ಅಪಘಾತದಿಂದ ವರ್ಷದಲ್ಲಿ 428 ಮಂದಿ ಸಾವು
ಕ.ಪ್ರ.ವಾರ್ತೆ , ಹಾಸನ , ಜ 17
ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ 1 ವರ್ಷದಲ್ಲಿ 428 ಮಂದಿ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ವಲಯ ಐಜಿಪಿ ರಾಮಚಂದ್ರರಾವ್ ಹೇಳಿದರು.
ಸಂಖ್ಯೆಯಲ್ಲಿ ಹೆಚ್ಚಳ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ವರ್ಷದಲ್ಲಿ ಅಪಘಾತದಿಂದ ಗಾಯಗೊಳ್ಳುತ್ತಿದ್ದಾರೆ. ದೇಶದಲ್ಲಿ ಪ್ರತಿವರ್ಷ 1.40 ಲಕ್ಷ ಮಂದಿ ಅಪಘಾತದಿಂದ ಸಾವನ್ನುಪ್ಪುತ್ತಿದ್ದು, 8 ಲಕ್ಷ ಕ್ಕೂ ಹೆಚ್ಚು ಮಂದಿ ಅಪಘಾತದಿಂದ ಗಾಯಗೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
ರಜೆ ದಿನಗಳಲ್ಲಿ ಅಪಘಾತ ಜಾಸ್ತಿ: ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಶೇ. 50ರಷ್ಟು ಅಪಘಾತಗಳು ದಕ್ಷಿಣ ಭಾರತದಲ್ಲಿ ನಡೆಯುತ್ತಿವೆ. ಏಪ್ರಿಲ್ ಮತ್ತು ಮೇ ನಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ತಿಂಗಳುಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಇರುವುದರಿಂದ ಹೊರ ಹೋಗುವವರ ಸಂಖ್ಯೆ ಹೆಚ್ಚಾಗುವುದರಿಂದ ಹೀಗೆ ಅಪಘಾತಗಳು ಹೆಚ್ಚಾಗಲು ಕಾರಣ ಎಂದರು.
70ರಷ್ಟು ಪ್ರಕರಣ ಪತ್ತೆ: ಜಿಲ್ಲೆಯಲ್ಲಿ ಲಾ ಅಂಡ್ ಆರ್ಡರ್ ಪ್ರಕರಣಗಳು ಕಡಿಮೆಯಾಗಿದೆ. ದರೋಡೆ, ಕಳ್ಳತನ, ಅಶಾಂತಿಯ ವಾತರಣಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 2013ರಲ್ಲಿ ಕಡಿಮೆಯಾಗಿದೆ. ಮೈಸೂರು ವಿಭಾಗದಲ್ಲಿ, ಹಾಸನ ಜಿಲ್ಲೆಯಲ್ಲಿ ಇಲಾಖೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 5 ಜಿಲ್ಲೆಗಳ ಪೈಕಿ ಹಾಸನದಲ್ಲಿ ಬಹಳಷ್ಟು ಪ್ರಮಾಣದ ಕಳವು ಪ್ರಕರಣ ನಡೆದಿದ್ದು, ಬಹಳ ವೇಗವಾಗಿ ಪತ್ತೆ ಹಚ್ಚಿ ದೊಡ್ಡ ಪ್ರಮಾಣದ ಹಣವನ್ನು ವಾಪಸ್ ವಾರಸುದಾದರಿಗೆ ನೀಡಲಾಗುತ್ತಿದೆ. ಶೇ. 70ರಷ್ಟು ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಇದು 5 ಜಿಲ್ಲೆಗಳಲ್ಲಿ ಇದು ಪ್ರಥಮವಾಗಿದೆ ಎಂದು ಹೇಳಿದರು.
