ಹಾಸನ

ಮನಸ್ವಿನಿ ಅಂಗವಿಕಲರಿಗೆ ಆದೇಶ ಪ್ರತಿ ವಿತರಣೆ

Published On :

ಚನ್ನರಾಯಪಟ್ಟಣ: ತಹಸೀಲ್ದಾರ್ ಎಚ್.ಎಸ್. ನಾಗರಾಜು ಅವರು ಮನಸ್ವಿನಿ ಹಾಗೂ ಅಂಗವಿಕಲರಿಗೆ ಸ್ಥಳದಲ್ಲಿಯೇ ದಾಖಲೆಗಳನ್ನು ಪರಿಶೀಲಿಸಿ ನೇರವಾಗಿ ಹಕ್ಕು ಪತ್ರಗಳನ್ನು ಇತ್ತೀಚೆಗೆ ವಿತರಿಸಿದರು.
ಇದೊಂದು ಹೊಸ ಯೋಜನೆಯಾಗಿದ್ದು, ಇದರಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅನರ್ಹರಿಗೆ ಕಡಿವಾಣ ಹಾಕುವ ಸಲುವಾಗಿ ವಾರಕ್ಕೊಮ್ಮೆ ಒಂದೊಂದು ಹೋಬಳಿ ಕೇಂದ್ರಕ್ಕೆ ಹೋಗಿ ನೇರವಾಗಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಆದೇಶ ಪತ್ರ ವಿತರಣೆ ಮಾಡಲಾಗುವುದು ಎಂದರು.
ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆ ಸಫಲವಾಗುವಂತೆ ಮಾಡುವುದೇ ಇದರ ಉದ್ದೇಶ ಎಂದರು.  ತಾಲೂಕಿನಲ್ಲಿ ಒಟ್ಟು 93 ಮನಸ್ವಿನಿಯರಿಗೆ ಇದುವಗೆ ಆದೇಶ ಪತ್ರ ವಿತರಿಸಲಾಗಿದೆ ಎಂದರು. ಉಪ ತಹಸೀಲ್ದಾರ್ ಮೋಹನ್, ರಾಜಸ್ವ ನಿರೀಕ್ಷಕ ಸುಕಂದರಾಜು, ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ಹಳ್ಳಿಗಳಲ್ಲೂ ತಂದೆ, ತಾಯಿಯರು ವೃದ್ಧಾಶ್ರಮಕ್ಕೆ: ವಿಷಾದ
ಹಾಸನ: ಇತ್ತೀಚಿಗೆ ನಗರ ಪ್ರದೇಶಗಳಲ್ಲದೇ, ಗ್ರಾಮೀಣ ಪ್ರದೇಶಗಳಲ್ಲೂ  ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಹೆಚ್ಚಾಗಿ ಕಂಡುಬರುತ್ತಿದೆ ಎಂದು  ವಕೀಲ ಎಂ.ಟಿ. ತಿಮ್ಮೇಗೌಡ ವಿಷಾದಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ತಾಲೂಕಿನ ಕಂಚಮಾರನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಜೀವನಾಂಶ ಮತ್ತು ಆಸ್ತಿಯ ಹಕ್ಕು ಎಂಬ ವಿಷಯ ಆದರಿಸಿ ವಿಶೇಷ ಉಪನ್ಯಾಸ ನೀಡಿದ ಅವರು, ತಂದೆ, ತಾಯಿಯನ್ನು ಪೋಷಿಸುವುದು ಮಕ್ಕಳ ಆದ್ಯ ಕರ್ತವ್ಯ ಎಂದು ಹೇಳಿದರು.
ಜೀವನಾಂಶ ಎಂದರೆ ಮನುಷ್ಯ ತನ್ನ ಜೀವನ ಮತ್ತು ಬದುಕಿನ ರಕ್ಷಣೆಯನ್ನು ಮಾಡಿಕೊಳ್ಳುವುದೇ ಜೀವನಾಂಶ ಎಂದ ಅವರು, ಜೀವನಾಂಶವನ್ನು ಒಬ್ಬ ವ್ಯಕ್ತಿ ತನ್ನ ತಂದೆ, ತಾಯಿಗೆ, ಹೆಂಡತಿಗೆ ಮತ್ತು ಮಕ್ಕಳಿಗೆ ಜೀವನ ಮತ್ತು ಬದುಕಿನ ರಕ್ಷಣೆಯನ್ನು ನೀಡದಿದ್ದಾಗ, ಅವರು ಜೀವನಾಂಶ ಪಡೆದುಕೊಳ್ಳಬಹುದು ಮತ್ತು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕಿರುತ್ತದೆಯೇ ಹೊರತು ಸ್ವಯಾರ್ಜಿತ ಆಸ್ತಿಯ ಮೇಲಲ್ಲ. ಎಂದು ತಿಳಿಸಿದರು.
