21ರಿಂದ ಕೃತಕ ಕಾಲುಗಳು ಜೋಡಣಾ ಶಿಬಿರ
ಅರಸೀಕೆರೆ: ಪಟ್ಟಣದ ರೋಟರಿ ಸಂಸ್ಥೆ ಹಾಗೂ ಇನ್ನರ್ ವ್ಹೀಲ್ ಹಾಗೂ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್ ಆಶ್ರಯದಲ್ಲಿ ಫೆ. 21, 22, 23ರಂದು ಉಚಿತ ಕೃತಕ ಕಾಲುಗಳ ಜೋಡಣಾ ಶಿಬಿರವನ್ನು ಪಟ್ಟಣದ ರೋಟರಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃತಕ ಕಾಲು ಜೋಡಣೆ ಶಿಬಿರವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಶಿಬಿರಕ್ಕೆ ಒಂದು ವಾರ ಮುಂಚಿತವಾಗಿ ಫಲಾನುಭವಿಗಳು ಹೆಸರು ನೋಂದಾಯಿಸಿಕೊಳ್ಳತಕ್ಕದ್ದು ಎಂದರು. ಫೆ.21ರ ಶುಕ್ರವಾರ ರೋಟರಿ ಭವನದಲ್ಲಿ ಕೃತಕ ಕಾಲುಗಳ ಅಳತೆಯನ್ನು ತೆಗೆದುಕೊಳ್ಳಲಾಗುವುದು. ಫೆ. 23ರಂದು ಉಚಿತ ಕಾಲುಗಳ ಜೋಡಣೆ ಮಾಡಲಾಗುವುದು. ತಾಲ್ಲೂಕಿನ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಆಸಕ್ತರು ರೋಟರಿ ಕಾರ್ಯದರ್ಶಿ ಮೋಹನ್, ಇನ್ನರ್ವ್ಹೀಲ್ ಸಂಸ್ಥೆಯ ಸಂಧ್ಯಾ ವಿಶ್ವನಾಥ್ ಅವರನ್ನು ಸಂಪರ್ಕಿಸಬಹುದಾಗಿದೆ. ಅಗತ್ಯ ಮಾಹಿತಿಗಾಗಿ ಮೊ. 9900479734ಗೆ ಸಂಪರ್ಕಿಸಲು ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ರೋಟರಿ ಮಾಜಿ ಅಧ್ಯಕ್ಷರಾದ ಕೆ.ಪಿ. ವಿಶ್ವನಾಥ್, ಭರತ್, ಯೋಗೀಶಾಚಾರ್, ಕಾರ್ಯದರ್ಶಿ ಮೋಹನ್, ಇನ್ನರ್ವ್ಹೀಲ್ ಸಂಸ್ಥೆಯ ಕಾರ್ಯದರ್ಶಿ ಸಂಧ್ಯಾ ವಿಶ್ವನಾಥ್ ಇನ್ನಿತರರು ಇದ್ದರು.
