದ ಕೆಲಸ ಮಾಡುತ್ತಾ ಇಂದಿನ ಸಾಮಾಜಿಕ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಹಡೆದ ಮಕ್ಕಳಿಗಿಂತ, ಪಡೆದ ಮಕ್ಕಳ ತಾಯಂದಿರಾಗಿ ಶ್ರಮಿಸಿದ ಈ ಮಹಿಳಾ ಶ್ರಮಿಕರ ಸೇವೆಯನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇವರ ಕೆಲಸದ ಅವಧಿಯನ್ನು ಹೆಚ್ಚಿಸಿ ಕನಿಷ್ಟ ಕೂಲಿ ಕೊಡದೆ ದುಡಿಸುತ್ತಿದೆ. ಈಗ ಜಾರಿಯಲ್ಲಿ ಇರುವ ಪಿಂಚಣಿ ಯೋಜನೆ ಕೂಡ ಏನೂ ಉಪಯೋಗವಿಲ್ಲದ ಯೋಜನೆಯಾಗಿದ್ದು, ಈ ಹಣವನ್ನು ಷೇರು ಮಾರುಕಟ್ಟೆಗೆ ಹಾಕಲಾಗುತ್ತಿದೆ. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕೇವಲ ರು. 2,250ಗೆ ಇಬ್ಬರ ಕೆಲಸವನ್ನು ಒಬ್ಬರೇ ಮಾಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು.
ಸಮಸ್ಯೆಗಳ ಆಗರ: ಎಸ್ಸೆಸ್ಸೆಲ್ಸಿ ಆದ ಸಹಾಯಕರಿಗೆ ಕಾರ್ಯಕರ್ತೆರನ್ನಾಗಿ ತೆಗೆದುಕೊಳ್ಳದೇ, ಸಹಾಯಕಿಯರಿಗೆ ಹೆರಿಗೆ ಭತ್ಯೆ ಸವಲತ್ತು ನೀಡದೇ ಸಮಸ್ಯೆ ಉಂಟಾಗಿದೆ. ಐಸಿಡಿಎಸ್ನ ಹೊರತುಪಡಿಸಿದ ಕೆಲಸಗಳಾದ ಸ್ತ್ರೀಶಕ್ತಿ, ಭಾಗ್ಯಲಕ್ಷ್ಮಿ ಯೋಜನೆಗಳಿಗೂ ಕೆಲಸ ಮಾಡಿ ಸ್ಥಳೀಯ ರಾಜಕೀಯ ಒತ್ತಡಗಳಿಗೆ ಒಳಗಾಗಿ ಕೆಲ ಅಂಗನವಾಡಿ ನೌಕರರು ತಮ್ಮದಲ್ಲದ ತಪ್ಪಿಗೆ ಕೆಲಸ ಕಳೆದುಕೊಂಡಿದ್ದಾರೆ. ಕೆಲಸದಿಂದ ತೆಗೆದವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಕಾನೂನು ಇಲ್ಲ, ಎಂಬ ವಾದವನ್ನು ಮಂಡಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಂಗನವಾಡಿ ಕೇಂದ್ರದ ಯಜಮಾನಿಕೆ, ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ಮತ್ತು ಶ್ರೀಮಂತ ಹಿತಾಸಕ್ತಿಗಳಿಗೆ ನೀಡುವ, ಶೇ.10 ಪ್ರಾಜೆಕ್ಟ್ಗಳನ್ನು ಖಾಸಗಿಯವರಿಗೆ ನೀಡುವ, ಶೇ.10 ಪಂಚಾಯತ್ ಸಂಸ್ಥೆಗಳಿಗೆ ವಹಿಸುವ, ಅಂಗನವಾಡಿ ಕೇಂದ್ರಗಳನ್ನು ಕೇವಲ ಸಲಹೆ ಮತ್ತು ಕಲಿಕಾ ಕೇಂದ್ರಗಳಾಗಿ ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಆಕ್ರೋಶ: ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡುವ ನೆಪದಲ್ಲಿ ಕಾನ್ವೆಂಟ್ಗಳಿಗೆ ಐಸಿಡಿಎಸ್ ಹಣವನ್ನು ವರ್ಗಾಯಿಸುವ, ಐಸಿಡಿಎಸ್ಗೆ ಬೇಕಾದ ಮೂಲ ಸೌಕರ್ಯ, ನಿರ್ವಹಣೆ ಮತ್ತು ವಿತರಣೆಯಲ್ಲಿ ಶೇ.15 ಅಂಗನವಾಡಿಗಳಿಗೆ ಮಾತ್ರವೇ ಸರ್ಕಾರಿ ಕಟ್ಟಡ, ಉಳಿದ ಶೇ. 85 ಕಟ್ಟಡಗಳಿಗೆ ಸ್ಥಳೀಯವಾಗಿ ಖಾಸಗೀ ಸ್ವಯಂ ಸೇವಾ ಸಂಸ್ಥೆಗಳಿಂದ, ಫಲಾನುಭವಿಗಳಿಂದ ಸಂಪನ್ಮೂಲ ಸಹಾಯ ಸಂಗ್ರಹಿಸಬೇಕೆಂಬ ಪ್ರಸ್ತಾಪ ಇದರಲ್ಲಿದೆ. ಜೊತೆಗೆ ಪ್ರತಿಯೊಂದು ಕೇಂದ್ರಕ್ಕೆ ನಿಕೃಷ್ಟ ಗೌರವಧನಕ್ಕೆ ಹೆಚ್ಚುವರಿ ಕಾರ್ಯಕರ್ತರು, ಲಿಂಕ್ ಕಾರ್ಯಕರ್ತರು ಮತ್ತು ಕ್ರಷ್ ವರ್ಕರ್ಸ್ಗಳನ್ನು ನೇಮಿಸಿ, ಈಗಿರುವ ಅಂಗನವಾಡಿ ನೌಕರರ ಕೆಲಸಗಳ ಮಹತ್ವ ಕಡಿಮೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕುಗಳಿಗೆ ಆಪತ್ತು: ಈ ಅಪಾಯಕಾರಿ ಶಿಫಾರಸ್ಸುಗಳನ್ನು ನಮ್ಮ ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ಎರಡು ಹಂತಗಳಲ್ಲಿ ಗುರುತಿಸಿ ಜಾರಿ ಮಾಡಲಾಗುತ್ತಿದೆ. ಇದನ್ನು ಸರ್ಕಾರ ವಾಪಸ್ ಪಡೆಯದಿದ್ದರೆ, ದೇಶದಲ್ಲಿ 8 ಕೋಟಿ, ರಾಜ್ಯದಲ್ಲಿ 55 ಲಕ್ಷ ಫಲಾನುಭವಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳಿಗೆ ಆಪತ್ತು ಬರಲಿದೆ ಎಂದು ಅಲವತ್ತುಕೊಂಡರು. ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ಮಂಜಮ್ಮ, ಪ್ರಧಾನ ಕಾರ್ಯದರ್ಶಿ ಶಾಂತಲಕ್ಷ್ಮಿ, ಮಂಜುಳ, ರೂಪ, ಗೌರಮ್ಮ, ಕಮಲ, ಸುಮ, ಸರೋಜಮ್ಮ, ಪ್ರಾಂತ ರೈತ ಸಂಘದ ಸಂಚಾಲಕ ಎಚ್.ಆರ್. ನವೀನ್ ಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

