ಮೂರು ತಿಂಗಳಿಂದ ಕುಡಿಯಲು ನೀರಿಲ್ಲ
ಕ.ಪ್ರ.ವಾರ್ತೆ , ಬೇಲೂರು , ಜ.16
ಪಟ್ಟಣದ ಹಳೆಬೀಡು ರಸ್ತೆಯಲ್ಲಿರುವ ಯಗಚಿ ಕ್ವಾಟ್ರಸ್ ನಿವಾಸಿಗಳು ಕಳೆದ 3 ತಿಂಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದು ಈ ಬಗ್ಗೆ ದೂರು ನೀಡಿದರೂ ಯಗಚಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಗೋಳು ತೋಡಿಕೊಂಡರು.
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ತಾಲೂಕಿಗೆ, ಇತರೆ ಜಿಲ್ಲೆಗೆ ನೀರುಣಿಸಲು ಯಗಚಿ ಜಲಾಶಯ ನಿರ್ಮಾಣ ಹಾಗೂ ನಿರ್ವಹಣೆ ಮಾಡುತ್ತಿರುವ ಯಗಚಿ ಕ್ವಾಟ್ರಸ್ ನಿವಾಸಿಗಳಿಗೆ ನೀರಿಲ್ಲದಂತಾಗಿರುವುದು ವಿಪರ್ಯಾಸ.
ಯಗಚಿ ವಸಾಹತು ಕ್ವಾಟ್ರಸ್ನಲ್ಲಿ ಅಂದಾಜು 40 ಮನೆಗಳಿದ್ದು 150ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು ಎಂಜಿನಿಯರ್, ಪ್ರಥಮ ದರ್ಜೆ ಲೆಕ್ಕಾಧಿಕಾರಿಗಳು, ಕಾಮಗಾರಿ ವೀಕ್ಷಕರು ಸೇರಿದಂತೆ ಎಲ್ಲಾ ವರ್ಗದ ಅಧಿಕಾರಿ, ನೌಕರರು ಇದ್ದಾರೆ. ಅಲ್ಲದೆ ಯಗಚಿ 2 ನೇ ಅಭಿಯಂತರ ಕಚೇರಿ ಹಾಸನಕ್ಕೆ ಸ್ಥಳಾಂತರಗೊಂಡ ಹಿನ್ನಲೆಯಲ್ಲಿ ಖಾಲಿ ಉಳಿದ ಮನೆಗಳಿಗೆ ಶಿಕ್ಷಣ, ಅರಣ್ಯ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆಯ ನೌಕರರು ಅನುಮತಿ ಪಡೆದು ವಾಸ ಮಾಡುತ್ತಿದ್ದಾರೆ.
ನಿವಾಸಿಗಳ ನೋವು: ಮನೆಗೆ ಕೊಳಾಯಿ ಸಂಪರ್ಕವಿದ್ದರೂ ಅದರಲ್ಲಿ ನೀರು ವಾರಕ್ಕೆ 2 ದಿನ ಮಾತ್ರ ಬರುತ್ತಿದೆ. 2 ಕೊಡ ಸಿಕ್ಕರೆ ಅದೇ ಪುಣ್ಯ ಎನ್ನುವಂತಾಗಿದೆ. ಸಾರ್ವಜನಿಕ ಕೊಳಾಯಿಯಲ್ಲಿ 3 ದಿನಕ್ಕೊಮ್ಮೆ ನೀರು ಬರುತ್ತಿದ್ದು ಹಬ್ಬ - ಹರಿದಿನಗಳಲ್ಲಿ ನಮ್ಮ ಪಾಡು ಯಾರಿಗೂ ಬೇಡ ಅನ್ನುವಂತಾಗಿದೆ ಎಂದು ನಿವಾಸಿಗಳು ತಮ್ಮ ನೋವನ್ನು ಅಲವತ್ತುಕೊಂಡಿದ್ದಾರೆ.
ಈ ಮೊದಲು ಕ್ವಾಟ್ರಸ್ಗೆ ಪುರಸಭೆಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಅದರ ಖರ್ಚನ್ನು ಇಲಾಖೆ ಭರಿಸುತ್ತಿತ್ತು. ಆದರೆ, ಇತ್ತೀಚೆಗೆ ಸರಿಯಾಗಿ ಹಣವನ್ನು ಕಟ್ಟದ ಕಾರಣ ಪುರಸಭೆಯವರು ಪೈಪ್ ಲೈನ್ ತೆಗೆದು ನೀರು ಸರಬರಾಜು ಸ್ಥಗಿತಗೊಳಿಸಿದರು.
ಕ್ರಮಕೈಗೊಂಡಿಲ್ಲ: ನಂತರ, ಕ್ವಾಟ್ರಸ್ ಒಳಗೆ ಇರುವ ಯಗಚಿ ಕಾವೇರಿ ನಿಗಮ ಉಪ ವಿಭಾಗದವರು ನೀರು ಪೂರೈಸುವ ಹೊಣೆ ಹೊತ್ತರು. ಆದರೆ ಈವರೆಗೆ ಸಮರ್ಪಕವಾಗಿ ನೀರು ಪೂರೈಸದೇ ನಿವಾಸಿಗಳು ತಮ್ಮ ದಿನನಿತ್ಯದ ಕೆಲಸ ಕಾರ್ಯಬಿಟ್ಟು ಆಟೋದಲ್ಲಿ, ಬೈಸಿಕಲ್ನಲ್ಲಿ ನೀರು ತರಬೇಕಾಗಿದೆ. ಈ ಬಗ್ಗೆ ಎಂಜಿನಿಯರ್ ಅವರನ್ನು ಕೇಳಿದರೆ ಮೋಟಾರ್ ಕೆಟ್ಟುಹೋಗಿದೆ, ವಾಲ್ವ್ ಸರಿಯಿಲ್ಲ ಎನ್ನುವ ಸಿದ್ಧ ಉತ್ತರ ಬರುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ವಿನಾಯಕ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ದೂರಿದ್ದಾರೆ.
ಯಗಚಿ ಜಲಾಶಯದ ಬಹುತೇಕ ಕಾಮಗಾರಿ ಪೂರ್ಣಗೊಂಡಿರುವುದರಿಂದ ಇಲ್ಲಿನ ಕೆಲವು ಅಧಿಕಾರಿಗಳು ಬೇರೆಡೆ ನಿಯೋಜನೆಗೊಂಡಿದ್ದು ಬಹುತೇಕ ಮನೆಗಳು ಖಾಲಿಯಾಗಿವೆ. ಖಾಲಿ ಬಿದ್ದ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು ಹಲವು ಬಾರಿ ನಿವಾಸಿಗಳೇ ತರಾಟೆ ತೆಗೆದುಕೊಂಡು ಓಡಿಸಿದ್ದಾರೆ. ಅಲ್ಲದೇ, ರಾತ್ರಿ ವೇಳೆ ಕ್ವಾಟ್ರಸ್ನ ಒಳಗೆ ಬಂದು ಮದ್ಯ ಪಾನ ಮಾಡುವುದು, ಪರಸ್ಪರ ಹೊಡೆದಾಡುವುದು ಸರ್ವೇ ಸಾಮಾನ್ಯವಾಗಿದ್ದು ಅಭದ್ರತೆಯ ನೆರಳಲ್ಲೇ ಜನರು ಜೀವನ ದೂಡುವಂತಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

