ಹಾಸನ

ಆರ್‌ಟಿಇ ಯೋಜನೆ: ವಿದ್ಯಾರ್ಥಿಗಳ ಆಯ್ಕೆ ವೇಳೆ ಗೊಂದಲ

Published On :

ಬೇಲೂರು: ಆರ್‌ಟಿಇ ಮೂಲಕ ಪಟ್ಟಣದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆಯ್ಕೆ ವೇಳೆ ಕೂಗಾಟ, ಚೀರಾಟ ನಡೆದು ಗೊಂದಲದ ವಾತಾವರಣ ಉಂಟಾದ ಘಟನೆ ಇತ್ತೀಚೆಗೆ ನಡೆಯಿತು.
  ಪೂರ್ಣಪ್ರಜ್ಞಾ ಹಾಗೂ ಯೂರೋಕಿಡ್ಸ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಹೆಚ್ಚು ಅರ್ಜಿ ಬಂದಿದ್ದು ಮತ್ತು ತಹಸೀಲ್ದಾರ್ ಕಚೇರಿಯಿಂದ ನೀಡುವ ವಾಸಸ್ಥಳ ದೃಢೀಕರಣ ಪತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಅದಲು ಬದಲು ಆಗಿರುವುದು ಗೊಂದಲಕ್ಕೆ ಪ್ರಮುಖ ಕಾರಣ ವಾಯಿತು.
ವಿವರ: ಪಟ್ಟಣದ ಹಲವಾರು ಶಾಲೆಗಳಿಗೆ ಆರ್‌ಟಿಇ ಯೋಜನೆಯಡಿ ತಮ್ಮ ಮಕ್ಕಳಿಗೆ ಸೀಟು ಪಡೆಯಲು ಪೋಷಕರು ಅರ್ಜಿ ಹಾಕಿದ್ದರೂ ಸಹ ಹೆಚ್ಚಿನ ಅರ್ಜಿಗಳು ಪೂರ್ಣಪ್ರಜ್ಞಾ ಶಾಲೆಗೆ 210 ಅರ್ಜಿ (20 ಸೀಟಿಗೆ) ಯೂರೋಕಿಡ್ಸ್ ಶಾಲೆಯಲ್ಲಿ 138 ಅರ್ಜಿ (13 ಸೀಟಿಗೆ) ಸಲ್ಲಿಕೆಯಾಗಿತ್ತು. ಪೂರ್ಣಪ್ರಜ್ಞಾ ಶಾಲೆಯಲ್ಲಿನ 20 ಸೀಟಿನಲ್ಲಿ ಪರಿಶಿಷ್ಟ ಜಾತಿ 6, ಪರಿಶಿಷ್ಟ ವರ್ಗ 1, ಒಬಿಸಿ 13 ಸೀಟು ಮೀಸಲಾತಿಯಡಿ ಹಂಚಿಕೆಯಾಗಿದ್ದರೆ, ಯೂರೋಕಿಡ್ಸ್ ಶಾಲೆಯಲ್ಲಿನ 13 ಸೀಟಿನಲ್ಲಿ ಪರಿಶಿಷ್ಟ ಜಾತಿ 4, ವರ್ಗ 1, ಒಬಿಸಿ 8 ಸೀಟು ಮೀಸಲಾತಿ ಯಡಿ ಹಂಚಿಕೆಯಾಗಿತ್ತು.
  ಇದರಲ್ಲಿ ಪೂರ್ಣಪ್ರಜ್ಞಾ ಶಾಲೆಯಲ್ಲಿನ 210 ಅರ್ಜಿಯಲ್ಲಿ 78 ಅರ್ಜಿಗಳು, ಯೂರೋಕಿಡ್ಸ್ ಶಾಲೆಯಲ್ಲಿ 138 ಅರ್ಜಿಯಲ್ಲಿ 118 ಅರ್ಜಿಗಳು ಹಲವು ಕಾರಣಗಳಿಂದಾಗಿ ತಿರಸ್ಕೃತ ಗೊಂಡಿತ್ತು. ಇದರಲ್ಲಿ ತಹಸೀಲ್ದಾರ್ ಕಚೇರಿಯಿಂದ ನೀಡಲಾದ ವಾಸ ದೃಢೀಕರಣ ಪತ್ರದಲ್ಲಿ ಪೋಷಕರು ಹಾಲಿ ವಾಸವಿರುವ ವಾರ್ಡಿನ ಸಂಖ್ಯೆ ನಮೂದಿಸುವ ಬದಲು ಬೇರೆ ವಾರ್ಡಿನ ಸಂಖ್ಯೆ ನಮೂದಿಸಿ ವಾಸದೃಢೀಕರಣ ಪತ್ರ ನೀಡಿದ್ದು ಅತಿಹೆಚ್ಚು ಅರ್ಜಿ ತಿರಸ್ಕೃತಕ್ಕೆ ಕಾರಣವಾಯಿತು.
