ಹಾಸನ

20 ನಿಮಿಷ 20 ಸುದ್ದಿ

Published On :

ಹಾಸನ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲನೇ ಎಂ.ಕಾಂ. ವಿದ್ಯಾರ್ಥಿನಿಯರಿಗೆ ಗುರುವಾರ ಪ್ರಸಕ್ತ ಕೈಗಾರಿಕೆ ಪರಿಸ್ಥಿತಿ ವಿಶ್ಲೇಷಣೆ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.  ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹಾಸನದ ಮಲೆನಾಡು ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ವಾಸುದೇವ ಪ್ರಸಾದ್ ಮಾತನಾಡಿ, ಒಳ್ಳೆಯ ಉದಾಹರಣೆಗಳೊಂದಿಗೆ ಕಂಪನಿಯ ಸಾಮರ್ಥ್ಯಗಳು, ನ್ಯೂನತೆಗಳು, ಅವಕಾಶಗಳು ಹಾಗೂ ಬೆದರಿಕೆಗಳು ಎಂಬ ವಿಷಯದ ಬಗ್ಗೆ ವಿವರಿಸಿದರು.    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರೂಪ್ರಾಜ್ ಚಂದನ್ ಮಾತನಾಡಿ, ಒಂದು ಹೊಸ ವಿಚಾರದ ಬಗ್ಗೆ ಮನನ ಮಾಡಿಕೊಡಲು ಈ ಅತಿಥಿ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಒಬ್ಬೊಬ್ಬ ವ್ಯಕ್ತಿಗಳಿಂದಲೂ ಕಲಿಯುವುದು ಇದೆ.  ಅಣ್ಣಾ ಹಜಾರೆ ಅವರ ತರಹ ಎಲ್ಲರೂ ಭ್ರಷ್ಟಾಚಾರವನ್ನು ತಡೆಯಲು ಮುಂದಾಗಬೇಕು ಎಂದರು. ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಳು ಇದ್ದರು. ಪುಷ್ಪಾ ಪ್ರಾರ್ಥಿಸಿದರು. ರೂಪ ಸ್ವಾಗತಿಸಿದರು. ಭವಾನಿ  ನಿರೂಪಿಸಿದರು.

ಪಡಿತರ ಚೀಟಿ ವಿತರಿಸಲು ಆಗ್ರಹಿಸಿ ಪ್ರತಿಭಟನೆ
ಹಾಸನ: ಸಮರ್ಪಕವಾಗಿ ಪಡಿತರ ಚೀಟಿಯನ್ನು ವಿತರಿಸುವಸಂತೆ ಆಗ್ರಹಿಸಿ ಕರ್ನಾಟಕ ಕಾವಲುಪಡೆ ನೇತೃತ್ವದಲ್ಲಿ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ  ಬಳಿ ದಿಢೀರ್ ಪ್ರತಿಭಟನೆಗೆ ಮುಂದಾದರು. ಹಲವು ವರ್ಷಗಳಿಂದ ಪಡಿತರ ಚೀಟಿಗಾಗಿ ಸಾರ್ವಜನಿಕರು ಅಲೆಯುತ್ತಿದ್ದಾರೆ. ಹೆಚ್ಚಿನ ಹಣ ನೀಡಿದ ನಾಗರಿಕರಿಗೆ ತಕ್ಷಣ ಪಡಿತರ ಚೀಟಿ ನೀಡಲಾಗುತ್ತಿದೆ ಎಂದು ದೂರಿದರು. ಎರಡು ಸಾವಿರ ರು. ನೀಡಿದವರಿಗೆ ಮನೆಗೆ ರೇಷನ್ ಕಾರ್ಡ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಪಡಿತರ ಚೀಟಿಯನ್ನು ಸಮರ್ಪಕವಾಗಿ ನೀಡದಿದ್ದರೆ, ಮುಂದಿನ ದಿವಸಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಕರ್ನಾಟಕ ಕಾವಲುಪಡೆಯ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಎನ್ಡಿಆರ್ಕೆ ಕಾಲೇಜಿನಲ್ಲಿರೆಡ್ಕ್ರಾಸ್ ಘಟಕ ಆರಂಭ
ಹಾಸನ: ನಗರದ ಎನ್ಡಿಆರ್ಕೆಯ ಬಿ.ಎಡ್. ಕಾಲೇಜಿನಲ್ಲಿ ಇತ್ತೀಚೆಗೆ   ರೆಡ್ಕ್ರಾಸ್ ಯುವ ಘಟಕವನ್ನು ಪ್ರಾರಂಭಿಸಲಾಯಿತು. ಇದೇ ಸಂದರ್ಭದಲ್ಲಿ ರೋಟರಿ ಕ್ವಾಂಟ ಸಂಸ್ಥೆಯು ಮೈ ಗುರು ಎಂಬ ಪ್ರಶಿಕ್ಷಣಾರ್ಥಿಗಳಿಗೋಸ್ಕರ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರೆಡ್ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು.   
ರೆಡ್ಕ್ರಾಸ್ ತಾಲೂಕು ಘಟಕದ ಸುರೇಶ್ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಮಹತ್ವ ವಿವರಿಸಿದರು. ಅನುಗನಾಳು ಕೃಷ್ಣಮೂರ್ತಿಯವರು ರೆಡ್ಕ್ರಾಸ್ ಸಂಸ್ಥೆಯು ಮಾನವ ಜನಾಂಗಕ್ಕೆ ಮಾಡಿರುವ ಮಹತ್ತರ ಕೆಲಸಗಳ ಬಗ್ಗೆ ತಿಳಿಸಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಮೋಹನ್ ಕುಮಾರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಡಿಟರ್ ರವಿ, ವೈದ್ಯ ಡಾ. ಶ್ರೀನಿವಾಸ ದೇಶಪಾಂಡೆ, ವಕೀಲ ಜಿತೇಂದ್ರ ಇದ್ದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಇ. ಮಂಜುನಾಥ್, ಸದಸ್ಯರಾದ ಎಚ್.ಕೆ. ರವಿ,  ಶಿವಶಂಕರ್, ನೃತ್ಯ ಮತ್ತು ಯೋಗ ಶಿಕ್ಷಕ ಎಂ.ಎಸ್. ಕುಮಾರ ಸ್ವಾಮಿ ಇತರರು ಇದ್ದರು.

