ಆಹಾರ ಧಾನ್ಯ ಉತ್ಪಾದನೆ ಕುಂಠಿತ: ಆತಂಕ
ಕನ್ನಡಪ್ರಭ ವಾರ್ತೆ, ಬೇಲೂರು, ಜು. 22
ರೈತರು ಆಹಾರ ಧಾನ್ಯಗಳ ಉತ್ಪಾದಿಸುವಲ್ಲಿ ಹಿಂದೆ ಬೀಳುತ್ತಿದ್ದು ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗಲಿದೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಪರ್ವತಯ್ಯ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಶಂಭುಗನಹಳ್ಳಿ ಗ್ರಾಮದಲ್ಲಿ ರೈತರ ಸಂಪರ್ಕ ಕೇಂದ್ರ ಆಯೋಜಿಸಿದ್ದ ಕಸಬಾ ಹೋಬಳಿ ಭೂ ಚೇತನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಹಾರ ಉತ್ಪಾದನೆ ಕುಂಠಿತ: ರೈತರು ಆರ್ಥಿಕ ಬೆಳೆಗಳಾದ ಶುಂಠಿ, ಆಲೂಗೆಡ್ಡೆ, ಬೆಳೆಗಳಿಗೆ ಮಾರು ಹೋಗಿದ್ದು, ಆಹಾರ ಪದಾರ್ಥಗಳ ಉತ್ಪನ್ನಗಳಾದ ರಾಗಿ, ಬತ್ತ ಇನ್ನಿತರೆ ಬೆಳೆಗಳನ್ನು ಬೆಳೆಯದೆ ಇರುವುದು ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಕುಂಠಿತಗೊಳ್ಳಲಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾತನಾಡಿ, ಭೂ ಚೇತನ ಯೋಜನೆಯಡಿ ರೈತರಿಗೆ ಉಚಿತವಾಗಿ ಎಂಎಲ್ 365 ಎಂಬ ರಾಗಿ ತಳಿಯನ್ನು ನೀಡುತ್ತಿದ್ದು ಈ ಬೆಳೆ ರೋಗ ನಿರೋಧ ಶಕ್ತಿಯನ್ನು ಹೊಂದಿದ್ದು ಉತ್ತಮ ಇಳುವರಿ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಪೂರ್ಣೇಶ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರೇಣುಕಯ್ಯ, ಸಂಜೀವ್ ದೇವರಾಜ್, ಗಂಗಾಧರ್, ಕುಪ್ಪಯ್ಯ, ರಾಜಯ್ಯ, ನಂಜುಂಡಯ್ಯ ಇದ್ದರು.
ಬೀಜೋಪಚಾರ ಆಂದೋಲನ
ಹಾಸನ: ಪ್ರಸಕ್ತ ಸಾಲಿನ ರಾಜ್ಯ ವಲಯ ಸಸ್ಯ ಸಂರಕ್ಷಣೆ ಯೋಜನೆಯಡಿ ಬೀಜೋಪಚಾರ ಆಂದೋಲನ ಕಾರ್ಯಕ್ರಮವನ್ನು ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಬೈಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸೋಂಕು ತಡೆಗಟ್ಟಿ: ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಲಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯಲಕ್ಷ್ಮಿ ವಹಿಸಿದ್ದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲ ಮಾತನಾಡಿ, ಬೀಜೋಪಚಾರ ಮಾಡುವುದರಿಂದ ಬೀಜದಿಂದ ಹಾಗೂ ಮಣ್ಣಿನಿಂದ ಬರುವ ರೋಗದ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎಸ್. ನಾಗರಾಜು ಅವರು, ಬೀಜೋಪಚಾರದ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಿ, ಬತ್ತದಲ್ಲಿ ಪ್ರತಿ ಕೆಜಿ ಬೀಜಕ್ಕೆ ನಾಲ್ಕು ಗ್ರಾಂ ಕಾರ್ಬನ್ ಡೈಜಿಂ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಭತ್ತದ ಬೆಂಕಿರೋಗ ನಿಯಂತ್ರಣ ಸಾಧ್ಯವೆಂದು ತಿಳಿಸಿದರು.
