ಹೇಮಾವತಿ ಕಾರ್ಖಾನೆಯಿಂದ ಷೇರುದಾರರಿಗೆ ಸಕ್ಕರೆ ವಿತರಣೆ
ಹೊಳೆನರಸೀಪುರ: 17 ವರ್ಷಗಳ ನಂತರ ಹೇಮಾವತಿ ಸಕ್ಕರೆ ಕಾರ್ಖಾನೆಯ ಷೇರುದಾರರಾಗಿರುವ 24, 500 ರೈತರಿಗೆ ತಲಾ 25 ಕೆ.ಜಿ ಸಕ್ಕರೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಶಾಸಕ ಎಚ್.ಡಿ. ರೇವಣ್ಣ ಇಲ್ಲಿ ತಿಳಿಸಿದರು.
ತಾಲೂಕಿನ ಮೂಡಲಹಿಪ್ಪೆಯಲ್ಲಿ ಶನಿವಾರ ಷೇರುದಾರರಿಗೆ ಆಯೋಜಿಸಲಾಗಿದ್ದ ಸಕ್ಕರೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಕ್ಕರೆಯನ್ನು ವಿತರಿಸಿ ಮಾತನಾಡಿದ ಅವರು, ಕಾರ್ಖಾನೆ ವತಿಯಿಂದ ಷೇರುದಾರರಾಗಿರುವ ತಾಲೂಕಿನ 2,500 ರೈತರಿಗೆ ಈ ಸಂದರ್ಭದಲ್ಲಿ ತಲಾ 25 ಕೆ.ಜಿ ಸಕ್ಕರೆ ವಿತರಣೆ ಮಾಡಲಾಗುವುದು ಎಂದರು.
ಒತ್ತಡ ಹೇರಿದ್ದೆ: 17 ವರ್ಷಗಳ ಹಿಂದೆ ಕಾರ್ಖಾನೆಯ ಷೇರುದಾರ ರೈತರುಗಳಿಗೆ ಕೇವಲ 10 ಕೆ.ಜಿ ಸಕ್ಕರೆ ವಿತರಿಸಲಾಗಿತ್ತು. ಈಗಲಾದರೂ ಷೇರುದಾರ ರೈತರುಗಳಿಗೆ ಸಕ್ಕರೆಯನ್ನು ವಿತರಿಸುವಂತೆ ಕಾರ್ಖಾನೆಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳಿಗೆ ಕೋರಿದ್ದರೂ, ಅವರು ಕೇವಲ 15 ಕೆ.ಜಿಯಷ್ಟು ಸಕ್ಕರೆ ನೀಡಲು ಒಪ್ಪಿದ್ದರು. ಆದರೆ, ತಾವು ಹೋರಾಡಿ ಪ್ರತೀ ಷೇರುದಾರರಿಗೂ 25 ಕೆ.ಜಿ ಸಕ್ಕರೆ ವಿತರಿಸುವಂತೆ ಒತ್ತಡ ಹೇರಿದ ನಂತರ ಈಗ ಷೇರುದಾರರಿಗೆ ಸಕ್ಕರೆ ವಿತರಿಸಲಾಗುತ್ತಿದೆ ಎಂದರು.
ರು. 1.76 ಕೋಟಿ ಖರ್ಚು: ಕಾರ್ಖಾನೆಯ ವತಿಯಿಂದ ತಾಲೂಕಿನ ಸುಮಾರು 2500 ಷೇರುದಾರ ರೈತರಿಗೆ ಸಕ್ಕರೆಯನ್ನು ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಖಾನೆಯ ಒಟ್ಟು 24.500 ಷೇರುದಾರರಿಗೆ ಉಚಿತವಾಗಿ 25ಕೆ.ಜಿ ಸಕ್ಕರೆಯನ್ನು ವಿತರಿಸಲು 1.76 ಕೋಟಿ ರು. ಖರ್ಚಾಗಲಿದೆ ಎಂದರು.
ತಾಲೂಕಿನ ಸೊಸೈಟಿಗಳ ಮೂಲಕ ಷೇರುದಾರರಿಗೆ ಉಚಿತವಾದ ಸಕ್ಕರೆಯನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ಸಕ್ಕರೆಯನ್ನು ಫಲಾನುಭವಿ ರೈತರುಗಳಿಗೆ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಂಜುನಾಥ್, ಜಿಪಂ ಸದಸ್ಯ ಎಚ್.ಎನ್. ದೇವೇಗೌಡ (ಪಾಪಣ್ಣಿ), ಕಾರ್ಖಾನೆಯ ಕಾರ್ಯದರ್ಶಿ ಕಾಳೇಗೌಡ ಇತರರು ಇದ್ದರು.
19ರಂದು ಜಿಪಂ ಸಾಮಾನ್ಯ ಸಭೆ
ಹಾಸನ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಫೆ. 19ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.
ಅವಧಿ ವಿಸ್ತರಣೆ
ಹಾಸನ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳಲ್ಲಿ ಮತ್ತು ನಿಗಧಿಪಡಿಸಿದ ನಿರ್ದಿಷ್ಟ ಕೇಂದ್ರಗಳಲ್ಲಿ ಮತದಾರರ ಪಟ್ಟಿಗಳನ್ನು ಅಂತಿಮವಾಗಿ ಪ್ರಚುರಪಡಿಸಲಾಗಿದ್ದು, ಈವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಆಗದೇ ಇರುವ ಮತದಾರರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರಿಸಲು ಅವಕಾಶವಿರುತ್ತದೆ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ವಿನಂತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

