ಹಾಸನ

ಎತ್ತಿನಹೊಳೆ ಜಾರಿಗೆ ಆತುರ ಬೇಡ: ಪೇಜಾವರ ಶ್ರೀ

Published On :

ಹಾಸನ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಆತುರದ ನಿರ್ಧಾರಕ್ಕೆ ಒಳಗಾಗದೆ ಕರಾವಳಿ ಮತ್ತು ಬಯಲು ಸೀಮೆ ಜಿಲ್ಲೆಗಳ ಹಿತ ಕಾಪಾಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಮತ್ತು ಬಯಲು ಸೀಮೆ ಜನರಿಗೆ ಈ ಯೋಜನೆಯ ಬಗ್ಗೆ ಸರ್ಕಾರ ಮನವರಿಕೆ ಮಾಡಿಕೊಡಬೇಕು ಹಾಗೂ ಸಮಾಲೋಚನೆ ನಡೆಸಿ ಯೋಜನೆಗೆ ಮುಂದಾಗಬೇಕೆ ವಿನಃ ಏಕಾಏಕಿ ಸರ್ಕಾರ ಶಂಕುಸ್ಥಾಪನೆ ಮುಂದಾಗುವುದು ಸರಿಯಲ್ಲ ಎಂದರು. ಯಾರಿಗೋಸ್ಕರವೊ ಈ ಯೋಜನೆಯಿಂದ ನೇತ್ರಾವತಿ ನದಿ ಮೂಲ ಹಾನಿಯಾಗಬಾರದು ಮತ್ತು ಪರಿಸರಕ್ಕೂ ತೊಡಕು ಉಂಟಾಗಬಾರದು. ಆದ್ದರಿಂದ ಸರ್ಕಾರ ಆತುರದಿಂದ ಯೋಜನೆಯನ್ನು ಜಾರಿಗೊಳಿಸಬಾರದು ಎಂಬ ಹೋರಾಟಕ್ಕೆ ಬೆಂಬಲವಿದೆ ಎಂದು ಹೇಳಿದರು.

ಬಿಜೆಪಿಯಿಂದ ಜನಜಾಗರಣ ಅಭಿಯಾನ
ಅರಸೀಕೆರೆ: ತಾಲೂಕು ಭಾರತೀಯ ಜನತಾ ಪಾರ್ಟಿ ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಇತ್ತೀಚೆಗೆ ಮನೆ ಮನೆಗೆ ಭೇಟಿ ನೀಡಿ ಜನಜಾಗರಣ ಅಭಿಯಾನ ನಡೆಸಿದರು. ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಅಭಿಯಾನ ನಡೆಸಿದ ತಂಡದಲ್ಲಿದ್ದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರವು  ದೇಶದಾದ್ಯಂತ ತಾಂಡವಾಡುತ್ತಿರುವ ಭ್ರಷ್ಟಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ವಿರುದ್ಧವಾಗಿ ಕಠಿಣ ಕ್ರಮದ ತೆಗೆದುಕೊಳ್ಳದೇ ನಿರ್ಲಕ್ಷ ಭಾವವನ್ನು ಹೊಂದಿದೆ ಎಂದರು. ಅಭಿಯಾನದಲ್ಲಿ  ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬೆಳಗುಂಬ ಲೋಕೇಶ್, ಮಹಿಳಾ ಮೋರ್ಚ ಜಯಲಕ್ಷೀ, ನಗರ ಕಾರ್ಯದರ್ಶಿ ಚೇತನ್ ಕುಮಾರ್,  ಮುಖಂಡರಾದ ಪ್ರಭಾಕರ ,ಈಶ್ವರ್ ಸಿಂಗ್ ಇದ್ದರು.

