ಹಾಸನ

ಅತ್ತಿಗೆ ಮೇಲೆ ಮೈದುನ ಹಲ್ಲೆ

Published On :

ಹಾಸನ: ಪತಿಯಿಂದ ಅನ್ಯಾಯಕ್ಕೊಳಗಾದ ಮಹಿಳೆಯೋರ್ವಳು ನ್ಯಾಯ ಕೇಳಲು ಹೋದಾಗ ಆಕೆಯ ಮೈದುನ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಅಮೀರ್ ಮೊಹಲ್ಲಾದ ಹರ್ಷಿಯಾ ಭಾನು ಹಲ್ಲೆಗೊಳಗಾದ ಮಹಿಳೆ. ಈಕೆಗೆ ಸಮೀರ್ ಅಹಮದ್ ಎಂಬವನೊಂದಿಗೆ ಕಳೆದ ಒಂಬತ್ತು ವರ್ಷಗಳ ಹಿಂದೆ ವಿವಾಹವಾಗಿತ್ತು. ಇಬ್ಬರು ಮಕ್ಕಳಿದ್ದಾರೆ. ಲಾರಿ ಚಾಲಕನಾಗಿರುವ ಸಮೀರ್‌ಗೆ ಮತ್ತೊಂದು ವಿವಾಹವಾಗಿದ್ದು, ಅದೇ ಕಾರಣಕ್ಕೆ ಮನೆಗೆ ಬರುತ್ತಿರಲಿಲ್ಲ. ಈಗಾಗಿ ಭಾನುವಾರ ರಾತ್ರಿ ತನಗೆ ನ್ಯಾಯ ಕೊಡಿಸುವಂತೆ ಹಿರ್ಷಿಯಾ ಭಾನು ಪತಿಯ ಪೋಷಕರ ಮನೆಗೆಹೋಗಿದ್ದು, ಈ ಸಂದರ್ಭದಲ್ಲಿ ಮೈದುನ ಜಮೀರ್ ಅಹಮದ್ ಹಲ್ಲೆ ಮಾಡಿದ್ದಾನೆ. ಪೆನ್ಷ್‌ನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಸಿದ್ಧ
ಹಾಸನ: ಸಮಾಜದಲ್ಲಿ ನಡೆ ಯುವ ಭ್ರಷ್ಟಾಚಾರದ ವಿರುದ್ಧ ಹಾಗೂ ಬಡವರ ಪರವಾಗಿ ಕೆಲಸ ಮಾಡಲು ಸಮಿತಿ ಮುಂದಾಗಲಿದೆ ಎಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಿ. ರಮೇಶ್ ತಿಳಿಸಿದರು. ಬೇಲೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷೆ ಅಸಿನಾ ಭಾನುಗಪೂರು ಮಾತನಾಡಿ, ಜನರ ಸೇವೆಗೆ ಅಧಿಕಾರಿಗಳಿದ್ದು, ಯಾವುದೇ ಭಯವಿಲ್ಲದೆ ಕಚೇರಿಗಳಿಗೆ ತೆರಳಿ ತಮ್ಮ ಹಕ್ಕುಗಳನ್ನು ಪಡೆಯುವಂತೆ ತಿಳಿಸಿದರು. ಜಿಲ್ಲಾ ಸಮಿತಿ ವಕೀಲೆ ಯಶಸ್ವಿನಿ ಮಾತನಾಡಿ, ಜನರು ತಮ್ಮ  ಹಕ್ಕುಗಳನ್ನು ತಿಳಿಯಬೇಕು. ಬಹು ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಆಹಾರ, ಮಹಿಳೆಯ  ಹಕ್ಕುಗಳು ಹಾಗೂ ಕಾನೂನುಗಳನ್ನು ಅರಿಯಬೇಕು ಎಂದರು. ತಾಲೂಕು ಸಮಿತಿ ಅಧ್ಯಕ್ಷ ಅರೇಹಳ್ಳಿಯ ಮುಸ್ತಾಫ್ ಮಾತನಾಡಿದರು.

