ಹಾಸನ

ಮಕ್ಕಳಿಗೆ ಕ್ಷೌರ ತಂದಿತು ಇಕ್ಕಟ್ಟು ಸವರ್ಣೀಯರು, ದಲಿತರ ಬಿಕ್ಕಟ್ಟು

Published On :

ಕ.ಪ್ರ.ವಾರ್ತೆ ಹಾಸನ ಫೆ. 11
ಅಸ್ಪೃಶ್ಯತೆ ವಿರುದ್ಧ ಬಂಡೆದ್ದಿರುವ ಬೇಲೂರು ತಾಲೂಕಿನ ಗಂಗೂರಿನ ದಲಿತರು ಮತ್ತು ಸವರ್ಣೀಯರ ಮಧ್ಯೆ ಭಿನ್ನಮತ ಭುಗಿಲೆದ್ದಿದ್ದು, ಶಾಲಾ ಮಕ್ಕಳಿಗೆ ಸಾಮೂಹಿಕ ಕ್ಷೌರ ಮಾಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ತಮ್ಮ ಮೇಲೆ ದೇವಸ್ಥಾನ, ಹೋಟೆಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರಿದ್ದರ ವಿರುದ್ಧ ಅಸಮಾಧಾನಗೊಂಡಿದ್ದ ದಲಿತರು ಸೋಮವಾರ ಸಾಮೂಹಿಕವಾಗಿ ದೇವಾಲಯ ಪ್ರವೇಶ ಮಾಡಿದ್ದರು. ಇದು ಸವರ್ಣೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.
ಮಂಗಳವಾರ ಬೆಂಗಳೂರಿನ ಅಭಿಮಾನಿ ಕ್ಷೌರಿಕ ಮುತ್ತುರಾಜ್ ಮತ್ತವರ ಸ್ನೇಹಿತರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಸ್ಪೃಶ್ಯತೆ ನಿವಾರಣೆ ಬಗ್ಗೆ ಜಾಗೃತಿ ಮೂಡಿಸುವುದಾಗಿ ಹೇಳಿ ಶಾಲಾ ಮಕ್ಕಳಿಗೆ ಸಾಮೂಹಿಕ ಕ್ಷೌರ ಮಾಡಿದ್ದಾರೆ. ಇದರಲ್ಲಿ ಸವರ್ಣೀಯರ ಮಕ್ಕಳೂ ಇದ್ದುದರಿಂದ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ವಣೀಯರ ವಾದವೇನು?: ದಲಿತರಿಗೆ ಕ್ಷೌರ ಮಾಡುವುದಿಲ್ಲ ಅನ್ನುವುದರ ವಿರುದ್ಧ ಜನಜಾಗೃತಿ ಮೂಡಿಸಲು ಮುತ್ತುರಾಜ್ ಅವರ ತಂಡ ಸಾಮೂಹಿಕವಾಗಿ ಕ್ಷೌರ ಮಾಡಿದ್ದೇನೋ ಸರಿ. ಆದರೆ ದಲಿತರಿಗೆ ಕ್ಷೌರ ಮಾಡುವ ಬದಲು ಸ್ಥಳೀಯ ಶಾಲಾ ಮಕ್ಕಳನ್ನು ಕರೆತಂದು ಸಾಮೂಹಿಕ ಕ್ಷೌರ ಮಾಡಿದ್ದು ಏಕೆ ಎಂದು ಪ್ರಶ್ನಿಸಿ, ನಮ್ಮ ಮಕ್ಕಳಿಗೆ ಬಲವಂತವಾಗಿ ಕ್ಷೌರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.
ಮಕ್ಕಳಲ್ಲಿ ಏಕೆ?: ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಜಾತಿ-ಪಂಥದ ಬಗ್ಗೆ ಅಷ್ಟು ಅರಿವು ಇರುವುದಿಲ್ಲ. ಎಲ್ಲ ವರ್ಗದ ಮಕ್ಕಳು ಒಂದೇ ಶಾಲೆಯಲ್ಲಿ ಕಲಿಯುತ್ತಿರುತ್ತಾರೆ. ವಾಸ್ತವ ಹೀಗಿರುವಾಗ ಜಾಗೃತಿ ಮೂಡಿಸುವ ಭರದಲ್ಲಿ ಶಾಲಾ ಮಕ್ಕಳಲ್ಲಿ, ಅಸ್ಪೃಶ್ಯತೆಯ ಪರಿಚಯ ಮಾಡಿಕೊಟ್ಟಂತಾಗಿದೆ ಎಂಬುದು ಸವರ್ಣೀಯರ ವಾದ. ಈ ಬಗ್ಗೆ ಶಿಕ್ಷಕರ ಜತೆಯೂ ತೀವ್ರ ವಾಗ್ವಾದ ನಡೆದಿದ್ದು, ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದೆ.
ಕಲಾವಿದರು ಕರೆದರು, ಕಳಿಸಿದೆವು: ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಯಶೋಧರ ನಾಯಕ್ ಅವರನ್ನು ಪ್ರಶ್ನಿಸಿದಾಗ, ಮಂಗಳವಾರ ಶಾಲೆಯಲ್ಲಿ ಮಧ್ಯಾಹ್ನ ಊಟದ ವೇಳೆ ಆಗಮಿಸಿದ ಮುತ್ತುರಾಜ್ ಸಂಗಡಿಗರು, ಮನೋರಂಜನೆಗಾಗಿ ಶಾಲಾ ಮಕ್ಕಳಿಗೆ ಸಾಮೂಹಿಕ ಕ್ಷೌರ ಮಾಡುತ್ತೇವೆ ಕಳುಹಿಸಿ ಕೊಡಿ ಎಂದು ಮನವಿ ಮಾಡಿದರು. ಹಾಗಾಗಿ ಕಳುಹಿಸಿದ್ದೇನೆ ಎಂದರು. ಈ ಅಭಿಯಾನ ವಿವಾದಕ್ಕೆ ಗುರಿಯಾಗಿದ್ದು, ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.

ಪೊಲೀಸರೊಂದಿಗೆ ವಾಗ್ವಾದ
ಸಾಮೂಹಿಕ ಕ್ಷೌರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದ ಪೊಲೀಸರ ಮೇಲೆ ಸವರ್ಣೀಯರು ಹರಿಹಾಯ್ದಿದ್ದಾರೆ. ಶಾಲೆಯ ವಿದ್ಯಾರ್ಥಿಗಳನ್ನು ಸಾಮೂಹಿಕ ಕ್ಷೌರಕ್ಕೆ ಕಳುಹಿಸಿದ್ದು ತಪ್ಪು. ಸವರ್ಣೀಯ ಮಕ್ಕಳಿಗೂ ಸಹ ಕ್ಷೌರ ಮಾಡಲಾಗಿದೆ ಎಂದು ಪೊಲೀಸರ ಜತೆ ಕೆಲವುಕಾಲ ವಾಗ್ವಾದ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣಗಳು ಕಾಣಿಸಿದ್ದರಿಂದ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.