ಕುಡಿಯುವ ನೀರಿನ ಬಗ್ಗೆ ನಿಗಾ ವಹಿಸಲು ಸೂಚನೆ
ಹಾಸನ: ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಂದತೆ ನಿಗಾವಹಿಸಿ ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವಂತೆ ಲೋಕ ಸಭಾ ಸದಸ್ಯ ಎಚ್.ಡಿ. ದೇವೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. ಡಿಸಿ ಕಚೇರಿಯಲ್ಲಿ ಶನಿವಾರ ಬರ ನಿರ್ವಹಣೆ ಕುರಿತಂತೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಗೌಡರು ಮಾತನಾಡಿದರು. ಅನೇಕ ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿಲ್ಲ ಜನರು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನತೆಗೆ ಕುಡಿಯುವ ನೀರು ಒದಗಿಸಲು  ಅಧಿಕಾರಿಗಳು ತಂಡೋಪತಂಡವಾಗಿ ಕಾಯಂ ಪ್ರವೃತ್ತರಾಗಬೇಕು ಎಂದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಅಪರ ಜಿಲ್ಲಾಧಿಕಾರಿ ಡಾ.ಎದ್.ಎನ್. ಗೋಪಾಲಕೃಷ್ಣ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ ಉಪಸ್ಥಿತರಿದ್ದರು. ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ  ಭಾಗವಹಿಸಿದ್ದರು.

ಪುಷ್ಪಗಿರಿ ಮಠದ ಸ್ವಾಮೀಜಿ ವಿರುದ್ಧ ಭಕ್ತರ ಆರೋಪ
ಹಾಸನ: ಶ್ರೀಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಅವರು ಸಾರ್ವಜನಿಕರ ಹಣದಲ್ಲಿ ಐಷಾರಾಮಿ ಕಾರನ್ನು ತೆಗೆದುಕೊಂಡು ಆಡಂಬರದ ಜೀವನ ನಡೆಸುತ್ತಿದ್ದಾರೆ ಎಂದು ಶ್ರೀಪುಷ್ಪಗಿರಿ ಮಠದ ಭಕ್ತರು ಆರೋಪಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಠದ ಭಕ್ತರಾದ ವೀರಶೈವ ಮುಖಂಡ ಜಯದೇವ ಮಾತನಾಡಿ, ಮಠದ ಸ್ವಾಮೀಜಿಗಳು ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮಠ ನಷ್ಟದಲ್ಲಿ ಇದೆ ಎಂದು ಹೇಳುತ್ತಿರುವ ಸ್ವಾಮೀಜಿ, ಸದ್ಯದ ಸ್ಥಿತಿಯಲ್ಲಿ ಅವರಿಗೆ ಓಡಾಡಲು ಇನೋವ ಕಾರು ಇದ್ದರೂ ಸಹ ಮತ್ತೊಂದು 60 ಲಕ್ಷ ರು.ಗಳ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಸ್ವಾಮೀಜಿ ಅವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ಕೂಡಲೇ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಠದ ಭಕ್ತರಾದ ಎಂ.ಆರ್. ಪ್ರಸಾದ್, ಧರಣಿ, ದಿನೇಶ್, ಹರೀಶ್, ಕುಮಾರ್ ಇದ್ದರು.

'ದೈಹಿಕ ಶಿಕ್ಷಕರ ನೇಮಕ ಕಡ್ಡಾಯವಾಗಲಿ'
ಸಕಲೇಶಪುರ: ಎಲ್ಲಾ ಸರ್ಕಾರಿ ಶಾಲೆಗಳಿಗೂ ಕಡ್ಡಾಯವಾಗಿ ದೈಹಿಕ ಶಿಕ್ಷಕರನ್ನು ನೇಮಿಸಬೇಕು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು. ಶುಕ್ರವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 117 ನೇ ಜನ್ಮಾದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ಕೆ. ಕಿಶೋರ್ ಕುಮಾರ್, ದೈಹಿಕ ಶಿಕ್ಷಣ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ಎಸ್.ಎಸ್ ಹುಸೇನಿ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ಮಂಜುಳಾ,ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಜೈಮಾರುತಿ ದೇವರಾಜ್, ಕ್ಷೇತ್ರಶಿಕ್ಷಣಾಧಿಕಾರಿ ಪ್ರಕಾಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ, ಡಯಟ್ ಉಪನ್ಯಾಸಕ ವೆಂಕಟೇಶ್ ಮೂರ್ತಿ ಇತರರಿದ್ದರು.