ಬ್ಯಾಂಕ್‌ನಲ್ಲಿ ವೃದ್ಧೆ ವಂಚಿಸಿ ಹಣ ಕಳವು
ಹಾಸನ: ಬ್ಯಾಂಕ್‌ಗೆ ಹಣ ಕಟ್ಟಲು ಹೋಗಿದ್ದ  ಗೌರಮ್ಮ ಎಂಬ ವೃದ್ಧೆಗೆ ವ್ಯಕ್ತಿಯೊಬ್ಬ ವಂಚಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ನಗರದ ಹೇಮಾವತಿ ನಗರದ ವಾಸಿ ಗೌರಮ್ಮ ವಂಚನೆಗೆ ಒಳಗಾದ ವೃದ್ಧೆ. ಗೌರಮ್ಮ ಕಳೆದ ಜು.10ರಂದು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ರು. 2 ಲಕ್ಷ ಕಟ್ಟಲು ಹೋಗಿದ್ದರು. ಬ್ಯಾಂಕ್‌ನಲ್ಲಿ ಹಣ ಕಟ್ಟುವ ಕೌಂಟರ್‌ನಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಿಳೆ ಹಣವನ್ನು ಎಣಿಸುತ್ತಿದ್ದರು. ಆಗ ವ್ಯಕ್ತಿಯೊಬ್ಬ ಬಂದು ಹಣ ಎಣಿಸಿಕೊಂಡುವುದಾಗಿ ಹೇಳಿ 40 ಸಾವಿರ ರು. ಹಣವನ್ನು ಲಪಟಾಯಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಹಣವನ್ನು ಎಣಿಸಿದಾಗ ರು. 40 ಸಾವಿರ ಹಣ ಕಡಿಮೆ ಬಂದಿದೆ. ನಂತರ ಗೌರಮ್ಮ ಪೊಲೀಸರಿಗೆ ದೂರು ನೀಡಿದ್ದು, ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿರುಪತಿ ದೇಗುಲ ಆವರಣ ಸ್ವಚ್ಛತೆ
ಅರಸೀಕೆರೆ: ಇತ್ತೀಚೆಗೆ ಜರುಗಿದ ಇತಿಹಾಸ ಪ್ರಸಿದ್ಧ ಅರಸೀಕೆರೆ ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಾಲಯದ ಸುತ್ತ ತ್ಯಾಜ್ಯ ಬಿದ್ದಿತ್ತು. ಇದನ್ನು ಮನಗಂಡ ಅಶೋಕ್‌ಕುಮಾರ್ ಮತ್ತು ತಂಡದ 12 ಸದಸ್ಯರು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸಿದರು.
ಬೆಟ್ಟದ ಮೇಲೆ ಇರುವಶ್ರೀನಿವಾಸ-ಪದ್ಮಾವತಿ ದೇವಸ್ಥಾನದ ಆವರಣಲ್ಲಿ ಭಕ್ತಾದಿಗಳು ಬಳಸಿ ಬಿಸಾಕಿದ, ಪ್ಲಾಸ್ಟಿಕ್ ಲೋಟ, ನೀರಿನ ಬಾಟಲ ಹಾಗೂ ಇತರೆ ತ್ಯಾಜ್ಯಗಳನ್ನು ಭಾನುವಾರ ಎಚ್.ಪಿ. ಅಶೋಕ್ ಕುಮಾರ್ ಮತ್ತು ತಂಡದ 12ಜನ ಸದಸ್ಯರು ಕರಸೇವೆ ನಡೆಸುವುದರ ಮೂಲಕ ದೇವಾಲಯದ ಆವರಣವನ್ನು ಶುಚಿಗೊಳಿಸಿದರು.
ಈ ತಂಡವು ಕಳೆದ ಹಲವು ವರ್ಷಗಳಿಂದ ಜಾತ್ರೆ ನಡೆದ ನಂತರದ ಭಾನುವಾರ  ಈ ಕರೆಸೇವೆಯನ್ನು ಹಮ್ಮಿಕೊಂಡು ದೇವಾಲಯದ ಆವರಣವನ್ನು ಶುಚಿಗೊಳಿಸುತ್ತಿದ್ದಾರೆ.

