ಕಾಡಾನೆಗೆ ಮತ್ತೊಬ್ಬ ವ್ಯಕ್ತಿ ಬಲಿ
ಸಕಲೇಶಪುರ: ಅಪರಿಚಿತ ವ್ಯಕ್ತಿಯೊಬ್ಬನನ್ನು ಕಾಡಾನೆ ತುಳಿದು ಸಾಯಿಸಿದ ಘಟನೆ ಭಾನುವಾರ ತಾಲೂಕಿ ಕೆ. ಮಂಚಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ವೆಂಕಟರಾಮೇಗೌಡ ಎಂಬುವವರ ಪಾಳುಬಿದ್ದ ಕಾಫಿ ತೋಟದಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರ ದನಗಾಯಿಯೊಬ್ಬರಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಸುಮಾರು 55 ವರ್ಷದ ಮೃತ ವ್ಯಕ್ತಿಯ ಎಡಗೈಯಲ್ಲಿ ಕೆಂಚಪ್ಪಗೌಡ ಎಂಬ ಹೆಸರಿದ್ದು, ಈ ವ್ಯಕ್ತಿ ಇಲ್ಲಿಗೆ ಯಾಕೆ ಬಂದಿದ್ದ ಎಂಬುದು ತಿಳಿದು ಬಂದಿಲ್ಲ. ಬೆಂಗಳೂರಿನ ಉದ್ಯಮಿಯೊಬ್ಬರು ಸುಮಾರು ಒಂದು ದಶಕದ ಹಿಂದೆ ಖರೀದಿಸಿರುವ ಈ ಕಾಫಿ ತೋಟವನ್ನು ಪಾಳು ಬಿಟ್ಟಿದ್ದು, ಇಲ್ಲಿ ಯಾವುದೇ ಗ್ರಾಮಸ್ಥರು ಸಂಚರಿಸುವುದಿಲ್ಲ. ಆದರೆ ಈ ತೋಟದಲ್ಲಿ ಯಥೇಚ್ಛವಾಗಿರುವ ಏಲಗ ಹಾಗೂ ಕುಳೀರುಮಾವಿನ ಚಕ್ಕೆಯನ್ನು ಹೆಚ್ಚಾಗಿ ಕಳ್ಳತನ ನಡೆಸಲಾಗುತ್ತಿದ್ದು, ಕಾಡಾನೆ ತುಳಿದು ಸಾಯಿಸಿರುವ ಈ ವ್ಯಕ್ತಿಯು ಚಕ್ಕೆಯನ್ನು ತೆಗೆಯಲು ಬಂದಿರಬಹುದು ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
23ರಿಂದ ಮಂಗಳೂರುಮಡಗಾಂವ್ ರೈಲು ಆರಂಭ
ಮಂಗಳೂರು: ಕಳೆದ ಸಾಲಿನ ರೇಲ್ವೆ ಬಜೆಟ್ನಲ್ಲಿ ಘೋಷಿಸಿದ ಮಂಗಳೂರು ಸೆಂಟ್ರಲ್-ಮಡ್ಗಾಂವ್ ಸೂಪರ್ ಫಾಸ್ಟ್ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಸಂಚಾರ 23ರಿಂದ ಪ್ರಾರಂಭವಾಗಲಿದೆ. ಸಂಜೆ 3.30ಕ್ಕೆ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವರು. ರೈಲು ನಂ.02636 ರೈಲು ಸಂಜೆ 3.30ಕ್ಕೆ ಹೊರಟು ರಾತ್ರಿ 10.15ಕ್ಕೆ ಮಡಗಾಂವ್ ತಲುಪುವುದು. ಫೆ.24ರಿಂದ ನಿತ್ಯ ಸಂಚರಿಸಲಿದೆ. 22635 ನಂಬರಿನ ರೈಲು ಮಡಗಾಂವ್ನಿಂದ ಸಂಜೆ 4.15ಕ್ಕೆ ಹೊರಟು ರಾತ್ರಿ 10ಕ್ಕೆ ಮಂಗಳೂರು ಸೆಂಟ್ರಲ್ ತಲುಪುವುದು. 22636 ನಂಬರಿನ ರೈಲು ಮಂಗಳೂರು ಸೆಂಟ್ರಲ್ನಿಂದ ಬೆಳಗ್ಗೆ 8.15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಮಡಗಾಂವ್ ತಲುಪುವುದು. ಈ ರೈಲು ಕಾಣಕೋಣ, ಕಾರವಾರ, ಕುಮಟಾ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ ಮತ್ತು ಸುರತ್ಕಲ್ಗಳಲ್ಲಿ ನಿಲುಗಡೆಯಾಗಲಿದೆ. ಫೆ.16ರಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ ಎಂದು ಫಾಲ್ಘಾಟ್ ರೇಲ್ವೆ ಪ್ರಕಟಣೆ ತಿಳಿಸಿದೆ.