ಆಕ್ರೋಶ: ಕರವೇ ಮುಖಂಡ ಖಾದರ್ ಎಂಬುವರ ಮಗನ ಅರ್ಜಿಯೂ ವಾಸ ದೃಢೀಕರಣ ಪತ್ರ ಸರಿಯಿಲ್ಲವೆಂಬ ಕಾರಣಕ್ಕೆ ತಿರಸ್ಕೃತ ಗೊಂಡಿತು. ಇದರಿಂದ ಆಕ್ರೋಶ ಗೊಂಡ ಅವರು, ಬಿಇಒ ಸುಂದರೇಶ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಬಿಇಒ, ಶಿಕ್ಷಣ ಇಲಾಖೆ ನಿಯಮದ ಪ್ರಕಾರ ನಾನು ಅರ್ಜಿ ಪರಿಶೀಲನೆ ನಡೆಸಿ ತಿರಸ್ಕರಿಸಿದ್ದೇನೆ. ವಾಸಸ್ಥಳ ದೃಢೀಕರಣ ಪತ್ರದಲ್ಲಿನ ತಪ್ಪಿಗೆ ನಾನು ಹೊಣೆಯಲ್ಲ ಎಂದು ತಿಳಿಸಿದರು.
17 ವಾರ್ಡ್ ಮಾತ್ರವೇ ಇದೆ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಬೇಲೂರು ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದರೂ ತಹಸೀಲ್ದಾರ್ ಕಚೇರಿಯ ಕಂಪ್ಯೂಟರ್ ದಾಖಲೆಯಲ್ಲಿ 17 ವಾರ್ಡ್ ಮಾತ್ರವೇ ಇದೆ. ಹಿಂದೆ ಇದ್ದ 17 ವಾರ್ಡ್‌ನಂತೆ ವಾಸದೃಢೀಕರಣ ಪತ್ರ ನೀಡುತ್ತಿದ್ದು, ಈ ಕಾರಣದಿಂದ ವಾಸದೃಢೀಕರಣ ಪತ್ರದಲ್ಲಿ ವಾರ್ಡಿನ ಸಂಖ್ಯೆ ಅದಲು ಬದಲಾಗುತ್ತಿದೆ. ಇದರಿಂದ ನನ್ನ ಮಗನ ಅರ್ಜಿ ತಿರಸ್ಕೃತಗೊಳ್ಳಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
  ಇದೇ ಸಂದರ್ಭ ಗ್ರಾಮೀಣ ಪ್ರದೇಶದ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಇದಕ್ಕಾಗಿ ಗ್ರಾಮೀಣ ಪ್ರದೇಶದ ಅನೇಕ ಪೋಷಕರು ಶಿಕ್ಷಣ ಅಧಿಕಾರಿಗಳ ಮೇಲೆ ಮುಗಿಬಿದ್ದರು. ನಾವೇನು ಪಟ್ಟಣದ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಓದಿಸಬಾರದೆ ಎಂದು ಪ್ರಶ್ನಿಸಿದರು.
  ಈ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣಾಧಿಕಾರಿಗಳು, ಗ್ರಾಮೀಣ ಪ್ರದೇಶದವರಿಗೆ ಆಯಾಯ ಭಾಗದಲ್ಲಿರುವ ಶಾಲೆ ಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಪಟ್ಟಣ ಪ್ರದೇಶದವರಿಗೆ ಪಟ್ಟಣದಲ್ಲಿನ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲು ಮಾತ್ರವೇ ಅವಕಾಶ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು.
  ಈ ನಡುವೆ ಪೂರ್ಣಪ್ರಜ್ಞಾ ಶಾಲೆಯಲ್ಲಿ ವಯಸ್ಸು ಮೀರಿರುವ ವಿದ್ಯಾರ್ಥಿಯೊಬ್ಬನ ಹೆಸರಿನ ಚೀಟಿಯನ್ನು ಲಾಟರಿ ಎತ್ತುವ ಡಬ್ಬಕ್ಕೆ ಹಾಕಿದ್ದ ವಿಷಯದಲ್ಲಿ ಸುಂದರೇಶ್ ಹಾಗೂ ಪೂರ್ಣಪ್ರಜ್ಞಾ ಶಾಲೆಯ ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.