ಯುವಕರಿಂದ ದರೋಡೆ ಯತ್ನ: ಆರೋಪಿ ಬಂಧನ
ಹೊಳೆನರಸೀಪುರ: ತಾಲೂಕಿನ ಮಾವಿನಕೆರೆ ಶ್ರೀರಂಗನಾಥಸ್ವಾಮಿ ದೇವರ ಬೆಟ್ಟದಲ್ಲಿ ಯುವಕರಿಂದ ದರೋಡೆ ಯತ್ನದಲ್ಲಿ ಎಂಟು ಮಂದಿ ಯುವಕರಲ್ಲಿ ಮೂವರು ಯುವಕರು ಪರಾರಿ ಆಗಿದ್ದವರಲ್ಲಿ ಅನಿಲ್ ಎಂಬಾತನನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ ತಾಲೂಕಿನ ಸಬ್ಬನಹಳ್ಳಿ ಗ್ರಾಮದ ದಲಿತ ಕುಟುಂಬದ ಮಣಿ ತನ್ನ ಸಂಬಂಧಿ ಶೇಖರನೊಂದಿಗೆ ರಂಗನಾಥಸ್ವಾಮಿ ದೇವರ ದರ್ಶನಕ್ಕೆ ಆಗಮಿಸಿ ಹಿಂತಿರುಗುವ ವೇಳೆ ಎಂಟು ಮಂದಿ ಯುವಕರು ಅಡ್ಡಗಟ್ಟಿ ಮಣಿ ಮೈಮೇಲೆ ಇದ್ದ ಒಡವೆಗಳನ್ನು ದೋಚಿ ಪರಾರಿ ಆಗಲು ಯತ್ನಿಸಿದ್ದರು. ಅವರಲ್ಲಿ ಐವರನ್ನು  ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ತೀವ್ರ ವಿಚಾರಣೆ ನಡೆಸಿದ ಎಎಸ್‌ಪಿ ವಿನಾಯಕ ಪಾಟೀಲ್, ತಲೆ ತಪ್ಪಿಸಿಕೊಂಡಿದ್ದ ಮೂವರಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಸಚಿನ್ ಮತ್ತು ಮಹೇಶ್ ಅವರನ್ನು ಹಿಡಿಯಲು  ಬಲೆ ಬೀಸಲಾಗಿದೆ ಎಂದಿದ್ದಾರೆ. ಶೀಗ್ರವೇ ಉಳಿದವರನ್ನು ಬಂಧಿಸಲಾಗುವುದು ಎಂದ ಪಿಐ ಕೃಷ್ಣಪ್ಪ ಹಾಗೂ ಪಿಎಸ್‌ಐ ಲೋಕೇಶ್ ತಿಳಿಸಿದ್ದಾರೆ.

ಕಾರು ಪಲ್ಟಿ: ಮೂವರು ಪಾರು
ಸಕಲೇಶಪುರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಉರುಳಿಬಿದ್ದಿದ್ದು, ಪ್ರಯಾಣಿಕರು ಅನಾಹುತದಿಂದ ಪಾರಾಗಿದ್ದಾರೆ. ಘಟನೆ ತಾಲೂಕಿನ ಬಾಗೆ ಗ್ರಾಮದ ಅರಸುನಗರದ ಸಮೀಪ ಇತ್ತೀಚೆಗೆ ನಡೆದಿದೆ. ಹಾಸನದಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಕಾರು, ಅಪಘಾತಕ್ಕೆ ಈಡಾಗಿ ವಾಹನದಲ್ಲಿದ್ದ ಮೂವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಇವರನ್ನು ಬದಲಿ ವಾಹನದಲ್ಲಿ ಸುರಕ್ಷಿತವಾಗಿ ಬೆಳ್ತಂಗಡಿಗೆ ಸ್ಥಳೀಯರು ತಲುಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ  ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಡಿಕ್ಕಿ: ಆಟೋ ಚಾಲಕ ಸಾವು
ಸಕಲೇಶಪುರ: ಕಾರೊಂದು ಆಟೋಗೆ ಡಿಕ್ಕಿ  ಹೊಡೆದ ಪರಿಣಾಮ ಆಟೋ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಬೆಕ್ಕನಹಳ್ಳಿ ಗೇಟಟ್ಬಳಿಯ ವಣಗೂರು ಕೂಡುರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ತಾಲೂಕಿನ  ಯಸಳೂರು ಹೋಬಳಿಯ ಬೀರಾಳು ಗ್ರಾಮದ ವಾಸಿ  ಜಯಪ್ಪ (40) ಎಂಬವರೇ ಮೃತಪಟ್ಟ ದುರ್ದೈವಿ. ಅವರು ತಮ್ಮ ಆಟೋರಿಕ್ಷಾದಲ್ಲಿ ಪತ್ನಿ ಜಾನಕಿ ಮತ್ತು ಮಗಳು ಮನಸ್ವಿ ಸಂಬಂಧಿಕರಾದ ಪರಮೇಶ್ ಅವರ ಪುತ್ರಿ ರಕ್ಷಿತ ಅವರೊಂದಿಗೆ  ಶನಿವಾರಸಂತೆಗೆ ಹೋಗಿ ವಾಪಸ್ ಗ್ರಾಮಕ್ಕೆ ಹೋಗಲು ಬೆಕ್ಕನಹಳ್ಳಿ ಗೇಟ್ ಹತ್ತ್ತಿರ ವಣಗೂರುಕೂಡು ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಚಾಲಕ ತನ್ನ ನಿರ್ಲಕ್ಷ್ಯತೆಯಿಂದ  ಡಿಕ್ಕಿ ಮಾಡಿದ್ದಾನೆ. ತೀವ್ರ ಗಾಯಗೊಂಡ ಜಯಪ್ಪ ಅವರನ್ನು   ಚಿಕಿತ್ಸೆಗಾಗಿ ಸೋಮವಾರಪೇಟೆ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ  ಜಯಪ್ಪ ಮೃತಪಟ್ಟಿದ್ದಾರೆ.ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ
ಹಾಸನ: ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನ ಹಾಗೂ ಪುಸ್ತಕ ಅನುದಾನದ ಮಂಜೂರಾತಿಗಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ. 1ನೇ ತರಗತಿಯಿಂದ ಅಂತಿಮ ಪದವಿ  ಮತ್ತು ಡಿಪ್ಲೋಮಾ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳು ಈ  ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.   ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಮಾಜಿ ಸೈನಿಕರು, ಮಾಜಿ ಸೈನಿಕರ ಅವಲಂಬಿತರು ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಾಸವಿ ನಿಲಯ, ಶಂಕರೀಪುರಂ, 1ನೇ ಕ್ರಾಸ್, ಬಿ.ಎಂ ರಸ್ತೆ, ಹಾಸನ ಇವರಿಂದ  ನವೀಕರಿಸಲಾದ ಅರ್ಜಿಗಳನ್ನು ಶುಲ್ಕರಹಿತವಾಗಿ ಪಡೆದು ಭರ್ತಿ ಮಾಡಿ ನಿಗದಿತ ಅಡಕಗಳೊಂದಿಗೆ ಅಕ್ಟೋಬರ್ 31ರೊಳಗೆ ಸಲ್ಲಿಸಲು ಕೋರಿದೆ. ಕೃಷಿ ತಾಂತ್ರಿಕ, ವೈದ್ಯಕೀಯ ಮತ್ತಿತರ ಕೋರ್ಸುಗಳ ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ಪ್ರವೇಶ ಪಡೆದ ಒಂದು ತಿಂಗಳೊಳಗಾಗಿ ಅರ್ಜಿಗಳನ್ನು ಈ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರನ್ನು  ಸಂಪರ್ಕಿಸಬಹುದು.