ಉಪನ್ಯಾಸ
ಜಾವಗಲ್ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇಗುಲದ 39 ಲಕ್ಷ ರು. ವೆಚ್ಚದ ಸಂರಕ್ಷಣಾ ಕಾಮಗಾರಿ ಭೂಮಿ ಪೂಜೆಯನ್ನು ದೇವಾಲಯದ ಸಂಚಾಲಕ ಜಾವಗಲ್ ವಸಂತಕುಮಾರ್, ಗ್ರಾಪಂ ಮಾಜಿ  ಸದಸ್ಯ ನರಸಿಂಹಸ್ವಾಮಿ ನೆರವೇರಿಸಿದರು.

ಅಂತಾರಾಷ್ಟ್ರೀಯ ಟೂರ್ನಿಗೆ ಗಂಗಮ್ಮ ಆಯ್ಕೆ
ಹೊಳೆನರಸೀಪುರ: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಫೆ. 6ರಿಂದ 9ರವರೆಗೆ ನಡೆದ ಇಂಡಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್, 34ನೇ ಮಾಸ್ಟರ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2014ರಲ್ಲಿ ಹಾಸನದ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಗ್ರೂಪ್ ಡಿ. ನೌಕರರಾಗಿ ಕರ್ವವ್ಯ ನಿರ್ವಹಿಸುತ್ತಿರುವ ಗಂಗಮ್ಮ (59 ವರ್ಷ) ಅವರು 400 ಮೀಟರ್ ರಿಲೇಯಲ್ಲಿ ಪ್ರಥಮ ಸಥಾನ, 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಲಾಂಗ್ ಜಂಪ್ನಲ್ಲಿ ಮೂರನೇ ಸ್ಥಾನ, ಟ್ರಿಪಲ್ ಜಂಪ್ನಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಗಂಗಮ್ಮ ಅವರು ಶ್ರೀಲಂಕಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು ಕ್ರೀಡಾಕೂಟದಲ್ಲಿ ಜಯ ಗಳಿಸಲೆಂದು ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲೆ ಪಿ.ಆರ್. ಶಾಂತಿ   ಶುಭ ಹಾರೈಸಿದ್ದಾರೆ.

