ಹಾಸನ

ಕೊಳಚೆ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು

Published On :

ಮಂಡ್ಯ: ಕೊಳಚೆ ಗುಂಡಿಗೆ ಬಿದ್ದು ಎರಡೂವರೆ ವರ್ಷದ ಗಂಡು ಮಗು ಸಾವನ್ನಪ್ಪಿರುವ ಘಟನೆ ನಗರದ ಕಾಳಿಕಾಂಬ ಸ್ಲಂ ಬಳಿ ಮಂಗಳವಾರ ನಡೆದಿದೆ.
ಯಾದಗಿರಿ ಜಿಲ್ಲೆಯ ಕಣೇಕಲ್  ಗ್ರಾಮದ ಸಣ್ಣ ಹನುಮ ಮತ್ತು ಯಲ್ಲಮ್ಮ ದಂಪತಿಯ ಪುತ್ರ ಪ್ರಜ್ವಲ್ ಸಾವನ್ನಪ್ಪಿದ ಮಗು.  ಯಾದಗಿರಿಯಿಂದ ಕೆಲ ಕೂಲಿ ಕಾರ್ಮಿಕರು ಗಾರೆ ಕೆಲಸಕ್ಕಾಗಿ ನಗರದ ಕಾಳಿಕಾಂಬ ಕೊಳಚೆ ಪ್ರದೇಶದ ಬಳಿ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸುತ್ತಿರುವ ಮನೆಗಳ ಕಟ್ಟಡ ನಿರ್ಮಾಣಕ್ಕೆ ಬಂದಿದ್ದರು.
ಕೊಳಚೆ ಪ್ರದೇಶದಲ್ಲಿ ಅರ್ಧಂಬರ್ಧ ನಿರ್ಮಾಣ ಮಾಡಲಾಗಿದ್ದ ಮನೆಗಳಲ್ಲೇ ವಾಸ್ತವ್ಯ ಹೂಡಿರುವ ಅವರು ಆರು ತಿಂಗಳಿಂದ ಅಲ್ಲೇ ಗಾರೆ ಕೆಲಸ ಮಾಡಿಕೊಂಡಿದ್ದರು. ಸಣ್ಣ ಹನುಮ ಮತ್ತು ಯಲ್ಲಮ್ಮ ದಂಪತಿಯೂ ತಮ್ಮ ಎರಡೂವರೆ ವರ್ಷದ ಗಂಡುಮಗುವಿನೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ತಮ್ಮ ತವರಿಗೆ ತೆರಳಿದ್ದ ಈ ಕುಟುಂಬ ಒಂದು ವಾರದ ಹಿಂದಷ್ಟೇ ಮತ್ತೆ ವಾಪಸಾಗಿತ್ತು.
ಮಂಗಳವಾರ ಬೆಳಗ್ಗೆ ಎಂದಿನಂತೆ ಸಣ್ಣ ಹನುಮ ಮತ್ತು ಯಲ್ಲಮ್ಮ ಕೆಲಸದಲ್ಲಿ ತೊಡಗಿದ್ದಾಗ ಪ್ರಜ್ವಲ್ ಕಾಳಿಕಾಂಬ ದೇವಸ್ಥಾನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದನು. ಇತ್ತೀಚೆಗೆ ನಗರಸಭೆ ವತಿಯಿಂದ ರಾಜಾಕಾಲುವೆ ಮೇಲೆ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಪಕ್ಕದಲ್ಲೇ ಗುಂಡಿ ತೆಗೆಯಲಾಗಿದೆ. ಗುಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿತ್ತು. ಆಟವಾಡುತ್ತಿದ್ದ ಪ್ರಜು ಗುಂಡಿ ಬಳಿ ಬಂದು ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ.
ಈ ವಿಚಾರ ತಿಳಿಯದ ಸಣ್ಣಿ ಹನುಮ ಹಾಗೂ ಯಲ್ಲಮ್ಮ ಮಗುವಿಗಾಗಿ ಸ್ಲಂನಲ್ಲಿ ಹುಡುಕಾಟ ನಡೆಸಿದ್ದಾರೆ.
ಒಂದು ಗಂಟೆ ಕಾಲ ಮಗುವಿಗಾಗಿ ಹುಡುಕಾಟ ನಡೆಸಿದ ದಂಪತಿ ಗುಂಡಿ ಬಳಿ ಬಂದಾಗ ಮಗುವಿನ ಚಪ್ಪಲಿ ಕೊಳಚೆ ನೀರಿನಲ್ಲಿ ತೇಲುತ್ತಿತ್ತು. ಯಲ್ಲಮ್ಮ ಕೂಡಲೇ ಗಂಡನನ್ನು ಕರೆದು ಗುಂಡಿಯೊಳಗೆ ಮಗು ಬಿದ್ದಿರಬಹುದೆಂದು ಶಂಕಿಸಿ ರೋಧಿಸಲಾರಂಭಿಸಿದಳು. ಇದರಿಂದ ಎಚ್ಚೆತ್ತ ಯುವಕರು ಕೊಳಚೆ ಗುಂಡಿಯೊಳಗೆ ಇಳಿದು ಮಗುವಿನ ಶವಕ್ಕಾಗಿ ಹುಡುಕಾಟ ನಡೆಸಿದರು. ಐದಾರು ಅಡಿ ಆಳದಲ್ಲಿ ಹೂಳಿಗೆ ಸಿಲುಕಿದ್ದ ಮಗುವನ್ನು ಮೇಲೆತ್ತಿದರು. ಈ ಸಮಯದಲ್ಲಿ ಮಗುವಿನ ಹೆತ್ತವರ ಆಕ್ರಂದನ ಎಲ್ಲರ ಕರುಳು ಹಿಂಡುವಂತಿತ್ತು.
 ನಂತರ ಮಗುವಿನ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.