ಮಾ.3ರಂದು ತಾತ್ಕಾಲಿಕ ನಿಲುಗಡೆ: ಕೇರಳ ಕೊಟ್ಟಾಯಂನ ಪಾಲಕ್ಕುನ್ನು ಭಗವತಿ ದೇವಸ್ಥಾನದ ಉತ್ಸವ ಪ್ರಯುಕ್ತ ಮಂಗಳೂರು ಸೆಂಟ್ರಲ್-ನಾಗರಕೊಯಿಲ್ ಪರಶುರಾಮ ಎಕ್ಸ್ಪ್ರೆಸ್ ರೈಲಿಗೆ ಕೊಟ್ಟಾಯಂ ನಿಲ್ದಾಣದಲ್ಲಿ ಮಾ.3ರಂದು ಒಂದು ನಿಮಿಷ ನಿಲುಗಡೆ ಕಲ್ಪಿಸಲಾಗಿದೆ.
ಅರಮನೆಯಲ್ಲಿ ನಾಯಿ ದಾಳಿ: ನಾಲ್ವರಿಗೆ ಗಾಯ
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಮೇಲೆ ನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದೆ. ಅರಮನೆಯ ಮಾಲಿ ಸಿದ್ದಯ್ಯ, ಕೋಲ್ಕತಾದ ಅಶೋಕ್ಕುಮಾರ್ ಮತ್ತು ಕೇರಳ ಮೂಲದ ಇಬ್ಬರು ಪ್ರವಾಸಿಗರು ನಾಯಿ ದಾಳಿಗೆ ತುತ್ತಾಗಿದ್ದಾರೆ. ಅಶೋಕ್ಕುಮಾರ್ ತಮ್ಮ ಮಗಳನ್ನು ಇನ್ಫೋಸಿಸ್ ಸಂಸ್ಥೆಗೆ ಸೇರಿಸಲು ಆಗಮಿಸಿದ್ದರು. ಈ ವೇಳೆ ನಾಯಿ ದಾಳಿ ನಡೆಸಿ ಗಾಯಗೊಳಿಸಿದೆ. ಕೂಡಲೇ ಸಮೀಪದ ಜೆಎಸ್ಎಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರು. ಕೆಲವರು ಕೆ.ಆರ್. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ವಿಷ ಪ್ರಾಶನದಿಂದ ಹುಲಿ ಸಾವು
ಚಾಮರಾಜನಗರ: ರಾಜ್ಯದ ಗಡಿ ತಮಿಳುನಾಡಿನ ಸತ್ಯಮಂಗಲ ಅರಣ್ಯದಲ್ಲಿ ವಿಷ ಪ್ರಾಶನದಿಂದ ಹೆಣ್ಣು ಹುಲಿ ಮೃತಪಟ್ಟ ಘಟನೆ ಭಾನುವಾರ ಪತ್ತೆಯಾಗಿದೆ. ಸತ್ಯಮಂಗಲದ ತಾಳವಾಡಿ ವಲಯದ ಚಿಕ್ಕಳ್ಳಿ ಬೀಟ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 8ರಿಂದ 10 ವರ್ಷದ ಹುಲಿ ಪತ್ತೆಯಾಗಿದೆ. ಹುಲಿ ಸ್ವಾಭಾವಿಕವಾಗಿ ಸತ್ತಿದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಾರೆ. ಆದರೆ, ಕಾಡಂಚಿನ ಗ್ರಾಮಗಳ ಜನರು ಹುಲಿಯ ಆರ್ಭಟಕ್ಕೆ ಹೆದರಿ ಮೇಕೆ ಮಾಂಸದಲ್ಲಿ ವಿಷ ಹಾಕಿ ಕೊಂದಿದ್ದಾರೆ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಹುಲಿ ಸ್ವಾಭಾವಿಕವಾಗಿ ಸತ್ತಿದಿಯೋ ಅಥವಾ ವಿಷ ಪ್ರಾಶನದಿಂದ ಸತ್ತಿದಿಯೋ ಎಂಬುದು ವೈದ್ಯಕೀಯ ವರದಿಯಿಂದ ಪತ್ತೆಯಾಗಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