 ಆನಂತರ, ಗ್ರಾಮಸ್ಥರು ಕೇಳಿದ ಸಮಸ್ಯೆಗಳನ್ನು ಪರಿಹರಿಸಿದರು.
ಕನ್ನಡ ಸಹ ಪ್ರಾಧ್ಯಾಪಕ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ತಿಗೋಸ್ಕರ ಸಂಘರ್ಷದ ಬದುಕನ್ನು ನಡೆಸದೇ, ವಿದ್ಯೆಯ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ವಿವೇಕಾನಂದರಿಂದ ಜೀವನದ ಪಥ
ಹಾಸನ: ಯುವಕರಿಗೆ ಜೀವನದ ಪರಮೋದ್ದೇಶವನ್ನೂ, ಬದುಕಿಗೊಂದು ಸನ್ಮಾರ್ಗವನ್ನೂ ತೋರಿಸಿಕೊಟ್ಟವರು ವಿವೇಕಾನಂದರು ಎಂದು ವಿಜಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮತ್ತು ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ. ಸಿ. ಗುರುಮೂರ್ತಿ ತಿಳಿಸಿದರು.
ನಗರದ ಸರ್ಕಾರಿ ಕಲಾ  ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು 19ನೇ ಶತಮಾನದ ಅದ್ವಿತೀಯ ಮೇರು ವ್ಯಕ್ತಿತ್ವದ ವ್ಯಕ್ತಿ. ಯುವಕರಿಗೆ ಮಾರ್ಗದರ್ಶಿ. ಯುವಕರು ವಿವೇಕಾನಂದರ ಕೆಲವು ಪುಸ್ತಕಗಳನ್ನಾದರೂ ಓದಿ ಪುನೀತರಾಗಬೇಕು. ಇವರು ಶ್ರೀ ರಾಮಕೃಷ್ಣರ ಶಿಷ್ಯರಾಗಿ ಸನ್ಯಾಸ ಸ್ವೀಕರಿಸಿ ಸಾಧಕರಾದವರು ಎಂದು ಹೇಳಿದರು.ಪದವಿಗಳು ಕೇವಲ ಕಾಗದವಲ್ಲ, ಯುವಕರು ತಮ್ಮ ಸಮಯವನ್ನು ಜ್ಞಾನಾರ್ಜನೆಗೆ ಮೀಸಲಿಡಬೇಕು. ಜ್ಞಾನ ಒಂದು ಅಂತರ್‌ಶಕ್ತಿ. ಸುಖ, ದುಃಖಗಳಿಗೆ ನಾವೇ ಕಾರಣ.  ಪ್ರಾಧ್ಯಾಪಕ ಪಿ. ಶಿವಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೆನ್ನಬಸಪ್ಪ ಬಹುಮಾನ ವಿತರಿಸಿದರು. ಚೈತ್ರ ಜಿ.ಎಸ್ ಮತ್ತು ತಂಡ ಪ್ರಾರ್ಥಿಸಿತು.
ವಿದ್ಯಾರ್ಥಿ ಮಹೇಶ ನಿರೂಪಿಸಿದರು. ಮುರಳೀಧರ ವಂದಿಸಿದರು.
