ಮತ್ತೊಂದು ಒಂಟಿ ಸಲಗ ಸೆರೆ
ಆಲೂರು: ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ 6ನೇ ದಿನ ಮತ್ತೊಂದು ಯಶಸ್ಸು ಸಿಕ್ಕಿದೆ. ಜನರ ಭೀತಿಗೆ ಕಾರಣವಾಗಿದ್ದ ನರಹಂತಕ ಒಂಟಿ ಸಲಗವನ್ನು ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಈವರೆಗೂ ಹಿಡಿದಿದ್ದ ಎಲ್ಲಾ ಆನೆಗಳಿಂತಲೂ ಅತ್ಯಂತ ದೊಡ್ಡದಾದ ಬಲಿಷ್ಠವಾದ ಇದಾಗಿದ್ದು, ಈ ಸಲಗಕ್ಕೆ 40 ವರ್ಷ ವಯಸ್ಸು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಸೋಮವಾರವಷ್ಟೇ ಈ ಪ್ರದೇಶದಲ್ಲಿ ಅಪಾಯಕಾರಿಯಾಗಿದ್ದ ಮಕ್ನಾ ಆನೆಯನ್ನು ಹಿಡಿದಿದ್ದ ತಂಡಕ್ಕೆ ಇಂದು ಹಿಡಿದ ಒಂಟಿ ಸಲಗ ಸೇರಿದಂತೆ 8 ಆನೆಗಳ ಹಿಂಡು ಪುನಃ ಇದೇ ಅರಣ್ಯ ಪ್ರದೇಶದಲ್ಲಿ ಇರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಮಕ್ನಾ ಆನೆಯನ್ನು ಸಾಗಿಸದೇ ಅರಣ್ಯ ಇಲಾಖೆಯ ತಂಡ ಮಂಗಳವಾರ ಪುನಃ ಕಾರ್ಯಾಚರಣೆಗೆ ಮುಂದಾಯಿತು.
ದಿನವಿಡೀ ಕಾರ್ಯಾಚರಣೆ: ಬೆಳಗಿನಿಂದಲೇ ಉಂಬಳಿಬೆಟ್ಟ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳೊಂದಿಗೆ ಕಾರ್ಯಾಚರಣೆಗೆ ಮುಂದಾಯಿತು. ಕಾರ್ಯಾಚರಣೆಗೆ ಮುಂದಾದ ತಂಡ 2 ಗಂಟೆಯಲ್ಲಿ ಈ ಒಂಟಿ ಸಲಗವನ್ನು ಗುರುತಿಸಿ ಅದಕ್ಕೆ ಅರವಳಿಕೆ ಮದ್ದನ್ನು ನೀಡಲಾಯಿತು. ಆದರೆ ಅತ್ಯಂತ ಬಲಿಷ್ಠವಾದ ಸಲಗವಾದ ಕಾರಣ ಅರವಳಿಕೆ ಮದ್ದು ಅದರ ಮೇಲೆ ಪ್ರಭಾವ ಬೀರಲಿಲ್ಲ. ಆದ್ದರಿಂದಾಗಿ ಒಂಟಿ ಸಲಗ ಕಾಡಿನೊಳಗೆ ಓಡಿ ಕಣ್ಮರೆಯಾದ ಸಲಗ ಪುನಃ ಸಂಜೆ 5.30ರ ವೇಳೆಗೆ ತಂಡಕ್ಕೆ ಗೋಚರವಾಯಿತು. ಆಗ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತೆ ಅರವಳಿಕೆ ಮದ್ದು ನೀಡಿದರು. ಈ ಬಾರಿ ಅರವಳಿಕೆ ಮದ್ದು ಪರಿಣಾಮ ಬೀರಿತು. ಒಂಟಿ ಸಲಗ ಉಂಬಳಿಬೆಟ್ಟದ ಅರಣ್ಯದ ಮಧ್ಯಭಾಗಕ್ಕೆ ಹೋಗಿ ಪ್ರಜ್ಞೆ ತಪ್ಪಿ ನೆಲಕ್ಕೆ ಉರುಳಿತು.
ಸಿಬ್ಬಂದಿ ಹರಸಾಹಸ: ನಂತರ ಸಲಗವನ್ನು ಪುನಃ ಸರಪಳಿಯಿಂದ ಬಂಧಿಸಿ ಅದನ್ನು ಅರಣ್ಯ ಪ್ರದೇಶದಿಂದ ಮಾಗಡಿಹಳ್ಳಿ ಕ್ಯಾಂಪ್‌ಗೆ ತರಲು ಹರಸಾಹಸ ಪಡಬೇಕಾಯಿತು. ಅತ್ಯಂತ ಬಲಿಷ್ಠವಾಗಿರುವ ಸಲಗ ಪುನಃ ಸಾಕಾನೆಗಳೊಂದಿಗೆ ಸೆಣಸಾಟಕ್ಕೆ ಇಳಿಯಿತು. ಈ ಸಂದರ್ಭದಲ್ಲಿ ಪುನಃ ಹರಸಾಹಸ ಪಟ್ಟು ಈ ಆನೆಯನ್ನು ಹೇಮಾವಾತಿ ನದಿ ದಾಟಿಸಲು ಪ್ರಯತ್ನಿಸಿದಾಗ ನದಿಯ ಪಕ್ಕದಲ್ಲಿ ಕುಸಿದು ಬಿದ್ದ ಆನೆಯನ್ನು ಏಳಿಸಲು ಸಾಕಾನೆಗಳು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಕುಸಿದ ಆನೆ ಒಂದು ಗಂಟೆಯಾದರೂ ಏಳಲಿಲ್ಲ.
ಸಿಬ್ಬಂದಿಗೆ ರಜೆ?
ಅರಣ್ಯ ಇಲಾಖೆಯ ಸಿಬ್ಬಂದಿಗಳು ಎರಡು ದಿನಗಳಲ್ಲಿ 2 ಕಾಡಾನೆಗಳನ್ನು ಹಿಡಿದಿದ್ದು, ಸಾಕಾನೆಗಳು ಸಹ ಗಾಯ ಹಾಗೂ ದಣಿವಿನಿಂದಾಗಿ ಬಸವಳಿದಿವೆ. ಈ ಹಿನ್ನೆಲೆಯಲ್ಲಿ, ಅವುಗಳಿಗೂ ಸಹ ವಿಶ್ರಾಂತಿ ಬೇಕಾಗಿರುವುದರಿಂದ ಕೆಲ ದಿನಗಳ ಮಟ್ಟಿಗೆ ಆನೆಗಳಿಗೆ, ಅರಣ್ಯ ಇಲಾಖೆ ಸಿಬ್ಬಂದಿಗೆ, ಮಾವುತರಿಗೆ, ಕಾವಾಡಿಗಳು, ಕಾಡು ಕುರುಬರು ಸೇರಿದಂತೆ ಸಿಬ್ಬಂದಿ ವರ್ಗಕ್ಕೆ ವಿಶ್ರಾಂತಿ ಬೇಕಾಗಿದ್ದು, ಒಂದೆರಡು ದಿನ ಕಾರ್ಯಾಚರಣೆಗೆ ವಿರಾಮ ನೀಡುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