ಮಂಕುಬೂದಿ ಎರಚುವ ಸಿದ್ದು ಬಜೆಟ್: ರೇವಣ್ಣ
ಹೊಳೆನರಸೀಪುರ: ಮುಂಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಮಂಕುಬೂದಿ ಎರಚಲು ನೀಡಿರುವ ಬೋಗಸ್ ಬಜೆಟ್ ಇದಾಗಿದೆಯೇ ಹೊರತು  ಬಜೆಟ್ನಲ್ಲಿ ಯಾವುದೇ ವಿಶೇಷತೆಗಳಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ  ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನ ಕುರಿತಂತೆ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತಮ್ಮ ಹಿಂದಿನ ಬಜೆಟ್ನ ಪ್ರತಿಗಳನ್ನು ಓದಿದ್ದಾರೆಯೇ ಹೊರತು ರಾಜ್ಯದ ಜನತೆಗೆ ಹೊಸದೇನನ್ನೂ ನೀಡಿಲ್ಲ ಎಂದರು.
ಮೂಗಿಗೆ ತುಪ್ಪ: ರೈತರಿಗೆ ಸಾಲ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಅದಕ್ಕೂ ಮೊದಲೂ ರೈತರ ಮೇಲಿನ ಎಲ್ಲಾ ಸಾಲಗಳನ್ನೂ ಮನ್ನಾ ಮಾಡಿ ನಂತರದಲ್ಲಿ ಸಾಲ ನೀಡಿದ್ದರೆ, ಆಗ ಒಪ್ಪಬಹುದಾಗಿತ್ತು. ಆದರೆ ಇದೆಲ್ಲಾ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ರಾಜ್ಯದ ಜನತೆಯ ಮೂಗಿಗೆ ತುಪ್ಪ ಸವರಲು ನೀಡಿರುವ ಬಜೆಟ್ ಅಷ್ಟೇ ಎಂದರು.
ಇನ್ನು ಕೇಂದ್ರದಲ್ಲಿ ರೈಲ್ವೇ ಮಂತ್ರಿಗಳಾಗಿರುವ ಮಲ್ಲಿಕಾರ್ಜನ ಖರ್ಗೆಯವರೂ ಕೂಡ ರಾಜ್ಯಕ್ಕೆ ನಿರಾಶಾದಾಯಕ ಬಜೆಟ್ ಮಂಡಿಸಿದ್ದಾರೆ ಎಂದರು.

70ಕ್ಕೂ ಹೆಚ್ಚು ಕಿಶೋರ ಕವಿಗಳಿಂದ ಕವನ ವಾಚನ
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶುಕ್ರವಾರ ರಾಜ್ಯಮಟ್ಟದ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ  ನಂತರ  ನಡೆದ ಮಕ್ಕಳ ಕವಿಗೋಷ್ಠಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಕಿಶೋರ ಕವಿಗಳು ಕವನ ವಾಚನ ಮಾಡಿದರು. ನಂತರ ಅಧ್ಯಕ್ಷೆ ಕು. ಧನುಶ್ರೀಪುಟ್ಟಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಮೊದಲ ಸಾಹಿತಿ ಪಂಜೆ ಮಂಗೇಶರಾಯರು. ಶ್ರೀರಂಗಪಟ್ಟಣದಲ್ಲಿ ಜನಿಸಿದ ಎಸ್. ಜಿ. ನರಸಿಂಹರಾಜ್ ಅವರು, ಮಕ್ಕಳಿಗಾಗಿ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ ಎಂದರು. ಮದ್ದೂರು ಬಳಿಯ ದೇಶ ಹಳ್ಳಿಯವರಾದ ಎಂ. ಎಲ್. ಶ್ರೀಕಂಠೇಗೌಡ ಅವರು ಮಕ್ಕಳಿಗಾಗಿ ಬರೆದ ಕೃತಿ ಶಾರದಾ ಭೂಗೋಳ ಇಂದಿಗೂ ಮಾದರಿಯ ಪಠ್ಯಪುಸ್ತಕ ಎಂದರು. ಕಾರ್ಯಕ್ರಮದಲ್ಲಿ ಹಲವಾರು ಕಿಶೋರ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ರಂಗಕರ್ಮಿ ಮೋಹನ್ ಮಟ್ಟನವಿಲೆ, ತಾಲೂಕು ಕಸಪ ಗೌರವಕಾರ್ಯದರ್ಶಿ ಶಿವನಗೌಡಪಾಟೀಲ್, ಮಕ್ಕಳ ಸಾಹಿತಿ ಸುಕನ್ಯ ಮುಕುಂದ, ಮಕ್ಕಳ ಸಾಹಿತ್ಯ ಪರಿಷತ್ ನಿರ್ದೇಶಕಿ ಲತಾ, ರೋಟರಿ ಕ್ಲಬ್ ಅಧ್ಯಕ್ಷ ಅನಿಲ್ ಮರಗೂರು, ಸಮಾಜ ಸೇವಕಿ ಯಶೋದಜೈನ್, ತಾಲೂಕು ಕರವೇ ಮಹಿಳಾ ಅಧ್ಯಕ್ಷೆ ಸಾವಿತ್ರಮ್ಮ ಇದ್ದರು.

17ರಂದು ಪಿಎಫ್ಐ ಸಂಸ್ಥಾಪನಾ ದಿನ
ಹಾಸನ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥಾಪನಾ ದಿನವನ್ನು  ಫೆ.17 ರಂದು ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಜಿಲ್ಲಾ ಅಧ್ಯಕ್ಷ  ಫೈರೋಜ್ಪಾಷಾ ತಿಳಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಂಸ್ಥಾಪನ ದಿನದ ಅಂಗವಾಗಿ ಅಂದು ನಗರದಲ್ಲಿ ಯುನಿಟಿ ಮಾರ್ಚ್ ಹಮ್ಮಿಕೊಳ್ಳಲಾಗಿದೆ ಎಂದರು. ಇಂತಹ ದಿನವನ್ನು ದೇಶದ್ಯಾಂತ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆಯ ಶಾಫಿ ಬೆಳ್ಳಾರೆ, ಕಾರ್ಯಕ್ರಮದ ಸಂಚಾಲಕರು ಸುಫಿ ಇಬ್ರಾಹಿಂ, ಜಿಲ್ಲಾ ಸದಸ್ಯರಾದ ಸೈಯಾದ್ ಫರಿದ್, ನೂರುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

