ಮೊದಲ ಹಂತದ ಪಲ್ಸ್ ಪೊಲಿಯೋ ಯಶಸ್ಸಿಗೆ ಸಿದ್ಧತೆ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಜ. 17
ಪ್ರಸಕ್ತ ಸಾಲಿನಲ್ಲಿ ಜ. 18ರ ಭಾನುವಾರ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಮೊದಲ ಹಂತದ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕರಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್. ರಾಜೇಶ್ ಮನವಿ ಮಾಡಿದರು.
ವಾಹನಗಳನ್ನು ಕಳಿಸಿ: ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ತಾಲೂಕಿನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯು ಗ್ರಾಮೀಣ ಪ್ರದೇಶಗಳಲ್ಲಿ ಪೊಲಿಯೋ ಹನಿ ಹಾಕುವ ಕಾರ್ಯಕ್ರಮ ನಡೆಯಲಿದ್ದು, ಅಯಾ ಇಲಾಖೆಯ ಅಧಿಕಾರಿಗಳು ತಮ್ಮಲ್ಲಿರುವ ವಾಹನಗಳನ್ನು ದಿನಾಂಕ 18 ರಂದು ಶನಿವಾರ ಆರೋಗ್ಯ ಇಲಾಖೆಗೆ ಕಳುಹಿಸಿಕೊಡಬೇಕೆಂದು ಕೋರಿದರು.
ವಿಜಯೋತ್ಸವ ಆಚರಿಸಬೇಕು: ಪ್ರಸ್ತುತ ಕಳೆದ ಮೂರು ವರ್ಷಗಳಿಂದ ನಮ್ಮ ಭಾರತ ದೇಶದಲ್ಲಿ ಪೊಲಿಯೋಗೆ ಸಂಬಂಧಿಸಿದ ಯಾವೊಂದು ಪ್ರಕರಣ ದಾಖಲಾಗದೇ ಇರುವುದರಿಂದ ಪ್ರಸ್ತುತ ವಿಶ್ವಸಂಸ್ಥೆ ಭಾರತವನ್ನು ಪೊಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದ್ದು, ಸಂತಸದ ಸಂಗತಿ. ಆದ್ದರಿಂದ ನಾವುಗಳು ವಿಜಯೋತ್ಸವ ಆಚರಿಸಬೇಕಿದೆ ಎಂದು ಡಾ. ರಾಜೇಶ್ ಅಭಿಪ್ರಾಯಪಟ್ಟರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೋಟರಿ ಸಂಸ್ಥೆ ಅಧ್ಯಕ್ಷ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ.ಪುಟ್ಟೇಗೌಡ ಅವರು ಮಾತನಾಡಿ, ಕಳೆದ ಹದಿನೆಂಟು ವರ್ಷಗಳಿಂದ ಭಾರತ ದೇಶದಲ್ಲಿನ ಅನೇಕ ಸಂಘ ಸಂಸ್ಥೆಗಳು ಪೊಲಿಯೋ ವಿರುದ್ಧ ದೊಡ್ಡ ಸಮರವನ್ನು ಸಾರಿದ ಪರಿಣಾಮ ಇಂದು ಪೊಲಿಯೋ ಮುಕ್ತ ರಾಷ್ಟ್ರ ಎಂಬ ಘೋಷಣೆಗೆ ಕಾರಣವಾಗಿದೆ. ಆದರೆ ಇದೀಗ ವಿಶ್ವಸಂಸ್ಥೆ ಭಾರತವನ್ನು ಪೊಲಿಯೋ ಮುಕ್ತ ರಾಷ್ಟ್ರ ಎಂದು ಘೋಷಣೆ ಮಾಡಿದ್ದರು, ಪೋಲಿಯೊ ವಿರುದ್ದ ನಾವುಗಳು ನಡೆಸುತ್ತಿರುವ ಸಮರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ನೀಡಿದ ಅವರು, ನಮ್ಮ ಭಾರತ ರಾಷ್ಟ್ರದ ಅಕ್ಕಪಕ್ಕ ರಾಷ್ಟ್ರಗಳಲ್ಲಿ ಇಂದಿಗೂ ಪೊಲಿಯೋ ಪ್ರಕರಣಗಳು ಘಟಿಸುತ್ತಲೇ ಇವೆ. ಆದ್ದರಿಂದ ನಾವು ಮುಂದಿನ ವರ್ಷಗಳಲ್ಲಿಯೂ ಸಹ ಪೊಲಿಯೋ ವಿರುದ್ಧ ಸಮರವನ್ನು ಈ ಹಿಂದೆ ನಡೆಸಿದಂತೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕ್ರಮಕ್ಕೆ ಮನವಿ: ಈ ಸಭೆ ತಾಲೂಕು ಮಟ್ಟದ ಸಭೆ ಎಂದು ಕರೆದಿದ್ದರೂ ಸಹ ಈ ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಬಾರದ ಬಗ್ಗೆ ಸಭೆಯು ತೀವ್ರ ಅಸಮಾಧಾನ ವ್ಯಕ್ತಪಡಿಸಿತಲ್ಲದೇ, ಸಭೆಗೆ ಬಾರದೇ ಅಸಡ್ಡೆಯಿಂದ ನಡೆದುಕೊಂಡಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದರ ಜತೆಗೆ ಕ್ರಮಕೈಗೊಳ್ಳಲು ಮನವಿ ಮಾಡಲಾಗುವುದೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿರೇಸ್ತಾದಾರ್ ಚಿಕ್ಕೇಗೌಡ ತಿಳಿಸಿದರು.
ಡಿಸಿಗೆ ದೂರು: ಮೊದಲ ಹಂತದ ಪೊಲಿಯೋ ಕಾರ್ಯಕ್ರಮಕ್ಕೆ ವಾಹನಗಳನ್ನು ಕಳುಹಿಸುವ ವಿಚಾರದಲ್ಲಿ ಅನೇಕ ಇಲಾಖೆಗಳು ಬೇಜಾವಾಬ್ದಾರಿತನದಿಂದ ವರ್ತಿಸುತ್ತಿದ್ದು, ಕೆಲ ಇಲಾಖೆಗಳಲ್ಲಿನ ವಾಹನಗಳು ಓಡಾಟ ನಡೆಸುತ್ತಿದೆಯಾದರೂ ಸಹ ತಮ್ಮ ವಾಹನ ದುರಸ್ಥಿಯಲ್ಲಿದೆ ಎಂದು ಹೇಳಿಕೆ ನೀಡುತ್ತಿರುವುದು ಆಘಾತಕರ ಸುದ್ದಿಯಾಗಿದೆ. ಇಂತಹ ಹೊಣೆಗೇಡಿತನದಿಂದ ಉತ್ತರಿಸುವ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡುವ ಜತೆಗೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮನವಿ ಮಾಡಲಾಗುವುದು ಎಂದು ಚಿಕ್ಕೇಗೌಡ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

