ಅನಧಿಕೃತ ಮರಳು ಸಂಗ್ರಹ ಮುಟ್ಟುಗೋಲು
ಕನ್ನಡಪ್ರಭ ವಾರ್ತೆ ಹಾಸನ ಜೂ. 3
ಅಕ್ರಮ ಮರಳುಗಾರಿಕೆ ತಡೆಗಟ್ಟಬೇಕು ಹಾಗೂ ಅನಧಿಕೃತವಾಗಿ ಶೇಖರಣೆ ಮಾಡಿಕೊಂಡಿರುವ ಮರಳನ್ನು ಸೀಜ್ ಮಾಡುವಂತೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಅಧಿಕಾರಗಳ ಸಭೆ ನಡೆಸಿದ ಅವರು, ಮರಳು ನೀತಿ ಜಾರಿಯಲ್ಲಿದ್ದರೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕೆಲಸದ ಒತ್ತಡ ಇದ್ದದ್ದನ್ನೆ ಉಪಯೋಗ ಮಾಡಿಕೊಂಡ ದಂಧೆಕೋರರು ಅಕ್ರಮ ಎಸಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಒಂದು ದಿನ ಅಕ್ರಮ ಮರಳುಗಾರಿಕೆಯ ಮೇಲೆ ದಾಳಿ ನಡೆಸಿ ಸುಮ್ಮನಾಗದೆ ನಿರಂತರ ಪರಿಶೀಲನೆ ಕೈಗೊಳ್ಳಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿಲ್ಲ. ಇರುವಂತಹ 37 ಹೋಬಳಿಯ ಬೈಕಿ ಕೆಲವೊಂದು ಹೋಬಳಿಗಳಲ್ಲಿ ಮಾತ್ರ ಅಕ್ರಮ ನಡೆಯುತ್ತಿದೆ. ಅಂತಹ ಹೋಬಳಿಯನ್ನು ಗುರುತಿಸಿ ಅಧಿಕಾರಿಗಳನ್ನು ನಿಯೋಜಿಸಿ ಅಲ್ಲಿ ಕಟ್ಟೇಚ್ಚರ ವಹಿಸಬೇಕು. ತಹಸೀಲ್ದಾರ್ ಅವರು ಸ್ಥಳೀಯ ಸಬ್ ಇನ್ಪೆಕ್ಟರ್ಅನ್ನು ನಿಯೋಜಿಸಿಕೊಂಡು ಅಕ್ರಮ ಮರಳುಗಾರಿಕೆ ತಡೆಗಟ್ಟಬೇಕು. ಅದನ್ನು ಬಿಟ್ಟು ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಬಗ್ಗೆ ತಿಳಿದಿದ್ದರೂ ತಿಳಿಯದವರಂತೆ ವರ್ತಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಅಧಿಕಾರಿಗಳು ಅಕ್ರಮ ಮರಳುಗಾರಿಕೆಯನ್ನು ತಡೆಯುವುದಕ್ಕೆ ಪೊಲೀಸ್ನವರು ಬರೋದಿಲ್ಲ, ಲೋಕೋಪಯೋಗಿ ಇಲಾಖೆಯವರು ಬರೋದಿಲ್ಲ ಅಂತ ಕಾರಣವನ್ನು ನೀಡಬಾರದು. ಆ ರೀತಿ ಏನಾದರೂ ಅಧಿಕಾರಿಗಳು ನಡೆದುಕೊಂಡರೆ ಅಂತಹವರ ವಿರುದ್ಧ ಲಿಖಿತ ದೂರು ನೀಡಿ. ಅದನ್ನು ಬಿಟ್ಟು ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡುವುದು ಸರಿಯಲ್ಲ. ಇದು ಸರ್ಕಾರದ ಕೆಲಸವಾಗಿದೆ. ಆದ್ದರಿಂದ ತಹಸೀಲ್ದಾರ್ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು.
ಹೋಬಳಿಯೊಂದರಲ್ಲಿ ಒಂದೆರಡು ಕಡೆ ಅಕ್ರಮ ಮರಳುಗಾರಿಕೆ ಮಾಡಬಹುದು. ಅಂತಹ ಪ್ರದೇಶವನ್ನು ಗುರುತಿಸಿ ಅಲ್ಲಿಗೆ ಗ್ರಾಮಲೆಕ್ಕಿಗರು, ರೆವಿನ್ಯು ಇನ್ಸ್ಪೆಕ್ಟರ್, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜವಾಬ್ದಾರಿ ಹೊರಿಸಿ. ಇವರು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆಗ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ ಎಂದರು.