ಮಕ್ಕಳ ರಕ್ಷಣಾ ಘಟಕ ವತಿಯಿಂದ ಮಮತೆಯ ಸಿಂಚನ
ಹಾಸನ: ಜಿಲ್ಲಾ ಸಮಗ್ರ ಮಕ್ಕಳಾ ರಕ್ಷಣಾ ಘಟಕದ ಆಶ್ರಯದಲ್ಲಿ ನಗರದ ಬೀರನಹಳ್ಳಿ ಕೆರೆ, ರಾಘವೇಂದ್ರ ಕಾಲೋನಿಯ ಗ್ರಾಮದ ಅಂಗನವಾಡಿಯಲ್ಲಿ ಇತ್ತೀಚೆಗೆ ಮಮತೆಯ ಸಿಂಚನ- ಜೌಟ್‌ರೀಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ತಂದೆ ತಾಯಿಯರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸದ ಕಾರಣ ಮನೋರಂಜನೆ ದೃಷ್ಟಿಯಿಂದ ಮಕ್ಕಳು ಟಿ.ವಿ ಮಾಧ್ಯಮದ ಮೊರಹೋಗುತ್ತಿತ್ತಾರೆ. ಆದ್ದರಿಂದ ಮಕ್ಕಳ ಸ್ಥಿತಿ ತುಂಬಾ ಶೋಚನೀಯವಾಗಿದೆ ಎಂದರು. ಅದೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಮುಖ್ಯಾಪಾಧ್ಯಾಯಿನಿ  ಶಾಂತಮ್ಮ, ಅಂಗನವಾಡಿ ಕಾರ್ಯಕರ್ತೆ ಕೋಮಲ, ಗ್ರಾಮಸ್ಥರು ಹಾಗೂ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.

ಏಡ್ಸ್ ಮುಕ್ತ ಸಮಾಜ ನಿರ್ಮಾಣ ಯುವಕರ ಕೈಯ್ಯಲ್ಲಿದೆ
ಹೊಳೆನರಸೀಪುರ: ಯುವ ಜನಾಂಗವನ್ನು ಅಪಾರವಾಗಿ ಕಾಡುತ್ತಿರುವ ಮಾರಕ ಏಡ್ಸ್ ಮಾರಕ ರೋಗದಿಂದ ಮುಕ್ತವಾದ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಇಂದಿನ ಯುವ ಜನರ ಕೈಯಲ್ಲೇ ಇದೆ ಎಂದು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರಕುಮಾರ್ ಹೇಳಿದ್ದಾರೆ. ಕಾಲೇಜಿನಿಂದ ಏಡ್ಸ್ ಕುರಿತಾದ ಎಚ್ಚರಿಕೆ ಹಾಗೂ ತಡೆಗಟ್ಟುವ ವಿಧಾನಗಳ ಕುರಿತಂತೆ ಭಿತ್ತಿಪತ್ರಗಳ್ನು ಹಿಡಿದು ಮೆರವಣಿಗೆಯಲ್ಲಿ ಹೊರಟ 1000ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರುಗಳು, ಪೇಟೆ ಬೀದಿಯ ಮೂಲಕ ಸುಭಾಷ್ ವೃತ್ತವನ್ನು ಹಾದು ಗಾಂಧೀ ವೃತ್ತದಲ್ಲಿ ಕೆಲ ಕಾಲ ಘೋಷಣೆ ಕೂಗುತ್ತಾ ಸಾಗಿದರು. ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕ ವರ್ಗದವರು ಇದ್ದರು.

ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು
ಜಾವಗಲ್: ಹಿಂದುಳಿದ ವರ್ಗದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರ ಪ್ರಗತಿಗೆ ಗಮನ ಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಕರೆ ನೀಡಿದ್ದಾರೆ. ಜಾವಗಲ್ ಹೋಬಳಿ ಅರಕೆರೆ ಗ್ರಾಮದಲ್ಲಿ ಇತ್ತೀಚೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಕಲಾ ಮತ್ತು ಸಾಂಸ್ಕೃತಿಕ ಯುವಕ ಸಂಘದ ಉದ್ಘಾಟನೆ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಬಲರಾಗಬೇಕು: ಬುದ್ಧ, ಬಸವಣ್ಣ, ಅಂಬೇಡ್ಕರ್ ಅಂತವರು ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಪುರುಷರಾಗಿದ್ದು ಕೇವಲ ಒಂದು ಜನಾಂಗಕ್ಕೆ ಸೀಮಿತರಾಗದೆ ಸಮಾಜದ ಆಸ್ತಿಯಾಗಿದ್ದರು ಎಂದು ಪೋಷಕರು ತಮ್ಮ ಕೆಲಸ ಕಾರ್ಯಗಳ ನಡುವೆ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಯುವಕರು ದುಷ್ಚಟಗಳನ್ನು ದೂರಮಾಡಬೇಕು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.

15ಕ್ಕೆ ರಾಜ್ಯಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಸಮ್ಮೇಳನ
ಹಾಸನ: ರಾಜ್ಯಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನವು ಫೆ. 15ರಂದು ಹುಬ್ಬಳಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವೇಗೌಡ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇತರೆ ಜನಪ್ರತಿನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬೇಡಿಕೆಗಳು: ಮೌಲ್ಯಮಾಪನದ ಸರಳೀಕರಣ, ಮೂರನೇ ವರ್ಗಕ್ಕೆ ನಲಿಕಲಿ ಹೊರತುಪಡಿಸುವುದು, ವರ್ಗಾವಣೆಯಲ್ಲಿ ಇರುವ ನ್ಯೂನತೆಯನ್ನು ಸರಿಪಡಿಸುವುದು, ಗ್ರಾಮೀಣ ಕೃಪಾಂಕದ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಬೇಕು ಮುಂತಾದ ಬೇಡಿಕೆ ಇವೆ.

ಬಸ್ ಅಪಘಾತ: 10 ಮಂದಿಗೆ ಗಾಯ
ಆಲೂರು: ತಾಲೂಕಿನ ನಲ್ಲೂರು- ಮಗ್ಗೆ ರಸ್ತೆಯ ಬೆಟ್ಟದಹಳ್ಳಿ ಇಳಿಜಾರು ಪ್ರದೇಶದಲ್ಲಿ ಬಸ್‌ನ ಬಲಭಾಗದ ಆ್ಯಕ್ಸೆಲ್ ಬ್ಲೇಡ್‌ಗಳು ತುಂಡಾಗಿ ಸಾರಿಗೆ ಸಂಸ್ಥೆ ಬಸ್ ಅಪಘಾತಕ್ಕೀಡಾಗಿ ರಸ್ತೆಯಿಂದ ಪಕ್ಕದ ಗುಂಡಿಯಲ್ಲಿ ಬಿದ್ದ ಪರಿಣಾಮ10ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ಶುಕ್ರವಾರ ನಡೆದಿದೆ. ಬೆಳಗ್ಗೆ ಮಗ್ಗೆಯಿಂದ ನಲ್ಲೂರು ಮಾರ್ಗವಾಗಿ ಆಲೂರಿಗೆ ಬರುವಾಗ ಮಾರ್ಗ ಮಧ್ಯೆ ಇರುವ ಬೆಟ್ಟದ ಹಳ್ಳಿಯ ಇಳಿಜಾರಿನಲ್ಲಿ ಆ್ಯಕ್ಸೆಲ್ ಬ್ಲೇಡ್ ತುಂಡಾಗಿ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿ ಇದ್ದ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಹಳ್ಳಕ್ಕೆ ವಾಲಿ ಬಿದ್ದಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ 10ರಿಂದ 15 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಲೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಕಳಪೆ ದರ್ಜೆಯ ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮರೆಯಾಗುತ್ತಿರುವ ಜನಪದ ಸಂಸ್ಕೃತಿ: ಆತಂಕ
ಅರಕಲಗೂಡು: ಭಾರತೀಯ ನಿವಾಸಿಗಳಗಿಂತ ಅನಿವಾಸಿ ಭಾರತೀಯರು ನಿಜವಾದ ದೇಶಿಯ ಸಂಸ್ಕೃತಿಯನ್ನು ಅನುಷ್ಠಾನಗೊಳಿಸುತ್ತಿದ್ದು ಅವರು ನಿಜವಾದ ಆರಾಧಕರಾಗಿದ್ದಾರೆ ಎಂದು  ಗೊರೂರು ಎ.ಎನ್.ವಿ ಕಾಲೇಜಿನ  ಕನ್ನಡ ವಿಭಾಗದ ಮುಖ್ಯಸ್ಥೆ ಅನುಸೂಯ ತಿಳಿಸಿದರು.
ಸಿದ್ಧಾಂತ ರೂಢಿಸಿಕೊಂಡಿದ್ದರು: ಪಟ್ಟಣದ ಹಾಸನ ಪಿಯು ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಸಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯರು ಇಂದು ಪಾಶ್ಚಮಾತ್ಯೀಕರಣವನ್ನು ಮೈಗೂಡಿಸಿಕೊಂಡಿರುವುದರಿಂದ ನಮ್ಮ, ಜಾನಪದ ಮತ್ತು ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಜನ ಸಮುದಾಯಕ್ಕೆ  ಜೀವನದ ಅರಿವನ್ನು ಉಂಟುಮಾಡುಲು ಜನಪದ ಸಾಹಿತ್ಯ ಅತ್ಯಂತ ಹತ್ತಿರವಾಗಿದೆ ಎಂದರು.

ರಾಮೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ
ಬೇಲೂರು: ಹೊಯ್ಸಳ ಕಾಲದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಹೆಬ್ಬಾಳು ಬಳಿಯ ಸುಕ್ಷೇತ್ರ ಶ್ರೀರಾಮೇಶ್ವರಸ್ವಾಮಿ ನೂತನ ದೇವಾಲಯವನ್ನು ಫೆ. 9ರಂದು ಪುಷ್ಪಗಿರಿ ಮಠದ ಶ್ರೀಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿಘ್ನೇಶಯ್ಯ ತಿಳಿಸಿದರು. ದೇವಾಲಯ ಸುತ್ತಲು ಸುಮಾರು 20 ಬನ್ನಿಮರಗಳು ಇವೆ. ಲ್ಲಿನ ಬನ್ನಿ ಕಪ್ಪುಮಿಶ್ರಿತ ಬಣ್ಣದಿಂದ ಕೂಡಿದ್ದು, ಮೈಸೂರು ಭಾಗದಲ್ಲಿ ಬಿಟ್ಟರೆ ತಾಲ್ಲೂಕಿನಲ್ಲಿ ಈ ಕ್ಷೇತ್ರದಲ್ಲಿ ಲಭ್ಯವಿದೆ, ಅಂತಯೇ ಭಕ್ತ ತಮ್ಮ ಮನೆಯ ಶುಭ ದಾರ್ಮಿಕ ಕಾರ್ಯಕ್ರಮಗಳಿಗೆ ಇಲ್ಲಿನ ಬನ್ನಿ ತೆಗೆದುಕೊಂಡು ಹೊಗುವ ವಾಡಿಕೆ ನಡೆದು ಬಂದಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ವೈ.ಎನ್. ರುದ್ರೇಶಗೌಡ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ. ಪಂ. ಸದಸ್ಯೆ ಜಯಶೀಲಾ ಜಯಶಂಕರ್, ತಾಲೂಕು ಪಂಚಾಯ್ತಿ ಸದಸ್ಯ ಪವರ್ತಯ್ಯ, ಉಪನ್ಯಾಸವನ್ನು ಸಾಹಿತಿ ಸುಶೀಲಾ ಸೋಮಶೇಖರ್ ಹಾಗೂ ಶಿಕ್ಷಕ ಧನಂಜಯ್ ನಡೆಸಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಬೇಕು ಎಂದು ಗ್ರಾಮಸ್ಥರಾದ  ಚಂದ್ರಯ್ಯ, ರಾಮೇಗೌಡ, ಚಂದ್ರಣ್ಣ, ಎಚ್.ಬಿ.ಶಿವಕುಮಾರ್, ಕ. ಬಸವೇಶಗೌಡ ಮನವಿ ಮಾಡಿದ್ದಾರೆ.

