ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ
ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಸಮೀಪದ ಗುತ್ತಿನಕೆರೆ ಶ್ರೀ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಶುಕ್ರವಾರ ಶುಭಲಗ್ನದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ಕಳೆದ 5 ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಾಡಿನ ನಾನಾ ಭಾಗಗಳಿಂದ ಸಾವಿರಾರು ಜನರು ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ವಿಶೇಷ ಪೂಜೆ: ರಥೋತ್ಸವದ ಅಂಗವಾಗಿ ಗುತ್ತಿನಕೆರೆ ಗ್ರಾಮ ಹಸಿರು ತೋರಣಗಳಿಂದ ನವ ವಧುವಿನಂತೆ ಶೃಂಗಾರಗೊಂಡಿತ್ತು. ಶ್ರೀ ಸ್ವಾಮಿಯವರಿಗೆ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಮೂಡಲಗಿರಿ ತಿಮ್ಮಪ್ಪಸ್ವಾಮಿ, ಯಳವಾರೆ ಹುಚ್ಚಮ್ಮದೇವಿ. ಹಾರ್ನಳ್ಳಿ ಕೋಡಮ್ಮದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವರ ಸಮ್ಮುಖದಲ್ಲಿ ಶ್ರೀ ರಂಗನಾಥಸ್ವಾಮಿ ಅವರನ್ನು ಮೆರವಣಿಗೆಯಲ್ಲಿ ಕರೆತಂದು ರಥಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಥೋತ್ಸವ: ನಂತರ ಬಣ್ಣ ಬಣ್ಣದ ಬಟ್ಟೆಗಳಿಂದ, ವಿಶೇಷ ಹೂಗಳಿಂದ ಶೃಂಗರಿಸಲಾಗಿದ್ದ ರಥದಲ್ಲಿ ಕುಳ್ಳಿರಿಸಲಾಯಿತು. ಶಾಸ್ತ್ರೋಕ್ತವಿಧಿ ವಿಧಾನಗಳು ಪೂರೈಸಿದ ನಂತರ ಭಕ್ತಾಧಿಗಳು ರಥದ ಗಾಲಿಗೆ ಸಾವಿರಾರು ತೆಂಗಿನಕಾಯಿಗಳನ್ನು ಹೊಡೆಯುವ ಮೂಲಕ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಶ್ರೀರಂಗ ಶ್ರೀರಂಗ ನಾಮಸ್ಮರಣೆಯೊಂದಿಗೆ ರಥದ ಹಗ್ಗವನ್ನು ಎಳೆಯುತ್ತಿದ್ದಂತೆ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ದವನ, ತೂರುವ ಮೂಲಕ ಭಕ್ತಿ ಸಮರ್ಪಿಸಿದರು.
ಉಯ್ಯಾಲೆ ಉತ್ಸವ: ರಥೋತ್ಸವದ ಅಂಗವಾಗಿ ಭಕ್ತಾಧಿಗಳಿಗೆ, ಪಾನಕ ಫಲಹಾರ ನೀಡಲಾಯಿತು. ನಂತರ ವಸಂತೋತ್ಸವ ಮತ್ತು ಮಣೇವು ಸೇವೆ, ಮಹಾಮಂಗಳಾರತಿ ನೆರವೇರಿದವು. ಸಂಜೆ ಗಂಗಾಸ್ನಾನದ ನಂತರ ಶ್ರೀಯವರಿಗೆ ಉಯ್ಯಾಲೆ ಉತ್ಸವವನ್ನು ಏರ್ಪಡಿಸಲಾಗಿತ್ತು.
ಜಾತ್ರಾ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ, ಹಬ್ಬನಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಾ ರಘು, ಕಂದಾಯ ಇಲಾಖೆಯ ಪರವಾಗಿ ಗ್ರಾಮ ಲೆಕ್ಕಾಧಿಕಾರಿ ಬಾಲಕೃಷ್ಣ ಹಾಗೂ ಗುತ್ತಿನಕೆರೆ ಜಾತ್ರಾ ಮಹೋತ್ಸವದ ವ್ಯವಸ್ಥಾಪನಾ ಸಮಿತಿ ಸದಸ್ಯರು ಇದ್ದರು.
ಕಳ್ಳರ ಕೈಚಳಕ: ಜಾತ್ರೆಗೆ ಆಗಮಿಸಿದ್ದ ಭಾರಿ ಭಕ್ತರ ಸಮೂಹದ ನಡುವೆ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದು ನಾಲ್ಕು ಮಹಿಳೆಯರ ಮಾಂಗಲ್ಯ ಸರ ಅಪಹರಣವಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