ಜೈವಿಕ ಗೊಬ್ಬರ: ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಗಿರೀಶ್ ಅವರು ರೈತರಿಗೆ ಜೈವಿಕ ಗೊಬ್ಬರಗಳ ಉಪಯುಕ್ತತೆ ಬಗ್ಗೆ, ಜೈವಿಕ ಗೊಬ್ಬರಗಳನ್ನು ಬಳಸಿ, ಬೀಜೋಪಚಾರ ಮಾಡುವ ವಿಧಾನದ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಾಲಗಾಮೆ ಹೋಬಳಿಯ ರೈತ ಅನುವುಗಾರರು ಹಾಗೂ ಬೈಲಹಳ್ಳಿ, ಕ್ಯಾತನಹಳ್ಳಿ, ಉಗನೆ ತಿಮ್ಮನಹಳ್ಳಿ, ಗ್ರಾಮದ ರೈತರು, ರೈತಮಹಿಳೆಯರು ಭಾಗವಹಿಸಿದ್ದರು.
ವೀರಶೈವ ಸಂಘದಿಂದ ಪ್ರತಿಭಾ ಪುರಸ್ಕಾರ
ಹಾಸನ: ನಗರದ ಶ್ರೀ ವೀರಶೈವ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 2013-13ನೇ ಸಾಲಿನಲ್ಲಿ ಶೇ. 95 ಅಥವಾ ಅದಕ್ಕಿಂತ ಮೇಲ್ಪಟ್ಟು ಅಂಕ ಪಡೆದಿರುವ ಜಿಲ್ಲೆಯ ವೀರಶೈವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 4 ರಂದು ಸಂಜೆ 5 ರೊಳಗೆ ಕಾರ್ಯದರ್ಶಿ, ಶ್ರೀ ವೀರಶೈವ ಸಂಘ ಅಥವಾ ಶ್ರೀ ಬಸವೇಶ್ವರ ಕಲ್ಯಾಣ ಮಂದಿರ ಕಚೇರಿಯಲ್ಲಿ ಸಂಘದ ವ್ಯವಸ್ಥಾಪಕರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಇಗ್ನೋ ಸ್ಟಡಿ ಸೆಂಟರ್ ಉದ್ಘಾಟನೆ ಹಾಸನ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಮತ್ತು ಎನ್ಡಿಆರ್ಕೆ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜಿನಲ್ಲಿ ಜು. 23 ರಂದು ಬೆಳಗ್ಗೆ 11.3-ಕ್ಕೆ ಇಗ್ನೋ ಸ್ಟಡಿ ಸೆಂಟರ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬಿಸಿಕೆಎಸ್ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಪಿ.ವಿಜಯಕುಮಾರ್, ಬೆಂಗಳೂರಿನ ಇಗ್ನೋ ಪ್ರಾದೇಶಿಕ ಕೇಂದ್ರದ ಸಹಾಯಕ ಪ್ರಾದೇಶಿಕ ನಿರ್ದೇಶಕ ಡಾ.ಎಂ. ಷಣ್ಮುಗಂ, ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಪ್ರೊ.ಕೆ.ಯು. ಬಸಪ್ಪ ಭಾಗವಹಿಸುವರು.
ವಿದ್ಯಾರ್ಥಿಯ ಶೈಕ್ಷಣಿಕ ಜೀವನ ರೂಪಿಸುವುದು ಶಿಕ್ಷಕರ ಕರ್ತವ್ಯ
ಆಲೂರು: ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವೆಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪುಷ್ಪಲತಾ ತಿಳಿಸಿದರು. ಅವರು ತಾಲೂಕಿನ ಹಂಪನ ಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ಕೆ.ಪರಮಶಿವಯ್ಯನವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಶಿಕ್ಷಕ ಪರಮಶಿವಯ್ಯ ಹಾಗೂ ಪತ್ನಿ ಸುಧಾ ಅವರನ್ನು ಸನ್ಮಾನಿಸಲಾಯಿತು.
