ಅಕ್ರಮ ಮರಳುಗಾರಿಕೆ ತಡೆಗಟ್ಟಲು ಕಾನೂನು: ಎಚ್.ಸಿ.ಮಹದೇವಪ್ಪ
ಕ.ಪ್ರ.ವಾರ್ತೆ ಹಾಸನ ಜ 26
ಅಕ್ರಮ ಮರಳುಗಾರಿಕೆ ತಡೆಗಟ್ಟಲು ಹೊಸ ಕಾನೂನು ಜಾರಿಗೆ ತಂದಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಮರಳು ತೆಗೆಯುವ ಮತ್ತು ಸಾಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕಾನೂನಿನಿಂದ ಅಕ್ರಮ ಮರಳುಗಾರಿಕೆ ತಡೆಗಟ್ಟಬಹುದು. ಅಲ್ಲದೆ ಅಕ್ರಮ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ 25 ಸಾವಿರ ದಂಡ ಹಾಗೂ 2 ವರ್ಷಗಳ ಕಾಲ ಜೈಲುವಾಸದಂಥ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿರುವಷ್ಟು ಮಾತ್ರ ಮರಳನ್ನು ತೆಗೆಯಬೇಕಾಗಿದ್ದು, ಈಗಾಗಲೇ ಮರಳು ನಿಕ್ಷೇಪಗಳನ್ನು ಸಿದ್ಧಪಡಿಸಲಾಗಿದೆ. ಪರಿಸರಕ್ಕೆ ಧಕ್ಕೆ ಬಾರದಂತೆ ಮರಳು ತೆಗೆಯಲಾಗುತ್ತದೆ ಎಂದರು.
ಶಿರಾಡಿಗೆ 95 ಕೋಟಿ: ಶಿರಾಡಿ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ 95 ಕೋಟಿ ನೀಡಿದ್ದು, ಈಗಾಗಲೇ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. 18 ತಿಂಗಳಿನಲ್ಲಿ ಕಾಂಕ್ರಿಟ್ ರಸ್ತೆ ಸೇರಿದಂತೆ ಹಂತ ಹಂತವಾಗಿ ರಸ್ತೆ ಕಾಮಗಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯ ಸರ್ಕಾರವು ರಸ್ತೆಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ ಎಂದರು. ಹಳೇಬೀಡಿನಿಂದ ಬೆಟ್ಟದಪುರದವರೆಗೆ 86 ಕಿ.ಮೀ. ಉದ್ದದ ರಸ್ತೆಯನ್ನು 91 ಕೋಟಿ ಅಂದಾಜಿನೊಂದಿಗೆ ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಪ್ರಸಕ್ತ ಸಾಲಿನ ಅಯವ್ಯಯದಲ್ಲಿ ಅನುಮೋದನೆ ಪಡೆದುಕೊಳ್ಳುವ ಹಂತದಲ್ಲಿದೆ. ಇದರೊಂದಿಗೆ 63 ಕೋಟಿ ಅಂದಾಜು ವೆಚ್ಚದಲ್ಲಿ ಜಿಲ್ಲೆಯ 60 ಮುಖ್ಯ ರಸ್ತೆಗಳ 237.97 ಕಿ.ಮೀ.ನಷ್ಟು ಉದ್ದ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಅನುಮೋದನೆಯ ಹಂತದಲ್ಲಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 2500 ಕೋಟಿ ರಸ್ತೆ ಅಭಿವೃದ್ಧಿ ಪಡಿಯುವ ಪ್ರಸ್ತಾವನೆ ಅನುಮೋದನೆ ಹಂತದಲ್ಲಿದೆ ಎಂದರು.
ಹಾಸನ-ದುದ್ದ ರಸ್ತೆ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ. ಹಿಂದಿನ ಗುತ್ತಿಗೆದಾರರೆ ಕಾಮಗಾರಿಯನ್ನು ನಡೆಸುತ್ತಿದ್ದು ಪೂರ್ಣಗೊಳಿಸಲಿದ್ದಾರೆ ಎಂದರು.
ಜೀತಮುಕ್ತರಿಗೆ ಪುನರ್ವಸತಿ: ಜಿಲ್ಲೆಯಲ್ಲಿ ಜೀತ ಪದ್ಧತಿಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಂಥ ಪದ್ಧತಿ ನಡೆಯುತ್ತಿದ್ದರೆ ಮತ್ತು ನಡೆಸುತ್ತಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಳು ಜಿಲ್ಲಾಡಳಿತಕ್ಕೆ ಸೂಚಿಸಲಾಗುತ್ತದೆ. ಜೊತೆಗೆ ಜೀತಮುಕ್ತರಿಗೆ ಪುನರ್ವಸತಿ ಕೇಂದ್ರಗಳನ್ನು ಒದಗಿಸಲೂ ಕ್ರಮ ಕೈಗೂಳ್ಳಲಾಗುತ್ತದೆ. ಎಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೋ ಅಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಜಮೀನು ವಿವಾದಕ್ಕೆ ಸಂಬಂಧಿಸಂದೆ ಪ್ರತಿಕ್ರಿಯಿಸಿದ ಸಚಿವರು, ಅಲ್ಲಿ ಚತುಷ್ಪಥ ರಸ್ತೆಯ ಅಗತ್ಯವಿದೆ ಎಂಬುದನ್ನು ಅರಿತು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ಕಾಮಗಾರಿಯನ್ನು ನಡೆಸಲಾಗುವುದಿಲ್ಲ. ಜತೆಗೆ ರೈತರಿಗೆ ಪರಿಹಾರ ನೀಡಲೂ ನ್ಯಾಯಾಲಯವೇ ಆದೇಶಿಸಬೇಕೆಂದರು.
ಹೊಯ್ಸಳ ಉತ್ಸವ ನಡೆಸುವ ಬಗ್ಗೆ ನಾನು ಮತ್ತು ಮುಖ್ಯಮಂತ್ರಿ ತಿಳಿಸಿದ್ದೆವು. ಆದರೆ ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಇಂಥ ಉತ್ಸವ ನಡೆಸುವುದು ಸರಿಯಲ್ಲವೆಂದು ಮುಂದೂಡಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

