ಕಾವೇರಿಗಾಗಿ ಪಕ್ಷಾತೀತವಾಗಿ ಹೋರಾಡಿ
ಕನ್ನಡಪ್ರಭ ವಾರ್ತೆ, ಹಾಸನ. ಜೂ 21
ರಾಜಕೀಯ ಬಿಟ್ಟು ಸಂಸತ್ ಒಳಗೆ ಹಾಗೂ ಹೊರಗೆ ರಾಜ್ಯದ ಮೂರು ರಾಜಕೀಯ ಪಕ್ಷಗಳು ಒಂದೇ ಧ್ವನಿಯಾಗಿ ಹೋರಾಟ ಮಾಡಿದರೆ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಅಷ್ಟೋ ಇಷ್ಟೋ ಪರಿಹಾರ ಸಿಗಬಹುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ಗಳು ಒಂದಾಗಿ ಹೋರಾಟ ಮಾಡದೇ ಹೋದ್ರೆ, ಮುಂದಿನ ದಿನಗಳಲ್ಲಿ ನಾಡಿಗೆ ಸಂಕಷ್ಟದ ದಿನಗಳು ಕಾದಿವೆ ಎಂದು ಎಚ್ಚರಿಸಿದರು.
ಕೊನೆಯ ಘಟ್ಟಕ್ಕೆ ಬಂದಿರುವ ಕಾವೇರಿ ನೀರು ಹಂಚಿಕೆ ವಿವಾದ ವಿಷಯದಲ್ಲಿ ಮೂರೂ ಪಕ್ಷಗಳು ಏಕರೀತಿಯಲ್ಲಿ ಇರಬೇಕು ಮತ್ತು ಹೋರಾಟ ಮಾಡಬೇಕು. ಈ ವಿಷಯದಲ್ಲಿ ನಾವು ಒಂದಾಗಿ ತುಂಬಾ ಶ್ರಮ ಪಡಬೇಕಿದೆ. ಈ ಹಿಂದೆ ಒಂದೊಂದು ಸರಕಾರಗಳು ಒಂದೊಂದು ರೀತಿಯ ನಿಲುವು ತೆಗೆದುಕೊಂಡಿದ್ದರಿಂದಲೇ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ.
ಸಂಕಷ್ಟ: ಈಗಲಾದರೂ ಬುದ್ಧಿ ಕಲಿತು ಮೂರೂ ಪಕ್ಷಗಳೂ ಸಂಸತ್ನ ಒಳಗೆ ಮತ್ತು ಹೊರಗೆ ಒಂದೇ ದನಿಯಲ್ಲಿ ಹೋರಾಟ ಮಾಡಬೇಕು. ಇಲ್ಲವಾದರೆ ನಾಡಿಗೆ ಕಷ್ಟದ ದಿನಗಳು ಎದುರಾಗಲಿವೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ನಾವು ಏನೇ ಮಾತನಾಡಿದರೂ, ತಮಿಳುನಾಡಿನವರು ಕಾಲು ಕೆರೆದು ನಿಲ್ಲುತ್ತಾರೆ. ಎಲ್ಲಾ ಹಂತದಲ್ಲೂ ನಮ್ಮ ವಿರುದ್ಧ ಸುಪ್ರೀಂಕೋ ಮತ್ತು ಕೇಂದ್ರಕ್ಕೆ ದೂರು ನೀಡುತ್ತಾರೆ. ಹೀಗಾಗಿ ರಾಜಕೀಯ ಹೇಳಿಕೆ ನಿಲ್ಲಿಸಿ ಎಲ್ಲರೂ ಒಂದಾಗಿ ಹೋರಾಟ ಮಾಡುವುದು ತುರ್ತು ಅಗತ್ಯವಾಗಿದೆ ಎಂದರು.
ನೀರಾವರಿ ವಿಷಯದಲ್ಲಿ ನಾಡಿನ ಹಿತ ಕಾಯುವ ಕಾಳಜಿಯಿಂದಲೇ ರಾಜಕೀಯ ಬಿಟ್ಟು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಗೆ ಆಹ್ವಾನ ಮಾಡಿದ ಕೂಡಲೇ ಹೋಗಿ ಮಾತನಾಡಿ, ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ. ಇನ್ನಾದರೂ ನಮ್ಮ ರಾಜಕಾರಣಿಗಳು ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಾ, ದಿಕ್ಕಾಪಾಲಾಗುವುದನ್ನು ಬಿಟ್ಟು, ತಮಿಳುನಾಡಿನಂತೆ ಒಂದಾಗುವ ಅನಿವಾರ್ಯತೆ ಇದೆ. ರಾಜಕೀಯ ಅಥವಾ ಚುನಾವಣೆ ಬಂದಾಗ ತಮಿಳುನಾಡಿನ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಕಚ್ಚಾಡುತ್ತಾರೆ. ಆದರೆ ಕಾವೇರಿ ವಿಷಯ ಬಂದಾಗ ಎಲ್ಲರೂ ಒಂದಾಗಿ ಧನಿ ಎತ್ತುತ್ತಾರೆ. ಆ ರೀತಿಯ ಒಗ್ಗಟ್ಟನ್ನು ನಾವೂ ಪ್ರದರ್ಶಿಸಬೇಕಿದೆ ಎಂದು ಹೇಳಿದರು.
