ಅಪಹರಣಕಾರರ ಬಂಧನ
ಹಾಸನ: ಮೂವರು ಅಪಹರಣಕಾರರನ್ನು ಬಡಾವಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಗಳಾದ ಮಹಂತೇಶ್, ಸಂಜೀವ್ ಹಾಗೂ ಶಂಕರ್ ಎಂಬವನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪ ಮೃತ್ಯಂಜಯ ತಲೆಮರಿಸಿಕೊಂಡಿದ್ದಾನೆ. ಹಾಸನದ ಹೇಮಾವತಿ ನಗರದ ನಿವಾಸಿ ಎಂ.ಎಸ್.ಹರೀಶ್ ಎಂಬವರನ್ನು ನಗರದ ಹೊಸ ಬಸ್ಸು ನಿಲ್ದಾಣದಿಂದ ಸ್ಕೂಟರ್ನಲ್ಲಿ ಸಂತ ಫಿಲೋಮಿನ ಶಾಲೆ ಮುಂಭಾಗ ಜೂ.30ರಂದು ಸೋಮವಾರ ಬರುವಾಗ ಈ ನಾಲ್ವರು ಆರೋಪಿಗಳು ಕಾರಿನಲ್ಲಿ ಬಂದು ಅಪಹರಿಸಿದ್ದರು. ನಂತರ ಅಪಹರಣಕಾರರು ಕಡೂರಿನಲ್ಲಿ ಹೊಟೇಲ್ ಮುಂದೆ ಕಾರನ್ನು ನಿಲ್ಲಿಸಿದ ಸಂದರ್ಭದಲ್ಲಿ ಹರೀಶ್ ಕಿರಿಚಿಕೊಂಡಿದ್ದಾರೆ. ಆಗ ಸುತ್ತಮುತ್ತಲಿದ್ದ ಜನರು ಕಾರಿನ ಬಳಿ ಬಂದು ಅವರನ್ನು ರಕ್ಷಿಸಿ ಅಹರಣಕಾರರಾದ ಮಹಂತೇಶ್, ಸಂಜೀವ್ ಹಾಗೂ ಶಂಕರ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಗ ಮೃತ್ಯಂಜಯ ತಪ್ಪಿಸಿಕೊಂಡಿದ್ದಾನೆ. ಅಪಹರಣಕಾರರು ಹರೀಶ್ ಬಿಡುಗಡೆಗೆ 3 ಲಕ್ಷ ರು.ಗಳನ್ನು ನೀಡುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
'ಕೀರ್ತಿ ತರುವ ವಿದ್ಯಾರ್ಥಿಗಳಾಗಿ'
ನುಗ್ಗೇಹಳ್ಳಿ: ಸ್ಪರ್ಧಾ ಮನೋಭಾವದಿಂದ ಶ್ರದ್ಧೆ ವಹಿಸಿ ಓದಿ ತಂದೆ ತಾಯಿ ಗುರುಗಳಿಗೆ ಕೀರ್ತಿ ತರುವ ವಿದ್ಯಾರ್ಥಿಗಳಾಗಬೆಕು ಎಂದು ಗೆಳೆಯರ ಬಳಗದ ಅಧ್ಯಕ್ಷ ನಿವೃತ್ತ ಎಸ್.ಪಿ. ಸಿದ್ದಲಿಂಗೇಗೌಡ ತಿಳಿಸಿದರು. ನುಗ್ಗೇಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಗೆಳೆಯರ ಬಳಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂದರು. ಗೆಳೆಯರ ಬಳಗದ ಕಾರ್ಯದರ್ಶಿ ಹೊನ್ನಮಾರನಹಳ್ಳಿ ಕುಮಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಎನ್ ಎಸ್ ದೀಪ್ತಿ, ಎನ್.ಡಿ. ಸುಮಂತ್ ದೊರೆ, ಅಮೃತ ಎಸ್.ವಿ, ಅವರನ್ನು ನಗದು ಹಣ ನೀಡಿ ಗೌರವಿಸಲಾಯಿತು. ಮುಖ್ಯ ಶಿಕ್ಷಕ ಕೃಷ್ಣ ನಾರಾಯಣ್ ಕವಿತಾ ಪುಷ್ಪ ಲತಾ ಇದ್ದರು.
ವಿಶ್ವಾಸ ಗಳಿಸಿದ ರೋಟರಿ ಸಂಸ್ಥೆ
ಅರಸೀಕೆರೆ: ಸಮಾಜಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸುವುದಲ್ಲದೆ ಅನುಷ್ಠಾನಕ್ಕೆ ತರುವ ಮೂಲಕ ಸರ್ಕಾರಗಳಿಂದಲೂ ತಲುಪಲು ಸಾಧ್ಯವಾಗದ ಕುಗ್ರಾಮಗಳನ್ನು ತಲುಪಿ ಸೇವಾಕಾರ್ಯ ಮಾಡುವ ಮೂಲಕ ಜನತೆಯ ವಿಶ್ವಾಸಗಳಿಸುವಲ್ಲಿ ರೋಟರಿ ಸಂಸ್ಥೆ ಯಶಸ್ವಿಯಾಗಿದೆ ಎಂದು ರೋಟರಿ ಮಾಜಿ ರಾಜ್ಯಪಾಲ ಎಎಸ್ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು. ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸ್ಥಳೀಯ ರೋಟರಿ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ನೂತನ ಅಧ್ಯಕ್ಷ ಬಿಎಂ. ಮೋಹನ್, ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

