ಎತ್ತಿನಹೊಳೆ ಯೋಜನೆ: ಇನ್ನೆರಡು ವಾರದಲ್ಲಿ ಆರಂಭ
ಬೆಂಗಳೂರು: ಎತ್ತಿನಹೊಳೆ ಯೋಜನೆಯ ಕಾಮಗಾರಿ ಇನ್ನೆರಡು ವಾರದಲ್ಲಿ ಆರಂಭವಾಗಲಿದೆ ಎಂದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಯೋಜನೆಗೆ ಸಂಬಂಧಿಸಿ ಈಗಾಗಲೇ ಎರಡು ಹಂತದ ಸಮೀಕ್ಷೆ ನಡೆದಿದೆ. ಸಂಪೂರ್ಣ ಕಾಮಗಾರಿಯ ಸಮೀಕ್ಷೆಗಳು ಇನ್ನೆರಡು ವಾರದೊಳಗೆ ಮುಗಿಯಲಿದೆ. ಡಿಪಿಎಆರ್ ಕೂಡ ನಡೆಯುತ್ತಿದ್ದು, ಜೂನ್ ಮಧ್ಯದಲ್ಲಿ ಯೋಜನೆಯ ಕಾಮಗಾರಿ ಆರಂಭಿಸಲಾಗುವುದು ಎಂದು ವಿಧಾನಸೌಧಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ಅವರು ಹೇಳಿದರು.
ಸಮೀಕ್ಷೆಯನ್ನು ಕ್ಷಿಪ್ರಗತಿಯಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯದೊಳಗೆ ಗುತ್ತಿಗೆದಾರರ ಸಭೆ ನಡೆಸುತ್ತಿದ್ದೇನೆ. ಈಗಾಗಲೇ ಕೆಲ ಸಣ್ಣ ಪ್ರಮಾಣದ ಕೆಲಸಗಳು ಪ್ರಾರಂಭವಾಗಿದ್ದು, ಇನ್ನೆರಡು ವಾರದಲ್ಲಿ ಸಂಪೂರ್ಣ ಕಾಮಗಾರಿ ಆರಂಭವಾಗಲಿದೆ ಎಂದು ಪಾಟೀಲ್ ವಿವರಿಸಿದರು. ಎತ್ತನಹೊಳೆ ಯೋಜನೆಯು ಬಯಲುಸೀಮೆ ಜಿಲ್ಲೆಗಳ ಸಾಮಾಜಿಕ ವ್ಯವಸ್ಥೆ ಬದಲಿಸಲಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಹೆಸರು ಬದಲಿಸಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ. ರಾಷ್ಟ್ರೀಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ವರದಿ ಪ್ರಕಾರ ಈ ಯೋಜನೆಯಿಂದ 23.67 ಟಿಎಂಸಿ ನೀರು ದೊರೆಯುತ್ತದೆ. ನೇತ್ರಾವತಿ ನದಿ ಪಾತ್ರದಿಂದ ಕೇವಲ ಶೇ.76ರಷ್ಟು ನೀರನ್ನು ಮಾತ್ರ ಇಧಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಈ ಸಂಬಂಧ ದಕ್ಷಿಣ ಕನ್ನಡ ರಾಜಕೀಯ ಹಾಗೂ ಸಾಮಾಜಿಕ ಮುಖಂಡರ ಸಭೆ ನಡೆಸಿದ್ದೇನೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕೂಡ ನಡೆಯಲಿದೆ. ಆಗ ಆ ಜಿಲ್ಲೆಯ ಜನರ ಆತಂಕಗಳಿಗೆ ಖುದ್ದು ಮುಖ್ಯಮಂತ್ರಿ ಉತ್ತರಿಸಲಿದ್ದಾರೆ ಎಂದು ಹೇಳಿದ ಪಾಟೀಲ್, ಎತ್ತಿನಹೊಳೆ ಯೋಜನೆಗೆ ಅವರದೇ ಪಕ್ಷದ ಮುಖಂಡರು ವಿರೋಧಿಸಿದ್ದು ಚುನಾವಣೆಗೆ ಸೀಮಿತ ಎಂದು ಹೇಳಿದರು.
ಕಾನೂನು ಹೋರಾಟಕ್ಕೆ ನಾರಿಮನ್ ಜತೆ ಚರ್ಚೆ: ಕೃಷ್ಣಾ, ಕಾವೇರಿ, ಮಹಾದಾಯಿ ನದಿ ನೀರು ಬಳಕೆ ಹಾಗೂ ಸುಪ್ರೀಂ ಕೋರ್ಟ್ನಲ್ಲಿರುವ ಅರ್ಜಿಗಳ ಕುರಿತಂತೆ ಹಿರಿಯ ವಕೀಲ ನಾರಿಮನ್ ಜತೆ ಚರ್ಚೆ ನಡೆಸುತ್ತಿದ್ದೇವೆ. ವಿಶೇಷವಾಗಿ ಮಹಾದಾಯಿ ನದಿಯ 7.64 ಟಿಎಂಸಿ ನೀರಿನ ಬಳಕೆಗಾಗಿ ಯೋಜನೆ ರೂಪಿಸಲು ಸುಪ್ರೀಂ ಕೋರ್ಟ್ನ ಅನುಮತಿ ಪಡೆಯುವ ಬಗ್ಗೆ ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು. ಕರ್ನಾಟಕದ ಪಾಲಿಗೆ ಸಿಗುವ ನೀರಿನ ಮೂಲಕವೇ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ನೀಡಬೇಕಿದೆ. ಇದೇ ತರಹದಲ್ಲಿ ಕಾವೇರಿ ವಿಚಾರದಲ್ಲಿಯೂ ತಮಿಳುನಾಡು ವರ್ತಿಸಿತ್ತು. ಕೋರ್ಟ್ ಅನುಮತಿ ಪಡೆದು ಯೋಜನೆ ಪ್ರಾರಂಭಿಸುವ ಚಿಂತನೆಯಿದೆ. ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ನಾರಿಮನ್ ಜತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಹಾಗೂ ಕಾವೇರಿ ವಿವಾದ ಕುರಿತಂತೆಯೂ ಚರ್ಚೆ ನಡೆಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸ್ಪಷ್ಟ ನಿಲುವು ತಳೆಯಲಾಗುವುದು ಎಂದು ಅಭಿಪ್ರಾಯಪಟ್ಟರು.
ಹೂಳು ತೆಗೆಯುವುದು ಅಸಾಧ್ಯ: ಭದ್ರಾ ಆಣೆಕಟ್ಟಿನಲ್ಲಿಯೇ ಸುಮಾರು 34 ಟಿಎಂಸಿ ಹೂಳು ತುಂಬಿದೆ. ಇದನ್ನು ತೆಗೆದು ಬೇರೆಡೆ ಸ್ಥಳಾಂತರಿಸುವುದು ಅಸಾಧ್ಯದ ಮಾತು. ಅಲ್ಲಿ ತುಂಬಿರುವ ಹೂಳನ್ನು ಹಾಕಲು ಸುಮಾರು 1 ಲಕ್ಷ ಹೆಕ್ಟೇರ್ ಭೂಮಿ ಬೇಕಿದೆ. ಈ ಹಿನ್ನೆಲೆಯಲ್ಲಿ ಕೆಲ ವೈಜ್ಞಾನಿಕ ವ್ಯವಸ್ಥೆ ಮೂಲಕ ಹೂಳು ತೆಗೆಯಲು ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