'ಕನ್ನಡ ಆಡಳಿತ ಭಾಷೆ ಆಗದಿರುವುದು ವಿಷಾದನೀಯ'
ಅರಸೀಕೆರೆ: ಸರ್ಕಾರ ಎಲ್ಲಾ ಕಚೇರಿಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರಬೇಕೆಂಬ ಕಾನೂನು ಇಂದಿಗೂ ಜಾರಿಯಾಗದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಹೊಯ್ಸಳೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಟಿ. ಸರೋಜಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಹೊಯ್ಸಳೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ. ವೀರಣ್ಣ ಮತ್ತು ಶಾರದಮ್ಮ ಅವರ ಹೆಸರಿನಲ್ಲಿ ಆಯೋಜಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.
ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ, ಮೂಡನಂಬಿಕೆ, ಅಂಧಶ್ರದ್ಧೆ, ಕಂದಾಚಾರಗಳನ್ನು ವಿರೋಧಿಸಿ ಬೆಳೆದುಬಂದ ಪ್ರಮುಖ ಸಾಹಿತ್ಯಿಕ ಘಟ್ಟಗಳಲ್ಲಿ ವಚನಗಳಿಗೆ ಮಹತ್ವದ ಸ್ಥಾನವಿದೆ  ಎಂದು ಹೇಳಿದರು. ಶಿಕ್ಷಕಿ ಕಾಮೇಶ್ವರಿ ಭಟ್ ಸ್ವಾಗತಿಸಿದರೆ, ಜಿ.ಟಿ. ಗಣೇಶಮೂರ್ತಿ ನಿರೂಪಿಸಿ, ವಂದಿಸಿದರು.

ಇಂದು ಆಂಜನೇಯ ಸ್ವಾಮಿ ದೇಗುಲ ಉದ್ಘಾಟನೆ
ಅರಸೀಕೆರೆ: ತಾಲ್ಲೂಕಿನ ಭೈರಗೊಂಡನಹಳ್ಳಿ ಆಂಜನೇಯ ಸ್ವಾಮಿ ನೂತನ ದೇವಾಲಯ ಪ್ರವೇಶ ಹಾಗೂ ಕುಂಭಾಭಿಷೇಕ ಮಹೋತ್ಸವ ಹಾಗೂ ಬೋರನಕೊಪ್ಪಲು ಗ್ರಾಮಗಳಲ್ಲಿ ನೂತನ ಶ್ರೀ ರಾಮ ಮಂದಿರ ಪ್ರವೇಶ ಹಾಗೂ ಸಮುದಾಯ ಭವನಗಳ ಉದ್ಘಾಟನಾ ಸಮಾರಂಭ ಫೆ.9 ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ .ಸೋಮಣ್ಣ, ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗವಹಿಸುವರು. ಬೋರನಕೊಪ್ಪಲು ಗ್ರಾಮದ ರಾಮಮಂದಿರ, ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ, ಅಶೋಕ್ ಹಾರ್ನಳ್ಳಿ, ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ, ಶಾಸಕ ಕೆ.ಎಂ. ಶಿವಲಿಂಗೇಗೌಡ, ಹರಗುರು ಚರಮೂರ್ತಿ ಸಾನಿಧ್ಯ ವಹಿಸಲಿದ್ದಾರೆ.