'ಪೋಷಕರು ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ ನೀಡಬೇಕು'
ಅರಸೀಕೆರೆ: ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಉತ್ತಮ ವಿದ್ಯಾಭ್ಯಾಸ, ಸಂಸ್ಕಾರವನ್ನು ನೀಡುವ ಮೂಲಕ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಿ ಸರ್ಕಾರ ಶಿಕ್ಷಣಕ್ಕಾಗಿ ನೀಡಿರುವ ಸಕಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ ಕರೆ ನೀಡಿದರು. ಪಟ್ಟಣದ ಸಮೀಪವಿರುವ ಕಾಳನಕೊಪ್ಪಲು ಸರ್ಕಾರಿ ಹಿರಿಯರ ಪ್ರಾಥಮಿಕ ಶಾಲೆಯ 17 ಲಕ್ಷ ರೂ ವೆಚ್ಚದ ಹೆಚ್ಚುವರಿ 4 ಕೊಠಡಿಗಳ ಕಾಮಗಾರಿಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಬಡ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಎಲ್ಲಾ ಸೌಲಭ್ಯವನ್ನು ನೀಡುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾವಂತರಾಗಿ ಶಾಲೆಗೆ, ತಂದೆ- ತಾಯಿಗಳಿಗೆ ಕೀರ್ತಿ ತರಬೇಕೆಂದರು. ಶಾಲಾಭಿವೃದ್ಧಿ ಸಮಿತಿ ಹಾಗೂ ಶಾಲಾ ಮುಖ್ಯ ಶಿಕ್ಷಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ ಕಟ್ಟಡ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ತಾಲ್ಲೂಕಿನ ಇತರೆಡೆಯಲ್ಲಿಯೂ ಇದೇ ರೀತಿ ಶಾಲಾ ಕಟ್ಟಡಗಳ ಸಮಸ್ಯೆ ಇದ್ದು ಅಲ್ಲಿಯೂ ಕೂಡ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಬಸ್ಸಿಗೆ ಚಾಲನೆ...
ಹಾಸನದ ಶಾಂತಿನಗರದಲ್ಲಿ ಇತ್ತೀಚೆಗೆ ನೂತನ ನಗರ ಸಾರಿಗೆ ಬಸ್ಸಿಗೆ ಚಾಲನೆ ನೀಡಲಾಯಿತು. ಪ್ರತಿದಿನ ನಗರದ ನೂತನ ಬಸ್ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣದ ನಂತರ ಶಾಂತಿನಗರ ತಲುಪಿ, ಪುನಃ ಅದೇ ಮಾರ್ಗದಲ್ಲಿ ನೂತನ ಬಸ್ನಿಲ್ದಾಣಕ್ಕೆ ತಲುಪಲಿದೆ.

'ಆಯುರ್ವೇದಕ್ಕೆ ಎಸ್ಡಿಎಂ ಸಂಸ್ಥೆ ಕೊಡುಗೆ ಅಪಾರ'
ಹಾಸನ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ಬೆಂಗಳೂರಿನ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ಪ್ರೇಮ್ ಕುಮಾರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಎಸ್.ಡಿ.ಎಂ  ಸಂಸ್ಥೆಯು ಆಯುರ್ವೇದ ವಿಜ್ಞಾನಕ್ಕೆ ನೀಡಿರುವ ಕೊಡುಗೆ ಅಪಾರ. ಇಲ್ಲಿ ಆಯುರ್ವೇದ ಶಿಕ್ಷಣ, ಚಿಕಿತ್ಸೆ, ಪ್ರಚಾರ ಮತ್ತು ಸಂಶೋಧನೆಗಳು ಅಹರ್ನಿಶಿ ನಡೆಯುತ್ತಿದ್ದು, ಹಾಸನದ ಎಸ್.ಡಿ.ಎಂ ಆಯುವೇದ ಕಾಲೇಜು ಮತ್ತು  ಆಸ್ಪತ್ರೆ ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತಿದೆ. ದೇಶ ವಿದೇಶಗಳಿಂದ ಇಲ್ಲಿಗೆ ಆಯುರ್ವೇದ ಜಿಜ್ಞಾಸುಗಳು- ಆರೋಗ್ಯಾಕಾಂಕ್ಷಿಗಳು ಬರುತ್ತಿರುತ್ತಾರೆ ಎಂದು ಆಸ್ಪತ್ರೆಯ ಬಗ್ಗೆ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಪ್ರಸನ್ನ ನರಹಿಂಹ ರಾವ್, ಬಾಲರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಇದ್ದರು.

