ಹಾಸನ

ನಿರ್ಲಕ್ಷಿತ ಹಳ್ಳಿಮೈಸೂರು ರಸ್ತೆಗಳ ಸ್ಥಿತಿ ಚಿಂತಾಜನಕ

Published On :

ಕನ್ನಡಪ್ರಭ ವಾರ್ತೆ  ಹೊಳೆನರಸೀಪುರ  ಜೂ. 5
ಹೆಸರಿನಲ್ಲಿ ಮೈಸೂರು ಎಂದಿದ್ದರೂ, ಮೊದಲಿಗೆ ಹಳ್ಳಿ ಎಂದಿರುವ ಕಾರಣದಿಂದಾಗಿಯೋ ಏನೋ ತಾಲೂಕಿನ ಹಳ್ಳಿಮೈಸೂರು ಹೋಬಳಿಯು ಅಭಿವೃದ್ಧಿಯ ವಿಷಯದಲ್ಲಿ ನಿರಂತರ ತಾತ್ಸಾರಕ್ಕೆ ಒಳಗಾಗಿ ಇಲ್ಲಿನ ಬಹುತೇಕ ರಸ್ತೆಗಳ ಸ್ಥಿತಿ ಇಂದಿಗೂ ಸಂಚಾರಕ್ಕೆ ಯೋಗ್ಯವಲ್ಲದಷ್ಟು ಹದಗೆಟ್ಟಿದೆ. ಈ ಭಾಗದ ಜನರ ಆಕ್ರೋಶಕ್ಕೆ ರಸ್ತೆಗಳ ದುಸ್ಥಿತಿ ನೇರ ಕಾರಣವಾಗಿದೆ. ಆದರೂ ಜನರ ಈ ಸಂಕಷ್ಟದ ಸಂಚಾರದ ಕೂಗು ಇಲ್ಲಿನ ಜನಪ್ರತಿನಿಧಿಗಳಿಗೆ ಕೇಳುತ್ತಿಲ್ಲವೇಕೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಮೂರು ಹೋಬಳಿಗಳನ್ನು ಒಳಗೊಂಡಿರುವ ತಾಲೂಕಿನಲ್ಲಿ ಅತಿ ಹೆಚ್ಚು ಹಿಂದುಳಿದಿರುವ ಹೋಬಳಿ ಹಳ್ಳಿಮೈಸೂರು. ಇದು ಆಡಳಿತಾತ್ಮಕವಾಗಿ ತಾಲೂಕಿಗೆ ಸೇರಿದ್ದರೂ ಕ್ಷೇತ್ರ ಪುನರ್ವಿಗಂಡಣೆಯ ಹಿನ್ನೆಲೆಯಲ್ಲಿ ಪಕ್ಕದ ಅರಕಲಗೂಡು ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಕಾರಣದಿಂದಾಗಿ ಇಬ್ಬರು ಭಿನ್ನ ಪಕ್ಷಗಳ ಶಾಸಕರು ಆಡಳಿತಾತ್ಮಕ ತಿಕ್ಕಾಟದ ನಡುವೆ ರಸ್ತೆಗಳಲ್ಲಿ ಸಂಚರಿಸುವ ಜನರ ಪಾಡು ದೇವರಿಗೇ ಪ್ರೀತಿ.
ಭೌಗೋಳಿಕವಾಗಿ ತಾಲೂಕಿನಲ್ಲೇ ಇದ್ದರೂ, ಮತದಾನ ಮಾಡುವುದು ಪಕ್ಕದ ಅರಕಲಗೂಡು ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗೆ, ಆದ್ದರಿಂದಲೇ ಹಳ್ಳಿಮೈಸೂರು ಹೋಬಳಿ ನಿರಂತರವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಇದೆ. ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ಎನ್ನುವಂತೆ ಅಭಿವೃದ್ಧಿಯಲ್ಲಿ ಅವಿರತವಾಗಿ ಶೋಷಣೆಗೆ ಒಳಗಾಗುತ್ತಲೇ ಇರುವ ಹಳ್ಳಿಮೈಸೂರು ಹೋಬಳಿಯದು ತ್ರಿಶಂಕು ಸ್ವರ್ಗದ ಸ್ಥಿತಿಯಾಗಿದೆ.
ಹಳ್ಳಿಮೈಸೂರು ಹೋಬಳಿಗೆ ಸೇರಿದ ಬಹುತೇಕ ಹಳ್ಳಿಗಳಲ್ಲಿನ ರಸ್ತೆಗಳ ಸ್ಥಿತಿ ಇಂದಿಗೂ ಸಂಚಾರಕ್ಕೆ ಅಸಹನೀಯವಾಗಿದೆ, ಹೊಳೆನರಸೀಪುರದಿಂದ ಪಕ್ಕದ ಮಂಡ್ಯ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ನೇರ ರಸ್ತೆಯಾದ ಆಲಗೌಡನಹಳ್ಳಿ, ಶ್ರವಣೂರು, ಮಂದಗೆರೆಯಿಂದ ಕಿಕ್ಕೇರಿಯವರೆಗಿನ ರಸ್ತೆಯು ಮಂಡ್ಯ ಜಿಲ್ಲೆಯ ಮಂದಗೆರೆಯಿಂದ ಆಚೆಗೆ ಉತ್ತಮವಾಗಿದೆ. ಆದರೆ, ಜಿಲ್ಲೆಗೆ ಸೇರಿರುವ ಮಂದಗೆರೆಯಿಂದ ಈಚೆಗಿನ ರಸ್ತೆಯು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಲೋಕ ಕಲ್ಯಾಣದ ಕಾರ್ಯಗಳನ್ನು ಕಣ್ಣೆದುರಿಗೆ ನಿಲ್ಲಿಸುತ್ತದೆ. ಲೋಕೋಪಯೋಗಿ ಇಲಾಖೆಯೆಂಬುದು ಇದೆಯೋ ಇಲ್ಲವೋ ಎನ್ನುವ ಅನುಮಾನಗಳು ಮೂಡುವಷ್ಟರ ಮಟ್ಟಿಗೆ ಇಲ್ಲಿನ ರಸ್ತೆಗಳು ಹದೆಗೆಟ್ಟಿವೆ.
ಈ ಭಾಗದಲ್ಲಿನ ರಸ್ತೆಗಳನ್ನು ದುರಸ್ಥಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ವಿನಮ್ರ ಮನವಿಯನ್ನು ಮತ ನೀಡಿದ ತಪ್ಪಿಗಾಗಿ ಇಲ್ಲಿನ ಮತದಾರರು ತಮ್ಮ ಜನಪ್ರತಿನಿಧಿಗಳಲ್ಲಿ ಕೇಳಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.