ಆಲೂಗೆ ಕರಿಕಡ್ಡಿ
ರೋಗ: ಬೆಳೆ ನಾಶ
ಬೇಲೂರು: ಅಲ್ಪ-ಸ್ವಲ್ಪ ಬೆಳೆಗೆ ಕಳೆದ ವಾರದಿಂದ ತುಂತುರು ಮಳೆ ಬೀಳುತ್ತಿರುವುದರಿಂದ ಆಲೂಗೆಡ್ಡೆ ಬೆಳೆಗೆ ಕರಿಕಡ್ಡಿ ರೋಗದ ವ್ಯಾಪಕವಾಗಿ ಹರಡಿದ್ದು ಬೆಳೆ ನಾಶವಾಗುತ್ತಿದೆ ಎಂದು ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಫಣೀಂದ್ರ ತಿಳಿಸಿದರು. ಕರಿಕಡ್ಡಿ ರೋಗಕ್ಕೆ ಆಲೂಗೆಡ್ಡೆ ಬೆಳೆ ಸಂಪೂರ್ಣ ನಾಶವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಫಣೀಂದ್ರ ಅವರು ತಾಲೂಕಿನ ಕಸಬಾ ಹೋಬಳಿಯ ಕಿರೇಹಳ್ಳಿ, ಹನಿಕೆ, ಮಾಳೇನಹಳ್ಳಿ, ಹೋನ್ನೆನಹಳ್ಳಿ, ಕನ್ನಾಯಕನಹಳ್ಳಿ, ಮುತ್ತುಗನ್ನೆ, ಸಂಶೆಟ್ಟಿಹಳ್ಳಿ ಸೇರಿದಂತೆ ಸುಮಾರು 12 ಗ್ರಾಮದಲ್ಲಿ ಆಲೂಗೆಡ್ಡೆ ಬೆಳೆಯ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ಆಲೂ ಬೆಳೆಗೆ ಸಿಂಪರಣೆ ಮಾಡುವ ಬಹುತೇಕ ಔಷಧಿಗಳು ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿದೆ. ರೈತರು ತನ್ನ ಜಮೀನಿನ ಪಹಣಿ, ಆಲೂ ಖರೀದಿ ರಶೀದಿಯನ್ನು ತಂದು ಶೇ.50ರ ಸಬ್ಸಿಡಿಯಲ್ಲಿ ಔಷಧಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಅಕ್ರಮ ಮದ್ಯ ನಾಶ
ಅರಸೀಕೆರೆ: ಪಟ್ಟಣದ ಅಬಕಾರಿ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿದ್ದ ಸುಮಾರು 278 ಲೀಟರ್ ಮದ್ಯ, 35 ಲೀಟರ್ ಬಿಯರ್ ಹಾಗೂ 19 ಲೀಟರ್ ಸೇಂದಿಯನ್ನು ಮಂಗಳವಾರ ಅಬಕಾರಿ ಇಲಾಖೆಯ ಕಚೇರಿಯಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ನಾಶಪಡಿಸಲಾಯಿತು ಎಂದು ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್ ಮಂಜುನಾಥ್ ತಿಳಿಸಿದರು.
ಹಾಸನ ಜಿಲ್ಲೆಯ ಅಬಕಾರಿ ಇಲಾಖೆಯ ಡೆಪ್ಯೂಟಿ ಕಮೀಷನರ್ ಆದೇಶದ ಮೇರೆಗೆ ಮಂಗಳವಾರ ಸಂಜೆ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ಪಟ್ಟಣ ಪ್ರದೇಶವು ಸೇರಿದಂತೆ ಗ್ರಾಮೀಣಾ ಪ್ರದೇಶದ ನಾನಾ ಭಾಗಗಳಲ್ಲಿ ಆಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಮತ್ತು ಆಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 33 ಪ್ರಕರಣಗಳನ್ನು ಪತ್ತೇಮಾಡಿ ವಶಪಡಿಸಿಕೊಳ್ಳಲಾಗಿದೆ.
