ಇಂದು ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನೋಂದಣಿ
ಕ.ಪ್ರ.ವಾರ್ತೆ , ಹಾಸನ , ಜ. 18
ಪ್ರಾಣಿ ಹಿಂಸೆ ನಿವಾರಣಾ ಸಂಘ, ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆ, ಪಶು ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ಲಸಿಕೆ ಶಿಬಿರ ಮತ್ತು ಸಂತಾನಹರಣ ಸರ್ಜರಿಯ ನೋಂದಣಿ ಶಿಬಿರವನ್ನು ಜ. 19ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಗರದ ದೊಡ್ಡಿರಸ್ತೆಯ ಪಶು ಚಿಕಿತ್ಸಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಣಿ ಹಿಂಸಾ ನಿವಾರಣೆ ಸಂಘದ ಜಿಲ್ಲಾ ಸದಸ್ಯ ಡಾ. ಗುರುರಾಜ ಹೆಬ್ಬಾರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದಿನಾಯಿಗಳ ಹಾವಳಿಗೆ ಬರೀ ವ್ಯವಸ್ಥೆಯನ್ನು ದೂರಬಾರದು. ನಿಮ್ಮ ಬೀದಿಗೆ ನೀವೇ ಜವಾಬ್ದಾರರಾಗಿ ನಿಮ್ಮ ಮನೆಯ ಸುತ್ತಮುತ್ತಲಿನ ನಾಯಿಗಳಿಗೆ ರೇಬಿಸ್ ವ್ಯಾಕ್ಸಿನ್ ಹಾಗೂ ಸಂತಾನಹರಣ ಮಾತ್ರವೇ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಹೇಳಿದರು.
ಶಸ್ತ್ರಚಿಕಿತ್ಸೆ ವಿವರ: ರೇಬಿಸ್ ಲಸಿಕೆಯನ್ನು 3 ತಿಂಗಳು ದಾಟಿದ ಎಲ್ಲಾ ನಾಯಿಗಳಿಗೆ ಉಚಿತವಾಗಿ ನೀಡಲಾಗುವುದು. ಉಚಿತ ಸಂತಾನಹರಣ ಶಸ್ತ್ರಚಿಕಿತ್ಸೆಯು ಭಾರತೀಯ ಸಾಕಿದ ಅಥವಾ ಬೀದಿನಾಯಿಗಳಿಗೆ ಮಾತ್ರ ನಡೆಸಲಾಗುವುದು. ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನು ನೋಂದಣಿಯಾದ ನಂತರ ನೀಡಿದ ದಿನಾಂಕದಂದು ಚಿಕ್ಕಹೊನ್ನೇನಹಳ್ಳಿಯ ವಿಜಯ ಸ್ಕೂಲ್ ಹಿಂಭಾಗ ಇರುವ ಪಶು ವೈದ್ಯಕೀಯ ಕಾಲೇಜಿನಲ್ಲಿ ಮಾಡಲಾಗುವುದು ಎಂದು ಹೇಳಿದರು.
ಸೂಕ್ತ ನೆರವು: ನಾಯಿಗಳ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಇಚ್ಛಿಸುವ ಸಾರ್ವಜನಿಕರು ತಮ್ಮ ಪಂಚಾಯ್ತಿ ಅಥವಾ ನಗರಸಭೆ ಸದಸ್ಯರ ಮೂಲಕ ನಮ್ಮನ್ನು ಸಂಪರ್ಕಿಸಿದರೆ ಸೂಕ್ತ ನೆರವು ನೀಡಲಾಗುವುದು ಎಂದು ಹೇಳಿದರು.
ನಾಯಿ ಕಾಟವಿಲ್ಲ: ಈ ಶಸ್ತ್ರ ಚಿಕಿತ್ಸೆಯಿಂದ ನಾಯಿಗಳ ಸಿಟ್ಟು ಕಡಿಮೆಯಾಗಲಿದೆ. ಸಾರ್ವಜನಿಕರಿಗೆ ನಾಯಿ ಕಡಿತದ ಪ್ರಕರಣಗಳಲ್ಲಿ ಇಳಿಮುಖವಾಗಲಿದೆ. ನಾಯಿಗಳು ಬೆದೆಗೆ ಬರುವುದಿಲ್ಲ. ಹಾಗಾಗಿ ನಾಯಿಗಳು ಗುಂಪಾಗಿ ಕಚ್ಚಾಡುವುದು ಕಡಿಮೆಯಾಗುತ್ತದೆ. ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಸಾಮೂಹಿಕವಾಗಿ ನಾಯಿಗಳನ್ನೆಲ್ಲಾ ಹತ್ಯೆ ಮಾಡುವುದರಿಂದ ಶಾಶ್ವತವಾಗಿ ಬೀದಿನಾಯಿಗಳ ಸಮಸ್ಯೆ ನೀಗುವುದಿಲ್ಲ. ವಿಶ್ವದಾದ್ಯಂತ ನಡೆಸಿರುವ ಅನೇಕ ಸಂಶೋಧನೆಗಳು ಇದನ್ನು ಸಂಪೂರ್ಣ ತಪ್ಪು ತಿಳಿವಳಿಕೆ ಎಂದು ರುಜುವಾತುಪಡಿಸಿವೆ.
ನಾಯಿಗಳ ಸಾಮೂಹಿಕ ಹತ್ಯೆಯಿಂದ ಆಗುವ ನಾಯಿಗಳ ಸಂಖ್ಯೆಯು ನಿಯಂತ್ರಣ ಕ್ಷಣಿಕವಾದುದು. ಒಂದು ಪ್ರದೇಶದಲ್ಲಿ ಕೊಲ್ಲಲ್ಪಟ್ಟ ನಾಯಿಗಳ ಸ್ಥಾನವನ್ನು ಹೊರಗಿನಿಂದ ಬಂದ ನಾಯಿಗಳು ಶೀಘ್ರವಾಗಿ ಆಕ್ರಮಿಸುತ್ತವೆ ಹಾಗೂ ಆ ಹೊಸ ನಾಯಿಗಳ ನಡುವೆ ಕ್ಷೇತ್ರ ಪ್ರಾಬಲ್ಯಕ್ಕೋಸ್ಕರ ನಡೆಯುವ ಕಚ್ಚಾಟ, ಹೋರಾಟದಿಂದ (ನಾಟಿಗಳ ನಡುವೆ ಹಾಗೂ ಜನ) ನಾಯಿ ಕಡಿತದ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಾಗಾಗಿ ನಾಯಿಗಳ ಸಾಮೂಹಿಕ ಹತ್ಯೆ ಸಮರ್ಥನೀಯವಲ್ಲ ಎಂದು ಹೇಳಿದರು. ಧ್ಯೇಯ: ಎಲ್ಲಾ ಪ್ರಾಣಿಗಳಿಗೂ ಈ ಭೂಮಿಯಲ್ಲಿ ಜೀವಿಸಲು ಮನುಷ್ಯನಷ್ಟೇ ಹಕ್ಕಿದೆ. ಆದರೆ ಮನುಷ್ಯ ಪ್ರಾಬಲ್ಯದ ಈ ಸಮಾಜದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷವನ್ನು ಕಡಿಮೆ ಮಾಡಿ ಸಾಮರಸ್ಯಪೂರಿತ ಸಮಾಜಕ್ಕಾಗಿ ಶ್ರಮಿಸುವುದೇ ನಮ್ಮ ಧ್ಯೇಯ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