ದಲ್ಲಾಳಿಗಳನ್ನು ದೂರವಿಡಿ: ಶಾಸಕ ಎ. ಮಂಜು
ಅರಕಲಗೂಡು: ಸರ್ಕಾರದ ಸವಲತ್ತುಗಳನ್ನು ಪಡೆಯುವುದು ಅರ್ಹ ಫಲಾನುಭವಿಗಳ ಹಕ್ಕು ಆಗಿದೆ ಎಂದು ಶಾಸಕ ಎ. ಮಂಜು ತಿಳಿಸಿದ್ದಾರೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ಕುಗಳ ವಿತರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಸರ್ಕಾರ, ನೊಂದವರಿಗಾಗಿ ವಿವಿಧ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಾ ಬಂದಿದ್ದು, ಅದರಂತೆ ನೊಂದ ಮಹಿಳೆಯರಿಗಾಗಿ ರಾಷ್ಟೀಯ ಕುಟುಂಬ ನೆರವು ಯೋಜನೆಯನ್ನು ಜಾರಿಗೊಳಿಸಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯುವ ಫಲಾನುಭವಿಗಳನ್ನು ಶೋಷಣೆ ಮಾಡಲು ದಲ್ಲಾಳಿಗಳಿರುತ್ತಾರೆ. ಆದರೆ, ಫಲಾನುಭವಿಗಳು ತಮ್ಮ ಸವಲತ್ತು ಪಡೆಯಲು ಯಾವುದೇ ದಲ್ಲಾಳಿಗಳನ್ನು ಆಶ್ರಯಿಸದೇ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು. ಪ್ರಸಕ್ತ ತಾಲೂಕಿನಲ್ಲಿ 2006ರಿಂದ ಈವರೆಗೆ 625 ಅರ್ಜಿಗಳು ಬಂದಿದ್ದು,ಆ ಪೈಕಿ 525 ಫಲಾನುಭವಿಗಳಿಗೆ ಚೆಕ್ಕುಗಳನ್ನು ವಿತರಿಸಲಾಗುತ್ತಿದೆ. ರಾಷ್ಟ್ರೀಯ ನೆರವು ಯೋಜನೆ ಮತ್ತು ವಿಶೇಷ ಘಟಕ ಯೋಜನೆಗಳ ಮೂಲಕ ಒಟ್ಟು 64,70,000 ರು.ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಗದೀಶ್ ಉಪಸ್ಥಿತರಿದ್ದರು.
'ಗೌಡರು ಪ್ರಧಾನಿ ಆಗಿದ್ದಾಗ ಕುಟುಂಬ ನೆರವು ಯೋಜನೆ '
ಹಾಸನ: ರಾಷ್ಟ್ರೀಯ ಕುಟುಂಬ ನೆರವು ಯೋಜನೆಯನ್ನು 1997ರಲ್ಲಿ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದರು. ಅರ್ಹ ಫಲಾನುಭವಿಗಳಿಗೆ ಈ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಎಚ್.ಡಿ. ರೇವಣ್ಣ ಸೂಚಿಸಿದರು. ಹಾಸನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಫಲಾನುಭವಿಗಳಿಗೆ 10 ಸಾವಿರ ರು. ಚೆಕ್ ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು. ಗ್ರಾಮ ಲೆಕ್ಕಿಗರು ಅಂಗವಿಕಲರು, ವಿಧವೆಯರು, ವೃದ್ಧರಿಗೆ ಮಾಸಾಶನ ಒದಗಿಸುವ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಕಲ್ಪಿಸಲು ಮುಂದಾಗುವಂತೆ ಸೂಚಿಸಿದರು. ಇಂದು 140 ಜನರಿಗೆ ಸೌಲಭ್ಯ ನೀಡಲಾಗುತ್ತಿದ್ದು, ಉಳಿದ ಫಲಾನುಭವಿಗಳಿಗೆ ಒಂದು ವಾರದೊಳಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರೇವಣ್ಣ ತಿಳಿಸಿದರು. ಮಾಸಾಶನದ ಹಣ ನೇರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸದಸ್ಯ ಲಕ್ಷ್ಮಣ್, ತಹಸೀಲ್ದಾರ್ ಮಂಜುನಾಥ್, ಉಪ ತಹಸೀಲ್ದಾರ್ ಪಾರ್ಥಸಾರಥಿ ಇದ್ದರು.
ಆಸ್ಪತ್ರೆ ಆವರಣದಲ್ಲಿ ಹಸುಗೂಸು ಪತ್ತೆ
ಅರಸೀಕೆರೆ: ಹೆಣ್ಣು ಮಗುವೆಂಬ ಕಾರಣಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಒಂದು ತಿಂಗಳ ಹಸುಗೂಸನ್ನು ತಾಯಿಯೊಬ್ಬಳು ಕೊರೆಯುವ ಚಳಿಯಲ್ಲಿ ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಅನಾಥವಾಗಿ ಬಿಟ್ಟು ಹೋಗಿರುವ ಹೃದಯ ವಿದ್ರಾವಕ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ. ಮಗು ಅಳುವ ಧ್ವನಿ ಆಲಿಸಿದ ನಾಗರಿಕರು ಆವರಣವನ್ನು ಹುಡುಕಾಡಿದಾಗ ಸೋಗೆ ಗರಿಗಳ ನಡುವೆ ಹಸುಗೂಸೊಂದು ಕಂಡುಬಂತು. ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಘಟನೆಯ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು ಹಾಸನದ ಮಕ್ಕಳ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಚಕ್ರಪಾಣಿ ತಿಳಿಸಿದ್ದಾರೆ.
