ಹಾಸನ

ಹೇಮೆ ಅಚ್ಚುಕಟ್ಟು ರೈತರಿಗೆ ಹಾನಿ

Published On :


ಟಿ ಮಾದಿಹಳ್ಳಿ ವೆಂಕಟೇಶ್
ಚನ್ನರಾಯಪಟ್ಟಣ: ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರು ಕೊಂಡೊಯ್ಯಲು ಹಲವು ಒತ್ತಡಗಳಿಗೆ ಮಣಿದ ಅಧಿಕಾರಿಗಳು ಹೇಮಾವತಿ ಎಡದಂಡೆ ನಾಲೆಗೆ ಅಧಿಕ ಪ್ರಮಾಣದ ನೀರು ಹರಿಸಿ ನಾಲೆಯ ಅಚ್ಚುಕಟ್ಟುದಾರರಿಗೆ ತೀವ್ರ ಹಾನಿಯನ್ನು ಉಂಟು ಮಾಡಿದ್ದಾರೆ.
ನಾಲೆ ನೀರು ನಿಲ್ಲಿಸಿ 7ತಿಂಗಳುಗಳು ಕಳೆದಿದ್ದು, ಎಂಬಾಕ್ ಮೆಂಟ್‌ಗಳು (ನಾಲೆಯ ಏರಿ) ಒಣಗಿದ್ದು, ಅವುಗಳ ಮೇಲೆ ಒಮ್ಮೆಲೆ ನೀರು ಹಾಯಿಸಿದಾಗ ನಾಲೆ ಒಡೆಯುವ ಸಂಭವವಿರುವುದು ಜನಸಾಮಾನ್ಯರಿಗೆ ತಿಳಿದ ವಿಷಯ. ಅಧಿಕಾರಿಗಳಿಗೂ ಇದು ತಿಳಿದಿದ್ದರೂ, ಮೇಲಿಂದ ಒತ್ತಡ ಇವೆಲ್ಲವನ್ನು ಮರೆಸಿರುವುದರಿಂದ ರೈತರು ಸಂಕಷ್ಟದ ಹಾದಿ ಹಿಡಿಯಬೇಕಾಗಿದೆ.
ಅಲ್ಪ ಮಾರ್ಪಾಡು: ಪಟ್ಟಣದ ಪಕ್ಕದಲ್ಲಿಯೇ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆಯನ್ನು ನಾಗಸಮುದ್ರ ಕೆರೆಗೆ ಸೇರಿಸಿ ಅದರಿಂದ ಮುಂದೆ ನೀರು ಮುಂದೆ ಹೋಗಲು ಅನುವು ಮಾಡಿದ್ದನ್ನು ಎಂಜನಿಯರ್‌ಗಳು ಅಲ್ಪ ಮಾರ್ಪಾಡು ಮಾಡಲು ಹೋಗಿ ರೈತರ ಬೆಳೆ ಹಾಗೂ ತುಮಕೂರಿಗೆ ಕುಡಿಯುವ ನೀರಿಗೆ ಹಾಹಾಕಾರ ತಂದಿದ್ದಾರೆ. ನಾಗಸಮುದ್ರ ಬಳಿ ನಾಲೆಯ ಎಂಬಾಕ್‌ಮೆಂಟ್ ನೇರ ಮಾಡಲು ರು.  3 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದು 6ತಿಂಗಳಾಗಿದೆ.  ಆದರೂ ಅದನ್ನು ನಿರ್ಮಿಸಲು ಮುಂದಾಗದ ಗುತ್ತಿಗೆದಾರರು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ನೀರು ಬಿಡುವ ಕೆಲ ದಿನಗಳಲ್ಲಿ ಭರದಿಂದ ಕಾಮಗಾರಿ ಪ್ರಾರಂಭಿಸಿ ಅವಸರವಾಗಿ ಕಾಮಗಾರಿ ಮಾಡುವ ಸಂದರ್ಭದಲ್ಲಿ ಕೆಲ ನಿಯಮಗಳನ್ನು ಪಾಲಿಸದಿರುವುದೇ ನಾಲೆಯ ಒಡಕಿಗೆ ಕಾರಣವಾಗಿದೆ.
ಕಳಪೆ ಕಾಮಗಾರಿ: ನಾಗಸಮುದ್ರ ಬಳಿ 30ವರ್ಷಗಳ ಹಿಂದೆ ಕೆರೆಯ ಮಧ್ಯದಲ್ಲಿಯೇ ಒಂದೆಡೆ ಎಂಬಾಕ್‌ಮೆಂಟ್ ನಿರ್ಮಿಸಿ ನೀರು ತೆಗೆದುಕೊಂಡು ಹೋಗಿದ್ದು, ಅದನ್ನು ಆಧುನಿಕರಣ ಮಾಡಲು ಮತ್ತೊಂದು ಎಂಬಾಕ್‌ಮೆಂಟ್ ನಿರ್ಮಿಸಲು ಮೂರು ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದು ಬೇಸಿಗೆಯಲ್ಲಿ ಗುತ್ತಿಗೆದಾರನಿಗೆ ಕಾಮಗಾರಿ ಪ್ರಾರಂಭಿಸಲು ಒತ್ತಡ ಹಾಕದೆ ಕಳೆದ 15ದಿನಗಳಿಂದ ಕಾಮಗಾರಿ ಪೂರ್ಣಗೊಳಿಸಲು ಹಗಲು ರಾತ್ರಿಯೆನ್ನದೆ ಕಾಮಗಾರಿ ಮಾಡಲಾಗಿದೆ. ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡದ ಕಾರಣ ಎಂಬಾಕ್‌ಮೆಂಟ್‌ಗೆ ಹಾಕಿರುವ ಗ್ರಾವಲ್ ಮಣ್ಣು ಕಳಪೆ ಮಟ್ಟದಲ್ಲಿರುವುದರಿಂದ ಕಾಂಕ್ರಿಟ್‌ನಲ್ಲಿ ಕಾಣಿಸಿಕೊಂಡ ಬಿರುಕು ನಾಲೆ ಒಡೆಯಲು ಕಾರಣವಾಗಿದೆ.
ಅಪಾಯವಾಗಿಲ್ಲ: ಒಮ್ಮೆಲೆ 2300 ಕ್ಯುಸೆಕ್ಸ್ ನೀರನ್ನು ನಾಲೆಗೆ ನೀರು ಹರಿಸಿದ್ದು, ಒಂದು ದಿನದಲ್ಲಿಯೇ ನಾಗಸಮುದ್ರ ಬಳಿಗೆ ಕೇವಲ 1800 ಕ್ಯುಸೆಕ್ ನೀರು ಹರಿದಿದ್ದು, 2300 ಕ್ಯೂಸೆಕ್‌ಕ್ನೀರು ನಾಲೆಯಲ್ಲಿದ್ದಾಗ ಒಡಕು ಬಂದಿದ್ದರೆ ಚನ್ನರಾಯಪಟ್ಟಣದ ಹಲವು ಭಾಗ ನೀರಿನಿಂದ ಆವರಿಸಿಕೊಳ್ಳುವುದರ ಜತೆಗೆ ಜನಜೀವನ ಅಸ್ತವ್ಯಸ್ಥಗೊಳ್ಳಬೇಕಾದ ಪರಿಸ್ಥಿತಿ ಬರುತ್ತಿತ್ತು.