'ಸಣ್ಣಪುಟ್ಟ ವ್ಯಾಜ್ಯಕ್ಕೂ ಠಾಣೆ, ಕೋರ್ಟ್ ಮೆಟ್ಟಿಲೇರಬೇಡಿ'
ಜಾವಗಲ್: ಸಣ್ಣ ಪುಟ್ಟ ವ್ಯಾಜ್ಯಗಳಿಗಾಗಿ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಹತ್ತುವುದನ್ನು ಕಡಿಮೆ ಮಾಡುವಂತೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ವತ್ತ ನಿರೀಕ್ಷಕ ಆರ್.ವಿ. ಗಂಗಾಧರಪ್ಪ ತಿಳಿಸಿದರು . ಜಾವಗಲ್ ಹೋಬಳಿ ಕೋಳಗುಂದ ಗ್ರಾಮದಲ್ಲಿ ಅರಸೀಕೆರೆ ಪೊಲೀಸ್ ಇಲಾಖೆ, ಕೋಳಗುಂದ ಗ್ರಾಪಂ, ಶಾಲಾ- ಕಾಲೇಜುಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಜನಸ್ನೇಹಿ ಪೊಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರು ಕಾನೂನುಗಳ ಬಗ್ಗೆ ಅರಿವನ್ನು ಹೊಂದಿ ಅಪರಾಧ ಮಾಡುವುದನ್ನು ಕಡಿಮೆ ಮಾಡಬೇಕೆಂದರು. ಪ್ರತಿಯೊಂದು ಮನೆಯಲ್ಲೂ ದಿನಪತ್ರಿಕೆ ಓದುವುದು, ದೂರದರ್ಶನದ ಸುದ್ದಿಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕೆಂದರು. ತಾಪಂ ಮಾಜಿ  ಸದಸ್ಯ ಮಹಾಲಿಂಗಪ್ಪ ಮಾತನಾಡಿ, ಸಾರ್ವಜನಿಕರು ಕಾನೂನುಗಳ ಬಗ್ಗೆ ಅರಿವು ಪಡೆದು ದುಶ್ಚಟಗಳಿಂದ ದೂರವಿರಬೇಕೆಂದರು.  ಪಿ.ಡಿ.ಓ. ಮಂಜುಳಾ, ಮುಖ್ಯ ಶಿಕ್ಷಕ ವಿ.ಎಂ.ಧನಂಜಯ, ಗ್ರಾಪಂ  ಅಧ್ಯಕ್ಷೆ ಸಣ್ಣಮ್ಮ ಉಪಾಧ್ಯಕ್ಷ ಹಾಲಪ್ಪ, ನಾಗಭೂಷಣ ಸ್ವಾಮಿ, ನಿವೃತ್ತ ಶಿಕ್ಷಕ ನಂಜುಡಪ್ಪ ಶಿಕ್ಷಕ ಪ್ರಸನ್ನ ಕುಮಾರ್ ಇದ್ದರು.

ಬೇಲೂರಿನಲ್ಲಿ ಶ್ವೇತಾಂಬರ ದೇವಾಲಯ ಉದ್ಘಾಟನೆ
ಬೇಲೂರು: ಬೇಲೂರಿನ ದೇವಾಂಗ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ  ಶ್ರೀ ಸಂಭವನಾಥ ಜೈನ್ ಶ್ವೇತಾಂಬರ ದೇವಸ್ಥಾನ ಉದ್ಘಾಟನೆ ಹಿನ್ನಲೆಯಲ್ಲಿ 3 ದಿನ ಜೈನ ಸಮುದಾಯದಿಂದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಶ್ರೀ ಸಂಭವನಾಥ ಜೈನ್ ಶ್ವೇತಾಂಬರ ದೇವಸ್ಥಾನ ಉದ್ಘಾಟನೆ ಹಿನ್ನೆಲೆಯಲ್ಲಿ 4 ದಿನದಿಂದ ನಾನಾ ಕಾರ್ಯಕ್ರಮಗಳು ನಡೆಯುತ್ತಿದ್ದು ಶನಿವಾರದವರೆಗೂ ಮುಂದುವರಿಯಲಿವೆ.
ಪಟ್ಟಣವನ್ನು ತಳಿರುವ ತೋರಣಗಳಿಂದ ಸಿಂಗರಿಸಿದ್ದು ಮುಖ್ಯದ್ವಾರದಲ್ಲಿ  ಬಾರಿಗಾತ್ರದ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಬುಧವಾರ ಜೈನ ಸಮುದಾಯದವರು ಅದ್ಧೂರಿ ಮೆರವಣಿಗೆಯನ್ನು ನಡೆಸಿದರು. ದಾರಿಯುದ್ದಕ್ಕೂ ಸಿಹಿ ಲಾಡುಗಳ ಪೊಟ್ಟಣವನ್ನು ಸಾರ್ವಜನಿಕರಿಗೆ ಹಂಚಿದ್ದಲ್ಲದೆ, ಬಿಸಿಲಲ್ಲಿ ಬಾಯಾರಿದವರಿಗೆ ಕುಡಿಯಲು ತಂಪಾದ ಮಜ್ಜಿಗೆ ಹಾಗೂ ಪಾನೀಯವನ್ನು ನೀಡಲಾಗುತ್ತಿತ್ತು. ಉದ್ಯಮಿಗಳಾದ ದೇವರಾಜ್, ಬಾಬೂಲಾಲ್, ನಿಷ್ಪಾಲ್ ಜೈನ್, ಕೇವಲ್ ಚಂದ್ ಪುಷ್ಪಬಾಯಿ, ಮನೋಜ್ ಸಂಗೀತಾ, ನವರತ್ನಮಾಲಾ ಭಾಗ್ಯವಂತಿ, ಜವೇರಿಲಾಲ್ ಹಾಗೂ ಧರ್ಮ ಗುರುಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು.