ರು. 75 ಸಾವಿರ ಮೌಲ್ಯ: ಅಂದಾಜು 75 ಸಾವಿರ ರು. ಮೌಲ್ಯದ ಅಕ್ರಮ ಮದ್ಯವಿದ್ದ ಪ್ಲಾಸ್ಟಿಕ್ ಕ್ಯಾನ್ಗಳನ್ನು ವಶಪಡಿಸಿಕೊಂಡು ಚರಂಡಿಗೆ ಸುರಿಯಲಾಯಿತು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾಸನ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಬಿ. ಸುನೀಲ್, ಅಬಕಾರಿ ನಿರೀಕ್ಷಕ ಕೆ.ಜೆ.ಸಂತೋಷ್, ಕೆಎಸ್ಎಸ್ಎಲ್ ಡಿಪೋ ವ್ಯವಸ್ಥಾಪಕ ಸುಧೀಂದ್ರಕುಮಾರ್, ಅರಸೀಕೆರೆ ವಲಯ ಉಪನಿರೀಕ್ಷಕ ಎಂ.ಬಸವರಾಜು, ಅಬ್ದುಲ್ ನಿಸ್ಸಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಅರಸೀಕೆರೆ ವಲಯ ನಿರೀಕ್ಷಕ ಮಂಜುನಾಥ್ ಅವರು ತಿಳಿಸಿದರು.
ಜಲಾಶಯಗಳ ನೀರಿನ ಮಟ್ಟ
ಹೇಮಾವತಿ: ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922. ಅಡಿಗಳು, ಇಂದಿನ ನೀರಿನ ಮಟ್ಟ 2899.25ಅಡಿಗಳು, ಜಲಾಶಯಕ್ಕೆ ನೀರಿನ ಒಳಹರಿವು 19874 ಕ್ಯುಸೆಕ್ ಹೊರ ಹರಿವು 250 ಕ್ಯುಸೆಕ್.
ವಾಟೆಹೊಳೆ: ಜಲಾಶಯದ ಇಂದಿನ ಮಟ್ಟ 3142.06 ಅಡಿ. ಒಳ ಹರಿವು 252 ಕ್ಯುಸೆಕ್, ಹೊರ ಹರಿವು ಇಲ್ಲ.
ಯಗಚಿ: ಜಲಾಶಯದ ನೀರಿನ ಮಟ್ಟ 3153.898 ಅಡಿ. ಒಳ ಹರಿವು 1011 ಕ್ಯುಸೆಕ್, ಹೊರ ಹರಿವು ನಾಲೆಗೆ 50 ಕ್ಯುಸೆಕ್.
22ರಂದು ಬಿದ್ದ ಮಳೆಯ ವಿವರ
ಆಲೂರು-15.1ಮಿ.ಮೀ. ಕೆಂಚಮ್ಮನಹೊಸಕೋಟೆ-71, ಕುಂದೂರು-33., ಪಾಳ್ಯ-20.6, ಅರಕಲಗೂಡು-14.3, ಮಲ್ಲಿಪಟ್ಟಣ-34, ರಾಮನಾಥಪುರ-4.8, ಬಸವಾಪಟ್ಟಣ-3.1,ಕೊಣನೂರು- 2.2, ದೊಡ್ಡಮಗ್ಗೆ-9.2, ದೊಡ್ಡಬೆಮ್ಮತ್ತಿ-10.4, ಕಣಕಟ್ಟೆ-2.2, ಬೇಲೂರು-5.2, ಅರೇಹಳ್ಳಿ-49.8, ಬಿಕ್ಕೋಡು-15, ಗೆಂಡೆಹಳ್ಳಿ18.2, ಹಗರೆ-2.4 ಚನ್ನರಾಯಪಟ್ಟಣ-3.2, ಉದಯಪುರ-0.8ಶ್ರವಣಬೆಳಗೊಳ-5.8, ಹಾಸನ-7.6, ಕಟ್ಟಾಯ 12.2, ಸಾಲಗಾಮೆ-2, ಶಾಂತಿಗ್ರಾಮ-10, ದುದ್ದ-0.4, ಗೊರೂರು -21.2, ಹೊಳೆನರಸೀಪುರ-5.2, ಹಳ್ಳಿಮೈಸೂರು 4.6, ಹಳೇಕೋಟೆ-9.8, ಸಕಲೇಶಪುರ-69.4, ಯಸಳೂರು-125, ಬೆಳಗೋಡು-29.4, ಹಾನಬಾಳು 61ಮತ್ತು ಹೆತ್ತೂರು 128.4ಮಿಮೀ. ಮಾರನಹಳ್ಳಿ-127.1 ಹೊಸೂರು-47., ಶುಕ್ರವಾರಸಂತೆ-94.3, ಬಾಳ್ಳುಪೇಟೆ-40.4ಮಿಮೀ ಮಳೆಯಾಗಿದೆ.
