ಹಾಸನ

ಕಾಂಗ್ರೆಸ್ ಮುಕ್ತ ರಾಷ್ಟ್ರಕ್ಕಾಗಿ ಯುವಕರು ಪಣತೊಡಬೇಕು

Published On :

ಅರಸೀಕೆರೆ: ಸ್ವಾತಂತ್ರ್ಯ ಬಂದ 50 ವರ್ಷಗಳಿಗೂ ಹೆಚ್ಚು ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾ ರ ಕೊಟ್ಟ ಕೊಡುಗೆ ಲಕ್ಷಾಂತರ ಕೋಟಿ ರು. ಹಗರಣಗಳು ಬ್ರಹ್ಮಾಂಡ ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು ಇಂತಹ ಕೆಟ್ಟ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಮುಕ್ತ ರಾಷ್ಟ್ರಕ್ಕಾಗಿ ಭಾರತೀಯರು ಪಣ ತೊಡಬೇಕೆಂದು ಯುವ ಭಾರತ್ ರಾಜ್ಯಾಧ್ಯಕ್ಷ ನಿಕೇತ್ ರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಗ್ರಾಮ ದೇವತೆ ಕರಿಯಮ್ಮ ದೇವಸ್ಥಾನ ಆವರಣದಲ್ಲಿ  ಭಾನುವಾರ ನಡೆದ ನರೇಂದ್ರ ಮೋದಿ ಬೆಂಬಲಿತ ನಮೋ ಬ್ರಿಗೇಡ್‌ನ ತಾಲೂಕು ಘಟಕ ಉದ್ಘಾಟನಾ ಮತ್ತು ತರುಣ ಸಮಾವೇಶದಲ್ಲಿ ಪ್ರಮುಖ ಭಾಷಣ ಮಾಡಿದ ಅವರು ಸ್ವಾಭಿಮಾನ ಭಾರತ ಮತ್ತು ಇಲ್ಲಿಯ ನಾಗರಿಕರ ಉಜ್ವಲ ಭವಿಷ್ಯಕ್ಕಾಗಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ ಎಂದರು.
ಅಸೂಯೆಗೆ ಉದಾಹರಣೆ: ಇಷ್ಟು ವರ್ಷಗಳ ಕಾಲ ಬೆಂಬಲಿಸಿಕೊಂಡು ಬಂದ ದೇಶದ ಜನತೆಗೆ ಕಾಂಗ್ರೆಸ್ ಕೊಟ್ಟ ಉಡುಗೊರೆಯನ್ನು ಅವಲೋಕಿಸಿದಾಗ ಕಾಣುವ ಪಲಿತಾಂಶ ಮಾತ್ರ ಶೂನ್ಯವಾಗಿದೆ.ದೇಶವನ್ನು ಮಾರಲು ಹೊರಟಿರುವ ಕಾಂಗ್ರೆಸ್ಸಿಗರು, ಮೋದಿ ಚಹಾ ಮಾರುತ್ತಿದ್ದ ವ್ಯಕ್ತಿ ಎಂದು ವ್ಯಂಗ್ಯವಾಡುತ್ತಿರುವುದು ಅವರ ಅಸೂಯೆಗೆ ಮತ್ತೊಂದು ಉದಾಹರಣೆ ಎಂದು ಹೇಳಿದರು.
ಇತಿಹಾಸ: ದೇಶ ಮಾರುವವರಿಗಿಂತ ಚಹಾ ಮಾರುತ್ತಿದ್ದ ಮೋದಿಗೆ ಅಧಿಕಾರ ಕೊಟ್ಟ ಪರಿಣಾಮ ಭೂಕಂಪ, ನೆರೆ ಹಾವಳಿಯಿಂದ ತತ್ತರಿಸಿದ್ದ ಗುಜರಾತ್ ಇಂದು ದೇಶದಲ್ಲೇ ಅಭಿವೃದ್ಧಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು ವಿಶ್ವದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿದೆ. ದೆಹಲಿಯಲ್ಲಿ ಎರಡು ದಿನಗಳ ಕಾಲ ವಿದ್ಯತ್ ಇಲ್ಲದಿದ್ದಾಗ ಭಾರತದ ರಾಜಧಾನಿಗೆ ಮೋದಿ ಸರ್ಕಾರ ಕರೆಂಟ್ ಕೊಡಬೇಕಾಯಿತು ಮತ್ತು ಈ ಕರೆಂಟಿನಿಂದಲೇ ಕಾಂಗ್ರೆಸ್‌ನ  ಸೋನಿಯಾ ಗಾಂಧಿ ಮನೆಯೂ ಬೆಳಕು ಪಡೆದಿದ್ದು ಈಗ ಇತಿಹಾಸವಾಗಿದೆ.