'ಆರೋಗ್ಯವಂತರು ದೇಶದ ಅಭಿವೃದ್ಧಿಗೆ ಪೂರಕ'
ಅರಕಲಗೂಡು: ಆರೋಗ್ಯವಂತ ಮನುಷ್ಯನಿಂದ ಕುಟುಂಬದ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಬಹುದು.ಆರೋಗ್ಯ ಇಲ್ಲದ ವ್ಯಕ್ತಿಯಿಂದ ಯಾವ ಸಾಧನೆಯೂ ಸಾಧ್ಯವಿಲ್ಲ.ಆದ್ದರಿಂದ ಮನುಷ್ಯ ಈ ನಿಟ್ಟಿನಲ್ಲಿ ಜಾಗೃತಿ ಹೊಂದಿ ಆರ್ಥಿಕ ಸಂಪತ್ತಿಗಿಂತ ಆರೋಗ್ಯ ಸಂಪತ್ತನ್ನು ಗಳಿಸುವತ್ತ ಚಿಂತಿಸಬೇಕಿದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟೇಶ್ ತಿಳಿಸಿದರು. ತಾಲೂಕಿನ ಬೈಚನಹಳ್ಳಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಸ್ವಾಸ್ತ್ಯ ಕುಟುಂಬದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮತ್ತು ಗಂಡು ಮಕ್ಕಳು ತೀರಾ ಚಿಕ್ಕವಯಸ್ಸಿನಲ್ಲಿ ಮಕ್ಕಳನ್ನು ಹೊಂದುವುದರಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆ ಕಂಡುಬರುತ್ತದೆ. ಹೆಣ್ಣಿಗೆ ಕನಿಷ್ಟ 22 ವರ್ಷ ತುಂಬಿದ ಮೇಲೆ ಮಕ್ಕಳನ್ನು ಪಡೆದರೆ,ಅಂತಹ ಯಾವುದೇ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ ಎಂದು ಸಲಹೆ ಮಾಡಿದರು.
ಶಿಕ್ಷಕಿ ವೀಣಾ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಮಹಿಳಾ ಸಂಘದ ಅಧ್ಯಕ್ಷೆ ಅನುಸೂಯಮ್ಮ, ಸೇವಾ ಪ್ರತಿನಿಧಿ ವೀಣಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ
ಹಾಸನ: ರಾಷ್ಟ್ರೀಯ ರೇಲ್ವೆ ಪ್ರಯಾಣಿಕರ ಸೌಲಭ್ಯ ಮಂಡಳಿ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಬುಧವಾರ ಜಿಲ್ಲಾ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಿದರು.
ನಾರಾಯಣಸ್ವಾಮಿ ಅವರು ನಗರದ ರೇಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿನ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ರೇಲ್ವೆ ನಿಲ್ದಾಣದ ಆವರಣ, ಸ್ವಚ್ಛತೆ ಹಾಗೂ ಇತರೆ ಸೌಕರ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿದರು. ನಂತರ ಅವರು ಇಲ್ಲಿನ ಅಧಿಕಾರಿಗಳಿಗೆ ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು. ನಂತರ ಅವರು ರೇಲ್ವೆ ನಿಲ್ದಾಣಕ್ಕೆ ಅಗತ್ಯವಾಗಿ ಬೇಕಾಗಿರುವಂಥ ಸೌಲಭ್ಯಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಎಂ. ಆನಂದ್, ಡಿ.ಸಿ. ಸಣ್ಣಸ್ವಾಮಿ, ಮುನಿಸ್ವಾಮಿ ಹಾಗೂ ಇತರರು ಇದ್ದರು.

