ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ಅಗತ್ಯ
ಕನ್ನಡಪ್ರಭ ವಾರ್ತೆ ಹಾಸನ ಫೆ 20
ಉದಯೋನ್ಮುಖ ಸಾಹಿತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ.ನಾಗಣ್ಣ ಹೇಳಿದರು.
ತಾಲೂಕಿನ ಗೊರೂರಿನಲ್ಲಿ ಗುರುವಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ವೇದಿಕೆಯಲ್ಲಿ ನಡೆದ ಹಾಸನ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುತ್ತಿರುವವರನ್ನು ಪತ್ತೆ ಪಚ್ಚಿ ಅವರಿಗೆ ಪ್ರೋತ್ಸಾಹ ನೀಡಬೇಕು. ತಾಲೂಕು ಮಟ್ಟದಲ್ಲಿನ ಕಿರಿಯ ಸಾಹಿತಿಗಳನ್ನು ಗುರುತಿಸಿ ಹಿರಿಯ ಸಾಹಿತಿಗಳು ಅವಕಾಶ ಕಲ್ಪಿಸಿಕೊಡುವಂತಹ ಕಾರ್ಯ ಮಾಡಿದಾಗ ಮಾತ್ರ ಸಾಹಿತ್ಯ ಲೋಕ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು ಅಂತ ಇತ್ತೀಚೆಗೆ ಹೇಳಲಾಗುತ್ತಿದೆ. ಆದರೆ ಕಳೆದ 10 ವರ್ಷಗಳಲ್ಲಿ ಅತ್ಯಂತ ಪ್ರಮುಖವಾದ ಬದಲಾವಣೆಗಳೂ ಏನೂ ಆಗಿಲ್ಲ. ಆದರೆ ರಾಜಕೀಯ ವ್ಯಕ್ತಿಗಳು ಮಾತ್ರ ಮಹತ್ವದ ಬದಲಾಗಿದೆ ಅಂತ ಬಿಂಬಿಸುತ್ತಿದ್ದಾರೆ ಅಷ್ಟೇ. ಆದರೆ ಕನ್ನಡ ನಾಡು ಉದಯವಾಗ ಬೇಕಾಗಿದೆ. ನಾವು ಜೀವನದಲ್ಲಿ ಕ್ರಮಿಸಬೇಕಾದ ಅಂಶಗಳು ಬಹಳಷ್ಟಿದ್ದು, ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಅಷ್ಟೇ ಎಂದು ಹೇಳಿದರು.
ಹಬ್ಬ ಹರಿದಿನ ಹೆಚ್ಚು ಹೆಚ್ಚು ಆಚರಣೆ: ನಮ್ಮಲ್ಲಿ ಇತ್ತೀಚೆಗೆ ಹಬ್ಬ ಹರಿದಿನಗಳನ್ನು ಹೆಚ್ಚು ಹೆಚ್ಚಾಗಿ ಆಚರಿಸಲಾಗುತ್ತಿದೆ. ಸಂಘಸಂಸ್ಥೆಗಳು ಹೆಚ್ಚಾಗಿ ತೊಡಗಿಕೊಳ್ಳುತ್ತಿವೆ. ವಿಪರ್ಯಾಸ ಅಂದ್ರೆ ಅಕ್ಷರ ಜಾತ್ರೆಯಾದ ಕನ್ನಡ ಸಮ್ಮೇಳನಗಳನ್ನು ನಡೆಸಲು ಹಿಂದು ಮುಂದು ನೋಡುತ್ತಿದ್ದೇವೆ. ಆದ್ದರಿಂದ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ನಡೆಯುವ ಮೂಲಕ ಸಾಹಿತ್ಯಾಭಿಮಾನಿಗಳನ್ನು ಪ್ರೋತ್ಸಾಹಿಸುವ ಮೂಲಕ ಭಾಷೆ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಜಿಲ್ಲೆ ಪ್ರಖ್ಯಾತಿಯನ್ನು ಪಡೆಯಲು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಗೂ ಅ.ನ.ಕೃಷ್ಣರಾಯರ ಕೊಡುಗೆ ಅಪಾರವಾಗಿದೆ. ರಾಮಸ್ವಾಮಿ ಅಯ್ಯಂಗಾರರು ಗೊರೂರು ಹೆಸರನ್ನು ಇಡೀ ಭರತ ಖಂಡದಲ್ಲಿಯೇ ಬೆಳಗಿಸಿದ್ದಾರೆ. ರಾಮಸ್ವಾಮಿ ಅವರು ಅಮೇರಿಕಾದಲ್ಲಿ ಗೊರೂರು ಎಂಬ ಪುಸ್ತಕ ಬರೆಯುವ ಮೂಲಕ ಅಮೆರಿಕಾದಲ್ಲಿ ಗೊರೂರನ್ನು ಪ್ರಖ್ಯಾತಿಗೊಳಿಸಿದ್ದಾರೆ. ಈ ಇಬ್ಬರು ಸಾಹಿತಿಗಳು ಹೆಚ್ಚಿನ ವಿದ್ಯಾಭ್ಯಾಸ ಹೊಂದಿಲ್ಲದಿದ್ದರೂ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಎನ್.ಎಲ್.ಚನ್ನೇಗೌಡ, ತಾಲೂಕು ಕಸಾಪ ಅಧ್ಯಕ್ಷ ಕೆ.ಆರ್.ಮಮತೇಶ್, ಡಿಆರ್ಡಿಓ ಹಿರಿಯ ವಿಜ್ಞಾನಿ ಸ್ವಾಮಿ ನಾಯಕ್, ಎಂ.ಆರ್.ಚಂದ್ರಶೇಖರ್, ಶಾಂತಕೃಷ್ಣ, ಸಾಹಿತಿ ಜ.ಹೋ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ಮಲ್ಲಿಗೆವಾಳು ದ್ಯಾವಪ್ಪ, ರುದ್ರೇಶ್ ಇತರರು ಇದ್ದರು.
