ರೈತರ ಮುಷ್ಕರಕ್ಕೆ ವಕೀಲರ ಸಾಥ್
ಅರಸೀಕೆರೆ: ಅನ್ನದಾತ ಸಂಕಷ್ಟಕ್ಕೆ ಸಿಲುಕಿ ತೀವ್ರ ಬರಗಾಲದಿಂದ ತತ್ತರಿಸಿ ಕುಡಿಯಲು ನೀರಿಲ್ಲದೆ, ದನಕರುಗಳಿಗೆ ಮೇವಿಲ್ಲದೆ ಆತಂಕದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ರಾಜ್ಯವನ್ನಾಳುತ್ತಿರುವ ಸರ್ಕಾರ ಆತನ ನೆರವಿಗೆ ಧಾವಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ವಕೀಲ ಎನ್.ಡಿ. ಪ್ರಸಾದ್ ಕಿಡಿಕಾರಿದರು.
ಕೆರೆಗಳಿಗೆ ನೀರು ಒದಗಿಸಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ತಾಲ್ಲೂಕು ಘಟಕ, ಹಸಿರುಸೇನೆ ವತಿಯಿಂದ ನಡೆಸುತ್ತಿರುವ ಅಹೋರಾತ್ರಿ 3ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ 60ಕ್ಕೂ ಹೆಚ್ಚು ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದರು.
ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ ರೈತರೊಂದಿಗೆ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಎನ್.ಡಿ. ಪ್ರಸಾದ್, ರೈತ ಸಮುದಾಯ ಆರಂಭಿಸಿರುವ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ಘೋಷಿಸಿದರು.
ದುರದೃಷ್ಟಕರ ಸಂಗತಿ: ಯಾವುದೇ ದೇಶದಲ್ಲಿ ರೈತರ ಬದುಕು ಹಸನಾಗದಿದ್ದರೆ ರೈತ ಆರ್ಥಿಕವಾಗಿ ದುಸ್ಥಿತಿ ತಲುಪುತ್ತಾನೆ. ಹಾಗಾದಾಗ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಜನರಿಗೆ ಅನ್ನ ನೀಡುವ ರೈತರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರ ಪ್ರಥಮ ಆದ್ಯತೆ ನೀಡಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಯೋನ್ಮುಖವಾಗದೆ ರೈತ ಸಮುದಾಯವನ್ನು ಶೋಷಿಸಿಕೊಂಡು ಬಂದಿರುವುದು ದುರದೃಷ್ಟಕರ ಸಂಗತಿ ಎಂದರು.
ಭರವಸೆ: ವಕೀಲರ ಸಂಘದ ಅಧ್ಯಕ್ಷ ಸರ್ವೇಶ್ ಮಾತನಾಡಿ, ಕಳೆದ ದಶಕಗಳಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕೆರೆ ಕಟ್ಟೆಗಳು ನೀರಿಲ್ಲದೆ ಬರಿದಾಗಿದೆ. 1 ಸಾವಿರ ಅಡಿ ಕೊಳವೆ ಬಾವಿ ಕೊರೆಯಿಸಿದರೂ ನೀರಿಲ್ಲದೆ ಜನ ಜಾನುವಾರುಗಳು ಕುಡಿಯುವ ಹನಿ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ರೈತ ಮುಖಂಡರ ನ್ಯಾಯಯುತ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ವಕೀಲರು ನಿಮ್ಮೊಂದಿಗೆ ಹೋರಾಟಕ್ಕೆ ಇರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಒತ್ತಾಯ: ವಕೀಲ ಹಿರಣ್ಣಯ್ಯ ಮಾತನಾಡಿ, ತೆಂಗಿಗೆ ತಗುಲಿದ ರೋಗಗಳಿಂದ ತಾಲ್ಲೂಕಿನಲ್ಲಿ 7 ಲಕ್ಷಕ್ಕೂ ಹೆಚ್ಚಿನ ತೆಂಗಿನ ಮರಗಳು ಸುಳಿ ಬಿದ್ದು ಸಂಪೂರ್ಣ ನಾಶವಾಗಿ ರೈತರ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದ್ದು ಇಂತಹ ಸಂದರ್ಭದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬಿ ವೈಜ್ಞಾನಿಕ ಪರಿಹಾರ ನೀಡಿ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾದ ಸರ್ಕಾರ, ತೋಟಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ನಿರ್ಲಕ್ಷ್ಯ ವಹಿಸಿದ್ದು ಅನಾಹುತಗಳು ಸಂಭವಿಸುವ ಮುನ್ನ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಹಿರಿಯ ವಕೀಲರಾದ ಎನ್. ಸುಬ್ಬಣ್ಣ, ಬಿ.ಎನ್. ರವಿ ಇನ್ನಿತರ ವಕೀಲರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ್, ವಕೀಲರಾದ ಸುಬ್ರಹ್ಮಣ್ಯಸ್ವಾಮಿ, ಹಿರಿಯಣ್ಣ, ಸಿದ್ದಮಲ್ಲಪ್ಪ, ಪ್ರಕಾಶ್, ಲೋಕೇಶ್, ಪಿ.ನಟರಾಜ್, ಯತೀಶ್, ರವಿಶಂಕರ್, ಅಶೋಕ್ ಕುಮಾರ್, ನಂದೀಶ್, ಸೇರಿದಂತೆ ಮಹಿಳಾ ವಕೀಲರು ಹಾಗೂ ರೈತ ಮುಖಂಡರಾದ ಮೇಳೇನಹಳ್ಳಿ ನಾಗರಾಜ್, ಬೋರನಕೊಪ್ಪಲು ಶಿವಲಿಂಗಪ್ಪ, ಜವನಹಳ್ಳಿ ನಿಂಗಪ್ಪ, ಅಣ್ಣಾಯಕನಹಳ್ಳಿ ಶಿವಮೂರ್ತಿ, ಬಿ.ಬಿ. ಶಿವಕುಮಾರ್, ರವೀಶ್ ಬಾಬು, ಕುಮಾರ್, ಗಂಗಾಧರ್, ಮಂಜುನಾಥ್, ಸಿದ್ದೇಶ್, ಇನ್ನಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