ಕಿವಿಮಾತು: ಅಪಘಾತವಾದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪಘಾತಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಬೇಕು. ಜೊತೆಗೆ ಅವರಿಗೆ ವೈದ್ಯಕೀಯ ನೆರವನ್ನು ಒದಗಿಸುವ ಮೂಲಕ ಆಸ್ಪತ್ರೆಗೆ ದಾಖಲಿಸಬೇಕು. ಅಷ್ಟೇ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಪಾಡಿಗೆ ಸುಮ್ಮನಾಗದೆ ಸಂಕಷ್ಟದಲ್ಲಿ ಇರುವವರ ನೆರವಿಗೆ ಮುಂದಾಗಬೇಕು. ತಮ್ಮ ಕೈಯಲ್ಲಿ ಆಗುವಷ್ಟು ಸಹಾಯವನ್ನು ಅಪಘಾತಕ್ಕೀಡವರಿಗೆ ಮಾಡಬೇಕು ಎಂದು ಹೇಳಿದರು.
ಕಾರ್ಯ ಯೋಜನೆ ಸಿದ್ಧಪಡಿಸಿ: ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ರಸ್ತೆ ಅಪಘಾತದಿಂದಾಗಿ ಜಿಲ್ಲೆಯ ಜನರಲ್ಲಿ ಬೇಸರ ತಂದುಕೊಟ್ಟಿದೆ. 2014ನೇ ಸಾಲಿಗೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ರಸ್ತೆ ಅಪಘಾತಗಳು ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ಬಗ್ಗೆ ಪೂರ್ತಿ ಮಾಹಿತಿ ಪಡೆದುಕೊಳ್ಳಬೇಕು. ಆ ನಂತರ ಅದೇ ತರನಾದ ಅಪಘಾತಗಳು ಮತ್ತೆ ನಡೆಯದಂತೆ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, ನಿರಂತರ ರಸ್ತೆ ಅಪಘಾತಗಳಿಂದ ಪ್ರತಿ ಸಾರ್ವಜನಿಕರಲ್ಲಿ ರಸ್ತೆ ಸಂಚಾರ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಪ್ರತಿಯೊಂದನ್ನೂ ಇಲಾಖೆಯೇ ನಿರ್ವಹಿಸುವುದರಿಂದ ಸುರಕ್ಷತೆ ಸಂಪೂರ್ಣವಾಗಿ ಸಾಧ್ಯವಿಲ್ಲ. ಅಪಘಾತಗಳನ್ನು ತಡೆಯಬೇಕಾದ ಜವಾಬ್ದಾರಿ ಹಾಗೂ ಕಾನೂನುಗಳನ್ನು ಪಾಲನೆ ಮಾಡಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.
ಉಪನ್ಯಾಸಕ ಆರ್ಟಿಓ ಅಧಿಕಾರಿ ಕೇಶವ ಭರಣಿ ಮಾತನಾಡಿ, ಅಪಘಾತಗಳು ಕೇವಲ ದೇಶದಲ್ಲಿ ಅಲ್ಲ. ಅದು ಜಾಗತೀಕರಣದ ಸಮಸ್ಯೆಯಾಗಿ ಪರಿಣಮಿಸಿದೆ.
ವಿಶ್ವದಲ್ಲಿ ಪ್ರತಿ ವರ್ಷ 1 ಕೋಟಿಗೂ ಹೆಚ್ಚು ಜನ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕರು ಕುಡಿದು ವಾಹನ ಚಾಲನೆ ಮಾಡುವುದು, ಚಾಲನೆ ಸಂದರ್ಭದಲ್ಲಿ ಧೂಮಪಾನ ಮತ್ತು ಮೊಬೈಲ್ ಬಳಕೆ ಮಾಡುವುದರಿಂದ ಹೆಚ್ಚು ಅಪಘಾತ ಸಂಭವಿಸುತ್ತಿದೆ. ಆಟೋ ಚಾಲಕರು ಪ್ರಮುಖವಾಗಿ ಸಂಚಾರಿ ಕಾನೂನುಗಳನ್ನು ಪಾಲಿಸಬೇಕು ಹಾಗೂ ಸಾರ್ವಜನಿಕರೊಂದಿಗೆ ಸೌಹಾರ್ಧಯುತವಾಗಿ ವರ್ತಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಸ್ತೆ ಅಪಘಾತದ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನೀಡಲಾಯಿತು. ಜೊತೆಗೆ ಉತ್ತಮವಾಗಿ ಸೇವೆ ಮಾಡಿದ ನಾನಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ.ರಶ್ಮಿ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

