ಐಸಿಡಿಎಸ್ ಖಾಸಗಿಕರಣಕ್ಕೆ ವಿರೋಧ
ಹಾಸನ: ಐಸಿಡಿಎಸ್(ಶಿಶು ಅಭಿವೃದ್ಧಿ ಯೋಜನೆ) ಪಾಲುದಾರಿಕೆ ಹೆಸರಿನಲ್ಲಿ ಖಾಸಗೀಕರಣವನ್ನು ವಿರೋಧಿಸಿ, ಕಾಯಂ ನೇಮಕಾತಿ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ. ರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಧರಣಿ ನಡೆಸಿ ತಹಸೀಲ್ದಾರ್ಗೆ ಮನವಿ ನೀಡಿದರು.
ದೇಶದಲ್ಲಿ 1.8 ಕೋಟಿ ಮಹಿಳೆಯರು ಮತ್ತು 8 ಕೋಟಿ ಮಕ್ಕಳನ್ನು ಫಲಾನುಭವಿಗಳನ್ನು ಹೊಂದಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ದೇಶದ ಮಹತ್ವಪೂರ್ಣ ಮಾನವ ಸಂಪನ್ಮೂಲವಾಗಿದೆ. ಇಂತಹ ಸಂಪನ್ಮೂಲಗಳ ಬೆಳವಣಿಗೆಗೆ ಪೂರಕವಾಗಿರುವ ಯೋಜನೆ ಐಸಿಡಿಎಸ್ ಆಗಿದೆ. ದೇಶದಲ್ಲಿ ಅರ್ಧದಷ್ಟು ಮಕ್ಕಳು ಅಪೌಷ್ಟಿಕತೆಯಿಂದ, ಶೇ. 80ರಷ್ಟು ಅನಿಮಿಯಾದಿಂದ ಬಳಲುತ್ತಿದ್ದಾರೆ. ಶೇ. 80ರಷ್ಟು ಮಕ್ಕಳು ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ. ವಿವಾಹಿತ ಸ್ತ್ರೀಯರಲ್ಲಿ ಶೇ.50ರಷ್ಟು ಗರ್ಭಿಣಿ ಸ್ತ್ರೀಯರು, ಶೇ.58ರಷ್ಟು ರಕ್ತಹೀನತೆಯಿಂದ ಬಳುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರ ಮತ್ತು ಮಕ್ಕಳನ್ನು ಬದುಕುಳಿಸುವ ಪ್ರಯತ್ನ ಮತ್ತು ಅವರ ಸರ್ವಾಂಗೀಣ ಆರೋಗ್ಯವನ್ನು ಸುಧಾರಿಸುವತ್ತ ಈ ಯೋಜನೆ ಗಣನೀಯ ಸಾಧನೆ ಮಾಡುತ್ತಿದೆ. ಇಂತಹ ಮಹತ್ತರವಾದ ಯೋಜನೆಗೆ 11ನೇ ಪಂಚವಾರ್ಷಿಕ ಯೋಜನೆಯ ಸುಮಾರು ರು. 73 ಸಾವಿರ ಕೋಟಿ ಅನುದಾನ ಬೇಕು. ಅಂದಿನ ಯುಪಿಎ ಸರ್ಕಾರ ರು. 38.891 ಕೋಟಿ ಮಾತ್ರ ಬಜೆಟ್ನಲ್ಲಿ ನೀಡಿತ್ತು ಎಂದು ಆರೋಪಿಸಿದರು.
ಅನುದಾನ ಖೋತಾ: 12ನೇ ಪಂಚವಾರ್ಷಿಕ ಯೋಜನೆ 3 ಲಕ್ಷ ಕೋಟಿ ರು.ಗಳ ಅನುದಾನ ಬೇಕೆಂದು ತಿಳಿಸಿತ್ತು. ಆದರೆ ಸರ್ಕಾರ ಕೊಟ್ಟಿದ್ದು, 1.83 ಲಕ್ಷ ಕೋಟಿ ರು. ಮಾತ್ರ. ಸರ್ಕಾರ ಅಗತ್ಯವಿರುವ ಅನುದಾನ ಕೊಡದೆ ಬಲಿಷ್ಠಗೊಳಿಸಿಸುವ ಹೆಸರಿನಲ್ಲಿ ಯೋಜನೆಯನ್ನು ಕತ್ತು ಹಿಸುಕಲು ಹೊರಟಿದೆ. 2012ರಲ್ಲಿ ಸ್ವತಃ ಪ್ರಧಾನ ಮಂತ್ರಿಗಳು ಅಪೌಷ್ಟಕತೆಯನ್ನು ರಾಷ್ಟ್ರೀಯ ಅವಮಾನ ಎಂದು ಘೋಷಿಸಿ ಐಸಿಡಿಎಸ್ ಇನ್ನು ಮುಂದೆ ಒಂದು ಅಭಿಯಾನ ಮಾದರಿಯಲ್ಲಿ ನಡೆಸಲಾಗುವುದು. ಐಸಿಡಿಎಸ್ಗಿಂತಲೂ ದೂರದೃಷ್ಟಿಯ ಅಗತ್ಯವನ್ನು ಒತ್ತಿ ಹೇಳುತ್ತಾ ಪರೋಕ್ಷವಾಗಿ ಯೋಜನೆಯನ್ನು ಖಾಸಗೀಕರಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ಬೇಡಿಕೆಗಳು: ಐಸಿಡಿಎಸ್ ಕ್ರಮಬದ್ಧಗೊಳಿಸಿ ಅದನ್ನೊಂದು ಇಲಾಖೆಯಾಗಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಅಂಗನವಾಡಿ ಕೇಂದ್ರ ಮತ್ತು ಶಿಶುವಿಹಾರಗಳನ್ನಾಗಿಸಬೇಕು. ಯಾವುದೇ ರೀತಿಯಲ್ಲೂ ಸರ್ಕಾರೇತರ ಸಂಘಟನೆಗಳ ಪಾಲುದಾರಿಕೆಯ ಹೆಸರಿನಲ್ಲಿ ಅಥವಾ ಸರ್ಕಾರಿ ಖಾಸಗೀ ಪಾಲುದಾರಿಕೆಯ ಅಂಗನವಾಡಿ ಖಾಸಗೀಕರಣ ಬೇಡ. ರಾಜ್ಯದಲ್ಲಿ ಈಗಾಗಲೇ ಪ್ರಜಾಯತ್ನ, ಸುಮಂಗಲಿ ಸೇವಾ ಆಶ್ರಮ, ಪ್ರಥಮ ಮತ್ತು ವೇದಾಂತ ಸಂಸ್ಥೆಗಳಿಂದ ಅಂಗನವಾಡಿ ಕೇಂದ್ರಗಲನ್ನು ವಾಪಸ್ ಪಡೆಯಬೇಕು.
