ಭೂ ಒತ್ತುವರಿಗೆ ಕಾನೂನು ತಿರುಚಿದರೆ ಹೋರಾಟ
ಸಕಲೇಶಪುರ: ರಾಜ್ಯ ಸರ್ಕಾರ ಕಾನೂನನ್ನು ಕೃಷಿ ಭೂಮಿಯನ್ನು ಭೂ ಒತ್ತುವರಿ ಭೂಮಿಯೆಂದು ಪರಿಗಣಿಸಿ ತೆರವಿಗೆ ಮುಂದಾದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಕಸಬಾ ಹೋಬಳಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಕಾಫಿ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
ಸದನದಲ್ಲಿ ಹೋರಾಟ: 2007ರಲ್ಲಿ ನಗರ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಭೂಮಿ ತೆರವಿಗೆ ಮಾಡಲಾಗಿರುವ ಕಾನೂನನ್ನು ತಿರುಚಿ ಕೃಷಿ ಮಾಡಿರುವ ಜಮೀನು ಒತ್ತುವರಿಗೆ ಸರ್ಕಾರ ಮುಂದಾಗುತ್ತಿದೆ. ಹೀಗಾದರೆ ರಾಜ್ಯದ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವುದು ನಿಶ್ಚಿತ. ಈ ಬಗ್ಗೆ ಸದನದಲ್ಲಿ ಪ್ರಬಲ ಹೋರಾಟ ನಡೆಸಲಾಗುವುದು ಎಂದರು. ರೈತರ ಭೂಮಿ ತೆರವಿಗೆ ಮುಂದಾದರೆ ಕೈಕಟ್ಟಿ ಕೊರದೆ ಉಗ್ರ ಹೋರಾಟ ನಡೆಸಿ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಏಲಕ್ಕಿ ಬೆಳೆಗಾರರ ಸಾಲಮನ್ನಾ, ಸೇರಿದಂತೆ ಕಾಫಿ ಬೆಳೆಗಾರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸಲಾಗುವುದು. ಎತ್ತಿನಹೊಳೆ ಯೋಜನೆ ವಾಸ್ತವಿಕವಾಗಿ ರಾಜಕಾರಣಿಗಳಿಗೆ ಚುನಾವಣೆ ವೇಳೆ ಮತ ಸೇಳೆಯುವ ತಂತ್ರವಾಗಿ ಮಾರ್ಪಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯವಸ್ಥಿತಿವಾಗಿ ಮಟ್ಟ: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಯರಾಂ ಮಾತನಾಡಿ, ಪ್ರತಿವರ್ಷ 3.37 ಲಕ್ಷ ಟನ್ ಕಾಫಿ ಉತ್ಪಾದಿಸಲಾಗುತ್ತಿತ್ತು. ಆದರೆ, ಈ ಬಾರಿ ಅತಿವೃಷ್ಟಿಯ ಪರಿಣಾಮ 1300 ಟನ್ ಕಾಫಿ ಉತ್ಪಾದನೆ ಕಡಿಮೆಯಾಗಿದೆ. ಮುಂದಿನ ಒಂದು ವರ್ಷದವರೆಗೆ ಕಾಫಿ ತೋಟದ ನಿರ್ವಹಣೆಯೇ ಸಮಸ್ಯೆಯಾಗಿದ್ದು, ಈ ಮಧ್ಯೆ ಒತ್ತುವರಿ ತೆರವು ಕಾರ್ಯಾಚರಣೆ ಬೆಳೆಗಾರರನ್ನು ಕಾಡುತ್ತಿದೆ.
ಈ ಹಿಂದೆ ಸರ್ಕಾರಗಳು ನೀಡಿದ್ದ ಸಹಾಯಹಸ್ತದಿಂದ 2012ರವೇಳೆಗೆ 3,500 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡುವ ಮೂಲಕ ದೇಶಕ್ಕೆ 4500 ಕೋಟಿ ವಿದೇಶಿ ವಿನಿಮಯವನ್ನು ಕಾಫಿ ಉದ್ಯಮ ದೇಶಕ್ಕಾಗಿ ಗಳಿಸಿಕೊಟ್ಟಿದೆ ಎಂದರು.
ನಿಲುವು ಸ್ಪಷ್ಟಪಡಿಸಬೇಕು: ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಭೂ ಒತ್ತುವರಿ ತೆರವಿನ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸುವ ಕೆಲಸವನ್ನು ಕೇಂದ್ರಸರಕಾರ ಮಾಡಬೇಕಾಗಿದ್ದು,ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಬ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಸಂಘದ ಕಾರ್ಯದರ್ಶಿ ಸುಬ್ರಮಣ್ಯ, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹಿದ್ ಆಲಂ, ಕಾರ್ಯದರ್ಶಿ ಮಹೇಶ್, ಕೆಜಿಎಫ್ ಪ್ರಧಾನ ಕಾರ್ಯದರ್ಶಿ ತೀರ್ಥ ಮಲ್ಲೇಶ್, ಬಿ.ಎ. ಜಗನ್ನಾಥ್, ಸುಬ್ಬೇಗೌಡ, ಚನ್ನವೇಣಿ ಶೆಟ್ಟಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