'ಪಂಡಿತ್ ದೀನ್ದಯಾಳ್ ಆಸೆಯನ್ನು ಈಡೇರಿಸಬೇಕು'
ಸಕಲೇಶಪುರ: ದೇಶದ ಯುವ ಜನಾಂಗ ನಿಸ್ವಾರ್ಥ, ಸರಳ- ಸಜ್ಜನಿಕೆಯಿಂದ ವ್ಯಾಮೋಹ ರಹಿತವಾಗಿ ಜೀವನ ಮಾಡುವ ಮೂಲಕ ಪಂಡಿತ್ ದೀನದಯಾಳ್ ಅವರ ಆಸೆಯನ್ನು ಈಡೇರಿಸಬೇಕಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೃಷ್ಣೇಗೌಡ ಹೇಳಿದರು. ಮಂಗಳವಾರ ಸಕಲೇಶಪುರ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳು ಉಪಾಧ್ಯಾಯರ ಸಮರ್ಪಣಾ ದಿನವನ್ನು ಉದ್ಘಾಟಿಸಿ ಮಾತನಾಡಿ, ಸರಳ ಸಜ್ಜನಿಕೆ, ನಿಸ್ವಾರ್ಥ ದೇಶ ಸೇವೆಯಲ್ಲಿ ತೊಡಗಿ ದೇಶಪ್ರೇಮಿ ಯುವಕರನ್ನು ಹುರಿದುಂಬಿಸಿ ಸಂಘಟಿಸಿದ ದಿನದಯಾಳ್ ಅವರ ಜೀವನ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗ ಬೇಕಿದೆ ಎಂದರು. ರಾಷ್ಟ್ರಪ್ರೇಮ ಮೂಲಕ ರಾಷ್ಟ್ರದ ಉದ್ದಗಲಕ್ಕೆ ಸಂಚಾರ ಮಾಡಿ ಜನಸಂಘವನ್ನು ಸಂಘಟಿಸಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಇವತ್ತಿನ ಪೀಳಿಗೆಗೆ ಇವರು ಮಾರ್ಗದರ್ಶಕರಾಗಿದ್ದಾರೆ. ಇವರ ಕನಸನ್ನು ನನಸು ಮಾಡಬೇಕಾದರೆ, ಈ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ.ಯನ್ನು ರಾಷ್ಟ್ರದಲ್ಲಿ ಅಧಿಕಾರಕ್ಕೆ ತರುವುದರ ಮುಖಾಂತರ ಅವರ ಕನಸನ್ನು ನನಸು ಮಾಡಬೇಕಾಗಿದೆ ಎಂದು ಹೇಳಿದರು.

'ಮಠಗಳು ರಾಜಕಾರಣಿಗಳ ಆಶ್ರಯ ತಾಣವಾಗಬಾರದು'
ಅರಸೀಕೆರೆ: ಮಠಮಾನ್ಯಗಳು ಜನರನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ತರುವ ಶ್ರದ್ಧಾಭಕ್ತಿಯ ಕೇಂದ್ರಗಳಾಗಬೇಕೆ ಹೊರತು ರಾಜಕಾರಣಿಗಳ ಆಶ್ರಯ ತಾಣವಾಗಬಾರದು ಎಂದು ಹೊಸದುರ್ಗ ತಾಲೂಕಿನ ಒಪ್ಪತ್ತಿನ ಮಠದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು. ಭೈರಗೊಂಡನಹಳ್ಳಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸಿ ಸನ್ಮಾರ್ಗದತ್ತ ಕೊಂಡೊಯ್ಯಲು ಮಠ, ಮಾನ್ಯಗಳು ಬಳಕೆಯಾಗಬೇಕೇ ಹೊರತು ಸ್ವಾರ್ಥ ರಾಜಕಾರಣಿಗಳ ಸ್ವ- ಹಿತಾಸಕ್ತಿಗೆ ಬಳಕೆಯಾಗಬಾರದೆಂದರು. ವಾಗ್ದಾಳಿ: ಹುಳಿಯಾರು, ಪಂಚನಹಳ್ಳಿ ರಾಷ್ಟ್ರೀಯ ಹೆದ್ದಾರಿ ದುರವಸ್ಥೆಯ ಬಗ್ಗೆ ಕಿಡಿಕಾರಿದ ಶ್ರೀಗಳು ಕಾಮಗಾರಿ ನೆನೆಗುದಿಗೆ ಬಿದ್ದು ವರ್ಷಗಳೇ ಕಳೆದಿವೆ. ಇದು ರಾಜಕೀಯ ಮುಖಂಡರ, ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪರಿಸ್ಥಿತಿ ವಿಕೋಪದ ಹಂತ ತಲುಪಿದ್ದು ಜನರೇ ದಂಗೆಯೆದ್ದು ಬೀದಿಗಿಳಿಯಬೇಕಾದಂತಹ ಸನ್ನಿವೇಶ ನೃಷ್ಟಿಯಾಗಿದೆ. ಇನ್ನಾದರೂ ಪರಿಸ್ಥಿತಿ ಅರಿತು ಜನಪ್ರತಿನಿಧಿಗಳು ಕಾರ್ಯೋನ್ಮುಖವಾಗಬೇಕು ಎಚ್ಚರಿಸಿದರು.

