ಬರ ಕಾಮಗಾರಿಗೆ ರು. 38 ಕೋಟಿ ಪ್ರಸ್ತಾವನೆ
ಕನ್ನಡಪ್ರಭ ವಾರ್ತೆ, ಹಾಸನ, ಫೆ. 6
ಬರಪರಿಹಾರ ಕಾಮಗಾರಿಗೆ ರು. 38 ಕೋಟಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಪ್ರತಿನಿತ್ಯ ಒಬ್ಬ ವ್ಯಕ್ತಿಗೆ 70 ಲೀಟರ್ನಂತೆ ಕುಡಿಯುವ ನೀರನ್ನು ನೀಡವಂತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ವರದಿಗಾರರ ಕೂಟದವತಿಯಿಂದ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕಳೆದ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಮಳೆಯ ಅಭಾವ ಉಂಟಾಗಿದ್ದರಿಂದ ಜಿಲ್ಲೆಯಲ್ಲಿ ಬರ ಹೆಚ್ಚಾಗಲು ಕಾರಣವಾಗಿದೆ. ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ಮಳೆಯಾಗಿದೆ. ಈಗಾಗಲೇ ಹೇಮಾವತಿ ಜಲಾಶಯದಿಂದ 227 ಕೆರೆಗಳು ಹಾಗೂ ಯಗಚಿ ಜಲಾಶಯದಿಂದ 38 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಮೇವು ಶೇಖರಣೆ: ಕುಡಿಯುವ ನೀರಿನ ಅಭಾವ ಉಂಟಾಗಿರುವಂತಹ ಕಡೆಗಳಲ್ಲಿ ಈಗಾಗಲೇ ಟ್ಯಾಂಕರ್ ಹಾಗೂ ಟ್ರ್ಯಾಕ್ಟರ್ನ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ತಕ್ಷಣದ ಕ್ರಮಕೈಗೊಳ್ಳುವಂತೆ ಈಗಾಗಲೇ ಅಧಿಕಾರಗಳಿಗೆ ಸೂಚಿಸಲಾಗಿದೆ. ಬೋರ್ವೆಲ್ಗಳು ವಿಫಲವಾದರೆ ಅಲ್ಲಿಗೂ ಸಹ ನೀರನ್ನು ಟ್ಯಾಂಕರ್ ಮೂಲಕ ಒದಗಿಸುವಂತೆಯೂ ತಿಳಿಸಲಾಗಿದೆ ಎಂದ ಅವರು, ಜಾನುವಾರುಗಳಿಗೆ ಮೇವಿಯ ಕೊರತೆ ಆಗದಿಂದೆ ಮುಂದಿನ 11 ತಿಂಗಳಿಗೆ ಆಗುವಷ್ಟು ಮೇವನ್ನು ಶೇಖರಣೆ ಮಾಡಲಾಗಿದೆ ಎಂದರು.
ನೀರು ಒದಗಿಸಲು ಸಿದ್ಧ: ಒಟ್ಟಾರೆಯಾಗಿ ಸರ್ಕಾರಕ್ಕೆ ಬರ ಪರಿಹಾರಕ್ಕೆ ರು. 38 ಕೋಟಿ ಪ್ರಸ್ತಾವನೆ ಕಳುಹಿಸಲಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ಪ್ರತಿನಿತ್ಯ 70 ಲೀಟರ್ ಕುಡಿಯುವ ನೀರನ್ನು ಒದಗಿಸುವಂತೆ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ ಜಾನುವಾರುಗಳಿಗೂ ಸಹ ನೀರನ್ನು ಒದಗಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ಒತ್ತುವರಿ ಬಗ್ಗೆ ಕ್ರಮ: ಜಿಲ್ಲೆಯಲ್ಲಿ 30 ಸಾವಿರ ಎಕರೆಯಷ್ಟು ಸರ್ಕಾರಿ ಭೂಮಿಗಳು ಒತ್ತುವರಿಯಾಗಿದ್ದು, ಈ ಪೈಕಿ 8 ಸಾವಿರ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಹೆಚ್ಚಾಗಿ ಸಕಲೇಶಪುರದಲ್ಲಿ ಒತ್ತವರಿಯಾಗಿದೆ. ಆದ್ದರಿಂದ ನ್ಯಾಯಾಲಯದ ಆದೇಶದಂತೆ 1 ತಿಂಗಳಿಗೆ 100 ಎಕರೆ ಜಾಗವನ್ನು ಒತ್ತುವರಿ ಮಾಡಿರುವವರಿಂದ ವಾಪಸ್ ಭೂಮಿಯನ್ನು ಪಡೆದು ಸರ್ಕಾರಕ್ಕೆ ಒಪ್ಪಿಸುವಂತೆ ಎಲ್ಲಾ ತಾಲೂಕುಗಳ ತಹಸೀಲ್ದಾರ್ಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಈಗಾಗಲೇ 1500ಕ್ಕೂ ಹೆಚ್ಚು ಎಕರೆಯಷ್ಟು ಭೂಮಿಯನ್ನು ಸರ್ಕಾರಕ್ಕೆ ವಾಪಸ್ ನೀಡಲಾಗಿದೆ. ಹಲವು ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಅನುಭವಿಸಿಕೊಂಡು ಬರುತ್ತಿರುವಂತವರು ತಮಗೆ ಭೂಮಿ ನೀಡುವಂತೆ ಅರ್ಜಿ ಸಲ್ಲಿಸಿದರೆ ಹಾಗೂ ಅದು ಇನ್ನು ಇತ್ಯಾರ್ಥವಾಗದಿದ್ದರೂ ಸಹ ಅದು ಒತ್ತುವರಿ ಜಾಗವೇ ಆಗಿರುತ್ತದೆ. ಇಂಥ ಜಾಗಗಳನ್ನು ಪತ್ತೆ ಹಚ್ಚಿ ಆ ಜಾಗದಲ್ಲಿ ಬೇಲಿ ಹಾಗೂ ಬೋರ್ಡ್ ಗಳನ್ನು ಹಾಕುವಂತೆ ನಗರಸಭೆಗೆ ಸೂಚಿಸಲಾಗುತ್ತದೆ. ಈಗಾಗಲೇ ನಗರಾಭಿವೃದ್ಧಿ ಪ್ರಾಧಿಕಾರಿದ ಜಾಗಕ್ಕೆ ರಕ್ಷಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.
ಹಲವು ಯೋಜನೆಗಳಿಗೆ ಭೂಮಿ: ಜಿಲ್ಲೆಯಲ್ಲಿ ಕೆಎಸ್ಆರ್ಪಿ ಬೆಟಾಲಿಯನ್ಗೆ ಶಾಂತಿಗ್ರಾಮದ ಸಮೀಪ 76 ಎಕರೆ ಪ್ರದೇಶವನ್ನು ನೀಡಲಾಗಿದ್ದು, ಈಗಾಗಲೇ ಆ ಜಾಗಕ್ಕೆ ಕಾಂಪೌಂಡ್ ಹಾಕಿ ಗಿಡಗಳನ್ನು ಹಾಕಿ ಕೆಲಸ ನಡೆಯುತ್ತಿದ್ದು, 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಸನ ಜೈಲಿಗೆ ಶಾಂತಿಗ್ರಾಮದ ಬಳಿ 40 ಎಕರೆ ಜಾಗವನ್ನು ನೀಡಲು ಸರ್ಕಾರಕ್ಕೆ ಕಳುಹಿಸಿದ್ದು, ಅದಕ್ಕೂ ಕೂಡ ಸರ್ಕಾರದಿಂದ ಕೂಡಲೇ ಅನುಮತಿ ದೊರೆಯಲಿದೆ. ಇನ್ನು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ 600 ಎಕರೆ ಪ್ರದೇಶದ ಅವಶ್ಯಕತೆ ಇದೆ. ಈಗ ಕೇವಲ ನಾವು 320 ಎಕರೆಯಷ್ಟು ಮಾತ್ರ ವಿಮಾನ ನಿಲ್ದಾಣಕ್ಕೆ ನೀಡಲಾಗಿದೆ. ಇನ್ನು ಅವಶ್ಯಕ ಇರುವಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ನೀಡಬೇಕಾಗಿದೆ ಎಂದು ಅವರು ವಿವರಿಸಿದರು.
ಆನೆಗಳ ಸೆರೆಗೆ ಆದೇಶ
ಕಾಡಾನೆಗಳ ಹಾವಳಿಗೆ ಸಂಬಂಧಿಸಿದಂತೆ ಈಗಾಗಲೇ 23 ಆನೆಗಳನ್ನು ಸೆರೆಯಲು ಸರ್ಕಾರದಿಂದ ಆದೇಶ ಬಂದಿದ್ದು, 10 ಆನೆಗಳ ತಂಡ ಜಿಲ್ಲಿಗೆ ಆಗಮಿಸಿ ಶೀಘ್ರವೇ ಕಾರ್ಯಾಚರಣೆ ಕೈಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