ನಮ್ಮಲ್ಲಿ ಇತ್ತೀಚೆಗೆ ಹಬ್ಬ ಹರಿದಿನಗಳನ್ನು ಹೆಚ್ಚು ಹೆಚ್ಚಾಗಿ ಆಚರಿಸಲಾಗುತ್ತಿದೆ. ಸಂಘಸಂಸ್ಥೆಗಳು ಹೆಚ್ಚಾಗಿ ತೊಡಗಿಕೊಳ್ಳುತ್ತಿವೆ. ವಿಪರ್ಯಾಸ ಅಂದ್ರೆ ಅಕ್ಷರ ಜಾತ್ರೆಯಾದ ಕನ್ನಡ ಸಮ್ಮೇಳನಗಳನ್ನು ನಡೆಸಲು ಹಿಂದು ಮುಂದು ನೋಡುತ್ತಿದ್ದೇವೆ. ಆದ್ದರಿಂದ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ನಡೆಯುವ ಮೂಲಕ ಸಾಹಿತ್ಯಾಭಿಮಾನಿಗಳನ್ನು ಪ್ರೋತ್ಸಾಹಿಸುವ ಮೂಲಕ ಭಾಷೆ ಉಳಿಸಿ ಬೆಳೆಸಬೇಕು
ಟಿ ಪ್ರೊ.ಸಿ.ನಾಗಣ್ಣ
ರಸ್ತೆ ಸ್ಥಿತಿ ಕಂಡು ಅಪಹಾಸ್ಯ
ಅಕ್ಕಪಕ್ಕದ ತಮಿಳುನಾಡು, ಕೇರಳ ರಾಜ್ಯಗಳವರು ಕರ್ನಾಟಕಕ್ಕೆ ಬಂದರೆ ಅವರು ಇಲ್ಲಿನ ರಸ್ತೆಗಳನ್ನು ಕಂಡು ಅಪಹಾಸ್ಯ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನದಿಂದ ಗೊರೂರಿಗೆ 20 ನಿಮಿಷದಲ್ಲಿ ಬರ ಬಹುದಾಗಿದ್ದು, ರಸ್ತೆ ಸರಿ ಇಲ್ಲದ ಕಾರಣ 1 ತಾಸು ಕಾಲ ಕ್ರಮಿಸ ಬೇಕಾಗಿದೆ. ಇದರಿಂದ ತಿಳಿಯುತ್ತದೆ ನಮ್ಮ ಗ್ರಾಮೀಣ ರಸ್ತೆಗಳು ಯಾವ ಸ್ಥಿತಿಯಲ್ಲಿ ಇದೆ ಎಂಬುದು ಎಂದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸಾಹಿತ್ಯಕ್ಕೆ ಇಲ್ಲಿನ ಪರಿಸರವೇ ಮೂಲವಾಗಿದೆ ಎಂದ ಅವರು, ಕನ್ನಡ ಸಾಹಿತ್ಯ ಇತರೆ ಭಾಷೆಗಳಿಗಿಂತ ಶ್ರೀಮಂತವಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್ ಮಾತನಾಡಿ, ಭಾಷೆಯನ್ನು ಬೆಳೆಸುವ ಮತ್ತು ಉಳಿಸುವಂತಹ ಅನಿವಾರ್ಯತೆ ಇದ್ದು, ಗಾಂಧಿಜೀ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಆಗಬೇಕು ಎಂದು ಹೇಳಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇದನ್ನೇ ಹೇಳಿದ್ದರು. ಇತ್ತೀಚೆಗೆ ನ್ಯಾಯಾಲಯಗಳ ತೀರ್ಮಾನಗಳಿಂದ ಸಾಕಷ್ಟು ಪ್ರಾದೇಶಿಕ ಭಾಷೆಗಳು ನಶಿಸಿ ಹೋಗುತ್ತಿವೆ. ನ್ಯಾಯಾಲಯಗಳು ಮಾನವೀಯ ಮೌಲ್ಯಗಳನ್ನು ಮಾನದಂಡವಾಗಿ ಕಾಣದೆ ಕೇವಲ ಸಾಕ್ಷ್ಯಾಧಾರ ಅವಲಂಬಿಸಿರುವುದರಿಂದ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