ಕಾಲೇಜು ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಅರಕಲಗೂಡು: ಅಗತ್ಯ ಕೊಠಡಿಗಳಿಲ್ಲದೇ ಸಕಾಲದಲ್ಲಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಇರುವ ಕೊಠಡಿಗಳೂ ಜಲಾವೃತಗೊಂಡಿವೆ. ಸಂಪೂರ್ಣ ಶಿಥಿಲಾವಸ್ಥೆ ಹೊಂದಿರುವ ಕಟ್ಟಡದ ಮೇಲಿಂದ ನೀರು ಬೀಳುತ್ತದೆ. ಯಾವ ಕ್ಷಣದಲ್ಲಿ ಮೇಲಿಂದ ಸಿಮೆಂಟ್ ಸೀಲಿಂಗ್ ತಲೆ ಮೇಲೆ ಬೀಳುತ್ತದೋ ಎಂಬ ಆತಂಕದಲ್ಲಿ ಪಾಠ ಕೇಳಬೇಕು. ಇಂತಹ ವಾತಾವರಣದಿಂದ ತಮ್ಮನ್ನು ಮುಕ್ತಗೊಳಿಸಿ ಎಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಂಗಳವಾರ ತರಗತಿಗಳನ್ನು ಬಹಿಷ್ಕರಿಸಿ ಹೊರ ಬಂದ ವಿದ್ಯಾರ್ಥಿಗಳು ಈಗಾಗಲೇ ಪ್ರಗತಿಯಲ್ಲಿರುವ ನೂತನ ಕಟ್ಟಡದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷ ಭಾಸ್ಕರ್ ಮಾತನಾಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೂತನ ಕಟ್ಟಡದ ಕಾಮಗಾರಿ ಅರ್ಧಕ್ಕೇ ನಿಂತಿದೆ. ಅಧಿಕಾರಿಗಳ ನಿರ್ಲಕ್ಷವನ್ನೇ ಮುಂದಿಟ್ಟುಕೊಂಡು ಗುತ್ತಿಗೆದಾರರು ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುತ್ತಿಲ್ಲ. ಸದರಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮೋಹನ್ಕುಮಾರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಣೇಶ್, ಪ್ರಾಚಾರ್ಯ ನಿರ್ವಾಣಿಗೌಡ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರೇವಣ್ಣ ಇದ್ದರು. ಪ್ರತಿಭಟನೆಯ ನೇತೃತ್ವವನ್ನು ರಕ್ಷಣಾ ವೇದಿಕೆ ಮುಖಂಡರಾದ, ಕೃಷ್ಣಮೂರ್ತಿ, ಚೇತನಾ, ರಾಜೇಶ್, ಸೋಮಶೇಖರ್ ಹಾಗೂ ಲೋಕೇಶ್ ವಹಿಸಿದ್ದರು.
