ಹೆಣ್ಣು ತಮ್ಮವಳೆಂಬ ಭಾವನೆ ಬಂದಾಗ ಸಬಲೀಕರಣ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಜ.16
ಕೇವಲ ಸ್ಥಾನ- ಮಾನಗಳಲ್ಲಷ್ಟೇ ಹೆಣ್ಣಿಗೆ ಸಮಾನತೆ ದೊರೆತರೆ ಸಾಲದು, ಬದಲಿಗೆ ಹೆಣ್ಣು ಎಲ್ಲ ಹಂತದಲ್ಲಿಯೂ ತಮ್ಮವಳೆಂಬ ಉದಾತ್ತ ಭಾವನೆ ಎಲ್ಲರಲ್ಲೂ ಮೂಡಿದಾಗ ಮಾತ್ರವೇ ಹೆಣ್ಣಿನ ಸಬಲೀಕರಣ ಹಾಗೂ ಸಮಾನತೆಯ ಜೀವನ ದೊರಕಲು ಸಾಧ್ಯ ಎಂದು ಪಟ್ಟಣದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆರ್. ಸರೋಜಿನಿದೇವಿ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರೇಮ ಮಹಿಳಾ ಸಮಾಜ ಹಾಗೂ ಹಾಸನದ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಪಟ್ಟಣದ ಜೈನ ಬಸದಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ ಕೇವಲ ಕಾಯ್ದೆ-ಕಾನೂನಿನಂದಷ್ಟೇ ಜಾರಿಯಾದರೆ ಸಾಲದು, ಅದು ಎಲ್ಲರ ಮನದಲ್ಲೂ ಮೂಡಬೇಕಿದೆ ಎಂದು ಹೇಳಿದರು.
ಹೆಣ್ಣಿಗೆ ಸಮಾನತೆಯನ್ನು ನೀಡುವ ಕಾನೂನುಗಳು ಜಾರಿಗೊಂಡಿದ್ದರೂ ಕೂಡ, ಮನೆಯಲ್ಲಿಯೇ ಹೆಣ್ಣಿಗೆ ಸ್ವಾತಂತ್ರ್ಯ ಮತ್ತು ಸಬಲತೆ ಇಂದಿಗೂ ಸಮರ್ಪಕವಾಗಿ ದೊರಕುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ದೊರಕಿ ಆಕೆಯ ಸಬಲೀಕರಣ ಹೇಗೆ ಸಾಧ್ಯವಾಗುತ್ತದೆ ಎಂದ ಅವರು, ಸರ್ಕಾರ ಹೆಣ್ಣುಮಕ್ಕಳಿಗೆ ಶಿಕ್ಷಣದಲ್ಲಿ ಸಮಾನತೆಯ ಹಕ್ಕನ್ನು ನೀಡಿದ್ದರೂ, ಇಂದಿಗೂ ಶೇ.70ರಷ್ಟು ಮಹಿಳೆಯರು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ ಎಂದು ವಿಷಾದಿಸಿದರು.
ನೈತಿಕ ಸಮಾನತೆ ಬೇಕು: ಸಮಾನತೆ, ಸ್ವಂತ ನಿರ್ಧಾರ ಕೈಗೊಳ್ಳುವ ಅವಕಾಶ, ಆರ್ಥಿಕವಾಗಿ ಸಬಲಳಾಗಲು ಮುಕ್ತ ಅವಕಾಶ ಮೊದಲಾದ ಪುರುಷ ಪ್ರಧಾನ ತೀರ್ಮಾನಗಳನ್ನು ಹೆಣ್ಣಿಗೂ ನೀಡದಿದ್ದಲ್ಲಿ ಮಹಿಳೆಯ ಸಬಲೀಕರಣ ಸಾಧ್ಯವಾಗುವುದಿಲ್ಲ ಎಂದ ಅವರು, ಎಲ್ಲಾ ಕ್ಷೇತ್ರಗಳಲ್ಲಿಯೂ ತಾರತಮ್ಯವಿಲ್ಲದ ಸಾಮಾಜಿಕ, ಆರ್ಥಿಕ, ರಾಜಕೀಯ ಮೊದಲಾದ ನೈತಿಕ ಸಮಾನತೆಯನ್ನು ನೀಡುವುದೇ ನಿಜವಾದ ಸಬಲೀಕರಣ ಎಂದು ಅವರು ನುಡಿದರು.
ವಿಷಾದನೀಯ: ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಎಪಿಎಂಸಿ ಅಧ್ಯಕ್ಷ ಎಚ್.ಎಸ್. ಸುದರ್ಶನ್ ಮಾತನಾಡಿ, ಭೂಮಿಯಿಂದ ಬಾನಿನವರೆಗೂ ತನ್ನ ಆತ್ಮಸ್ಥೈರ್ಯ ಹಾಗೂ ಛಲದಿಂದ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಮಹಿಳೆಯು ಯಾವ ಹಂತದಲ್ಲಿಯೂ ಅಬಲೆಯಲ್ಲ ಎಂಬುದಕ್ಕೆ ನಿದರ್ಶನಗಳಿದ್ದು, ದಿನದಿಂದ ದಿನಕ್ಕೆ ಮಹಿಳೆ ಉನ್ನತಿಯತ್ತ ಸಾಗುತ್ತಿದ್ದರೂ, ಸಮಾನತೆಯನ್ನು ಆಡಳಿತಾತ್ಮಕವಾಗಿ ಮಹಿಳೆಗೆ ನೀಡಿದ್ದರೂ ದಿನದಿಂದ ದಿನಕ್ಕೆ ಮಹಿಳೆಯ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇರುವುದು ವಿಷಾದನೀಯ ಸಂಗತಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ವ್ಯವಸ್ಥಾಪಕ ಪುರುಷೋತ್ತಮ್, ತಾಲೂಕು ಜನಪದ ಪರಿಷತ್ತಿನ ಅಧ್ಯಕ್ಷ ಬಾ.ರಾ. ಸುಬ್ಬರಾಯ, ಜೈನ ಬಸದಿಯ ವ್ಯವಸ್ಥಾಪಕ ದಿಲೀಪ್ ಕುಮಾರ್ ಜೈನ್, ಪ್ರೇಮಾ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮ ಮಂಜುನಾಥ್ ಇದ್ದರು. ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಲಲಿತಾಬಾಯಿ ಅಧ್ಯಕ್ಷತೆ ವಹಿಸಿದ್ದರು. ಉಮೇಶ್ ನಿರೂಪಿಸಿದರು. ಲಕ್ಮೀನಾಗರಾಜ್ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

