ಬಜೆಟ್ ಪೂರ್ವಭಾವಿ ಸಭೆಗೆ ಕಾಂಗ್ರೆಸ್ ಬಹಿಷ್ಕಾರ
ಹೊಳೆನರಸೀಪುರ: ಇಲ್ಲಿನ ಪುರಸಭೆಯಲ್ಲಿ ಪುರಸಭಾಧ್ಯಕ್ಷೆ ಎಚ್.ಆರ್. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಬಜೆಟ್ ಮೇಲಿನ ಪೂರ್ವಭಾವಿ ಸಭೆಯನ್ನು ನಿಯಮಾವಳಿಗಳ ಪ್ರಕಾರವಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ಹಾಗೂ ಪಕ್ಷೇತರ ಸದಸ್ಯರುಗಳು ಪೂರ್ವಭಾವಿ ಸಭೆ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.
ಬಜೆಟ್ ಮಂಡನೆಯ ಕುರಿತಂತೆ ಪೂರ್ವಭಾವಿಯಾಗಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಲು ಸಾರ್ವಜನಿಕರಿಗೆ ಹಾಗೂ ಸಂಘ- ಸಂಸ್ಥೆಗಳಿಗೆ ಸೂಕ್ತ ಮಾಹಿತಿ ನೀಡಿ ಆಹ್ವಾನಿಸಿಲ್ಲ ಮತ್ತು ಬಜೆಟ್ನ ಪೂರ್ವಭಾವಿ ಸಭೆಯಲ್ಲಿ 2013-14ನೇ ಸಾಲಿನ ಜಮಾ- ಖರ್ಚುಗಳನ್ನು ಆಧರಿಸಿ ಚರ್ಚೆಗೆ ಮುಂದಾದ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಸಲಹೆಗಾಗಿ ಮನವಿ: ಸಭೆಯ ಆರಂಭದಲ್ಲಿ ಅಧ್ಯಕ್ಷೆ ಕಲಾವತಿ ಅವರು, 2014-15ನೇ ಸಾಲಿನ ಆಯವ್ಯಯವನ್ನು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲು ಉದ್ದೇಶಿಸಿದ್ದು, ಪಟ್ಟಣದಲ್ಲಿ ಜರುಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡುವಂತೆ ಕೋರಿದರು.
ಆಕ್ಷೇಪ: ಈ ಬಾರಿಯ ಬಜೆಟ್ನಲ್ಲಿ ಇರುವ ಪ್ರಮುಖ ಅಂಶಗಳೇನು, ಯಾವ ಯಾವ ಕಾರ್ಯಗಳಿಗೆ ಎಷ್ಟು ಹಣವನ್ನು ನಿಗದಿಗೊಳಿಸಲಾಗುವುದು, ಯಾವ ಹೊಸ ಯೋಜನೆಗಳನ್ನು ಪುರಸಭೆಯ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಹೀಗೆ ಯಾವುದೇ ಪೂರ್ವ ಮಾಹಿತಿಯನ್ನೂ ಸಭೆಗೆ ನೀಡದೇ ಪೂರ್ವಭಾವಿ ಸಭೆಯನ್ನು ನಡೆಸುತ್ತಿರುವ ಕುರಿತಂತೆ ಸಭೆಯ ಆರಂಭದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಪುರಸಭೆಯ ಅಧ್ಯಕ್ಷೆ ಹಾಗೂ ಅಧಿಕಾರಿಗಳ ಉತ್ತರದಿಂದ ತೃಪ್ತರಾಗದೇ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ಸಲಹೆ ಸ್ವೀಕಾರ: ಆದರೂ, ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಹಾಗೂ ಸದಸ್ಯರುಗಳ ಸಮ್ಮುಖದಲ್ಲಿಯೇ 4 ಕೋಟಿ ರು. ವೆಚ್ಚದಲ್ಲಿ ಪಟ್ಟಣದ ರಸ್ತೆಗಳ ಮರು ಡಾಂಬರೀಕರಣ, ಪುರಸಭೆಯ ನೀರು ಸರಬರಾಜು ವಿಭಾಗಕ್ಕೆ 2.64 ಕೋಟಿ ರು. ವೆಚ್ಚದಲ್ಲಿ ಹೊಸ ಜಾಕ್ವೆಲ್ ಅಳವಡಿಕೆ, 3.50 ಕೋಟಿ ರು. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ, ಪುರಸಭೆಯ ಚಿತಾಗಾರಕ್ಕೆ ಗ್ಯಾಸ್ ಚಾಲಿತ ಚಿತಾಗಾರದ ಅಳವಡಿಕೆಗೆ ಚಿಂತನೆ, ವೈದ್ಯಕೀಯ ಸಹಾಯಧನದ ಹೆಚ್ಚಳ, ಕುಸ್ತಿ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹಾಯಧನವನ್ನು 2 ಲಕ್ಷ ರು.ಗಳಿಗೆ ಏರಿಕೆ, ಪುರಸಭಾ ಉದ್ಯಾನವನದ ಅಭಿವೃದ್ಧಿಗೆ 10 ಲಕ್ಷ ರು.ಗಳು ಮೀಸಲು, ಕಸಾಪ ಭವನ ನಿರ್ಮಾಣಕ್ಕೆ 2 ಲಕ್ಷ ರು.ಗಳ ವಂತಿಗೆ ನೀಡಲು ಉದ್ದೇಶ, ಒಳಚರಂಡಿ ಮತ್ತು ಮ್ಯಾನ್ಹೋಲ್ಗಳ ದುರಸ್ತಿಗೆ ಇರಿಸಲಾಗಿದ್ದ 5 ಲಕ್ಷ ಅನುದಾನವನ್ನು 8 ಲಕ್ಷ ರು.ಗಳಿಗೆ ಏರಿಕೆ ಮೊದಲಾದ ಹತ್ತು ಹಲವು ಅಂಶಗಳನ್ನು ಒಳಗೊಂಡಿರುವ ಪುರಸಭೆಯ 2014-15ನೇ ಸಾಲಿನ ಬಜೆಟ್ಗೆ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದ ನಾಗರಿಕರುಗಳಿಂದ ಸಲಹೆಗಳನ್ನು ಸ್ವೀಕರಿಸಿ ಅನುಮೋದನೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ರಘುರಾಮ್, ಎಂಜಿನೀಯರ್ ಪ್ರಕಾಶ್, ಲೆಕ್ಕಾಧಿಕಾರಿ ಇರ್ಷಾದ್ ಹಾಗೂ ಪುರಸಭೆಯ ಸದಸ್ಯರುಗಳು, ಹಿರಿಯ ನಾಗರೀಕರು ಹಾಗೂ ಪುರಸಭೆಯ ಮಾಜಿ ಅಧ್ಯಕ್ಷರಾದ ಟಿ. ಮಲ್ಲೇಶ್, ಎಸ್.ಎನ್. ಕೃಷ್ಣ, ಕಸಾಪ ಅಧ್ಯಕ್ಷ ಪುಟ್ಟಸೋಮಪ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

