ಮರಳು ಕೊರತೆ: ಅರ್ಧಕ್ಕೆ ಕಾಮಗಾರಿಗಳು ಸ್ಥಗಿತ
ಸಕಲೇಶಪುರ: ಅಕ್ರಮ ಮರಳುಗಾರಿಕೆಯ ಮೇಲೆ ತಾಲೂಕು ಆಡಳಿತ ಬಿಗಿ ಕ್ರಮ ಕೈಗೊಂಡ ನಂತರ ಪಟ್ಟಣದಲ್ಲಿ ಮರಳು ಕೊರತೆ ಕಾಣಿಸಿಕೊಂಡಿರುವ ಪರಿಣಾಮ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ.
ಹೌದು ತಾಲೂಕಿನಾದ್ಯಂತ ಹೇಮಾವತಿ ನದಿಯಲ್ಲಿ 10 ಕೇಂದ್ರಗಳಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ಪಡೆದಿರುವ ಆಂದ್ರ ಪ್ರದೇಶದ ವ್ಯಕ್ತಿ ಕೇವಲ ಹಾಲೇಬೇಲೂರು ಗ್ರಾಮದಲ್ಲಿ ಮಾತ್ರ ಮರಳುಗಾರಿಕೆ ನಡೆಸುತ್ತಿದ್ದ ಪರಿಣಾಮ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಗೆ ಕುಮ್ಮಕ್ಕು ನೀಡಿದಂತಾಗಿತ್ತು. ಆದರೆ ಅಕ್ರಮ ಮರಳುಗಾರಿಕೆಯಿಂದಾಗಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ಕೂಗು ಬಲವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಉಪ ವಿಭಾಗಧಿಕಾರಿಗಳ ನೇತೃತ್ವದಲ್ಲಿ ಕಳೆದ 15 ದಿನಗಳ ಹಿಂದೆ ತಾಲೂಕಿನಾದ್ಯಂತ ಅಧಿಕಾರಿಗಳ ತಂಡ ದಾಳಿ ನಡೆಸಿ ಸಂಗ್ರಹಿಸಿಟ್ಟಿದ್ದ ಅಕ್ರಮ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಲ್ಲದೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವ ಬಗ್ಗೆ ಹೇಳಿಕೆ ನೀಡಿದ್ದರಿಂದಾಗಿ ಕಳೆದ 15 ದಿನಗಳಿಂದ ಅಕ್ರಮ ಮರಳುಗಾರಿಕೆ ಬಹುತೇಕ ಹತೋಟಿಗೆ ಬಂದಿದೆ.
ಆದರೆ, ಅಧಿಕಾರಿಗಳು ವಶಪಡಿಸಿಕೊಂಡ ಮರಳನ್ನು ಪರವಾನಗಿ ಪಡೆದಿರುವ ಗುತ್ತಿಗೆದಾರರಿಗೆ ಮಾತ್ರ ಹಂಚುವ ನಿರ್ದಾರವನ್ನು ತಾಲೂಕು ಆಡಳಿತ ಮಾಡಿರುವುದರಿಂದ ಸಂಗ್ರಹಿಸಿಟ್ಟಿದ್ದ ಮರಳನ್ನು ಅಕ್ರಮ ಮರಳುಗಾರರೆ ಇತರ ಗುತ್ತಿಗೆದಾರರ ಹೆಸರಿನಲ್ಲಿ ಮತ್ತೆ ಪಡೆದಿದ್ದು ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಟ್ರ್ಯಾಕ್ಟರ್ಗಳಿಗೆ ಎರಡರಿಂದ ಮೂರು ಸಾವಿರದವರೆಗೆ ಮಾರಾಟ ಮಾಡುತ್ತಿದೆ.
ಸಂಗ್ರಹಿಸಿಟ್ಟ ಮರಳು ಸಹ ಮುಕ್ತಾಯವಾಗಿದೆ. ಇತ್ತ ಮರಳುಗಾರಿಕೆಗೆ ಗುತ್ತಿಗೆ ಪಡೆದಿರುವ ವ್ಯಕ್ತಿ ಸಹ ಇತರೆ ಪ್ರದೇಶಗಳಲ್ಲಿ ಮರಳು ತೆಗೆಯಲು ಮುಂದಾಗದಿರುವುದರಿಂದ ಮರಳು ಕೊರತೆ ಕಾಣಿಸಿಕೊಂಡಿದ್ದು, ನಿರ್ಮಾಣ ಹಂತದಲ್ಲಿದ್ದ ಕಾಮಗಾರಿಗಳೆಲ್ಲ ಮರಳು ಕೊರತೆಯಿಂದಾಗಿ ಸ್ಥಗಿತಗೊಳ್ಳುವಂತಾಗಿದೆ.
ಮರಳುಗಾರಿಕೆ ಗುತ್ತಿಗೆ ಪಡೆದಿರುವ ವ್ಯಕ್ತಿ ತಾವು ಪಡೆದಿರುವ ನದಿ ಪಾತ್ರದ ಎಲ್ಲಾ ಕೇಂದ್ರಗಳಲ್ಲೂ ಮರಳುಗಾರಿಕೆಯನ್ನು ಏಕಕಾಲಕ್ಕೆ ಆರಂಭಿಸಬೇಕು ಎಂಬ ನಿಯಮವಿದ್ದರೂ ಕೇವಲ ಒಂದು ಕೇಂದ್ರಗಳಲ್ಲಿ ಮರಳುಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರು ಗುತ್ತಿಗೆ ನಿಯಮ ಉಲ್ಲಂಘಿಸಿದ್ದರು ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