ಶಿಕ್ಷಕರಿಗೆ ಹೆಚ್ಚೆಚ್ಚು ತರಬೇತಿ ನೀಡಬೇಕು: ಪ್ರಭಾರ ಡಿಡಿಪಿಐ
ಚನ್ನರಾಯಪಟ್ಟಣ: ಚರ್ಚೆಯ ಮೂಲಕವೇ ಇಂತಹ ತರಬೇತಿಯನ್ನು ಪಡೆಯಬೇಕು ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ಸರ್ಕಾರ ಹೆಚ್ಚು ಹೆಚ್ಚು ತರಬೇತಿ ಶಿಕ್ಷಣ ನೀಡಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಪಿ. ಪದ್ಮಮ್ಮ ಮಾತನಾಡಿದರು. ಅವರು ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಇತ್ತೀಚೆಗೆ ನಡೆದ ಶಾಲಾ ಎಲ್ಲಾ ಹಂತದ ಅನುಷ್ಠಾನಾಧಿಕಾರಿಗಳ ಜಿಲ್ಲಾ ಮಟ್ಟದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪಠ್ಯ ಪುಸ್ತಕಗಳು ದಿನೇ ದಿನಕ್ಕೆ ಬೇರೆ ಬೇರೆ ರೀತಿಯಲ್ಲಿ ಮುದ್ರಣವಾಗುತ್ತಿವೆ ಅದರೇ ರೀತಿ ಶಿಕ್ಷಕರಿಗೆ ಈ ಪಠ್ಯ ಪುಸ್ತಕಗಳ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ತರಭೇತಿ ನೀಡಬೇಕು. ಕಲಿಕೆಯಲ್ಲಿ ಮಕ್ಕಳಿಗೆ ಎಷ್ಟು ಪ್ರೋತ್ಸಾಹ ನೀಡುತ್ತಾರೋ ಅಷ್ಟೇ ಪ್ರೋತ್ಸಾಹವನ್ನು ಶಿಕ್ಷಕರಿಗೆ ಸರ್ಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಷಯ ಪರಿವೀಕ್ಷಕಿ ಭಾನುಮತಿ, ಕ್ಷೇತ್ರ ಶಿಕ್ಷಣಾಧಿಕಾರಿ  ನಟರಾಜ್, ಪುಟ್ಟರಾಜ್, ರವಿ, ರೇವಣ್ಣ, ಸುಂದರೇಶ್, ವೇದಾವತಿ, ಶಿವರಾಜ್, ಬಿಆರ್‌ಸಿಗಳಾದ ಕುಮಾರ್, ರಮೇಶ್, ನಾರಾಯಣ್, ಕೃಷ್ಣೇಗೌಡ, ರವೀಂದ್ರ, ಬಿಆರ್‌ಪಿ ನಾಗರಾಜ್ ಇದ್ದರು.

ದುರ್ಬಲರಿಗೆ ಉತ್ತಮ ಶಿಕ್ಷಣ ಸಿಗಬೇಕು: ಶಾಸಕ ರುದ್ರೇಶ್ ಗೌಡ
ಬೇಲೂರು: ಆರ್ಥಿಕವಾಗಿ ದುರ್ಬಲರಾಗಿರುವ ವರ್ಗಕ್ಕೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ವೈ.ಎನ್. ರುದ್ರೇಶಗೌಡ ಕರೆ ನೀಡಿದರು. ತಾಲೂಕು ಯವ ಕಾಂಗ್ರೆಸ್ ಸಮಿತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಮತ್ತು ಕಡ್‌ಡಾಯ ಶಿಕ್ಷಣದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಹಾಯಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಕೋಟ್ಯಂತರ ರು. ಖರ್ಚು  ಮಾಡುತ್ತಿದ್ದು, ಆರ್‌ಟಿಇ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಿದೆ ಎಂದರು. ಶಿಕ್ಷಣ ಸಂಯೋಜಕ ಬಾಲಲೋಚನ್, ಪುರಸಭೆ ಸದಸ್ಯರಾದ ಶಿವಣ್ಣ, ಸತೀಶ್, ಜುಬೇರ್, ಫಾಜಿಲ್, ಪ್ರಸನ್ನ, ಗೋಪಿ, ರಾಕೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.