ಹೊಟೇಲ್ ಮಾಲೀಕರ ಗೈರು: ಸಭೆ ಜು. 19ಕ್ಕೆ ಮುಂದೂಡಿಕೆ
ಅರಸೀಕೆರೆ: ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪಟ್ಟಣದ ವ್ಯಾಪ್ತಿಯ ಹೊಟೇಲ್ ಮಾಲೀಕರ ಸಭೆಗೆ ಬಹುತೇಕ ಹೊಟೇಲ್ಗಳ ಮಾಲೀಕರು ಗೈರು ಹಾಜರಾಗಿದ್ದರಿಂದ ಸಭೆಯನ್ನು ಜುಲೈ 19ಕ್ಕೆ ಮುಂದೂಡಲಾಯಿತು.
ಪಟ್ಟಣದ ವ್ಯಾಪ್ತಿಯಲ್ಲಿರುವ ಹೊಟೇಲ್ಗಳ ಮಾಲೀಕರು ತಮ್ಮ ಹೊಟೇಲ್ಗಳಲ್ಲಿ ಶುಚಿತ್ವಕ್ಕೆ ಆಧ್ಯತೆ ನೀಡುತ್ತಿಲ್ಲ, ಮತ್ತು ತಿಂಡಿ, ತಿನಿಸು ಹಾಗೂ ಕಾಫಿ, ಟೀಯನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ತಾಲೂಕು ಅಡಳಿತಕ್ಕೆ ಪಟ್ಟಣದಲ್ಲಿನ ಸುಭಾಷ್ ನಗರದ ಗೆಳೆಯರ ಬಳಗ ನೀಡಿದ್ದ ಮನವಿ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯ ಕಾರ್ಯಾಲಯದಲ್ಲಿ ಸಾರ್ವಜನಿಕರು ಹಾಗೂ ಹೊಟೇಲ್ ಮಾಲೀಕರ ಸಭೆಯನ್ನು ಕರೆಯಲಾಗಿತ್ತು.
ದರ ಇಳಿಸಲು ಸೂಚನೆ: ಈ ಸಂದರ್ಭದಲ್ಲಿ ತಹಸೀಲ್ದಾರ್ ನಟರಾಜು ಮಾತನಾಡಿ, ಹೊಟೇಲ್ ಮಾಲೀಕರು ತಾಲೂಕು ಆಡಳಿತದ ಮನವಿಗೆ ಸ್ಪಂದಿಸಿ ಸಾಧ್ಯವಾದಷ್ಟು ಮಟ್ಟಿಗೆ ತಿಂಡಿ ತಿನಿಸು ಮತ್ತು ಕಾಫಿ ಟೀ ಬೆಲೆಯನ್ನು ಕಡಿಮೆ ಮಾಡಬೇಕೆಂದರು. ಆದರೆ ಹೊಟೇಲ್ ಮಾಲೀಕರು ಇದಕ್ಕೆ ಒಪ್ಪಲ್ಲಿಲ್ಲ. ಅಲ್ಲದೆ ಅನೇಕ ಮಂದಿ ಹೊಟೇಲ್ ಮಾಲೀಕರು ಸಭೆಯಲ್ಲಿ ಹಾಜರಿಲ್ಲದ ಕಾರಣ ಬೆಲೆಯನ್ನು ಕಡಿಮೆ ಮಾಡಲು ಬೆರೆಳೆಣಿಕೆಯಷ್ಟಿರುವ ನಾವುಗಳು ತೀರ್ಮಾನಿಸಲು ಸಾಧ್ಯವಿಲ್ಲ ಎಂದರು. ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲು ನಿರ್ದರಿಸಲಾಯಿತು. ಸಭೆಯಲ್ಲಿ ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಮಿಕ ಇಲಾಖೆ ನಿರೀಕ್ಷಕ ವಿಜಯಕುಮಾರ್, ಸುಭಾಷ್ ನಗರ ಗೆಳೆಯರ ಬಳಗದ ಸಂಘದ ಅಧ್ಯಕ್ಷ ಎ.ಶಿವರಾಜು, ಸಂಚಾಲಕ ವಿಜಯಕುಮಾರ್, ಹೊಟೇಲ್ ಮಾಲೀಕರಾದ ಶ್ರೀಧರ್, ನರಸಿಂಹಮೂರ್ತಿ, ರಾಘವೇಂದ್ರ, ವೆಂಕಟೇಶ್, ಕೃಷ್ಣಭಟ್, ನಾಗರಾಜು, ಅನಂತ ಪಧ್ಮನಾಭ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