ಚೆಕ್ ಪೋಸ್ಟ್ ಗಳನ್ನು ಮಾಡಿಕೊಳ್ಳಿ, ಹೋಬಳಿವಾರು ತಂಡಗಳನ್ನು ರಚಿಸಿಕೊಂಡು ಕಾರ್ಯನಿರ್ವಹಿಸುವಂತೆ ಈ ಹಿಂದಿನ ಸಭೆಯಲ್ಲಿಯೇ ತಿಳಿಸಿದ್ದರೂ ತಂಡವನ್ನು ರಚಿಸಿಕೊಂಡಿಲ್ಲ ಎಂದು ಕಿಡಿಕಾರಿದ ಜಿಲ್ಲಾಧಿಕಾರಿ ಅನ್ಬುಕುಮಾರ್, ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಅದನ್ನು ಸರ್ಕಾರದ ಗಮನಕ್ಕೆ ತನ್ನಿ. ಅದನ್ನು ಬಿಟ್ಟು ಸಿಬ್ಬಂದಿ ಇಲ್ಲ ಎಂದು ಸದಾಕಾಲ ಕಾರಣ ನೀಡುವುದು ಸೂಕ್ತವಲ್ಲ.
ಪ್ರತಿನಿತ್ಯ ಮಾಹಿತಿ ನೀಡಬೇಕು: ಪ್ರತಿನಿತ್ಯ ಎಷ್ಟು ಲಾರಿಗಳಿಗೆ ಮರಳು ಸಾಗಿಸಲು ಪರವಾನಗಿ ನೀಡಿರುವ ಬಗ್ಗೆ ಹಾಗೂ ಪ್ರತ್ಯೇಕ ಲಾರಿಗಳ ಮಾಹಿತಿಯನ್ನು ನೀಡಬೇಕು. ಈ ಹಿಂದೆಯೇ ಮಾಹಿತಿ ನೀಡುವಂತೆ ತಿಳಿಸಿದ್ದರು ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಜೊತೆಗೆ ಎಷ್ಟು ಲಾರಿಗಳ ಮೇಲೆ ದಂಡ ವಿಧಿಸಲಾಗಿದೆ, ಅನಧಿಕೃತವಾಗಿ ಹೆಚ್ಚುವರಿ ಮರಳನ್ನು ಸಾಗಿಸಿದ ಲಾರಿಗಳ ಮೇಲೆ ದಂಡ ವಿಧಿಸಿರುವುದು, ಮರಳು ಮಾರಾಟದಿಂದ ಬಂದಿರುವ ಹಣ ಸೇರಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಪರವಾನಗಿ ಯಾವ ಆಧಾರದ ಮೇಲೆ ನೀಡಲಾಗುತ್ತದೆ ಹಾಗೂ ಪ್ರತಿನಿತ್ಯ ಎಷ್ಟು ಲಾರಿಗಳಿಗೆ ಮರಳು ಸಾಗಿಸಲು ಪರವಾನಗಿ ನೀಡುವುದರ ಬಗ್ಗೆ ಮಾಹಿತಿ ನೀಡಬೇಕು. ಮಂಗಳೂರಿನ ಪರವಾನಗಿ ಹಿಡಿದುಕೊಂಡು ಹಾಸನದಲ್ಲಿ ಮರಳು ಹೊಡೆಯುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಭೈರಾಪುರದಲ್ಲಿ ಇರುವ ಚೆಕೆ ಪೋಸ್ಟ್ ನಲ್ಲಿ ನಮ್ಮ ಪೊಲೀಸನವರು ಇದ್ದರು ಸಹ ಅಲ್ಲಿ ಲಾರಿಗಳ ತಪಾಸಣೆಯನ್ನು ಅಧಿಕಾರಿಗಳು ಸರಿಯಾಗಿ ನಡೆಸುತ್ತಿಲ್ಲ. ಹಳ್ಳಿಗಳಲ್ಲಿ ಮರಳು ಶೇಖರಣೆ ಮಾಡಿಕೊಂಡಿರುತ್ತಾರೆ. ಆ ಬಗ್ಗೆ ಕೇಳಿದರೇ, ಅದು ದೇವಸ್ಥಾನಕ್ಕೆ ಮರಳು ಅಂತ ಜವಾಬು ನೀಡುತ್ತಾರೆ. ಆದ್ದರಿಂದ ಅಧಿಕಾರಿಗಳು ಅಕ್ರಮ ಮರಳುಗಾರಿಯ ವಿರುದ್ಧ ಕಚ್ಚುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಹಾಗೂ ಇತರರು ಇದ್ದರು.
ಲಾರಿಗಳಿಗೆ ರು. 1 ಲಕ್ಷದವರೆಗೆ ದಂಡ
ಅಕ್ರಮ ಮರಳುಗಾರಿಕೆಯಲ್ಲಿ ಸಿಕ್ಕಿಕೊಳ್ಳುವ ಲಾರಿಗಳಿಗೆ ಮೊದಲ ಬಾರಿ 15 ಸಾವಿರ ರು. ದಂಡವನ್ನು ವಿಧಿಸಿ, ಅದೇ ಲಾರಿ 2ನೇ ಬಾರಿ ಸಿಕ್ಕಿಕೊಂಡರೆ 50 ಸಾವಿರ ದಂಡ ವಿಧಿಸಿ. ಮತ್ತೆ ಮೂರನೇ ಸಿಕ್ಕಿದರೆ 1 ಲಕ್ಷ ರು.ಗಳವರೆಗೆ ದಂಡ ವಿಧಿಸಿ. ಅಧಿಕಾರಿಗಳು ಅಕ್ರಮ ಮರಳುಗಾರಿಕೆಯ ವಿರುದ್ಧ ನಿರಂತರ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಆದೇಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

