ಹಾಸನ

ಕಾರ್ಯಾಚರಣೆ ವೀಕ್ಷಿಸಿದ ಗ್ರಾಮಸ್ಥರು, ಶಾಸಕರು

Published On :

ಆಲೂರು: ಕಳೆದ 7 ದಿನಗಳ ಹಿಂದೆ ತಾಲೂಕಿನ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿನ ಮಾಗಡಿಹಳ್ಳಿ  ಬಳಿ ಕ್ಯಾಂಪ್ ನಿರ್ಮಿಸಿ, ನಾಗರಹೊಳೆ ಹಾಗೂ ಕೆ. ಗುಡಿ ಆನೆಧಾಮದಿಂದ 5 ಸಾಕಾನೆಗಳೊಂದಿಗೆ 30ಕ್ಕೂ ಹೆಚ್ಚು ಜನ ಮಾವುತರು, ಕಾವಾಡಿಗಳು, ಕಾಡುಕುರುಬರು ಸೇರಿದಂತೆ ಸಿಬ್ಬಂದಿ ವರ್ಗ ಕ್ಯಾಂಪಿನಲ್ಲಿ ಮೊಕ್ಕಾಂ ಹೂಡಿದ್ದರು.
ಅರವಳಿಕೆ ಚುಚ್ಚುಮದ್ದು ಹಾಗೂ ಗುರಿಕಾರರು ಹಾಗೂ ವೈದ್ಯರು ಇಲ್ಲಿಗೆ ಬರುವುದು ತಡವಾಗಿದ್ದರಿಂದ 5 ದಿನ ಆಪರೇಷನ್ ಮಾಗಡಿಹಳ್ಳಿಯನ್ನು  ಮುಂದೂಡಲಾಗಿತ್ತು.  
ಗುರುವಾರ ಬೆಳಗ್ಗೆ 10 ಗಂಟೆಯಲ್ಲಿ ಅರವಳಿಕೆಯ ಮುಚ್ಚುಮದ್ದಿನೊಂದಿಗೆ ವೈದ್ಯರು ಹಾಗೂ ಗುರಿಕಾರರು ಕ್ಯಾಂಪಿಗೆ ಆಗಮಿಸಿದರು. ಅವರು ಆಗಮಿಸಿದ 2 ಗಂಟೆ ಅವಧಿಯಲ್ಲಿ ಕಾಡಾನೆಯನ್ನು  ಸೆರೆ ಹಿಡಿಯಲಾಯಿತು. ಕ್ಯಾಂಪ್ ನಿರ್ಮಿಸಿದಾಗ 14 ಅಡಿಗೂ ಹೆಚ್ಚು ಎತ್ತರ ಇರುವ ಬಲಶಾಲಿಯಾದ ಒಂಟಿಸಲಗವನ್ನು ಹಿಡಿಯಲಾಗುವುದು ಎಂದು ಅರಣ್ಯಾಧಿಕಾರಿಗಳು ಜಿಲ್ಲಾಧಿಕಾರಿ ಅನ್ಬುಕುಮಾರ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಹಾಗೂ ಸುದ್ದಿ ಮಾಧ್ಯಮದವರಿಗೆ ತಿಳಿಸಿದ್ದರು.  
ಈ ಹಿನ್ನೆಲೆಯಲ್ಲಿ, ಕುತೂಹಲದಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಪರಿಸರಪ್ರಿಯರು ಸೇರಿದ್ದರು. ಇವರೊಂದಿಗೆ ಶಾಸಕ ಎಚ್.ಕೆ.ಕುಮಾರಸ್ವಾಮಿ ಸಹ ಸ್ಥಳದಲ್ಲೇ ಬೀಡುಬಿಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ನೂರಾರ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದವು.