ಬಸ್ನಿಲ್ದಾಣದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ
ಅರಕಲಗೂಡು: ಪಟ್ಟಣದ ನೂತನ ಬಸ್ನಿಲ್ದಾಣ ಕೆಸರು ಗದ್ದೆಯಾಗಿ ಪರಿವರ್ತನೆಗೊಂಡಿದ್ದು, ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸದೇ ಇರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿ ಇಲ್ಲಿನ ಕರ್ನಾಟಕ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಮಳೆ ನೀರಿನಿಂದ ಜಲಾವೃತಗೊಂಡು ಕೆಸರು ಗದ್ದೆಯಾಗಿದ್ದ ಬಸ್ನಿಲ್ದಾಣದಲ್ಲಿ ಮಂಗಳವಾರ ಬಸ್ನಿಲ್ದಾಣದಲ್ಲಿ ಬಾಳೆಗಿಡ ನಾಟಿ ಮಾಡುವ ಮೂಲಕ ಪ್ರತಿಭಟಿಸಿದರು. ಮಧ್ಯಾಹ್ನ 12.30ಕ್ಕೆ ನಿಲ್ದಾಣದಲ್ಲಿನ ಎಲ್ಲಾ ಸಾರಿಗೆ ಬಸ್ಸುಗಳನ್ನು ತಡೆದು, ನೀರು ನಿಂತಿರುವ ನಿಲ್ದಾಣದಲ್ಲಿ ಹತ್ತಾರು ಬಾಳೆಗಿಡಗಳನ್ನು ನೆಟ್ಟು, ಸಂಚಾರಕ್ಕೆ ತಡೆ ಮಾಡಿದರಲ್ಲದೇ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ಕಳೆದ ಎರಡು ವರ್ಷಗಳಿಂದಲೂ ಕೂಡ ನಿಲ್ದಾಣದ ಅಭಿವೃದ್ಧಿ ಕೆಲಸ ಕುಂಟುತ್ತಾ ಸಾಗಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಧೂಳು ಹಾಗೂ ಮಳೆಗಾಲದಲ್ಲಿ ಗದ್ದೆಯಂತಿರುವ ಸ್ಥಳದಲ್ಲಿ ಹಾಜರಿದ್ದು ಬಸ್ ಏರುವ ಪರಿಸ್ಥಿತಿ ಇಲ್ಲಿನ ಪ್ರಯಾಣಿಕರದ್ದಾಗಿದೆ.ಈ ಪರಿಸ್ಥಿತಿ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿದೆ ಎಂದು ಆರೋಪಿಸಿದರು.ಎಡೆಬಿಡದೇ ಸುರಿಯುತ್ತಿರುವ ಜಡಿ ಮಳೆಯಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಯಾವುದೇ ಬಸ್ ಸಂಚಾರವಿರಲಿಲ್ಲ. ಪೊಲೀಸರ ಮಧ್ಯಸ್ಥಿಕೆಯಿಂದ ಪ್ರತಿಭಟನಾ ನಿರತರು ತಮ್ಮ ಹೋರಾಟ ಕೈಬಿಟ್ಟು ಬಸ್ ಸಂಚಾರಕ್ಕೆ ಅವಕಾಶಮಾಡಿಕೊಟ್ಟರು.ಪ್ರತಿಭಟನೆಯ ನೇತೃತ್ವವನ್ನು ವೀರಕನ್ನಡಿಗರ ಸೇನೆ ತಾಲೂಕು ಘಟಕದ ಅಧ್ಯಕ್ಷ ಅಜಿತ್ಕುಮಾರ್, ಪ್ರಧಾನ ಕಾರ್ಯದರ್ಶಿ ಮಧು, ಜಿಲ್ಲಾ ರೈತ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ಕಾಂತರಾಜು, ಹರೀಶ್ ಇತರರು ವಹಿಸಿದ್ದರು.
ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಇಂದು ಚುನಾವಣೆ
ಹಾಸನ: ಜಿಲ್ಲಾ ಪಂಚಾಯ್ತಿಯ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಜುಲೈ 23 ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಈ ಚುನಾವಣೆ ನಡೆಯುವುದು.
ರೈತ ಆತ್ಮಹತ್ಯೆ
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಬಿಟ್ಟಗೋಡನಹಳ್ಳಿ ಗ್ರಾಮದಲ್ಲಿ ರೈತನೊಬ್ಬ ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಜು.13 ಭಾನುವಾರ ಬೆಳೆಗೆ ಸಿಂಪಡಿಸುವ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಹೊಳೆನರಸೀಪುರದ ಆಸ್ಪತ್ರೆಗೆ ಕರೆದೊಯ್ದು ನಂತರ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೈತ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕೊನೆಯುಸಿರೆದಿದ್ದಾನೆ. ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಇತರೆ ಸಿಬ್ಬಂದಿವರ್ಗ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