ಬೇಡಿಕೆ ಈಡೇರಿಕೆಗೆ ಅನಿರ್ದಿಷ್ಟಾವಧಿ ಧರಣಿ
ಹಾಸನ: ನಗರಸಭೆಯ ಗುತ್ತಿಗೆ ಮುನಿಸಿಪಲ್ ಕಾರ್ಮಿಕರಿಗೆ ಬಾಕಿ ವೇತನ, ತುಟ್ಟಿಭತ್ಯೆ ಸಹಿತ ಕನಿಷ್ಠ ವೇತನ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪೌರಕಾರ್ಮಿಕರು ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
ನಗರದ ನಗರಸಭೆ ಮುಂದೆ ಪೌರಕಾರ್ಮಿಕರು ಧರಣಿ ನಡೆಸಿದರು. ಹಾಸನ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ವೇತನ ಪಾವತಿಸಿಲ್ಲ. ಕಳೆದ ಏಪ್ರಿಲ್ ತಿಂಗಳಿನಿಂದ ಹೆಚ್ಚಾಗಿರುವ ತುಟ್ಟಿಭತ್ಯೆ ಪಾವತಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೇವಾ ಭದ್ರತೆಯಿಲ್ಲದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ನಗರದ ನೈರ್ಮಲ್ಯ ಕಾಪಾಡಿ ನಾಗರಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ನಗರಸಭೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದರು ಆ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಸಿಐಟಿಯು ಧರ್ಮೇಶ್, ಮಂಜುನಾಥ್, ಪ್ರಕಾಶ್, ಅರವಿಂದ್, ನವೀನ್ ಕುಮಾರ್ ಇದ್ದರು.

ಮಹಿಳೆ ನಾಪತ್ತೆ
ಅರಸೀಕೆರೆ: ತಾಲೂಕಿನ  ಕಣಕಟ್ಟೆ ಹೋಬಳಿ, ರಾಮನಹಳ್ಳಿ ಗ್ರಾಮದ ರಮೇಶ್ ಅವರ ಪತ್ನಿ ತೇಜಸ್ವಿನಿ (19)  ಅವರು ಮನೆಯಿಂದ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಮತ್ತು ಚೂಡಿದಾರ ಧರಿಸಿದ್ದರು ಎಂದು ಅವರ ಪತಿ ರಮೇಶ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.