ಕಾಡಾನೆಯನ್ನು ಅರಣ್ಯ ಸಿಬ್ಬಂದಿಗಳು ಸಾಕಾನೆಗಳೊಂದಿಗೆ  ಬಯಲು ಪ್ರದೇಶಕ್ಕೆ ಕರೆತಂದಾಗ ಹಿಡಿದ ಆನೆಯನ್ನು ಕಂಡು ಸೇರಿದ್ದ ಜನಸ್ತೋಮ ನಿರಾಸೆಗೊಳಗಾದರು. ಏಕೆಂದರೆ ಅವರು ಹಿಡಿದಿದ್ದು  14 ಅಡಿಗೂ ಹೆಚ್ಚಿನ ಬಲಶಾಲಿ ಒಂಟಿ ಸಲಗವಲ್ಲ,  8ಅಡಿಯ 16 ವರ್ಷದ ಚಿಕ್ಕದಾದ ಕೋರೆಗಳನ್ನು ಹೊಂದಿದ್ದ ಮರಿಯಾನೆಯನ್ನಾಗಿತ್ತು.
ಈ ಸಂದರ್ಭದಲ್ಲಿ ಜನರು  ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು  ಕೂಗಿದರು. ಕಳೆದ ಬಾರಿಯೂ ಇದೇ ರೀತಿ ದೊಡ್ಡ ಆನೆ ಹಿಡಿಯುವುದು ಬಿಟ್ಟು ಮರಿಯಾನೆಯನ್ನು  ಹಿಡಿದುಕೊಂಡು ರಾತ್ರೋತ್ರಿ ಕ್ಯಾಂಪ್ ಖಾಲಿ ಮಾಡಿದ್ದರು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಕ್ಯಾಂಪ್ ತೆರವುಗೊಳಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲ, ಬೇರೆ ಆನೆ: ಗುರುವಾರ ಹಿಡಿದ್ದ ಮರಿಯಾನೆ ಅರಣ್ಯ ಇಲಾಖೆಯವರು ಹೇಳುವಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ದಾಂಧಲೆ ನಡೆಸುತ್ತಿದ್ದು, ಪುರಭೈರವನಹಳ್ಳಿ ಗ್ರಾಮದಲ್ಲಿ ಮಹಿಳೆಯೋರ್ವಳನ್ನು ಬಲಿತೆಗೆದುಕೊಂಡ ಆನೆ ಇದೇ ಎಂಬುದಾಗಿತ್ತು. ಆದರೆ ಚಿಕ್ಕ ಆನೆಯನ್ನು ಹಿಡಿದಿದ್ದರ ಹಿಂದೆ ಸ್ವಾರಸ್ಯಕರ ವಿಷಯಮೊಂದು ಅಡಗಿದೆ.
ಕ್ಯಾಂಪ್‌ಗೆ ತಂದ ಅರ್ಜುನ, ಅಭಿಮನ್ಯು, ಬಲರಾಮ, ವಿಕ್ರಂ, ಪ್ರಶಾಂತ್ ಆನೆಗಳು ಗಂಡಾನೆಗಳಾಗಿದ್ದು, ಕ್ಯಾಂಪ್‌ಗೆ ತಂದ ದಿನದಿಂದಲೂ ಅವುಗಳಿಗೆ ಮದವೇರಿದ್ದರಿಂದ ಮಾವುತರು ಆನೆಗಳನ್ನು ನಿಯಂತ್ರಿಸುವಲ್ಲಿ ಪರದಾಡುತ್ತಿದ್ದುದು ಕ್ಯಾಂಪ್‌ಗೆ ಹೋದವರಿಗೆ ಕಾಣಸಿಕ್ಕಿತ್ತು.