ಪರಿಹಾರವಿಲ್ಲ


ನಾಲ್ಕು ವರ್ಷಗಳಿಂದ ಸತತವಾಗಿ ಎಂಬಾಕ್‌ಮೆಂಟ್‌ಗಳು ಒಡೆಯುತ್ತಾ ಬಂದಿದ್ದು, ಒಡೆದಾಗಲೆಲ್ಲಾ ರೈತರು ಬೆಳೆದ ಬೆಳೆಗಳು ಹಾಳಾಗಿವೆ. ಹಾಳಾದ ಕೋಟಿ ಬೆಲೆ ಬಾಳುವ ಬೆಳೆಗೆ ಜಿಲ್ಲಾಡಳಿತ ನೀಡಿರುವುದು ಕೇವಲ ಸಾವಿರ ರು.ಗಳ ಪರಿಹಾರವಾಗಿರುವುದರಿಂದ ಅಲ್ಲಿಯೂ ರೈತರಿಗೆ ನಷ್ಟವಾಗಿದೆ.  ಎಕರೆ ಶುಂಠಿ, ಬಾಳೆ ಹಾಗೂ ಇತರೆ ವಾಣಿಜ್ಯ ಬೆಳೆಯಿಂದ ರೈತನಿಗೆ ಲಕ್ಷಕ್ಕೂ ಹೆಚ್ಚು ಹಣ ಸಿಗುವುದು ಖಚಿತವಾಗಿದೆ. ಆದರೆ ಸರ್ಕಾರ ನೀಡುವ ಪರಿಹಾರ 10 ಸಾವಿರ ಮೀರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಇಂದಿನ ವೈಜ್ಞಾನಿಕ ಬೆಲೆಯನ್ನು ಪರಿಹಾರವಾಗಿ ನೀಡಬೇಕೆನ್ನುವುದು ರೈತರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.