ಹಾಸನ

ಭೂ ದುರ್ಬಳಕೆಯಿಂದ ಜೀವ ಸಂಕುಲ ನಾಶ

Published On :

ವಸುಂಧರೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದ್ದೂ: ಶಿವರಾಂ    ಅವಸಾನದತ್ತ ಜೀವ ಸಂಕುಲ, ಪ್ಲಾಸ್ಟಿಕ್ ಬಳಕೆಯಿಂದ ಹಾನಿ

ಕನ್ನಡಪ್ರಭ ವಾರ್ತೆ    ಹಾಸನ    ಜು.1
ಜೀವಸಂಕುಲಗಳ ಉಗಮ ಮತ್ತು ಜೀವಿಸಲು ಸೌರವ್ಯೂಹದ ಏಕಮಾತ್ರ ವಾಸಸ್ಥಾನ ಭೂಮಿಯಾಗಿದೆ. ಮನುಜನ ಅನಾಗರಿಕ ವರ್ತನೆಯಿಂದ ವಸುಂಧರೆ ಸ್ಯಾಸ್ಥ್ಯ  ಕಳೆದುಕೊಳ್ಳುತ್ತಿದ್ದಾಳೆ. ಮುಂದೊಂದು ದಿನ ಇಡೀ ಭೂಮಿಯ ಮೇಲಿರುವ ಜೀವ ಸಂಕುಲಗಳೇ ನಾಶವಾಗುತ್ತವೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಆರ್. ಶಿವರಾಮ್ ಆತಂಕ ವ್ಯಕ್ತ ಪಡಿಸಿದರು.
ಇತ್ತೀಚೆಗೆ ಹಳೆ ಆಲೂರು ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಹಾನಿ: ಬಳಕೆಯಾದ ಜೈವಿಕ ಮತ್ತು ಅಜೈವಿಕ ವಸ್ತುಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳೊಂದಿಗೆ ಬಿಸಾಡುತ್ತಿದ್ದಾರೆ. ಆ ತ್ಯಾಜ್ಯಗಳನ್ನು ನಗರದ ಹೊರವಲಯಗಳಲ್ಲಿ ಎಸೆಯಲಾಗುತ್ತಿದೆ. ಅವುಗಳು ನಿಯಮಿತ ಅವಧಿಯಲ್ಲಿ ಕೊಳೆಯದೆ ಸುತ್ತಮುತ್ತಲಿನ ಪರಿಸರವನ್ನು ಹಾಳುಗೆಡುವುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಾಗತಿಕ ಸಂಪ್ರದಾಯಿಕ ಇಂಧನಗಳು ಮುಂಬರುವ 30ವರ್ಷಗಳಲ್ಲಿ ಖಾಲಿಯಾಗಲಿವೆ. ಪರ್ಯಾಯವಾಗಿ ಸೌರಶಕ್ತಿ, ಪವನಶಕ್ತಿ, ಜೈವಿಕ ಇಂಧನಗಳ ಸಂಶೋಧನೆ ಮತ್ತು ಬಳಕೆಯನ್ನು ಹೆಚ್ಚು ಮಾಡುವುದರಿಂದ ಪರಿಸರ ಉಳಿವಿಗೆ ಪೂರಕ ಎಂದು ಹೇಳಿದರು.
ಸ್ವಾರ್ಥ: ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಮುಖ್ಯ ಶಿಕ್ಷಕ ಸಗನಯ್ಯ  ಮಾತನಾಡಿ, ಈ ಧರೆ ಮನುಜನ ಎಲ್ಲಾ ಬಯಕೆಗಳನ್ನು ಈಡೇರಿಸುತ್ತದೆ ಆದರೆ ಸ್ವಾರ್ಥಗಳನ್ನಲ್ಲ ಎಂದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಜಂಟಿ ಕಾರ್ಯದರ್ಶಿ ಅಣ್ಣಪ್ಪ ಮಾತನಾಡಿ, ಸಮಿತಿಯು ರಾಷ್ಟ್ರಮಟ್ಟದಲ್ಲಿ ಜನಸಾಮಾನ್ಯರಿಗೆ ವಿಜ್ಞಾನದ ಬಗ್ಗೆ ತಿಳಿವಳಿಕೆ ನೀಡುತ್ತಿರುವುದರೊಂದಿಗೆ ಪರಿಸರದ ಬಗ್ಗೆಯೂ ಕಾಳಜಿ ಮೂಡಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಇಪ್ಪತ್ತಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಶಾಲೆಯ ಮುಖ್ಯಸ್ಥರು ವಹಿಸಿಕೊಂಡರು.
ಸಮಿತಿಯ ತಾಲೂಕು ಕಾರ್ಯದರ್ಶಿ ಕೆ.ಎಲ್. ಪುರುಷೋತ್ತಮ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವರದರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಪಿ. ನಾಗರಾಜ್, ಬಿಜಿವಿಎಸ್ ತಾಲೂಕು ಗೌರವ ಅಧ್ಯಕ್ಷ ಬಿ.ಆರ್. ಧರ್ಮ, ಶಿಕ್ಷಕರಾದ ವೇಣು, ಪೂರ್ಣಿಮ, ರೇಣುಕಾ ಉಪಸ್ಥಿತರಿದ್ದರು. ಶಿಕ್ಷಕಿ ರೇಷ್ಮಾ ಸ್ವಾಗತಿಸಿ, ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.