ಕೃಸಹಕಾರ ಸಂಘದ ನಿರ್ದೇಶಕರ ಆಯ್ಕೆ
ರಾಮನಾಥಪುರ: ಬಸವಾಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ ಚುನಾವಣೆ ನಡೆಯಿತು. ಸಾಲಗಾರರ ಕ್ಷೇತ್ರದಲ್ಲಿ ಪಿಗ್ಮಿ, ರವೀಶ್,ಬಿ.ವಿ. ಬಸವರಾಜಪ್ಪ, ಸುಬ್ಬೇಗೌಡ, ಪರಸಯ್ಯ, ಜಯಮ್ಮ ಶ್ರೀನಿವಾಸ್, ಕೃಷ್ಣೇಗೌಡ, ರಮೇಶ, ರಾಜಮ್ಮ ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ವಿಜಯಕುಮಾರ್ ಆಯ್ಕೆಯಾಗಿದ್ದಾರೆ. ಒಟ್ಟು ಹತ್ತು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದರು. ರಾಮನಾಥಪುರ ಗ್ರಾಪಂ ಕಾರ್ಯದರ್ಶಿ ನಿಂಗಣ್ಣನವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ದೇಗುಲ ಸಂರಕ್ಷಣೆಗೆ ರು. 39 ಲಕ್ಷ
ಜಾವಗಲ್: ಜಾವಗಲ್ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಸಂರಕ್ಷಣಾ ಕಾಮಗಾರಿಗಾಗಿ ಸರಕಾರ 39 ಲಕ್ಷ ರು. ಮಂಜೂರು ಮಾಡಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಾವಗಲ್ ವಸಂತಕುಮಾರ್ ತಿಳಿಸಿದ್ದಾರೆ. 39 ಲಕ್ಷ ರು. ವೆಚ್ಚದ ಸಂರಕ್ಷಣಾ ಕಾಮಗಾರಿ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿ, ದೇವಾಲಯದ ಆವರಣದಲ್ಲಿನ 16 ಕಾಲು ಮಂಟಪ, ಪಾಕಶಾಲಾ ಮಂಟಪ ಸೇರಿದಂತೆ ಕೆಲವು ಕಾಮಗಾರಿಗಳನ್ನು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ನರಸಿಂಹಸ್ವಾಮಿ, ಅರ್ಚಕ ನಾರಾಯಣಸ್ವಾಮಿ, ಶ್ರೀವತ್ಸ, ಕುಮಾರ್ ಜೆ.ಆರ್. ಅಜ್ಜೇಗೌಡ, ಸುಕೇಶ್, ರಮೇಶ್, ರಾಜು, ಈರಣ್ಣ ಇದ್ದರು.
ಜೂಜಾಟ: 11 ಮಂದಿ ಬಂಧನ
ರಾಮನಾಥಪುರ: ಇಸ್ಪೀಟ್ ಆಡುತ್ತಿದ್ದ 11 ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳಾದ ಹೊಳನರಸೀಪುರ ಪ್ರೊಬೆಷನರಿ ಅಡಿಷನಲ್ ಎಸ್. ಪಿ ವಿನಾಯಕ್ ಪಾಟೀಲ್ ಮತ್ತು ಸಿಬ್ಬಂದಿ ವರ್ಗ ಇತ್ತೀಚೆಗೆ ಬಂಧಿಸಿದ್ದಾರೆ.ಸುರೇಶ, ಕಸ್ತೂರಿ, ಚಂದ್ರೇಗೌಡ, ಶ್ರೀಧರ, ಭೈರನಾಯಕ, ಮಂಜು, ರಾಜಶೇಖರ, ಯೋಗೇಶ, ರಾಮು ಅಲಿಯಾಸ್ಗೋಪಾಲ, ಗುರುರಾಜ್ ಅಲಿಯಾಸ್ ರವಿ, ರಘು ಬಂಧಿತರು.
