ಆಲೂರು ಗ್ರಾಪಂ ಕಚೇರಿ ಮುಂದೆ ಕಸ ಸುರಿದರು
ಆಲೂರು: ಗ್ರಾಮ ಪಂಚಾಯ್ತಿಯವರು ಕಸವಿಲೇವಾರಿ ಮಾಡದಿದ್ದರಿಂದ ರೊಚ್ಚಿಗೆದ್ದ ಹುಣಸುವಳ್ಳಿ ಗ್ರಾಮಸ್ಥರು ಶನಿವಾರ ಗ್ರಾಮ ಪಂಚಾಯ್ತಿ ಕಚೇರಿಯ ಮುಂಭಾಗ ಕಸ ಸುರಿದು ಕಚೇರಿಗೆ ಬೀಗ ಹಾಕಿ ಗ್ರಾಮ ಸಭೆ ನಡೆಯಲು ಬಿಡದೆ ಪ್ರತಿಭಟನೆ ನಡೆಸಿದರು.
ಪಿಡಿಒ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಹುಣಸವಳ್ಳಿ ಸೇರಿದಂತೆ ಈ ಪಂಚಾಯ್ತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲೂ ಸಮಸ್ಯೆಗಳು ತಾಂಡವವಾಡುತ್ತಿವೆ.
ಚರಂಡಿಗಳು ತುಂಬಿ ದುರ್ನಾತ ಬೀರುತ್ತಿದ್ದು ಶಾಲೆ, ಅಂಗನವಾಡಿಯ ಕುಡಿಯುವ ನೀರಿನ ಟ್ಯಾಂಕ್ನ ಸುತ್ತಮುತ್ತ ಗಿಡಗಂಟೆಗಳು ಬೆಳೆದು ವಿಷಜಂತುಗಳು ವಾಸಿಸುವ ತಾಣಗಳಾಗಿವೆ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ದುರ್ನಾತ ಬೀರುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವಂತಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಈ ಸಂಬಂಧವಾಗಿ ಹಲವಾರು ಬಾರಿ ಪಿಡಿಒ ರವರಿಗೆ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ ಅವರು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಗ್ರಾಮದ ಚರಂಡಿಯಲ್ಲಿನ ಕಸ ತೆಗೆದು 15 ದಿನಗಳಾದರೂ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಅಕ್ಕ ಪಕ್ಕದ ಮನೆಯವರು ಬಡಿದಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ಎಂದು ಆರೋಪಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಪರಿಶೋಧನ ಗ್ರಾಮ ಸಭೆ ಉಸ್ತುವಾರಿ ಅಧಿಕಾರಿಯಾಗಿ ಆಗಮಿಸಿದ್ದ ಬಿಇಒ ಪುಷ್ಪಲತ ಮಾತನಾಡಿ, ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗ್ರಾಮ ಸಭೆ ನಡೆಯಲು ಬಿಡದ ಕಾರಣ ಸಭೆಯನ್ನು ರದ್ದುಗೊಳಿಸಿ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.
ವಿಲೇವಾರಿ ಸಾಧ್ಯವಾಗಿಲ್ಲ: ಈ ಸಂಬಂಧವಾಗಿ ಸ್ಥಳೀಯ ಸದಸ್ಯ ಎಚ್.ಪಿ.ಸುರೇಶ್ ಮಾತನಾಡಿ, ಚರಂಡಿಗಳಲ್ಲಿ ಕಸ ತುಂಬಿರುವುದನ್ನು ಮನಗಂಡು ನಾನು ಸ್ವಂತ ಖರ್ಚಿನಲ್ಲಿ ಚರಂಡಿಗಳಲ್ಲಿನ ಕಸವನ್ನು ತೆಗೆಸಿದ್ದು ಅದನ್ನು ವಿಲೇನಾರಿ ಮಾಡಲು ಕೆಲಸದವರು ಸಿಗದ ಕಾರಣ ತ್ಯಾಜ್ಯ ವಿಲೇವಾರಿ ವಿಳಂಬವಾಗಿದೆ. ವೈಯಕ್ತಿಕ ಜಗಳವನ್ನು ದೊಡ್ಡದು ಮಾಡಿ ಈ ರೀತಿ ಮಾಡಿದ್ದಾರೆ. ಈ ವಿಚಾರಗಳನ್ನು ಗ್ರಾಮ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳ ಗಮನಕ್ಕೆ ತರಬಹುದಿತ್ತು. ಅದನ್ನು ಬಿಟ್ಟು ಸಭೆಯನ್ನು ನಡೆಯಲು ಬಿಡದ ಕಾರಣ 14 ಹಳ್ಳಿಗಳಿಂದ ಕೆಲಸ ಕಾರ್ಯಬಿಟ್ಟು ಬಂದಿದ್ದ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