ಎತ್ತಿನ ಹೊಳೆ ಯೋಜನೆ ಬಗ್ಗೆ ಅಸಮಾಧಾನ: ಇದೇ ವೇಳೆ ಹೆಸರು ಪ್ರಸ್ತಾಪ ಮಾಡದೆಯೇ ಎತ್ತಿನಹೊಳೆ ಯೋಜನೆ ಬಗ್ಗೆ ಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಯೋಜನೆಯ ಮೂಲಕ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಕೊಡುತ್ತೇನೆ ಅನ್ನೋದು ಕಷ್ಟಸಾಧ್ಯವಾದುದು. ಈ ಬಗ್ಗೆ ದೊಡ್ಡ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ರಾಜಕಾರಣಿಗಳ ತಾಳಕ್ಕೆ ಎಂಜಿನಿಯರ್ಗಳು ಕುಣಿಯುತ್ತಿದ್ದಾರೆ. ಅವರು ಕೇಳಿದಂತೆ ಇವರು ಬರೆದುಕೊಡುತ್ತಿದ್ದಾರೆ. ಇಲ್ಲಿಂದ ತೆಗೆದುಕೊಂಡು ಹೋದ ನೀರನ್ನು ಮತ್ತೆ ಲಿಫ್ಟ್ ಮಾಡುವ ಮೂಲಕ ಶಿರಾ, ಪಾವಗಡ ಮೊದಲಾದ ಕಡೆಗಳಿಗೆ ಕೊಡುತ್ತಾರಂತೆ. ಇದು ಸಾಧ್ಯವೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. 3500 ಕ್ಯೂಸೆಕ್ ನೀರು ಹರಿಸುವ ನಾಲೆಯಲ್ಲಿ 5000 ಸಾವಿರ ಕ್ಯೂಸೆಕ್ ನೀರು ಹರಿಸಲು ಸಾಧ್ಯವೇ ಇದು ಇದು ಸರ್ಕಾರದ ಹಣ ಪೋಲು ಮಾಡುವ ವ್ಯರ್ಥ ಸಾಹಸ. ಈ ಹಿನ್ನೆಲೆಯಲ್ಲೇ ಮೊನ್ನೆ ದೆಹಲಿಯಲ್ಲಿ ಮುಖ್ಯಮಂತ್ರಿಗಳಿಗೆ ನನ್ನ ಅಭಿಪ್ರಾಯ ಹೇಳಿದ್ದೇನೆ. ಜನರನ್ನು ಮೆಚ್ಚಿಸಲು ಅಥವಾ ಚುನಾವಣೆ ಲಾಭಕ್ಕಾಗಿ ಇಂಥ ವ್ಯರ್ಥ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ರಾಜಕಾರಣಿಗಳು ಯೋಚಿಸಬೇಕೆಂದರು.
ಮಾಹಿತಿ ಇದೆ: ಈ ಹಿಂದೆ ಜಿಲ್ಲೆ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಿಗೆ ಖುದ್ದು ಭೇಟಿ ನೀಡಿ ನೀರಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯುವ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದ ಗೌಡರು, ನಂತರ ರದ್ದುಪಡಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜಲಾಶಯಗಳಲ್ಲಿ ಎಷ್ಟೆಷ್ಟು ನೀರಿದೆ ಅನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಕಳವಳಕಾರಿ ಸಂಗತಿ ಎಂದರೆ ಹಾಲಿ ನೀರಿನ ಲಭ್ಯತೆ ಪ್ರಕಾರ ಬೆಂಗಳೂರಿಗೆ ಸಮರ್ಪಕವಾಗಿ ಕುಡಿಯುವ ನೀರು ಇಲ್ಲದಂತಾಗಿದೆ. ಮೈಸೂರು ಜಿಲ್ಲೆ ಕಬಿನಿಯಿಂದ ನಿತ್ಯ 300 ಕ್ಯೂಸೆಕ್ ನೀರು, ಕೆಆರೆಸ್ನಿಂದ 300 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ನಾಲೆಗಳೆಲ್ಲಾ ಬಂದ್ ಆಗಿವೆ. ಕೆಲ ದಿನಗಳಲ್ಲಿ ಮಳೆ ಬಂದು ನೀರು ಬಂದರೆ ಉಳಿವು. ಇಲ್ಲವಾದರೆ ಕುಡಿಯುವ ನೀರಿಗಾಗಿ ಪರಿತಪಿಸುವ ದಿನ ದೂರವಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