ಅಂಗನವಾಡಿ ನೌಕರರನ್ನು ಮತ್ತು ಸಹಾಯಕರನ್ನು ಸರ್ಕಾರದ ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರನ್ನಾಗಿ ಕ್ರಮಬದ್ಧಗೊಳಿಸಬೇಕು. ಕ್ರಮಬದ್ಧಗೊಳಿಸುವವರೆಗೆ ಅವರ ಗೌರವ ವೇತನವನ್ನು ಕ್ರಮವಾಗಿ 15 ಸಾವಿರ ಮತ್ತು 10 ಸಾವಿರಕ್ಕೆ ಏರಿಸಿ ಅವರ ವೇತನವನ್ನು ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಹೊಂದಿಸಿ. ಎಲ್ಲಾ ಅಂಗನವಾಡಿ ನೌಕರರಿಗೆ ಮತ್ತು ಸಹಾಯಕರನ್ನು ಕನಿಷ್ಟ ನಿವೃತ್ತಿ ವೇತನ ಮತ್ತು ಗ್ರಾಚ್ಯುಟಿ, ಭವಿಷ್ಯನಿಧಿ ಇತ್ಯಾಧಿ ಇತರೆ ಸಾಮಾಜಿಕ ಸುಭದ್ರತೆಗಳು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು.
ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ನೀರು ಮತ್ತು ವಿದ್ಯುತ್ ಸೌಲಭ್ಯವಿರುವ ಕಟ್ಟಡಗಳನ್ನು ಒದಗಿಸಿ ಮತ್ತು ಈಗಿರುವ ಬಾಡಿಗೆ ಏರಿಕೆ ಜಾರಿಗೆ ತರಬೇಕು. ಸ್ಪಷ್ಟವಾದ ಕೆಲಸದ ನಿರ್ದೇಶನ ನೌಕರರು ಮತ್ತು ಸಹಾಯಕಿಯರಿಗೆ ಐಸಿಡಿಎಸ್ ಸಂಬಂಧಿತ ಕೆಲಸಗಳಲ್ಲದೆ ಇತರೆ ಕೆಲಸಗಳನ್ನು ಒಪ್ಪಿಸಬಾರದು.
ಅಂಗನವಾಡಿ ಸಹಾಯಕರ ಮತ್ತು ಆಶಾ ನೌಕರರಿಗೆ ಮುಂದೆ ನಡೆಯಲಿರುವ ನೇಮಕಾತಿಯಲ್ಲಿ ಆದ್ಯತೆನೀಡಬೇಕು. ಜಿಲ್ಲಾಧಿಕಾರಿಗಲು ಚುನಾವಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಅಂಗನವಾಡಿ ನೌಕರರನ್ನು ತೊಡಗಿಸಬಾರದು. ಮರಣ ಮತ್ತು ಕಾಯಿಲೆ ಪರಿಹಾರ ಒಂದು ಲಕ್ಷ ರು. ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಸಮಾನವಾಗಿ ಕೊಡಬೇಕು. ವರ್ಗಾವಣೆಯಲ್ಲಿ ಸ್ಥಳೀಯ ಅಂಗನವಾಡಿ ನೌಕರರಿಗೆ ಆದ್ಯತೆ ನೀಡಬೇಕು. ಉರುವಲು ವೆಚ್ಚವನ್ನು ಅಂಗನವಾಡಿ ನೌಕರರ ಖಾತೆಗೆ ಹಾಕಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷೆ ವೈ.ಆರ್. ಮಂಜಮ್ಮ, ಕಾರ್ಯದರ್ಶಿ ಶಾಂತಲಕ್ಷ್ಮಿ, ಖಜಾಂಚಿ ರಿಜ್ವಾನಾ ಬಾನು, ಚನ್ನಮ್ಮ, ಪುಷ್ಪ, ಯಶೋದಾ, ಸಿಐಟಿಯುನ ಅರವಿಂದ್ ಹಾಗೂ ಇತರರು ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