ಈ 5 ಆನೆಗಳಲ್ಲಿ ಕಾಡಾನೆಯನ್ನು ಹಿಡಿಯುವಲ್ಲಿ ಸ್ವಲ್ಪ ಪ್ರತಿರೋಧ ತೋರುವ ಆನೆ ಎಂದರೆ ಅಭಿಮನ್ಯುವಾಗಿದ್ದು, ಅದರ ಮಾವುತ ತನ್ನ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು ಇನ್ನೊಂದು  ಪ್ರಶಾಂತ್ ಎಂಬ ಆನೆಯ ಮಾವುತ ಬಾರದೇ ಇರುವುದು ಸಹ ಕಾರಣವಾಗಿದೆ. ಏಕೆಂದರೆ ಗುರುತಿಸಿದ ಆನೆ ಕ್ಯಾಂಪಿಗೆ ಬಂದಿರುವ ಎಲ್ಲ ಆನೆಗಳಿಗಿಂತಲೂ ಅತ್ಯಂತ ಬಲಿಷ್ಠ ಆನೆಯಾಗಿದ್ದು, ಈ ಹಿಂದೆ ಸಕಲೇಶಪುರ ತಾಲೂಕಿನ ಕೆರೋಡಿ ಅರಣ್ಯ ಪ್ರದೇಶದಲ್ಲಿ  ಹಿಡಿದ ಮರಿಯಾನೆಯನ್ನು ಹಿಡಿದ ಸಂದರ್ಭದಲ್ಲಿ ಕಾಡಾನೆಯನ್ನು ಕಂಡು ಅಭಿಮನ್ಯುವನ್ನು ಹೊರತುಪಡಿಸಿ ಉಳಿದ ಆನೆಗಳು ಪೇರೆ ಕೀಳುತ್ತಿದ್ದವು.
ಅಪಾರ ಹಣ ವೆಚ್ಚ: ಈಗ ಹಿಡಿಯಲು ಉದ್ದೇಶಿಸಿದ್ದ ದೊಡ್ಡ ಒಂಟಿ ಸಲಗ ತಂದು ಹಿಡಿದು ನಿಯಂತ್ರಿಸಲು ಈಗ ಬಂದಿದ್ದ ಆನೆಗಳಿಂದ ಸಾಧ್ಯವೇ ಇರಲಿಲ್ಲ. ಈಗಾಗಲೇ ಒಂದು ವಾರ ಕಳೆದಿದ್ದರಿಂದ ಅಪಾರ ಹಣ ವೆಚ್ಚವಾಗಿ ಹೋಗಿತ್ತು.
ಕಾರ್ಯಾಚರಣೆ ವೇಳೆ, ಎರಡು ಮರಿಯಾನೆಗಳು ಸೇರಿದಂತೆ 2 ಹೆಣ್ಣಾನೆಗಳೊಂದಿಗೆ ನಾಗಾವರ ಅರಣ್ಯ ಪ್ರದೇಶದಲ್ಲಿ  ಬೀಡುಬಿಟ್ಟಿದ್ದ ಆನೆಗೆ ಹಿಂಬದಿಯಿಂದ ಗುರಿಕಾರ ವೆಂಕಟೇಶ್ ಅರವಳಿಕೆಯ ಮದ್ದು ನೀಡಿದ ಸಂದರ್ಭದಲ್ಲಿ ಆನೆ ಹಿಂತಿರುಗಿ ಕಾರ್ಯಾಚಾರಣೆಗೆ ಬಂದವರೇ ಮೇಲೆ ಎರಗಿ ಬಿತ್ತು. ಅವರನ್ನು ಅಟ್ಟಿಸಿಕೊಂಡು ಬರುವ ಸಂದರ್ಭದಲ್ಲಿ ವೈದ್ಯರು ಹಾಗೂ ಗುರಿಕಾರರು ಚೆಲ್ಲಾಪಿಲ್ಲಿಯಾಗಿ ನಾನಾ ದಿಕ್ಕುಗಳಲ್ಲಿ ಓಡಿ ಹೋದರೆ ಕಾವಾಡಿಗಳು ಮಾತ್ರ ಮರವೇರಿಬಿಟ್ಟರು. ಈ ಸಂದರ್ಭದಲ್ಲಿ ಕೂದಲೆಳೆ ಅಂತರದಲ್ಲಿ ಕಾರ್ಯಾಚರಣೆಗೆ ಬಂದವರು ಪಾರಾದರು.



-ಎಚ್.ವಿ.ರಾಘವೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.