ನೆಮ್ಮದಿ ಕಂಡುಕೊಂಡಿದ್ದಾರೆ: ಇಂದು ದೇಶದ ಬಗ್ಗೆ ಕಾಳಜಿ ಇರುವವರಿಗೆ ಅಧಿಕಾರ ನೀಡಬೇಕು ಮತ್ತು ಅಂಥಹ ವ್ಯಕ್ತಿಗಳಿಗೆ ಚುನಾಯಿಸಿ ಕಳುಹಿಸಬೇಕಾಗಿದೆ.ಇಂತಹ ಕಾಳಜಿ ಇರುವ ರಾಜಕಾರಣಿಗಳನ್ನು ನಾವು ಗೆಲ್ಲಿಸಿ ಕಳುಹಿಸಿದಾಗ ಮಾತ್ರ ದೇಶ ರಕ್ಷಣೆ ಮಾಡಲು ಸಾಧ್ಯ. ಪೊಲೀಸರಿಗೆಂದೇ ಪ್ರಪ್ರಥಮ ಯುನಿವರ್ಸಿಟಿ ಸ್ಥಾಪಿಸಿದ ಹೆಗ್ಗಳಿಕೆ ಮೋದಿ ನೇತೃತ್ವದ ಗುಜರಾತ್ ಸರ್ಕಾರಕ್ಕೆ ಸಲ್ಲುತ್ತದೆ. ಇಂದಿನ ಗುಜರಾತ್‌ನಲ್ಲಿ ಮುಸ್ಲಿಂ ಬಾಂಧವರೂ ಇತರೆ ಧರ್ಮೀಯರೊಂದಿಗೆ ಸಹೋದರತ್ವ ಭಾವನೆಯಿಂದ ಬದುಕುವ ಜೊತೆಯಲ್ಲಿ ಈ ರಾಜ್ಯದಲ್ಲಿ ಇದುವರೆಗೂ ಯಾವುದೇ ಕೋಮು ಗಲಭೆ ಇಲ್ಲದಂತೆ ಪರಿಸ್ಥಿತಿಯಿಂದ ನೆಮ್ಮದಿ ಕಂಡಿದ್ದಾರೆ ಎಂದು ತಿಳಿಸಿದರು.
ಕರೆ: ಇಂತಹ ಪರಿಸ್ಥಿತಿ ಇಡೀ ಭಾರತದಲ್ಲಿ ಮುಂದಿನ ದಿನಗಳಲ್ಲಿ ಕಾಣಬೇಕಾಗಿದೆ. ದೇಶದ ಗಡಿ ಕಾಯುವ ಯೋಧರನ್ನು ರಕ್ಷಣೆ ಮಾಡಲು ಮತ್ತು ಜನಸಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿರುವ ಕೇಂದ್ರ ಯುಪಿಎ ಸರ್ಕಾರವನ್ನು ಕೊತ್ತೊಗೆಯಬೇಕಾದ ಕಾಲ ಸನ್ನಿಹಿತವಾಗಿದೆ.ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ಮೋದಿ ಬೆಂಬಲಿತ ಅಭ್ಯರ್ಥಿಯನ್ನು ಆರಿಸಿ ಕಳುಹಿಸಿಕೊಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಎನ್.ವಿ. ಹರ್ಷಿತ್, ತಾಲ್ಲೂಕು ಸಂಚಾಲಕ ಕೆಂಪುಸಾಗರ ಶಿವರಾಜ್ ಕುಮಾರ್ ಮತ್ತು ಜೆ.ಜೆ. ಟ್ಯುಟೋರಿಯಲ್ ಪ್ರಾಧ್ಯಾಪಕ ನಾರಾಯಣ್ ರಾವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಜ್ವಲ್ ಕಶ್ಯಪ್, ಧನಂಜಯ್ ಸೇರಿದಂತೆ ನಾನಾ ಸಂಘ ಸಂಸ್ಥೆಗಳ ಮುಖಂಡರು ಮತ್ತು ಜನಪ್ರತಿನಿಧಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.