ಶುದ್ಧ ನೀರಿನ ಚಿಂತನೆ ಅಗತ್ಯ
ಚನ್ನರಾಯಪಟ್ಟಣ: ನೀರು ಅತ್ಯಮೂಲ್ಯವಾಗಿದ್ದು, ಅದನ್ನು ಕಲುಷಿತಗೊಳಿಸದೆ ಮುಂದಿನ ಪೀಳಿಗೆಗೆ ಶುದ್ಧ ನೀರು ನೀಡುವ ನಿಟ್ಟಿನಲ್ಲಿ ನಾವಿಂದು ಚಿಂತನೆ ಮಾಡಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ ತಿಳಿಸಿದರು. ತಾಲೂಕಿನ ಕಲ್ಕೆರೆ ಪ್ರೌಢಶಾಲಾ ಆವರಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಏರ್ಪಡಿಸಿದ್ದ ಅಂತರ್ಜಲ ಸದ್ಬಳಕೆ ಜನಜಾಗೃತಿ ಶಿಬಿರ ಉಧ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಭೂಮಿಯಲ್ಲಿ ಅಂತರ್ಜಲ ಕುಸಿಯುತ್ತಿರುವ ಜತೆಗೆ ನದಿಗಳಲ್ಲಿನ ನೀರು ಕಲುಷಿತಗೊಳ್ಳುತ್ತಿದೆ. ಇದೇ ರೀತಿ ನೀರಿನ ಮಲಿನತೆ ಹಾಗೂ ಅಂತರ್ಜಲದ ಕುಸಿತ ಕಂಡರೆ ಮುಂದಿನ ಪೀಳಿಗೆಗೆ ಶುದ್ಧ ನೀರನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಈಗಾಗಲೇ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕಿತ್ತಾಟ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ದ ಹಾಗೂ ಪ್ರಳಯವೇ ನಡೆಯುವ ಸಂಭವ ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದು, ಈ ಬಗ್ಗೆ ಒಂದು ರೂಪುರೇಷೆಗಳನ್ನು ಜಾರಿಗೆ ತರಬೇಕು ಎಂದು ತಿಳಿಸಿದರು.
'ರಾಜಕಾರಣಿಗಳೂ ಪರಿವರ್ತನೆ ಆಗಬೇಕು'
ಹಾಸನ: ಹಿಂದೆ ರಾಮಾಯಣದಲ್ಲಿ ರಾವಣ ಪರಿವರ್ತನೆಯಾಗಿ ಸಮಾಜಮುಖಿಯಾದಂತೆ ಇಂದಿನ ರಾಜಕಾರಣಿಗಳೂ ಆಗಬೇಕೆಂದು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ಅಭಿಪ್ರಾಯಪಟ್ಟರು.
ನಗರದ ಕಲಾಭವನದಲ್ಲಿ ಶ್ರೀ ರಾಮೇಶ್ವರ ಕಲಾಸಂಘ ಮತ್ತು ಜೈ ಮಾರುತಿ ಕಲಾಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂಪೂರ್ಣ ರಾಮಾಯಣ ನಾಟಕವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜಕಾರಣಿಗಳು ಅವರು ಮಾಡಿದ್ದೇ ಸರಿ ಎಂದು ಸಮಾಜದಲ್ಲಿ ಕೆಟ್ಟ ವಾತವರಣ ಬೇರು ಬಿಟ್ಟಿದೆ. ಜನಪ್ರತಿನಿಧಿಗಳಾದವರು ಪುರಾತನ ಕಾಲದಲ್ಲಿ ರಾವಣ ಪರಿವರ್ತನೆಗೊಂಡಂತೆ ನಾವು  ಸಮಾಜಮುಖಿಯಾಗಿ ಸಮಾಜದ ಏಳಿಗೆಗೆ ಶ್ರಮಿಸಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಇಂದಿನ ಈ ಪರಿಸ್ಥಿತಿಯಲ್ಲೂ ಇಂತಹ ಪೌರಾಣಿಕ ನಾಟಕ ನೋಡಲು ಇಷ್ಟೊಂದು ಜನರು ಸೇರಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಡಾ. ರಂಗಪ್ಪದಾಸ್ ನಿರ್ದೇಶನದಲ್ಲಿ ಹಾಗೂ ಸಿ.ಎಂ. ಶ್ರೀಕಂಠಪ್ಪ ಮತ್ತು ಹೆಚ್.ಎನ್. ಶಶಿಕಾಂತ್, ವೆಂಕಟೇಗೌಡ ಅವರ ಸಾರಥ್ಯದಲ್ಲಿ ಹಾಚಗೋಡನಹಳ್ಳಿ ಹೆಚ್.ಎ. ಶಿವಣ್ಣ ಇವರ 100ನೇ ರಂಗ ಪ್ರಯೋಗದ ಅಂಗವಾಗಿ ರಜತ ಕಿರೀಟ ಧಾರಣೆ ಮಾಡಿ ಗೌರವಿಸಿದರು. ಹಿರಿಯ ಕಲಾವಿದ ಎಂ. ರಾಮಚಂದ್ರ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೆ ವೇಳೆ ಗಣೇಶ್ ಭಕ್ತಿರಂಜನಿ, ಆದಿಶಕ್ತಿ ಕಲಾಸಂಘದ ಸೋಮಣ್ಣ, ಚನ್ನಪಟ್ಟಣ ಗೃಹಮಂಡಳಿ ಅಧ್ಯಕ್ಷ ವಿಜಯಕುಮಾರ್, ವಿಷ್ಣು ಅಭಿಮಾನಿ ಸಂಘದ ಅಧ್ಯಕ್ಷ  ಬಿ.ಎನ್. ಮಹಂತೇಶ್, ಸಮಾಜ ಸೇವಕ ಅಂದಾನಿಗೌಡ, ತೇಜೂರು ಟಿ.ಟಿ. ಮೊಗಣ್ಣಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್ ಇತರರು ಇದ್ದರು.