ಅರಕಲಗೂಡು ತಾಲೂಕಿನ ಹುಲಿಕಲ್ ಗ್ರಾಪಂ ವ್ಯಾಪ್ತಿಯ ಅರಣ್ಯ ನಿರ್ಜನ ಪ್ರದೇಶದಲ್ಲಿ ಇಸ್ಪೀಟ್ ಆಟ ಆಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪ್ರೊಬೆಷನರಿ ಎ.ಎಸ್.ಪಿ. ಮತ್ತು ತಂಡ 11 ಮಂದಿಯನ್ನು ಬಂಧಿಸಿ, ಅವರಿಂದ 8 ಮೊಬ್ಯೆಲ್, 5 ಬೈಕ್ಗಳು ಹಾಗೂ ರು. 75 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡು ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂಭ್ರಮದಲ್ಲಿ ನಡೆದ ಉರುಸ್
ಜಾವಗಲ್: ಜಾವಗಲ್ನ ಪ್ರಸಿದ್ಧ ದರ್ಗಾದಲ್ಲಿ ಇತ್ತೀಚೆಗೆ ಬಾಬಾರವರ ಗ್ಯಾರ್ವಿ ಉರುಸ್ ಕಾರ್ಯಕ್ರಮವು ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ರಾಜ್ಯದ ನಾನಾ ಜಿಲ್ಲೆಗಳು ಮತ್ತು ನಾನಾ ರಾಜ್ಯಗಳಿಂದ ಅಗಮಿಸಿದ ಸಹಸ್ರಾರು ಮುಸ್ಲಿಂ ಭಾಂದವರು ಕಾರ್ಯಕ್ರಮದಲ್ಲಿ ಇದ್ದರು. ಮಹಮದ್ ಹನಿಫ್ ಸಂದಲ್ನ್ನು ಮೆರವಣಿಗೆಯಲ್ಲಿ ಹೊತ್ತು ತಂದರು. ಖುರಾನ್ ಪಠಣ, ನಾಥ್ ಕಾರ್ಯಕ್ರಮಗಳು ನಡೆದವು. ಬಾಬಾರವರ ದರ್ಗಾ ಷರೀಫ್ಗೆ ಸಹಸ್ರಾರು ಭಕ್ತರು ಸಂದಲ್ ಅರ್ಪಿಸಿ, ಪುಷ್ಪಗುಚ್ಛಗಳನ್ನು ಇರಿಸಿ, ಹೊಸ ಚಾದರ್ ವಸ್ತ್ರ ಅರ್ಪಿಸಿ ಭಕ್ತಿ ಗೌರವ ಸಮರ್ಪಿಸಿದರು. ದರ್ಗಾ ಟ್ರಸ್ಟ್ನ ಅಧ್ಯಕ್ಷ ಇಲಾಹಿಭಕ್ಷ್, ಉಪಾಧ್ಯಕ್ಷ ಶಬೀರ್ ಸಾಬ್, ಕಾರ್ಯದರ್ಶಿ ಅಬ್ಬಾಸ್ ಹಾಜಿ, ಸದಸ್ಯರಾದ ಯೂಸೂಫ್, ಸರದಾರ್ ಪಾಷಾ, ಅಹಮದ್, ಶಕೀಲ್, ರಿಯಾಜ್.ಸಿ.ಎಚ್, ಇಸಾಕ್ ಹಾಜಿ, ಮಹಮದ್ ಅನೀಫ್, ರೀಯಾಜ್ ಅರಸೀಕೆರೆ, ಸೈಯಾದ್ ಷಫಿ, ಇಬ್ರ್ರಾಹಿಂ, ಕಲಿಮ್, ಫೈರೋಜ್ ಗಾಂಧಿ, ಅರೇಬಿಕ್ ಉಪನ್ಯಾಸಕ ವರ್ಗದವರು ಇದ್ದರು. ಉರುಸ್ ಪ್ರಯುಕ್ತ ಅನ್ನದಾನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ವೃತ್ತ ನಿರೀಕ್ಷಕ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