21ರಿಂದ ಉಚಿತ ಕೃತಕ ಕಾಲು ಜೋಡಣಾ ಶಿಬಿರ
ಅರಸೀಕೆರೆ: ಪಟ್ಟಣದ ರೋಟರಿ ಸಂಸ್ಥೆ ಹಾಗೂ ಇನ್ನರ್ ವ್ಹೀಲ್ ಹಾಗೂ ಬೆಂಗಳೂರಿನ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್ ಆಶ್ರಯದಲ್ಲಿ ಫೆ. 21, 22, 23ರಂದು ಉಚಿತ ಕೃತಕ ಕಾಲುಗಳ ಜೋಡಣಾ ಶಿಬಿರವನ್ನು ಪಟ್ಟಣದ ರೋಟರಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಪಟ್ಟಣದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು ಶಿಬಿರಕ್ಕೆ ಒಂದು ವಾರ ಮುಂಚಿತವಾಗಿ ಫಲಾನುಭವಿಗಳು ಹೆಸರು ನೋಂದಾಯಿಸಿಕೊಳ್ಳತಕ್ಕದ್ದು ಎಂದರು. ಫೆ. 21ರ ಶುಕ್ರವಾರ ರೋಟರಿ ಭವನದಲ್ಲಿ ಕೃತಕ ಕಾಲುಗಳ ಅಳತೆಯನ್ನು ತೆಗೆದುಕೊಳ್ಳಲಾಗುವುದು. ಫೆ. 23ರಂದು ಉಚಿತ ಕಾಲುಗಳ ಜೋಡಣೆ ಮಾಡಲಾಗುವುದು. ತಾಲ್ಲೂಕಿನ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

ಸಾಧಕ ಧೃತಿಗೆಡಬಾರದು: ಪುಷ್ಪಗಿರಿ ಶ್ರೀ ಕಿವಿಮಾತು
ಬೇಲೂರು: ಸಮಾಜದ ಒಳಿತಿಗೆ ದುಡಿಯುವ ಸಾಧಕನಿಗೆ ಕೆಲ ಜನರು ತೊಡರಗಾಲು  ಹಾಕುತ್ತಾರೆ. ಆದರೆ ಅವರು ಸಮಾಜದಲ್ಲಿ ಇನ್ನೊಬ್ಬರಿಗೆ ಕೆಡುಕು ಮಾಡುವ ಉದ್ದೇಶವಿದ್ದು, ಸಾಧಕ ಎಂದಿಗೂ ಧೃತಿಗೆಡದೆ ಮುಂದೆ ಸಾಗಬೇಕು ಎಂದು ಪುಷ್ಪಗಿರಿ ಶ್ರೀ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇತ್ತೀಚೆಗೆ ತಾಲೂಕಿನ ಹೆಬ್ಬಾಳು ಗ್ರಾಮದ ಶ್ರೀರಾಮೇಶ್ವರಸ್ವಾಮಿ ನೂತನ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ದೇವಾಲಯಗಳು ಹೆಚ್ಚಿದಂತೆ ಭಕ್ತರಲ್ಲಿ ಭಕ್ತಿ ಕುಗ್ಗುತ್ತಿದೆ ಎಂದರು. ದೇವರು ಮತ್ತು ಮನುಷ್ಯನ ನಡುವೆ ಒಂದು ಕಾಣದ ಶಕ್ತಿ ಕೆಲಸ ಮಾಡುತ್ತಿದೆ, ಅದೇ ನಮ್ಮ ನಂಬಿಕೆ. ಜನರು ನಂಬಿಕೆಯಲ್ಲಿ ವಿಶ್ವಾಸ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಪವರ್ತಯ್ಯ, ಶಿಕ್ಷಕ ಧನಂಜಯ್, ಜಗದೀಶ್, ಚಂದ್ರಶೇಖರ್, ಚಂದ್ರಣ್ಣ, ರಾಜಶೇಖರಯ್ಯ, ಬಸವೇಗೌಡ,  ಪಿಡಿಓ ರುದ್ರೇಶಣ್ಣ, ಎಚ್.ಪಿ. ಶಿವಕುಮಾರ್, ರಾಮೇಗೌಡ, ಪತ್ರಕರ್ತ ಹೆಬ್ಬಾಳು  ಹಾಲಪ್ಪ, ಎಪಿಎಂಸಿ ಸದಸ್ಯ ಆನಂದ್ ಶಿಕ್ಷಕಿ ಕಲಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.