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಆಲೂರು:ಐಸಿಡಿಎಸ್ ಯೋಜನೆಯ ಮಿಷನ್ ಮಾದರಿ (ಖಾಸಗೀಕರಣ) ಸೇರಿದಂತೆ ವೇತನದ ಹೆಚ್ಚಳ ಕೆಲಸದ ಖಾಯಂ ಸಾಮಾಜಿಕ ಭದ್ರತೆ ಹಾಗು ಎಸ್ಮಾ ಕಾಯಿದೆಯನ್ನು ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪ್ರತಿಭಟನಾಕಾರರು, ಕಳೆದ 38 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಸಾಮಾಜಿಕ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಸರ್ಕಾರ ಇವರ ಕೆಲಸದ ಅವಧಿಯನ್ನು ಹೆಚ್ಚಿಸಿ ಕನಿಷ್ಠ ಕೂಲಿ ಕೊಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದ್ದು ನಾಲ್ಕೈದು ತಿಂಗಳಿಗೊಮ್ಮೆ ಗೌರವ ಧನ ಪಡೆಯುವ ಪರಿಸ್ಥಿತಿಯಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ರಾಜ್ಯಾದ್ಯಂತ ಅನಿರ್ಧಿಷ್ಟ ಅಂಗನವಾಡಿ ಕೇದ್ರಗಳ ಬಂದ್ ಹಾಗೂ ಜಿಲ್ಲಾಧಿಕಾರಿಗಳ ಮುಂದೆ ಹಗಳು ರಾತ್ರಿಯೆನ್ನದೆ ಹೋರಾಟ ನಡೆಸುವುದಾಗಿ ತಿಳಿಸಿದರು.
ಹೊಳೆನರಸೀಪುರದಲ್ಲೂ: ಸರ್ಕಾರದ ಅಂಗನವಾಡಿ ಕೇಂದ್ರಗಳ ಖಾಸಗೀಕರಣವನ್ನು ವಿರೋಧಿಸಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ರು. 10 ಸಾವಿರ ಕನಿಷ್ಠ ಕೂಲಿ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
'ರೈತರ ಪರಿಸ್ಥಿತಿ ಶೋಚನೀಯ'
ಅರಸೀಕೆರೆ: ದೇಶದಲ್ಲಿ ಜಾಗತೀಕರಣ ನೀತಿ ಜಾರಿಗೆ ಬಂದು 23 ವರ್ಷಗಳಾದರೂ ದೇಶದ ಹಾಗೂ ರೈತರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು. ಇಲ್ಲಿಗೆ ಸಮೀಪದ ಬಿಳಿಕಲ್ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ದಾಳಿಂಬೆ ಬೆಳಗಾರರ ಸಂಘದವತಿಯಿಂದ ಸೋಮವಾರ ನಡೆದ ದಾಳಿಂಬೆ ಬೆಳೆಗಾರರ ಬೃಹತ್ ಸಮಾವೇಶ ಹಾಗೂ ವಿಚಾರ ಸಂಕೀರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಗಳು ಜಾರಿಗೆ ತಂದಿರುವ ಆನೇಕ ನೀತಿಗಳು ರೈತ ವಿರೋಧಿಯಾಗಿವೆ. ವಾರ್ಷಿಕ ಬಜೆಟ್ ತಯಾರಿಸುವಾಗ ಒಬ್ಬ ರೈತರ ಸಲಹೆಯನ್ನು ಕೇಳುವುದಿಲ ಎಂದು ಟೀಕಿಸಿದರು. ಮಾಡಾಳು ಶಿವಬಸವ ಕುಮಾರಾಶ್ರಮದ ತೋಂಟದಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಿ.ಎಂ. ಕುರ್ಕೆ ಬೂದಿಹಾಲ್ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಹೊನ್ನವಳ್ಳಿ ಕರಿಸದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು, ಜಿಪಂ ಸದಸ್ಯ ಕೃಷ್ಣಾನಾಯಕ್ ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಕಾಡಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.